Ad Widget

ಶ್ರಾವಣ ಮಾಸದ ಸಂಭ್ರಮ

ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ  ಸುಸಂಸ್ಕೃತಿಯ ದೇಶ, ಹಲವು ವೈವಿಧ್ಯಗಳ ಬೀಡು. ಸುರಿಯುವ ಮಳೆ, ಭೋರ್ಗರೆವ ಕಡಲು, ಜುಳು ಜುಳು ನಾದಗೈಯುವ ನದಿ-ಝರಿಗಳು, ಕಣ್ಣು ಹಾಯಿಸಿದಷ್ಟೂ ಮುಗಿಯದ ಹಚ್ಚ ಹಸಿರಿನ ತೆಂಗು-ಕಂಗುಗಳೂ, ತೆನೆ ತುಂಬಿ ಬಾಗಿ ಕೈ ಮುಗಿದು ಕಂಗೊಳಿಸುತ್ತಿರುವ ಭತ್ತದ ಗದ್ದೆಗಳು, ಹಸುರುಕ್ಕುವ ಕಬ್ಬು, ಬಣ್ಣ ಬಣ್ಣದ ಹೂಗಳ ತೋಟ, ಹಲವು ಬಗೆಯ ಪುಷ್ಪಗಳ ಆಗಮನ, ಬಾಗಿ ನಿಂತ ಬಾಳೆತೋಟಗಳ ಚಿತ್ರಣ ಇವೆಲ್ಲವೂ ಶೋಭಿಸಿದಾಗ ವರ್ಷ ಋತುವಿನೊಡನೆ ಶ್ರಾವಣ ಮಾಸ ಧರೆಗೆ ಕಾಲಿಟ್ಟಿತೆಂದು ಗೊತ್ತಾಗುತ್ತದೆ.ಶ್ರಾವಣ ವೆಂದರೆ ಪ್ರಸನ್ನ ಚಿತ್ತದ ಭಕ್ತಿಯ, ಸಾತ್ವಿಕ ಮಾತುಗಳ ಸಂಭ್ರಮದ ಮಾಸ. ಆಗಸ್ಟ್ 10ರಂದು ಶ್ರಾವಣ ಮಾಸ ಆರಂಭವಾಗುತ್ತದೆ. ಈ ಅವಧಿಯಲ್ಲಿ ಸತ್ಕಾರ್ಯಗಳನ್ನು ಮಾಡಲು ಸರಿಯಾದ ಸಮಯ. ಪ್ರಕೃತಿ ಮಾತೆ ಕೂಡ ಹಬ್ಬದ ಸಂಭ್ರಮಕ್ಕೆ ಅಣಿಯಾಗುತ್ತಾಳೆ. ಹಾಗಾಗಿ ಶ್ರಾವಣ ಮಾಸ ಬಂತೆಂದರೆ ಎಲ್ಲೆಡೆ ಒಂದು ರೀತಿಯ ಸಂಭ್ರಮ.

. . . . .

ಪರಶಿವನಿಂದ ಬ್ರಹ್ಮ, ಬ್ರಹ್ಮನಿಂದ ದಕ್ಷ, ದಕ್ಷನಿಂದ ಮನು, ಮನುವಿನಿಂದ ರಾಜರು, ರಾದನಿಂದ ಪ್ರಜೆಗಳು, ಇವರೆಲ್ಲರೂ ಬಾಳಿ ಬದುಕಲೆಂದು  ಇಳೆ, ಗಾಳಿ, ಮಳೆ, ನದಿ, ಬೆಟ್ಟ, ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ಸಕಲ ಸಂಪನ್ಮೂಲಗಳಿಂದ ಈ ಸೃಷ್ಟಿಯ ಸಮೃದ್ಧವಾಯಿತು. ಜನಜೀವನದ ಜೀವಾಳವೆಂದೆನಿಸಿರುವ ಭೌಗೋಳಿಕ ಪರಿಸರ, ಋತುಮಾನಗಳು, ಜೀವಿಗಳ ಬಾಹ್ಯಾಂತರ ಬದುಕಿನ ಮೇಲೆ ಆಗಾಧವಾದ ಪರಿಣಾಮ ಬೀರುತ್ತವೆಂಬುವುದು ವೈಜ್ಞಾನಿಕ ಸತ್ಯವಾದರೂ ಮಾನವ ಜೀವಿಯ ಆಂತರಿಕ ಪರಿಣಾಮ ಗಳಲ್ಲಿ *ಆಧ್ಯಾತ್ಮಿಕ* ಪರಿಣಾಮವೂ ಒಂದಾಗಿದೆ. ಇಲ್ಲಿ ಆಚರಣೆಗಳಿಗೆ ಬರವಿಲ್ಲ‌. ಇಲ್ಲಿ ತನ್ನದೇ ಆದ ಧಾರ್ಮಿಕ ಆಚರಣೆಗಳು ಕಾಲಕಾಲಕ್ಕೆ ನಡೆಯುತ್ತದೆ.

      ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ, ಬಂತು ಶ್ರಾವಣ ಓ….! ಬಂತು ಶ್ರಾವಣll ಎಂಬ ದ.ರಾ ಬೇಂದ್ರೆ ಯವರ ಹಾಡು ಹೇಳುತ್ತಾ ಹೋದರೆ ಕೇಳಲು ಎಷ್ಟೊಂದು ಆಹ್ಲಾದ ಮನಸ್ಸಿಗೆ. ವರುಷದ ಹನ್ನೆರಡು ತಿಂಗಳಲ್ಲಿ *ಶ್ರಾವಣ* ತಿಂಗಳು ಒಂದು. ಅದರಲ್ಲೂ ಶ್ರಾವಣ ಆಚಾರ, ವಿಚಾರ, ಸಂಸ್ಕೃತಿಯಲ್ಲಿ ವಿಶಿಷ್ಟತೆಯನ್ನು ಪಡೆದುಕೊಂಡಿರುವ ತಿಂಗಳು. ಚಾಂದ್ರಮಾನ ಪಂಚಾಗದ ಐದನೇ ಮಾಸದಿಂದ ಶ್ರಾವಣ ಮಾಸ ಆರಂಭವಾಗುತ್ತದೆ. ಆಷಾಡ ಮಾಸದ ತಣ್ಣನೆಯ ಗಾಳಿಯಿಂದ ಕಾಲಚಕ್ರ ಶ್ರಾವಣ ಮಾಸದತ್ತ ತಿರುಗುತ್ತಾನೆ. ಶ್ರಾವಣಮಾಸ ಎಂದರೆ ಏನೋ ಒಂದು ರೀತಿಯ ರೋಮಾಂಚನ, ಆಸ್ತಿಕರ ಪಾಲಿನ ಆನಂದ ಚೇತನ. ಈ ಮಾಸದಲ್ಲಿ ಪ್ರತಿದಿನವೂ ಪುಣ್ಯ ದಿನ, ವ್ರತ, ಪೂಜೆ, ನಾಡಹಬ್ಬ, ಆರಾಧನೆ ನಿರಂತರವಾಗಿ ನಡೆಯುತ್ತದೆ.                 ಶ್ರಾವಣ ಮಾಸ ಬಂತೆಂದರೆ ಹಬ್ಬ ಹರಿದಿನಗಳಿಗೆ ಚಾಲನೆ ದೊರೆತಂತೆ‌. ನಮಗೆಲ್ಲ ಏನೋ  ಸಂಬ್ರಮ ಸಡಗರ. ಪ್ರಕೃತಿಯ ಮಡಿಲಲ್ಲಿ ಬಾಡಿ ಹೋದ ಗಿಡ-ಮರಗಳು ಸೇರಿದಂತೆ ಬತ್ತಿ ಹೋದ ಹಳ್ಳ, ನದಿ, ತೊರೆಗಳು ಮಳೆಯಿಂದಾಗಿ ತುಂಬಿ ತುಳುಕುವುದು ಒಂದೆಡೆಯಾದರೆ,  ಮತ್ತೊಂದೆಡೆಯಲ್ಲಿ ವಿವಿಧ ರೀತಿಯ ಹೂವುಗಳು ಪ್ರಕೃತಿಯ ಮಡಿಲಲ್ಲಿ ಅರಳಿ ಭೂಮಿಯ ಅಂದವನ್ನೆ ಬದಲಾಯಿಸುವಂತಹ ದೃಶ್ಯವನ್ನು ನೋಡಲು ಬಲು ಆಕಾರ್ಷಕವಾಗಿರುತ್ತದೆ.    ವರ್ಷದ ಎಲ್ಲಾ ಧಾರ್ಮಿಕ, ಆಧ್ಯಾತ್ಮಿಕ ಆಚರಣೆಯ ವಿಧಿ-ವಿಧಾನಗಳಾದ ಜಪ-ತಪ, ಹೋಮ-ಹವನ, ಯಜ್ಞ-ಯಾಗ ಮುಂತಾದವುಗಳು ಆಷಾಢ ಮಾಸದಲ್ಲಿ ತಡೆಹಿಡಿಯಲ್ಪಟ್ಟಿದ್ದು ಶ್ರಾವಣದಲ್ಲಿ ನಡೆಯುತ್ತದೆ. ಈ ಮಾಸದಲ್ಲಿ ಒಂದೇ ರೇಖೆಯಲ್ಲಿ ಬರುವ 17ನಕ್ಷತ್ರಗಳು ಮಂಗಳಕರವಾದ ಮಳೆಗರೆದು, ಧರೆಯ ಜನರಿಗೆ ಉನ್ನತ ಫಲವನ್ನು ನೀಡುತ್ತದೆ.    ಶ್ರಾವಣದಲ್ಲಿ ಶ್ರಾವಣ ಶಿವರಾತ್ರಿ ಪ್ರಮುಖ ವಾದುದಾಗಿದೆ. ಶ್ರಾವಣದಲ್ಲಿ ಶಿವನನ್ನು ಆರಾಧಿಸಿದರೆ ಶುಭ ಫಲವು ನಮ್ಮದಾಗುತ್ತದೆ. ಯಾಕೆಂದರೆ, ದೇವರುಗಳ ಮತ್ತು ಅಸುರರ ನಡುವೆ ನಡೆದ ಸಮುದ್ರ ಮಂಥನ ಸಂದರ್ಭದಲ್ಲಿ ಹೊರಹೊಮ್ಮಿದ ಹಾವಾಹಲವನ್ನು ಶಿವನು ಸೇವಿಸಿದ ಸಮಯವಿದು. ಈ ಮಾಸದಲ್ಲಿ ಭಕ್ತಿಯಿಂದ ಶಿವನ ಆರಾಧನೆ ಮಾಡಿದರೆ ಕಷ್ಟಗಳೆಲ್ಲ ದೂರವಾಗಿ ಬಯಸಿದೆಲ್ಲಾ ನೆರವೇರುತ್ತದೆ ಎಂಬ ನಂಬಿಕೆಯಿದೆ.    ಶ್ರಾವಣವೆನ್ನುವುದು ನಮ್ಮ ಮನಸ್ಸಿನ ಹಿತಕ್ಕೆ, ನಮ್ಮ ಅಭಿರುಚಿಯ ಅನನ್ಯತೆಗೆ ಮತ್ತು ನಮ್ಮ ಜೀವನೋತ್ಸಾಹಕ್ಕೆ ಹೊಸ ಮೆರುಗನ್ನು ನೀಡುತ್ತದೆ. ಶ್ರಾವಣ ಮಾಸದ ಶನಿವಾರ ವನ್ನು *ಶ್ರಾವಣ ಶನಿವಾರ* ಎಂದು ನಾವು ದಕ್ಷಿಣ ಕನ್ನಡ ದಲ್ಲಿ ಭಕ್ತಿಯಿಂದ ಆಚರಿಸುತ್ತೇವೆ.
      ಹಬ್ಬಗಳ ಆಚಾರ ಹಾಗೂ ಅದರ ಹಿಂದಿದ್ದ ವೈಜ್ಞಾನಿಕ ಕಾರಣಗಳ ಬಗ್ಗೆ ನಾವು ಇಂದಿನ ಮಕ್ಕಳಿಗೆ ತಿಳಿಸಬೇಕು. ಆ ಮೂಲಕ ಆ ಕಾಲದ ಸಂಸ್ಕೃತಿಯನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಮಕ್ಕಳ ಮುಂದಿನ ಭವಿಷ್ಯಕ್ಕೆ ಅದು ಅಡಿಪಾಯ ಹಾಕಿಕೊಟ್ಟಂತೆ.  ಆಧ್ಯಾತ್ಮಿಕ  ಹಬ್ಬ ಹರಿದಿನಗಳಷ್ಟೇ ಅಲ್ಲದೆ ಹೋರಾಟ ತ್ಯಾಗ ಬಲಿದಾನಗಳ ನೆನಪಿಸುವ ಸ್ವಾತಂತ್ರ್ಯ ದಿನವೂ ಶ್ರಾವಣದಲ್ಲಿ ಆಚರಿಸಲ್ಪಡುತ್ತದೆ.    

✒️  ಲತಾಶ್ರೀ ಸುಪ್ರೀತ್ ಮೋಂಟಡ್ಕ
ಕೆವಿಜಿ ಆಯುರ್ವೇದ ಕಾಲೇಜು, ಸುಳ್ಯ   E-mail ID : lathaambekallu@gmail.com    
  

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!