ಮುಕ್ಕೂರು : ಕುಂಡಡ್ಕ- ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ 11 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯು ಮುಕ್ಕೂರು ಶಾಲಾ ವಠಾರದಲ್ಲಿ ಆ.22 ರಂದು ನಡೆಯಿತು.
ಕೋವಿಡ್ 19 ಹಿನ್ನೆಲೆಯಲ್ಲಿ ಸರಳವಾಗಿ, ಸೀಮಿತ ಸದಸ್ಯರ ಉಪಸ್ಥಿತಿಯಲ್ಲಿ ಗಣಪತಿಯ ಭಾವಚಿತ್ರಕ್ಕೆ ಹೂ, ಫಲ ಪುಷ್ಪ ಗಳಿಂದ ಅಲಂಕರಿಸಿ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ಮನವಳಿಕೆ ಅವರು ದೀಪ ಬೆಳಗಿಸಿ ಆರತಿ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸರಳ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಘ್ನ ವಿನಾಯಕ ಗಣಪತಿಯ ಪ್ರಾರ್ಥನೆಯಿಂದ ಎಲ್ಲ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ. ಪ್ರತಿ ವರ್ಷ ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ಬಾರಿ ಕೋವಿಡ್ ಕಾರಣದಿಂದ ಧಾರ್ಮಿಕ ಪರಂಪರೆ ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಗಣಪನ ಆರಾಧನೆಯಿಂದ ಎಲ್ಲರಿಗೂ ಸನ್ಮಂಗಲ ಉಂಟಾಗಲಿ ಎಂದರು.
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಕಳೆದ ಬಾರಿ ಊರ-ಪರ ಊರ ಜನರ ಸಹಕಾರದಿಂದ ಯಶಸ್ವಿಯಾಗಿ ದಶಮಾನೋತ್ಸವ ಆಚರಿಸಿದ್ದೇವೆ. ಈ ಬಾರಿ ಕೋವಿಡ್ ಕಾರಣದಿಂದ ಸರಳವಾಗಿ ಆಚರಿಸಲಾಗಿದೆ. ಜಾತಿ, ಮತ, ಪಕ್ಷ ಬೇಧವಿಲ್ಲದೆ ಸರ್ವರೂ ಒಂದಾಗಿ ಹಬ್ಬ ಹರಿದಿನಗಳನ್ನು ಆಚರಿಸುವ ಮುಕ್ಕೂರು ಗಣೇಶೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ, ಊರ ಪರವೂರ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ,ಗಣಪತಿಯನ್ನು ಪ್ರಾರ್ಥಿಸಿಕೊಂಡು ಮುನ್ನಡೆದಾಗ ಅದರಿಂದ ಫಲ ಸಿಗುತ್ತದೆ. ಮುಕ್ಕೂರಿನ ಗಣೇಶೋತ್ಸವ ಆಚರಣೆ ಮಾದರಿ ಆಗಿದ್ದು, ದಶಮಾನೋತ್ಸವ ಕಾರ್ಯಕ್ರಮದ ಅಚ್ಚುಕಟ್ಟುತನ,ಯಶಸ್ಸು ಅದಕ್ಕೆ ಉದಾಹರಣೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಕಳೆದ 10 ವರ್ಷದಿಂದ ಸಾಮರಸ್ಯದ ಗಣೇಶೋತ್ಸವ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಅರ್ಥಪೂರ್ಣ ಸಂದೇಶ ನೀಡಿದ ತೃಪ್ತಿ ನಮ್ಮದು. ಎಲ್ಲರ ಸಹಕಾರದಿಂದ ಸಂಘಟನೆ ಇಂತಹ ಉತ್ತಮ ಕಾರ್ಯಕ್ರಮ ನೀಡಲು ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ಕೂಡ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮ ಅನುಷ್ಟಾನಿಸಲಾಗುವುದು ಎಂದರು.
ವೇದಿಕೆಯಲ್ಲಿ ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ಮೊದಲಾದವರಿದ್ದರು. ಸಭೆಯಲ್ಲಿ ಮುಕ್ಕೂರು ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ ಸೇರಿದಂತೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ನೇಸರ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನೇಸರ ಯುವಕ ಮಂಡಲ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್.ಸ್ವಾಗತಿಸಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ರಕ್ಷಿತ್ ಗೌಡ ಕಾನಾವು ವಂದಿಸಿ, ನಿರೂಪಿಸಿದರು.