ಮುಕ್ಕೂರು- ಕುಂಡಡ್ಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ನೇಸರ ಯುವಕ ಮಂಡಲ ಇದರ ಆಶ್ರಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಆ.3 ರಂದು ಮುಕ್ಕೂರಿನಲ್ಲಿ ನಡೆಯಿತು.
ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿ*ಸನಾತನ ಸಂಸ್ಕೃತಿಯ ಸಾರವುಳ್ಳ ಹಿಂದೂ ಧರ್ಮದಲ್ಲಿ ಸಹೋದರತೆಯ ಬಾಂಧವ್ಯ ಶ್ರೇಷ್ಠವಾದದು. ಜಾತಿ, ಮತದ ಬೇಧವಿಲ್ಲದೆ ಅಣ್ಣ ತಂಗಿ, ಅಣ್ಣ ತಮ್ಮ ಸೋದರತೆಯ ಸಂಬಂಧವನ್ನು ಕಾಯ್ದುಕೊಂಡು ರಕ್ಷಕನಾಗಿ ಸದಾ ಕಾಲ ನಿಲ್ಲುವ ನಿಟ್ಟಿನಲ್ಲಿ ಈ ರಾಖೀ ಸಂಕೇತ. ಹಾಗಾಗಿ ರಕ್ಷೆಯ ಮಹತ್ವ ಅರಿತುಕೊಂಡು ಆಚರಿಸಬೇಕು ಎಂದವರು ನುಡಿದರು.
ರಕ್ಷಾ ಬಂಧನದ ಮಹತ್ವದ ಕುರಿತು ಮಾತನಾಡಿದ ನೇಸರ ಯುವಕ ಮಂಡಲ ಕಾರ್ಯದರ್ಶಿ, ಶಿಕ್ಷಕ ಶಶಿಕುಮಾರ್ ಬಿ.ಎನ್. ಭಾರತೀಯ ಸಂಸ್ಕೃತಿ, ಪರಂಪರೆಗೆ ಜಗತ್ತಿನಲ್ಲಿ ತನ್ನದೇ ಆದ ಸ್ಥಾನಮಾನವಿದೆ. ಒಬ್ಬರು ಮತ್ತೊಬ್ಬರನ್ನು ಆಧರಿಸುವ, ಗೌರವಭಾವದಿಂದ ಕಾಣುವ ಸಂಸ್ಕೃತಿ ನಮ್ಮದು. ಅದಕ್ಕೆ ರಕ್ಷಾಬಂಧನದಂತಹ ಸಹೋದರತೆಯ ಬೆಸುಗೆ ಮೂಡಿಸುವ ಆಚರಣೆ ಉದಾಹರಣೆ ಎಂದರು.
ಭಾರತೀಯ ಆಚರಣೆ, ಶಿಕ್ಷಣ, ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ವಿಶೇಷವಾದ ಸೊಗಡಿದೆ. ಕೊರೊನಾದಂತಹ ಮಹಾಮಾರಿ ಜಗತ್ತಿನ ನಾನಾ ದೇಶಗಳಲ್ಲಿ ಬಾಧಿಸಿದ್ದರೂ ಭಾರತದಲ್ಲಿ ಅದರ ಪ್ರಭಾವ ಅಷ್ಟಾಗಿ ಬಾಧಿಸಲಿಲ್ಲ. ಕಾರಣ ಇಲ್ಲಿ ಪ್ರಕೃತಿ ಮತ್ತು ಮನುಷ್ಯ ಜತೆ ಜತೆಯಾಗಿ ಸಾಗುವ ಪರಂಪರೆ ಇದೆ. ನಾವು ಆಧುನಿಕತೆಯ ಮೋಹಕ್ಕೆ ಬಲಿಯಾಗದೆ ಭಾರತೀಯ ಆಚಾರ ವಿಚಾರ, ಸಂಸ್ಕೃತಿಯಲ್ಲಿ ಬದುಕಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಪ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ ಅವರಿಗೆ ಜಗನ್ನಾಥ ಪೂಜಾರಿ ಮುಕ್ಕೂರು ಅವರು ರಾಖೀ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಣೆ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ವಸಂತ ಕೆ.ಸಿ.ಕುಂಡಡ್ಕ, ಜಯಂತ ಕುಂಡಡ್ಕ, ಮಹೇಶ್ ಕತಾರ್, ರವೀಂದ್ರ ಅನವುಗುರಿ, ರಾಮಚಂದ್ರ ಚೆನ್ನಾವರ, ರವಿ ಕುಂಡಡ್ಕ, ವೆಂಕಟರಮಣ ಕುಂಡಡ್ಕ, ಕಿರಣ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯದರ್ಶ ರಕ್ಷಿತ್ ಗೌಡ ಕಾನಾವು ಸ್ವಾಗತಿಸಿದರು. ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ವಂದಿಸಿದರು.
- Friday
- November 15th, 2024