ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಆಶ್ರಯದಲ್ಲಿ,’ರಂಗಮನೆ ಅಮ್ಮ’ ಶ್ರೀಮತಿ ವನಜಾಕ್ಷಿ ಜಯರಾಮ ಇವರ ಸ್ಮರಣಾರ್ಥ ನೀಡುವ ವನಜ ರಂಗಮನೆ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರಿಗೆ ಬೆಳ್ತಂಗಡಿ ತಾಲೂಕು ಪಡಂಗಡಿಯ ಅವರ ಸ್ವಗೃಹದಲ್ಲಿ ಪ್ರದಾನ ಮಾಡಲಾಯಿತು.
ಅಭಿನಂದನಾ ನುಡಿಗಳನ್ನಾಡಿದ ಹಿರಿಯ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಮಾತನಾಡಿ ” ಚರಿತ್ರೆ ಮತ್ತು ಚಾರಿತ್ರ್ಯ ಎರಡನ್ನೂ ಹೊಂದಿದ ಅಪರೂಪದ ವ್ಯಕ್ತಿ ಶಾಸ್ತ್ರಿಗಳು.ಯಕ್ಷರಂಗದ ವಿದ್ವಾಂಸ ಪರಂಪರೆಯ ಅಗ್ರಮಾನ್ಯ ಅರ್ಥದಾರಿಯಾಗಿ ಮೆರೆದ ಶಾಸ್ತ್ರಿಗಳಿಗೆ ರಂಗಮನೆಯ ಈ ಪ್ರಶಸ್ತಿ ನೀಡಿರುವುದು ಸ್ತುತ್ಯಾರ್ಹವಾಗಿದೆ” ಎಂದರು.
ಪ್ರಶಸ್ತಿ ಸ್ವೀಕರಿಸಿದ ಶಾಸ್ತ್ರಿಗಳು ” ಕಲಾವಿದರಿಗೆ ಅನ್ನಪೂರ್ಣೆಯಾಗಿದ್ದ ಮಾತೃಶ್ರೀ ವನಜಾಕ್ಷಿಯವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು,ನನ್ನ ಮನೆಯಂಗಳದಲ್ಲೇ ಈ ಪ್ರಕೃತಿ ಮಡಿಲಲ್ಲಿ ಸ್ವೀಕರಿಸಲು ಬಹಳ ಸಂತೋಷವಾಗುತ್ತದೆ. ಪ್ರಕೃತಿಯೇ ನಮಗೆಲ್ಲ ನೆಮ್ಮದಿ ನೀಡುವ ನಿಜವಾದ ದೇವರು.ಹಿರಿಯರನ್ನು ಸ್ಮರಿಸುತ್ತಾ,ಹಿರಿಯ ಕಲಾವಿದರನ್ನು ಗೌರವಿಸುವ ಜೀವನ್ ರಾಂ ರವರ ಪರಂಪರೆ ಹೀಗೇ ಮುಂದುವರಿಯಲಿ ” ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಶ್ರೀ ಕ್ಷೇತ್ರದ ಜಮಾ ಉಗ್ರಾಣದ ಮುತ್ಸದ್ದಿ ಬಿ.ಭುಜಬಲಿಯವರು ” ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಈ ಸರಳ ಸಮಾರಂಭ ಬಹಳ ಅರ್ಥಪೂರ್ಣವಾದುದು.ಜೀವನ್ ರಾಂರವರ ಸಾಂಸ್ಕೃತಿಕ ಬದ್ಧತೆ ಎಲ್ಲರಿಗೂ ಮಾದರಿ.ಆರೋಗ್ಯಪೂರ್ಣ ಬದುಕು ಎಲ್ಲರದಾಗಲಿ” ಎಂದು ಹಾರೈಸಿದರು.
ಪುತ್ತೂರು ಶಿವರಾಮ ಕಾರಂತ ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ| ಸುಂದರ ಕೇನಾಜೆ ಎಲ್ಲರನ್ನೂ ಸ್ವಾಗತಿಸಿದರು.ರಂಗಮನೆ ರೂವಾರಿ ಜೀವನ್ ರಾಂ ಪ್ರಸ್ತಾವನೆ ಗೈದು ಎಲ್ಲರನ್ನೂ ವಂದಿಸಿದರು.
ಪ್ರಶಸ್ತಿ ಪತ್ರ,ಯಕ್ಷ ಗಣಪತಿಯ ಆಕರ್ಷಕ ಸ್ಮರಣಿಕೆ ಹಾಗೂ ರೂ.10,000 ನಗದನ್ನು ಪ್ರಶಸ್ತಿಯು ಹೊಂದಿತ್ತು.
ಶಾಸ್ತ್ರಿಗಳ ಮಗಳು ಶ್ರೀಮತಿ ಈಶ್ವರಿ ಹಾಗೂ ಅಳಿಯ ಕೇಶವ ಭಟ್, ರಂಗಮನೆಯ ಮನುಜ ನೇಹಿಗ, ಗೌತಮ್ ಉಪಾಧ್ಯಾಯ ಉಪಸ್ಥಿತರಿದ್ದರು.
- Thursday
- November 21st, 2024