“ಚುನಾಯಿತರಲ್ಲದವರು ಗುದ್ದಲಿಪೂಜೆ ಮಾಡಬಾರದು, ಅದು ಶಾಸಕರ ಹಕ್ಕು” : ಸ್ಥಳೀಯ ಕಾಂಗ್ರೆಸ್ ಮುಖಂಡರ ನಡೆ ವಿರುದ್ಧ ಭಾಗೀರಥಿ ಮುರುಳ್ಯ ಆಕ್ರೋಶ ; “ಅನಧಿಕೃತ ಶಂಕುಸ್ಥಾಪನೆ ಮುಂದುವರಿದರೆ ತೀವ್ರ ಪ್ರತಿಭಟನೆ” : ಬಿಜೆಪಿ ಸುಳ್ಯ ಮಂಡಲ ಕೋಶಾಧಿಕಾರಿ ಸುಬೋದ್ ಶೆಟ್ಟಿ ಎಚ್ಚರಿಕೆ

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಮಾತ್ರ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿಪೂಜೆ ಹಾಗೂ ಉದ್ಘಾಟನೆ ನಡೆಸುವ ಸಾಂವಿಧಾನಿಕ ಹಕ್ಕಿರುತ್ತದೆ. ಚುನಾಯಿತರಲ್ಲದವರು ಅನಧಿಕೃತವಾಗಿ ಗುದ್ದಲಿಪೂಜೆ ಮಾಡುವುದು ಸರಿಯಲ್ಲ” ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

. . . . . . . . .

ಮಂಡೆಕೋಲು-ಕನ್ಯಾನ ರಸ್ತೆಯ ತೋಟಪ್ಪಾಡಿ ಸೇತುವೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, “ತಾವು 15 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾಗ ನಿರ್ಮಾಣವಾಗಿದ್ದ ಕಿರಿದಾದ ಸೇತುವೆಯನ್ನು ಈಗ ಶಾಸಕರ ಅನುದಾನದಡಿ ಅಗಲೀಕರಣಗೊಳಿಸಿ ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಕ್ಷೇತ್ರಕ್ಕೆ ವಿವಿಧ ಯೋಜನೆಗಳಡಿ ಬರುವ ಅನುದಾನದ ಕಾಮಗಾರಿಗಳಿಗೆ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರದೆ ಕೆಲವು ಕಾಂಗ್ರೆಸ್ ಮುಖಂಡರು ವೋಟಿನ ಗಿಮಿಕ್‌ಗಾಗಿ ತಾವೇ ಅನುದಾನ ತಂದಿರುವುದಾಗಿ ಬಿಂಬಿಸಿಕೊಂಡು ಗುದ್ದಲಿಪೂಜೆ ಮಾಡಲು ಮುಂದಾಗುತ್ತಿರುವುದು ಖಂಡನೀಯ” ಎಂದರು. “ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಅಥವಾ ಬ್ಯಾನರ್ ಹಾಕಲು ಯಾರಿಗೂ ಅಡ್ಡಿಯಿಲ್ಲ, ಆದರೆ ಕಾನೂನುಬಾಹಿರವಾಗಿ ಗುದ್ದಲಿಪೂಜೆ ಮಾಡಲು ಯಾರಿಗೂ ಅಧಿಕಾರವಿಲ್ಲ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಹಕ್ಕುಚ್ಯುತಿ ಮಂಡನೆ ಹಾಗೂ ಮುಂಬರುವ ಬೆಳಗಾವಿ ಅಧಿವೇಶನದಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿ ಕಾನೂನು ಹೋರಾಟ ನಡೆಸುವುದಾಗಿ” ಶಾಸಕರು ತಿಳಿಸಿದರು.

. . . . . . .

ತೀವ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ ಸುಬೋದ್ ಶೆಟ್ಟಿ : ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸುಳ್ಯ ಮಂಡಲ ಕೋಶಾಧಿಕಾರಿ ಸುಬೋದ್ ಶೆಟ್ಟಿ ಅವರು, “ಮೀಸಲಾತಿ ಕ್ಷೇತ್ರದಿಂದ ಜನರಿಂದ ಆಯ್ಕೆಯಾದ ಶಾಸಕರನ್ನು ಕಡೆಗಣಿಸಿ, ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿಲ್ಲದ ಕಾಂಗ್ರೆಸ್ ಮುಖಂಡರು ಏಕಾಏಕಿ ಸೇತುವೆ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ” ಎಂದು ಕಿಡಿಕಾರಿದರು. “ತೋಟಪ್ಪಾಡಿ ಸೇತುವೆ ಸೇರಿದಂತೆ ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾಗಿರುವುದು ಸಾರ್ವಜನಿಕರ ತೆರಿಗೆ ಹಣವಾಗಿದ್ದು, ಶಾಸಕರ ಶಿಫಾರಸಿನ ಮೇರೆಗೆ ಹಂಚಿಕೆಯಾಗಿದೆ. ಇದರಲ್ಲಿ ಕಾಂಗ್ರೆಸ್ ಮುಖಂಡರ ಯಾವುದೇ ಪಾತ್ರವಿಲ್ಲ. ಗ್ಯಾರಂಟಿ ಸಮಿತಿಯ ಹೆಸರಿನಲ್ಲಿ ಸರ್ಕಾರಿ ಭತ್ಯೆ ಮತ್ತು ವಾಹನ ಸೌಲಭ್ಯ ಪಡೆದು ಶಾಸಕರ ಹಕ್ಕುಚ್ಯುತಿ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡರು ಮತ್ತೆ ಅನಧಿಕೃತವಾಗಿ ಶಂಕುಸ್ಥಾಪನೆ ಅಥವಾ ಗುದ್ದಲಿಪೂಜೆಗೆ ಮುಂದಾದರೆ ಬಿಜೆಪಿ ವತಿಯಿಂದ ತೀವ್ರ ಪ್ರತಿಭಟನೆ ನಡೆಸಿ ತಡೆಯಲಾಗುವುದು” ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading