ಕೊಡಗು ಜಿಲ್ಲೆ ಸಿದ್ದಾಪುರ ಬಳಿ ನೆಲ್ಲುದಿ ಕೇರಿ ನಲವತ್ತು ಎಕರೆ ಬರಡಿ ಕಾರ ಬಾಣೆ ಪ್ರದೇಶದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಮನೆಗಳು ಇದ್ದು ಈ ಪ್ರದೇಶಕ್ಕೆ ಮುಖ್ಯರಸ್ತೆಯಿಂದ ಸುಮಾರು ಎರಡು ಕಿಲೋಮೀಟರ್ ರಸ್ತೆಯು 80 ವರ್ಷಗಳಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿ ಕೊಂಡಿತ್ತು. ಈ ಗ್ರಾಮದಲ್ಲಿ ಪ್ರತಿಯೊಂದು ಕೆಲಸ ಕಾರ್ಯಕ್ಕೂ ಇಲ್ಲಿಯ ಜನತೆ ಈ ರಸ್ತೆಯನ್ನು ಅವಲಂಬಿಸಿಕೊಂಡು ಬರುತ್ತಿದ್ದರು. ಈ ಪ್ರದೇಶದಲ್ಲಿ ಇರುವ ಪಡಿತರ ಕೇಂದ್ರಕ್ಕೆ, ವ್ಯಾಪಾರ ಉದ್ದಿಮೆ ಕೇಂದ್ರಗಳಿಗೆ ದವಸಧಾನ್ಯಗಳನ್ನು ಕೊಂಡು ಬರಲು ಇದೇ ರಸ್ತೆ ಅವಲಂಬಿತ ಗೊಂಡಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ಈ ರಸ್ತೆಯು ಖಾಸಗಿ ವ್ಯಕ್ತಿಯಿಂದ ಮುಚ್ಚಲ್ಪಟ್ಟಿದ್ದು ಊರಿನ ಜನತೆ ಸಂಕಷ್ಟಕ್ಕೊಳ ಗಾಗಿದ್ದಾರೆ. ಇದೇ ರಸ್ತೆ ರಸ್ತೆಯ ಎರಡು ಭಾಗಗಳಲ್ಲಿ ಅಲೆಕ್ಸ್ ಪಿಂಟೋ ಎಂಬವರ ಕಾಫಿ ತೋಟವಿದ್ದು ಈ ರಸ್ತೆಯು ಅವರ ಅಧೀನಕ್ಕೆ ಒಳಪಟ್ಟಿದೆ ಎಂಬ ಹಿನ್ನೆಲೆಯಲ್ಲಿ ಹೈಕೋರ್ಟಿನಿಂದ ಆದೇಶವನ್ನು ತಂದು ರಸ್ತೆಗೆ ಬೇಲಿ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ಏಕಾಏಕಿ ಇವರ ಈ ನಿರ್ಧಾರದಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿ ಪರ್ಯಾಯ ಮಾರ್ಗ ಸರಿಯಾದ ರೀತಿಯಲ್ಲಿ ಇಲ್ಲದ ಕಾರಣ, ಗ್ರಾಮಕ್ಕೆ ಸಂಪರ್ಕಿಸಲು ಪರ್ಯಾಯ ಮಾರ್ಗ ಆಗುವತನಕ ಇದೇ ರಸ್ತೆಯನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುವಂತೆ, ಇಲ್ಲದಿದ್ದರೆ ಪರ್ಯಾಯ ಉತ್ತಮ ಮಾರ್ಗವನ್ನು ನಿರ್ಮಿಸಿಕೊಡುವಂತೆ ಮಡಿಕೇರಿ ಜಿಲ್ಲಾಧಿಕಾರಿ ರವರಿಗೆ ಕೊಡಗು ಜಿಲ್ಲಾ ಐ ಎನ್ ಟಿ ಯು ಸಿ ಸಮಿತಿಯ ಕಾರ್ಯದರ್ಶಿ ರಹೀಮ್ ಜುಲೈ 14ರಂದು ಗ್ರಾಮಸ್ಥರ ಸಹಿ ಸಂಗ್ರಹಿಸಿದ ಮನವಿ ಪತ್ರವನ್ನು ನೀಡಿರುತ್ತಾರೆ. ಇದನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಯವರು ವಿಷಯ ನ್ಯಾಯಾಲಯದಲ್ಲಿ ಇರುವ ಕಾರಣ ಅದಷ್ಟು ಶೀಘ್ರದಲ್ಲಿ ಆಲೋಚಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು.
ಈ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸಲು ಐ ಎನ್ ಟಿ ಯು ಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ,ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಮಂಜುನಾಥ್ ಕೆಪಿಸಿಸಿ ಮುಖಂಡ ಪೊನ್ನಣ್ಣ ಬೆಂಗಳೂರು, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತಕುಮಾರ್, ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂವಯ್ಯ, ವಿವಿಧ ಘಟಕಗಳ ಪದಾಧಿಕಾರಿಗಳ ತಂಡ ಆಗಸ್ಟ್ 1ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಜಿಲ್ಲಾ ಸಮಿತಿ ಕಾರ್ಯದರ್ಶಿ ರಹೀಮ್ ರವರ ನೇತೃತ್ವದಲ್ಲಿ ರಾಜ್ಯ ಸಮಿತಿಯ ಉಪಾಧ್ಯಕ್ಷರಿಗೆ ಹಾಗೂ ಮುಖಂಡರಿಗೆ ತಮ್ಮ ಸಮಸ್ಯೆಗಳನ್ನು ವಿವರಿಸಿ ಈ ವಿಷಯಕ್ಕೆ ಕೂಡಲೇ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸುವಲ್ಲಿ ಸಹಕರಿಸುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ದೇವರಾಜ್, ಆಶಿಕ್,ವಿಜು, ಜೋನಿ ಆಸಿಂ,ತಾಹ ಮೊದಲಾದವರು ಉಪಸ್ಥಿತರಿದ್ದರು.
- Tuesday
- December 3rd, 2024