ನೆಹರೂ ಮೆಮೋರಿಯಲ್ ಕಾಲೇಜಿನ ಸುವರ್ಣ ಮಹೋತ್ಸವಕ್ಕೆ ಸಿದ್ಧತೆ | ರೂ.40 ಲಕ್ಷ ವೆಚ್ಚದಲ್ಲಿ ಮೈದಾನಕ್ಕೆ ಬೆಳಕಿನ ವ್ಯವಸ್ಥೆ ; ಡಿ.27ರಂದು ಹಳೆವಿದ್ಯಾರ್ಥಿಗಳ ಸುವರ್ಣ ಸಮ್ಮಿಲನ

“ನೆಹರೂ ಮೆಮೋರಿಯಲ್ ಕಾಲೇಜಿನ ಸುವರ್ಣ ಮಹೋತ್ಸವವನ್ನು 2026ರ ಡಿಸೆಂಬರ್ 26ರಿಂದ 28ರವರೆಗೆ ಮೂರು ದಿನಗಳ ಕಾಲ ವೈಭವದಿಂದ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಹಳೆವಿದ್ಯಾರ್ಥಿಗಳ ಸಂಘದ ವತಿಯಿಂದ ಸುಮಾರು ರೂ. 40 ಲಕ್ಷ ವೆಚ್ಚದಲ್ಲಿ ಕಾಲೇಜು ಮೈದಾನಕ್ಕೆ ಸಂಪೂರ್ಣ ಬೆಳಕಿನ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ” ಎಂದು ಸಂಘದ ಅಧ್ಯಕ್ಷ ಕೆ.ಟಿ. ವಿಶ್ವನಾಥ್ ತಿಳಿಸಿದರು.

. . . . . . . . .

ನ. 21ರಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “1976ರಲ್ಲಿ ಡಾ. ಕುರುಂಜಿ ವೆಂಕಟ್ರಮಣ ಗೌಡರ ದೂರದೃಷ್ಟಿ ಹಾಗೂ ಶಿಕ್ಷಣ ಸೇವೆಯ ಫಲವಾಗಿ ಸ್ಥಾಪನೆಯಾದ ಕಾಲೇಜು ಐದು ದಶಕಗಳ ಶೈಕ್ಷಣಿಕ ಪಯಣದಲ್ಲಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದೆ. ಸುಳ್ಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಿರುವ ಸಂಸ್ಥೆಯ ಸುವರ್ಣ ಪಯಣವನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ಕಾಲೇಜು ಆಡಳಿತ ಮಂಡಳಿ ಹಾಗೂ ಹಳೆವಿದ್ಯಾರ್ಥಿ ಸಂಘ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ” ಎಂದರು.

. . . . . . .

“ಸುವರ್ಣ ಮಹೋತ್ಸವದ ನೆನಪಿಗಾಗಿ ಕಾಲೇಜಿಗೆ ಶಾಶ್ವತ ಕೊಡುಗೆ ನೀಡುವ ಉದ್ದೇಶದಿಂದ ‘ಸುವರ್ಣ ದೀಪ’ ಯೋಜನೆಯನ್ನು ರೂಪಿಸಲಾಗಿದೆ. ಸುಮಾರು ರೂ. 40 ಲಕ್ಷ ವೆಚ್ಚದಲ್ಲಿ ಕಾಲೇಜು ಮೈದಾನಕ್ಕೆ ಸಂಪೂರ್ಣ ಬೆಳಕಿನ ವ್ಯವಸ್ಥೆ ಕಲ್ಪಿಸುವ ಮೂಲಕ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ಹಳೆವಿದ್ಯಾರ್ಥಿಗಳು, ಹಿತೈಷಿಗಳು ಹಾಗೂ ಕಾಲೇಜು ಅಭಿಮಾನಿಗಳು ಉದಾರವಾಗಿ ಧನಸಹಾಯ ನೀಡಿ ಸಹಕರಿಸಬೇಕು” ಎಂದು ಮನವಿ ಮಾಡಿದರು.

“ದಾನಿಗಳ ಸಹಕಾರದಿಂದ ನಿರ್ಮಾಣವಾಗುವ ಬೆಳಕಿನ ವ್ಯವಸ್ಥೆಯು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಲಿದೆ. ತಮ್ಮ ಬದುಕಿಗೆ ಬೆಳಕು ನೀಡಿದ ಕಾಲೇಜಿಗೆ ಹಳೆವಿದ್ಯಾರ್ಥಿಗಳು ಶಾಶ್ವತ ಕೊಡುಗೆ ನೀಡಲು ಇದೊಂದು ಉತ್ತಮ ಅವಕಾಶವಾಗಿದೆ” ಎಂದು ತಿಳಿಸಿದರು.

“’ಸುವರ್ಣ ಸೌರಭ’ ಆಶಯದೊಂದಿಗೆ ನಡೆಯಲಿರುವ ಮೂರು ದಿನಗಳ ಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಡಿಸೆಂಬರ್ 27ರಂದು ಹಳೆವಿದ್ಯಾರ್ಥಿಗಳ ಸುವರ್ಣ ಸಮ್ಮಿಲನ ನಡೆಯಲಿದ್ದು, ಐದು ದಶಕಗಳ ಹಿಂದೆ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಮತ್ತೆ ತಮ್ಮ ನೆಚ್ಚಿನ ಕ್ಯಾಂಪಸ್‌ನಲ್ಲಿ ಒಂದಾಗಿ ಹಳೆಯ ನೆನಪುಗಳನ್ನು ಮೆಲುಕು ಹಾಕಿ, ಸ್ನೇಹ ಸಂಬಂಧಗಳನ್ನು ಬೆಸೆಯುವ ಅವಕಾಶ ಕಲ್ಪಿಸಲಾಗಿದೆ. ಸುವರ್ಣ ಮಹೋತ್ಸವದಲ್ಲಿ ಹಳೆವಿದ್ಯಾರ್ಥಿಗಳು, ಹಿತೈಷಿಗಳು ಹಾಗೂ ಕಾಲೇಜು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ನೀಡುವಂತೆ” ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ, ಹಳೆವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮಧುರಾ ಎಂ.ಆರ್, ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲ್, ಹಾಗೂ ಸಂಘದ ಪದಾಧಿಕಾರಿಗಳಾದ ಚಂದ್ರ ಕೊಲ್ಚಾರ್, ಎಸ್.ಎನ್ ಮನ್ಮಥ, ಎಸ್. ಸಂಶುದ್ದೀನ್, ಜಯಪ್ರಕಾಶ್ ರೈ, ಸುಧಾಕರ ರೈ ನೆಟ್ಕಾಂ, ದೊಡ್ಡಣ್ಣ ಬರಮೇಲು, ಪ್ರವೀಣ್ ಕೋಟ್ಯಾನ್, ಕುಸುಮಾಧರ ಎ.ಟಿ., ರಜತ್ ಅಡ್ಕಾರ್, ವಿನುತಾ ಪಾತಿಕಲ್ಲು, ಚಂದ್ರಾವತಿ ಬಡ್ಡಡ್ಕ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading