ನವೆಂಬರ್ 16: ನರಿಮೊಗರು ‘ಆದರ್ಶ ಸಹಕಾರ ಸಂಘ’ದ ಕೇಂದ್ರ ಕಚೇರಿ, ವಾಣಿಜ್ಯ ಸಂಕೀರ್ಣ ಉದ್ಘಾಟನೆ ಹಾಗೂ ರಜತ ಮಹೋತ್ಸವ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ, ನರಿಮೊಗರಿನ ‘ಆದರ್ಶ ವಿವಿಧೋದ್ದೇಶ ಸಹಕಾರ ಸಂಘ (ನಿ.)’ ಇದರ ಸ್ವಂತ ನಿವೇಶನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸುಸಜ್ಜಿತ ಕೇಂದ್ರ ಕಚೇರಿ, ಸೆಫ್ಟಿ ಲಾಕರ್, ನವೀಕೃತ ಶಾಖೆ ಹಾಗೂ ವಾಣಿಜ್ಯ ಸಂಕೀರ್ಣದ ಉದ್ಘಾಟನೆ ಮತ್ತು ಸಂಸ್ಥೆಯ ರಜತ ಮಹೋತ್ಸವ ಸಮಾರಂಭವು ನವೆಂಬರ್ 16ರಂದು ಬೆಳಿಗ್ಗೆ 10:30ಕ್ಕೆ ಸಾಮೆತ್ತಡ್ಕ–ಕುಕ್ಕಪ್ರಸ್ತ ರಸ್ತೆಯ ಸಂಘದ ಆವರಣದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

. . . . . . . . .

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಪ್ರತಿಷ್ಠಾನದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

. . . . . . .

ಗಣ್ಯರ ಉಪಸ್ಥಿತಿ – ಉದ್ಘಾಟನೆ
ಸಂಘದ ಕೇಂದ್ರ ಕಚೇರಿಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಉದ್ಘಾಟಿಸಲಿದ್ದಾರೆ. ವಾಣಿಜ್ಯ ಸಂಕೀರ್ಣವನ್ನು ಎ.ಜೆ. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಮುಖ್ಯಸ್ಥ ಡಾ. ಎ.ಜೆ. ಶೆಟ್ಟಿ ಉದ್ಘಾಟಿಸಲಿದ್ದು, ನವೀಕೃತ ಶಾಖೆಯನ್ನು ಸುಳ್ಯ ಶಾಸಕಿ ಕು| ಭಾಗೀರಥಿ ಮುರುಳ್ಯ, ಸೆಫ್ಟಿ ಲಾಕರ್ ವ್ಯವಸ್ಥೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್. ಹಾಗೂ ನರಿಮೊಗರು ಗ್ರಾ.ಪಂ. ಅಧ್ಯಕ್ಷ ಹರೀಶ್ ಕೆ. ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಾಧಕರಿಗೆ, ಸಿಬ್ಬಂದಿಗೆ ಸನ್ಮಾನ
ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಗಣ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು. ಜಿಲ್ಲೆಯ ಉತ್ತಮ ಹಿರಿಯ ಸಹಕಾರಿಯಾಗಿ ಜಾನಕಿ ಮಾಧವ ಗೌಡ ಅವರಿಗೆ ‘ಆದರ್ಶ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಘದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ನಿರ್ದೇಶಕರು, ಸಿಬ್ಬಂದಿ ವರ್ಗ, ಗಣಕೀಕರಣ ನಿರ್ವಹಣೆಯ ತಜ್ಞರು, ನೂತನ ಕಟ್ಟಡ ನಿರ್ಮಾಣದ ಗುತ್ತಿಗೆದಾರರು ಹಾಗೂ ವಿವಿಧ ರಂಗಗಳ ಸಾಧಕರನ್ನು ಸನ್ಮಾನಿಸಲಾಗುವುದು.

ದಿನವಿಡೀ ಸಾಂಸ್ಕೃತಿಕ ವೈಭವ
ರಜತ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ೯ರಿಂದ ‘ಭಕ್ತಿ ಗಾನಾಮೃತ’, 10 ಗಂಟೆಗೆ ಸಭಾ ಕಾರ್ಯಕ್ರಮದ ಬಳಿಕ ಅಪರಾಹ್ನ 12ರಿಂದ ಖ್ಯಾತ ಕಲಾವಿದರಾದ ಶ್ರೀ ಉಮೇಶ್ ಮಿಜಾರು (ಕುಸಲ್ದ ಕಲಿಗಳು) ಮತ್ತು ಬಳಗದಿಂದ ‘ಕಾಮಿಡಿ ಶೋ’ ಜರುಗಲಿದೆ. ಮಧ್ಯಾಹ್ನ ೨ ಗಂಟೆಯಿಂದ ‘ಕಲಾರತ್ನ’ ಪ್ರಶಸ್ತಿ ಪುರಸ್ಕೃತೆ ಪುಷ್ಪಾ ಮುಂಡಾಜೆ ಹಾಗೂ ಯಕ್ಷಗಾನ ಕಲಾರಂಗದ ಗಾಯಕಿ ಯಜ್ಞೇಶ್ವರಿ ರೈ ಪುತ್ತೂರು ಅವರಿಂದ ‘ಯಕ್ಷ ನೃತ್ಯಸಿಂಚನ’ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ಸಂಘದ ಅಧ್ಯಕ್ಷ ‘ಸಹಕಾರ ರತ್ನ’ ಕೆ. ಸೀತಾರಾಮ ರೈ ಸವಣೂರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading