Ad Widget

ಸುಳ್ಯ ತಾ.ಪಂ ಸಾಮಾನ್ಯ ಸಭೆ – ಸರ್ವೇ ಇಲಾಖೆಯಲ್ಲಿ ಸರ್ವೇಯರ್ ಗಳ ಸತತ ವರ್ಗಾವಣೆಯಿಂದ ಸಮಸ್ಯೆ ಬಗ್ಗೆ ಚರ್ಚೆ

ಸುಳ್ಯ ತಾಲೂಕು ಪಂಚಾಯತ್ ನ ಸಾಮಾನ್ಯ ಸಭೆ ತಾ.ಪಂ.ಅಧ್ಯಕ್ಷರಾದ ಶ್ರೀ ಚನಿಯ ಕಲ್ತಡ್ಕ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು.

. . . . .

ಸುಳ್ಯ ತಾಲೂಕಿನಲ್ಲಿ 289 ಕೊರೊನಾ ಪಾಸಿಟಿವ್ ಪತ್ತೆ

ಮಾರ್ಚ್ ತಿಂಗಳಿನಿಂದ ಇದುವರೆಗೆ ತಾಲೂಕಿನಲ್ಲಿ 289 ಮಂದಿ ಗೆ ಕೊರೊನಾ ಪಾಸಿಟಿವ್ ಪತ್ತೆ ಯಾಗಿದೆ. ಇಲ್ಲಿಯವರೆಗೆ ಒಟ್ಟು 2078 ರ‍್ಯಾಪಿಡ್ ಟೆಸ್ಟ್ ಗಳನ್ನು ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಎಂ.ಆರ್ .ಅವರು ಸಭೆಗೆ ಮಾಹಿತಿ ನೀಡಿದರು.

ತಾ,ಪಂ ಸದಸ್ಯ ರಾಧಾಕೃಷ್ಣ ಬೊಳ್ಳೂರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಕೊರೋನಾ ಬಗ್ಗೆ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ಇದಕ್ಕಾಗಿ ಆರೋಗ್ಯ ಇಲಾಖೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಆರೋಗ್ಯಾಧಿಕಾರಿಗಳು ತಾಲೂಕಿನಲ್ಲಿ ಕೆಲವು ದಿನಗಳಿಂದ ಸಾಮೂಹಿಕವಾಗಿ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಕಳೆದ ಒಂದು ವಾರದಿಂದ ಹೆಚ್ಚಿನ ಪಾಸಿಟಿವ್ ಕೇಸ್‌ಗಳು ವರದಿಯಾಗುತ್ತಿದೆ. ತಾಲೂಕಿನಲ್ಲಿ ಈ ವರೆಗೆ 289 ಕೇಸುಗಳು ಪಾಸಿಟಿವ್ ಬಂದಿದೆ. ಇದರಲ್ಲಿ 122 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 151 ಕೇಸುಗಳು ಸಕ್ರೀಯವಾಗಿದೆ. ಇದರಲ್ಲಿ 127 ಮಂದಿ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ ಉಳಿದಂತೆ 8 ಮಂದಿ ಸರಕಾರಿ ಆಸ್ಪತ್ರೆ ಮತ್ತು 10 ಮಂದಿ ವಿವಿಧ ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿವರೆಗೆ 5 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ ಎಂದು ಹೇಳಿದರು.

ಸರ್ವೇ ಇಲಾಖೆಯಲ್ಲಿ ಕಡತ ವಿಲೇವಾರಿಯಾಗದೇ ಬಾಕಿ

ಸರ್ವೇ ಇಲಾಖೆಯಲ್ಲಿ ಹಲವಾರು ಅರ್ಜಿಗಳು ಕಚೇರಿಯಲ್ಲಿ ಧೂಳು ಹಿಡಿಯುತ್ತಿರುವ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಸರ್ವೇ ಇಲಾಖೆಯಲ್ಲಿ ಯಾವ ಕೆಲಸಗಳು ನಡೆಯುತ್ತಿಲ್ಲ. ಇಲಾಖೆಯ ಕೆಳಹಂತದ ಸಿಬ್ಬಂಧಿಗಳಿಂದ ತೊಂದರೆಯಾಗುತ್ತಿದೆ. ಕಚೇರಿಯ ಕೆಲಸದಲ್ಲಿ ಲಾಬಿ ಮಾಡುವುದು ಬೇಡ ಇದರಿಂದ ಶಾಸಕರಿಗೆ ತೊಂದರೆ ಮತ್ತು ಕೆಟ್ಟ ಹೆಸರು ತರುವ ಕೆಲಸ ಆಗುತ್ತಿದೆ ಎಂದು ಆರೋಪ ಮಾಡಿದರು. ಇದಕ್ಕೆ ಉತ್ತರಿಸಿದ ಸರ್ವೇ ಸೂಪರ್‌ವೈಸರ್ ಸರ್ವೇ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಇದರಿಂದ ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಇದೆ ಎಂದು ಹೇಳಿದರು. ಸರ್ವೇ ಇಲಾಖೆಯಲ್ಲಿ ಜನ ಸಾಮಾನ್ಯರಿಗೆ ತೊಂದರೆಗಳಾಗುತ್ತಿದೆ. ತಾಲೂಕಿನಿಂದ ಆಗುತ್ತಿರುವ ಸರ್ವೇಯರ್‌ಗಳ ವರ್ಗಾವಣೆಯನ್ನು ತಡೆಯಬೇಕು ಎಂದು ಸದಸ್ಯ ಅಬ್ದುಲ್ ಗಫೂರ್ ಹೇಳಿದರು.

ಪುತ್ತೂರು ಭಾಗದ ಅರಣ್ಯವನ್ನು ಸುಳ್ಯ ವಲಯಕ್ಕೆ ಸೇರಿಸುವಂತೆ ಒತ್ತಾಯ

ಪುತ್ತೂರು ತಾಲೂಕಿಗೆ ಸೇರಿದ ಸುಳ್ಯ ಭಾಗದ ಅರಣ್ಯ ವಲಯವನ್ನು ಸುಳ್ಯ ಮತ್ತು ಪಂಜ ವಲಯಗಳಿಗೆ ಸೇರಿಸಬೇಕು ಎಂದು ಸದಸ್ಯರಾದ ರಾಧಾಕೃಷ್ಣ ಬೊಳ್ಳೂರು ಮತ್ತು ಅಬ್ದುಲ್ ಗಫೂರ್ ಒತ್ತಾಯಿಸಿದರು. ಜಾಲ್ಸೂರು ಗ್ರಾ.ಪಂ ವ್ಯಾಪ್ತಿಯ ಸೊಣಂಗೇರಿ ಪ್ರದೇಶಗಳು ಪುತ್ತೂರು ವಲಯ ಅರಣ್ಯಾಧಿಕಾರಿಗಳು ವ್ಯಾಪ್ತಿಗೆ ಸೇರುತ್ತದೆ. ಇಲ್ಲಿನ ಜನಸಾಮಾನ್ಯರು ಕಚೇರಿ ಕೆಲಸಗಳಿಗೆ ಪುತ್ತೂರು ಕಚೇರಿಗೆ ಹೋಗಬೇಕು ಈ ಪ್ರದೇಶಗಳನ್ನು ಸುಳ್ಯ ಮತ್ತು ಪಂಜ ವಲಯಕ್ಕೆ ಸೇರಿಸುವ ಕೆಲಸ ಆಗಬೇಕು ಎಂದರು.

ವಸತಿ ಯೋಜನೆಯ ಅನುದಾನ ತಕ್ಷಣವೇ ಬಿಡುಗಡೆಗೆ ಒತ್ತಾಯ

ವಿವಿಧ ವಸತಿ ಯೋಜನೆಯಡಿಯಲ್ಲಿ ಮಂಜೂರಾದ ಫಲಾನುಭವಿಗಳ ಮನೆ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಕೆಲವು ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ವರ್ಷದಿಂದ ವರ್ಷಕ್ಕೆ ಹೊಸ ಮನೆಗಳಿಗೆ ಫಲಾನುಭವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕಳೆದ 2 ವರ್ಷದಿಂದ ವಸತಿ ನಿಗಮಗಳಲ್ಲಿ ಮನೆಗಳ ನಿರ್ಮಾಣ ಅನುದಾನ ಬಿಡುಗಡೆಗೊಂಡಿಲ್ಲ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ವಸತಿ ನಿಗಮದ ಸಂತೋಷ್ ವಿಸಿಲ್ ಆ್ಯಪ್ ಮೂಲಕ 230 ಮನೆಗಳಿಗೆ ಹಣ ಬಿಡುಗಡೆಗೊಂಡಿದೆ ಎಂದು ಮಾಹಿತಿ ನೀಡಿದರು.

ಮರಳು ನಿಕ್ಷೇಪಗಳನ್ನು ಗುರುತಿಸುವ ಕೆಲಸ ಆಗಬೇಕು

ಸರಕಾರದ 2020 ರ ಮರಳು ನೀತಿಯಂತೆ ಹಳ್ಳ, ತೊರೆ ಮತ್ತು ನದಿಗಳಲ್ಲಿ ಇರುವ ಮರಳು ನಿಕ್ಷೇಪವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ತಂಡದಿಂದ ಗುರುತಿಸುವ ಕೆಲಸ ವೇಗವಾಗಿ ಆಗುತ್ತಿಲ್ಲ, ಹೊಳೆಗಳಲ್ಲಿ ಹೂಳು ತೆಗೆಯುವ ಕಾಮಗಾರಿ ತುರ್ತು ಆಗಬೇಕು ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಅನಂತ ಶಂಕರ್ ಸರಕಾರದ ಆದೇಶದಂತೆ 26 ರಂದು ತಾಲೂಕು ಮರಳು ಸಮಿತಿಯ ಸಭೆ ನಡೆದಿದೆ. ತಾಲೂಕಿನ ವಿವಿಧ ಕಡೆಗಳಲ್ಲಿ ಸರ್ವೇ ಮಾಡಲಾಗಿದೆ. ನೀರಿನ ಮಟ್ಟ ಹೆಚ್ಚು ಇರುವ ಕಡೆಗಳಲ್ಲಿ ಸರ್ವೇ ಕಾರ್ಯ ಬಾಕಿ ಇದೆ. ಗುರುತಿಸುವ ಕೆಲಸ ಆಗುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಆನ್ಲೈನ್ ಕ್ಲಾಸ್ ಗೆ ಸಮಯ ನಿಗದಿಪಡಿಸಿ

ಮಕ್ಕಳು ಬೆಳಿಗ್ಗೆಯಿಂದ ರಾತ್ರಿಯವರೆಗೆ ಮೊಬೈಲ್‌ನಲ್ಲೇ ಕಾಲ ಕಳೆಯುತ್ತಾರೆ. ಶಾಲಾ ಮಕ್ಕಳ ಆನ್‌ಲೈನ್ ತರಗತಿಗಳ ಸಮಯವನ್ನು ನಿಗದಿ ಮಾಡಬೇಕು ಎಂದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವೀ ಕಾಂಚೋಡು ಹೇಳಿದರು. ತಾಲೂಕಿನ ವಿವಿಧ ಕಡೆಗಳಲ್ಲಿ ಸಭಾಭವನ, ಮಂದಿರಗಳಲ್ಲಿ ತರಗತಿಗಳು ನಡೆಯುತ್ತಿದೆ.ಸುಳ್ಯ ತಾಲೂಕಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಶಾಲೆಗಳಲ್ಲೇ ವಿಶಾಲವಾದ ಜಾಗ ಇದ್ದಲ್ಲಿ ವಿದ್ಯಾಗಮವನ್ನು ಶಾಲೆಯಲ್ಲೇ ನಡೆಸಬಹುದು ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು.

ಕೊರೋನಾ ಪಾಸಿಟಿವ್ ಬಂದ ಅಧಿಕಾರಿಗಳ ಬದಲಿಗೆ ಅವರ ಕೆಲಸ ನಿರ್ವಹಿಸಲು ಯಾರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಬೊಳ್ಳೂರು ಪ್ರಶ್ನಿಸಿದರು. ಅಧಿಕಾರಿಗಳು ದೀರ್ಘ ರಜೆ ಮೇಲೆ ತೆರಳುವಾಗ ಬೇರೆ ಅಧಿಕಾರಿಗಳಿಗೆ ಅಧಿಕಾರ ವಹಿಸಿ ತೆರಳಬೇಕು. ಈ ಕೆಲಸ ಆಗುತ್ತಿಲ್ಲ. ಇದರಿಂದ ಜನರ ಕೆಲಸ ಬಾಕಿಯಾಗಿದೆ. ಕೂಡಲೇ ಬದಲಿ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಗುತ್ತಿಗಾರಿನ ಕಮಿಲದಲ್ಲಿ ಇತ್ತೀಚೆಗೆ ಕೊರೆದ ಕೊಳವೆ ಬಾವಿಯನ್ನು ಸಮರ್ಪಕವಾಗಿ ಮುಚ್ಚದ ಬಗ್ಗೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜಾಹ್ನವಿ ಕಾಂಚೋಡು ಪ್ರಸ್ತಾಪಿಸಿದರು.ನೀರಿಲ್ಲದ ಕೊಳವೆ ಬಾವಿಯನ್ನು ತಕ್ಷಣ ಮುಚ್ಚಬೇಕು .ಕೇಸಿಂಗ್ ಪೈಪ್ ತೆಗೆದು ಹಾಗೆಯೇ ಹೋಗುವಂತಹ ನಿರ್ಲಕ್ಷ್ಯ ಸಲ್ಲದು .ಅದನ್ನು ಪಂಚಾಯತ್ ಗಮನಿಸಿ ಕೊಡಲೇ ಕ್ರಮ ಕೈಗೊಳ್ಳಬೇಕಿತ್ತು ಎಂದರು.ಇದಕ್ಕೆ ಉತ್ತರವಾಗಿ ತಾ.ಪಂ.ಇಓ ಭವಾನಿ ಶಂಕರ್ ಪಂಚಾಯತ್ ನಿಂದ ತಪ್ಪು ಆದದ್ದು ಹೌದು ಈಗಾಗಲೇ ಈಬಗ್ಗೆ ದೂರುಗಳು ಬಂದಿದ್ದು , ಪಿಡಿಓ ಅವರು ಇದ್ದು ನಿನ್ನೆ ಸರಿಯಾದ ರೀತಿಯಲ್ಲಿ ಮುಚ್ಚಲಾಗಿದೆ ಎಂದಿದ್ದಾರೆ.ಸಣ್ಣ ನೀರಾವರಿಯ ಸಹಾಯಕ ಇಂಜಿನಿಯರ್ ಇದಕ್ಕೆ ಉತ್ತರವಾಗಿ ಬೋರಿನ ಕೇಸಿಂಗ್ ಪೈಪ್ ತೆಗೆದು ಮುಚ್ಚಿದ್ದೇವೆ‌.ಆದರೆ ಮಳೆ ಬಂದು ಮಣ್ಣು ಹೋಗಿ ಮತ್ತೆ ಗುಂಡಿ ಆಗಿದೆ. ದೂರು ಬಂದ ಹಿನ್ನಲೆಯಲ್ಲಿ ಮತ್ತೆ ಗುಂಡಿ ಮುಚ್ಚಿದ್ದೇವೆ ಎಂದರು. ಇಂತಹ ನಿರ್ಲಕ್ಷ ಮತ್ತೆ ನಡೆಯಬಾರದು ಎಂದು ಸ್ಥಾಯಿ ಸಮಿತಿಯ ಅಧ್ಯಕ್ಷರು ಸಭೆಗೆ ಸೂಚಿಸಿದರು.

ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ವಹಿಸಿದ್ದರು. ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು,ಸದಸ್ಯರಾದ ರಾಧಾಕೃಷ್ಣ ಬೊಳ್ಳೂರ್ , ಅಬ್ದುಲ್ ಗಫೂರ್ ಪದ್ಮಾವತಿ ಕುಡೆಂಬಿ,ತೀರ್ಥರಾಮ ಜಾಲ್ಸೂರ್ , ತಹಶೀಲ್ದಾರ್ ಅನಂತಶಂಕರ್, ಇ.ಒ. ಭವಾನಿಶಂಕರ್ ಹಾಗು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!