ಉದಾರತೆ, ಶಾಂತಿ ಶುಚಿತೆಗಳಲ್ಲಿ ಮಾನವೀಯತೆಯು ತುತ್ತ ತುದಿ ತಲುಪಿರುವ ಅನೇಕ ಋಷಿಮುನಿಗಳ ತಪೋ ಭೂಮಿ ಭಾರತ.ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದು ಭಾವಿಸಿ ಜನ್ಮ ಕೊಟ್ಟ ಇರಲು ನೆಲವಿತ್ತ ಭಾರತ ಮಾತೆಗೆ ಪ್ರಾಣವನ್ನೇ ಬಲಿದಾನ ಮಾಡಿ ಜೀವವನ್ನೇ ಭಾರತಾಂಬೆಯ ಸೇವೆಗೆ ಮುಡಿಪಾಗಿಟ್ಟ ವೀರ ಮಹಾತ್ಮರ ಭಗೀರಥ ಹೋರಾಟದ ಫಲವಾಗಿ ಪರರ ದಾಸ್ಯತನದ ಸಂಕೋಲೆಯಿಂದ ಬಿಡುಗಡೆ ಹೊಂದಿರುವ ಸಂಭ್ರಮ ಇಂದು.
ಸ್ವಾತಂತ್ರ್ಯವೆಂದರೆ ಬಿಡುಗಡೆ ಎಂದರ್ಥ. ಬ್ರಿಟಿಷರ ಬೂಟು ಕಾಲಿನ ಒದೆತಕ್ಕೆ ಎದೆಯಿಕ್ಕಿ,ಸತ್ಯ,ಶಾಂತಿ ಮಂತ್ರಗಳಿಂದ ಭಾರತೀಯತೆಯನ್ನು ಮೆರೆದು ದಕ್ಕಿಸಿಕೊಂಡ ಸ್ವಾತಂತ್ರ್ಯಕ್ಕಿದ್ದ ಬೆಲೆ ಮಹೋನ್ನತವಾದುದು.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಮಂಗಳಪಾಂಡೆಯಿಂದ ಹಿಡಿದು ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಣಿಲಕ಼್ಮೀಭಾಯಿ ಇತ್ಯಾದಿ ವೀರರ ಕೆಚ್ಚೆದೆಯ ಸಾಹಸ, ಮಹಾತ್ಮ ಗಾಂಧೀಜಿ,ನೇಹರೂ,ಲಾಲ್ ಬಹದ್ದೂರ್ ಶಾಸ್ತ್ರಿ ರವರ ತಾಳ್ಮೆ, ತ್ಯಾಗ,ಅಹಿಂಸಾ ಧರ್ಮಗಳು ಬ್ರಿಟಿಷರ ಅಧಿಕಾರದ ದಾಸ್ಯದಿಂದ ನಮ್ಮ ಭಾರತವನ್ನು ಬಿಡುಗಡೆಗೊಳಿಸಿದವು. ಭಾರತೀಯರನ್ನು ಕೂಲಿಯಾಳುಗಳು,ಜೀತದಾಳುಗಳಂತೆ ಕಂಡು,ಶ್ರೀ ಮಂತ ಭಾರತ ದೇಶದ ಸಕಲ ಸಂಪತ್ತುಗಳನ್ನು ಫ್ರೆಂಚರು,ಡಚ್ಚರು ಕೂನೆಗೆ ಆಂಗ್ಲರು ನಾಶ ಮಾಡಿದರು.
ಸ್ವಾತಂತ್ರ್ಯದ ಜೊತೆಗೇನೆ ನಡೆದ ಭಾರತ ಪಾಕ್ ವಿಭಜನೆ ಪ್ರತ್ಯೇಕ ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಿತೆನೋ ನಿಜ.ಆದರೆ ಜಮ್ಮು ಕಾಶ್ಮೀರ ಗಡಿ ವಿವಾದ,ಉಗ್ರರ ನುಸುಳುವಿಕೆ,ಭಯೋತ್ಪಾದಕ ಚಟುವಟಿಕೆಗಳು ಭಾರತದಲ್ಲಿ ಶಾಂತಿಯನ್ನು ಕದಡಿವೆ.
ಸ್ವಾತಂತ್ರ್ಯಾ ನಂತರ ನಾವೇ ಮತದಾನ ಮಾಡಿ ಚುನಾಯಿಸಿದ ಜನಪ್ರತಿನಿಧಿಗಳು ಸ್ವಾಥ್ ಚಿಂತಕರಾಗುತ್ತಿದ್ದಾರೆಯೇ ಹೊರತು ಸಮಾಜ ಚಿಂತಕರಾಗುತ್ತಿಲ್ಲ.ಸ್ವಾತಂತ್ರ್ಯ ಕಾಲದವರೆಗೆ ಇದ್ದಂತಹ ಸನಾತನ ಭಾರತೀಯ ಸಂಸ್ಕೃತಿ ಮರೆಯಾಗುತ್ತಾ ಪಾಶ್ಚಿಮಾತ್ಯ ಸಂಸ್ಕೃತಿ ಮೆರೆಯುತ್ತಿದೆ.
ಜೊತೆ ಜೊತೆಗೇನೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ನಿರುದ್ಯೋಗಿ ಯುವ ಜನಾಂಗ ದುಶ್ಚಟಗಳತ್ತ ಮುಖ ಮಾಡುತ್ತಿರುವುದು ದುರಂತ.ನಕ್ಸಲೇಟ್ ನಂತಹ ಸಮಸ್ಯೆಗಳು ಹುಟ್ಟಿಕೊಂಡಿವೆ.ಇದಕ್ಕಾಗಿ ಮುಂದಿನ ಯುವಪೀಳಿಗೆ ಸ್ವ ಉದ್ಯೋಗಿಗಳು,ಶ್ರಮಜೀವಿಗಳಾಗಬೇಕಾಗಿದೆ.
ಹಿಂದೂ ಮುಸಲ್ಮಾನ ಬೌದ್ಧ ಕ್ರೈಸ್ತರೆಲ್ಲರೂ ಒಂದೇ ತಾಯ ಮಕ್ಕಳಂತೆ ಬಾಳುತ್ತಿರುವುದು ಭಾರತದ ವೈಶಿಷ್ಟ್ಯ ಆದರೂ ಕೂಡ ನಮ್ಮಲ್ಲಿರುವ ಮತೀಯ ಅಂಧಶ್ರದ್ಧೆಯನ್ನು ಅಳಿಸಿ ಹಾಕಬೇಕು.
ಸ್ವಾತಂತ್ರ್ಯಾನಂತರದ ಕಾಲದಲ್ಲಿ ತಂತ್ರಜ್ಞಾನ ಬೆಳವಣಿಗೆಯ ನೆಪದಲ್ಲಿ ಮಾನವೀಯ ಸಂಬಂಧಗಳು ಕುಬ್ಜವಾಗುವತ್ತಿವೆ. ಸಂಸ್ಕಾರ ನೈತಿಕ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ
ಬಂಧಿಸಲು ಕಟ್ಟಿದ ಸಂಕೋಲೆ ಕಬ್ಬಿಣದದ್ದಾದರೂ ಒಂದೇ ಚಿನ್ನ ದ್ದಾದರೂ ಒಂದೇ. ಈಗ ನಾವು ಆಸೆ ಆಮಿಷಗಳ ಬಂಧನದಲ್ಲಿ ತೊಳಲಾಡುತ್ತಿದ್ದೆವೆ ಈ ಎಲ್ಲಾ ಬಂಧನಗಳಿಂದ ಮುಕ್ತರಾಗಿ ಜಾತಿ ಮತಗಳ ಭೇದವಿಲ್ಲದೆ ವಸುದೈವ ಕುಟುಂಬಕಂ ಎಂಬ ಮೂಲ ಮಂತ್ರದಂತೆ ಒಂದಾಗಿ ಬಾಳಬೇಕು.
ಮನಸ್ಯೇಕಂ, ವಚಸ್ಯೇಕಂ, ಕರ್ಮನ್ಯೇಕಂ ಮಹಾತ್ಮನಂ ಎಂಬ ಮಾತಿನಂತೆ ಮನ, ಮನಸ್ಸು ಕೃತಿಗಳು ಒಂದಾಗಿ ದುಡಿಯೋಣ. ರೋಗ ರುಜಿನಗಳಿಂದ ಮುಕ್ತವಾದ, ಸ್ವಚ್ಛ ಭಾರತ ನಮ್ಮ ಕನಸಾಗಬೇಕು. ಅಪಾರ ಪ್ರಕೃತಿ ಸಂಪತ್ತು ಮುಂದಿನ ಪೀಳಿಗೆಗೂ ಉಳಿಯುವಂತಾಗಬೇಕು.
ಸ್ವತಂತ್ರ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಯೂ ನಮ್ಮ ಹಕ್ಕು ಗಳಿಗಿಂತ ಕರ್ತವ್ಯಗಳು ಮೇಲೆಂಬುದನ್ನು ಅರಿಯಬೇಕು. ದೇಶ ನನಗೇನು ಕೊಟ್ಟಿದೆ ಅನ್ನೋದಕ್ಕಿಂತ ನಾನು ಈ ದೇಶಕ್ಕಾಗಿ ಏನು ಕೂಡಬಲ್ಲೆ ಅನ್ನೂ ಧ್ಯೇಯ ನಮ್ಮ ದಾಗಬೇಕು. ದೇಶದ ಸ್ವಾತಂತ್ರ್ಯಕ್ಕೆ ಅಪಾಯವಾದಾಗ ನಾವು ಮನೆಯಲ್ಲಿ ಕುಳಿತು ದೀಪಾವಳಿ ಮಾಡುತ್ತಿರುವಾಗ ದೇಶ ಕಾಯುವ ಯೋಧರು ಗಡಿಯಲ್ಲಿ ಗುಂಡಿಗೆ ಎದೆಯೊಡ್ಡಿ ತಾಯಿನಾಡುನ್ನು ರಕ್ಷಸುತ್ತಿದ್ದಾರೆ. ನಮ್ಮ ನಾಳಿನ ಭವಿಷ್ಯಕ್ಕಾಗಿ ಪ್ರಾಣ ಬಲಿದಾನ ಮಾಡುತ್ತಿರುವ ಯೋಧರಿಗೆ ನನ್ನ ನಮನ. ದೇಶಭಕ್ತಿಯ ಬಿಸಿ ಬಿಸಿ ನೆತ್ತರು ಧಮಿನಿ ಧಮಿನಿಯಲಿ ಚಿಮ್ಮಿಬರಲಿ. ಹಿರಿಯರನ್ನು ಗೌರವಿಸಿ, ಕಿರಿಯನ್ನು ಪ್ರೀತಿಸಿ ಗುರು ಹಿರಿಯರಿಗೆ ನಮಿಸುವ ದೇಶ ಸೇವೆಗೆ ಪ್ರಾಣ ಮುಡಿಪಾಗಿಡುವ
ದೇಶಭಕ್ತರಾಗುವ.
ಮಮತಾ ಪ್ರಶಾಂತ್ ಮುತ್ಲಾಜೆ
ತೃತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ
ವಿವೇಕಾನಂದ ಕಾಲೇಜು ಪುತ್ತೂರು.