ಆಧುನಿಕತೆ ಬೆಳೆದಂತೆ ಗ್ರಾಮೀಣ ಸೊಬಗು ಮರೆಯಾಗುತ್ತಿರುವುದು ಈ ದಿನದ ಆತಂಕ. ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಇದಕ್ಕೆ ಹೊರತಲ್ಲ. ಧನಿಕರಾಗುವುದೇ ನಮ್ಮ ಜೀವನದ ಗುರಿ ಎಂಬ ಆಶಯಕ್ಕೆ ಆಧುನಿಕ ಜನತೆ ಜೋತು ಬಿದ್ದ ಈ ಕಾಲದಲ್ಲಿ ಸಾಂಪ್ರದಾಯಿಕ ಕೃಷಿ ಹಿಂದೆ ಬಿದ್ದಿರುವುದು ಸಹಜ.
ಈ ಕೃಷಿ ಪರಂಪರೆ ನಿಧಾನಕ್ಕೆ ಮರೆಯಾಗುತ್ತಿದೆ. ನಮ್ಮ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಲ್ಲಿ ಭತ್ತದ ಕೃಷಿಯೂ ಒಂದು. ಗದ್ದೆ ಹದ ಮಾಡುವುದರಿಂದ ಹಿಡಿದು,ನೇಜಿ ನೆಟ್ಟು ,ಭತ್ತ ಬೆಳೆದು,ಅಕ್ಕಿ ಮಾಡಿ ಬೇಯಿಸಿ ತಿನ್ನುವ ಸೊಬಗು ಇಂದು ವಿರಳ. ಅಂಗಡಿಯಿಂದ ನೇರವಾಗಿ ಅಕ್ಕಿ ತಂದು ಬೇಯಿಸಿ ತಿನ್ನುವ ಜನರಿಗೆ ಅಕ್ಕಿಯ ಹಿನ್ನೆಲೆ ತಿಳಿದಿರುವುದಿಲ್ಲ. ಎಷ್ಟೋ ಜನರಿಗೆ ಅಕ್ಕಿ ಎಲ್ಲಿ ಆಗುತ್ತದೆ..? ಹೇಗೆ ಆಗುತ್ತದೆ..?? ಎಂಬುದೂ ತಿಳಿದಿರುವುದಿಲ್ಲ.
ಆದರೆ ಗ್ರಾಮೀಣ ಭಾಗದಲ್ಲಿ ಅನೇಕ ಕಡೆಗಳಲ್ಲಿ ತಮ್ಮ ಗದ್ದೆಗಳಲ್ಲಿ ನೇಜಿ ನೆಟ್ಟು ಭತ್ತ ಬೆಳೆಯುವ ಪದ್ಧತಿ ಇನ್ನೂ ಪಾಲಿಸಿಕೊಂಡು ಬರುತ್ತಿದ್ದಾರೆ.
ನೇಜಿ ನೆಡುವುದೇ ಒಂದು ಸಂಭ್ರಮ. ಮನೆಯವರು, ನೆರೆ-ಕರೆಯವರೆಲ್ಲ ಸೇರಿ ಒಂದಾಗಿ ಪಾಡ್ದನ ಹೇಳುತ್ತಾ ನೇಜಿ ನೆಡುವ ವಿಭಿನ್ನ ಸಂಭ್ರಮ ಎಂದೂ ಮರೆಯಲಾಗದು.
ದಕ್ಷಿಣ ಕನ್ನಡದಲ್ಲಿ ನೇಜಿ ನೆಡಲೆಂದೇ ವಿವಿಧ ಪಾಡ್ದನಗಳಿವೆ. ಇವುಗಳನ್ನು ಹಾಡುತ್ತಾ ನೇಜಿ ನೆಡುತ್ತಿದ್ದರೆ ಸಮಯ ಸರಿದದ್ದೇ ತಿಳಿಯದು,ಮತ್ತು ಅದರ ಸಂತೋಷವೇ ಬೇರೆ. ನೇಜಿ ನೆಡುವುದರ ಜೊತೆಗೆ ನಮ್ಮ ವಿರಾಟ್ ಜನಪದ ಸಂಸ್ಕೃತಿಯ ಪರಿಚಯ ಈ ಮೂಲಕ ನಮಗಾಗುತ್ತದೆ.
ಪಿರಿ-ಪಿರಿ ಮಳೆಯಲ್ಲಿ ಹಾಡು ಹೇಳುತ್ತಾ ನಲಿಯುವ ಕ್ಷಣಗಳು ನಮ್ಮ ಬದುಕಿನ ಕ್ಷಣಗಳನ್ನು ಸಾರ್ಥಕಗೊಳಿಸುತ್ತವೆ. ಗದ್ದೆಯಲ್ಲಿ ಕಳೆದ ಕ್ಷಣಗಳು ರೈತನ ಕಷ್ಟದ ಪರಿಚಯ ಮಾಡಿಸುವುದರ ಜೊತೆಗೆ ಕೃಷಿಯ ನೋವು-ನಲಿವುಗಳ,ಬದುಕಿನ ಕಷ್ಟಗಳ ದರ್ಶನವನ್ನು ಮಾಡಿಸುತ್ತದೆ.
ಇಂದೂ ಎಷ್ಟೋ ಜನರಿಗೆ ನೇಜಿ ನೆಡುವುದೆಂದರೆ ಏನೆಂದೇ ಅರಿವಿರುವುದಿಲ್ಲ. ಆ ಕಾರಣಕ್ಕಾಗಿಯೂ ನೇಜಿ ನಾಟಿಯ ಪರಿಚಯವಾಗಬೇಕಾಗಿದೆ.
ಅನೇಕ ಸಂಘ ಸಂಸ್ಥೆಗಳು ಇಂದು ಹಡಿಲು ಬಿದ್ದಿರುವ ಗದ್ದೆಗಳನ್ನು ಮತ್ತೆ ನೇಜಿ ನಾಟಿಗಾಗಿ ಸಿದ್ಧಗೊಳಿಸಿ ನಾಟಿ ಕಾರ್ಯದಲ್ಲಿ ಮಾಡಿಸಿವೆ.ಯುವ ಜನರನ್ನು ಅದರಲ್ಲಿ ತೊಡಗಿಸಿ ನಮ್ಮ ಸಾಂಪ್ರದಾಯಿಕ ಕೃಷಿಯ ಪರಿಚಯ ಮಾಡಿಸಿವೆ.
ಕಾಂಕ್ರೀಟ್ ಕಾಡಿನ ನಡುವೆ ಕಳೆದು ಹೋಗುತ್ತಿರುವ ಮನಸ್ಸುಗಳನ್ನು ಮತ್ತೆ ಪ್ರಕೃತಿಯೆಡೆಗೆ ತರುತ್ತಿರುವ ಮಹತ್ತರ ಕಾರ್ಯ ಮಾಡಿವೆ.ಇದು ಕೃಷಿಯೆಡೆಗೆ ಆಸಕ್ತಿ ಬೆಳೆಸುವುದರ ಜೊತೆಗೆ ನಮ್ಮ ಜನಪದ ಸಂಸ್ಕೃತಿ ಯ ಕಡೆಗೆ ಕೂಡಾ ದೃಷ್ಟಿ ಹರಿಸಲು ನೆರವಾಗಿದೆ.
ಗದ್ದೆಯಲ್ಲಿ ಕೆಸರಲ್ಲಿ ಮಿಂದು ನೇಜಿ ನೆಟ್ಟ ಯುವ ಜನತೆ ಮತ್ತೆ-ಮತ್ತೆ ಆ ಕ್ಷಣಗಳಿಗಾಗಿ ಹಾತೊರೆಯುತ್ತಾರೆ.ಕೃಷಿ ಮಾಹಿತಿ ದೊರೆಯುವುದರ ಜೊತೆಗೆ ಸಂಸ್ಕೃತಿಯೆಡೆಗಿನ ಆಸಕ್ತಿ ಕೂಡಾ ಹೆಚ್ಚುತ್ತಿರುವುದು ಗಮನಾರ್ಹ. ನಮ್ಮ ಗ್ರಾಮೀಣ ಸೊಬಗು ಮುಂದಿನ ಪೀಳಿಗೆಯೂ ನೋಡಬೇಕಾದರೆ ಗದ್ದೆಯಲ್ಲಿ ನೇಜಿ ನಾಟಿಯಂಥ ಸಾಂಪ್ರದಾಯಿಕ ಕಾರ್ಯಗಳು ಮುಂದುವರಿಯುತ್ತಲೇ ಇರಬೇಕಾಗುತ್ತದೆ.
ಹಿರಿಯರು ತಮ್ಮ ಮಕ್ಕಳನ್ನು ಗದ್ದೆಗೆ ಎಳೆದೊಯ್ಯಲೇಬೇಕು.
ಬರಹ : ದೀಪಕ್ ಹೊಸ್ಮಠ
ಸಹಕಾರ : ಸಾಯಿ ಶೃತಿ ಪಿಲಿಕಜೆ, ಸಿಂಚನ ಕೋಡಿ.