ಅಮರ ಸುದ್ದಿ ವಿಶೇಷ ವರದಿ – ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ಸರ್ಕಾರಿ ಪ್ರೌಢಶಾಲೆ ಇಂದು ಮತ್ತೆ ಚೇತರಿಕೆಯ ಹಾದಿಯಲ್ಲಿ..! ; ಹಂತ-ಹಂತವಾಗಿ ಹೆಚ್ಚುತ್ತಿದೆ ವಿದ್ಯಾರ್ಥಿಗಳ ಸಂಖ್ಯೆ..!! – ಉಲ್ಲಾಸ್ ಕಜ್ಜೋಡಿ

ಸುಮಾರು ಮೂರು ವರ್ಷಗಳ ಹಿಂದೆ ಅಂದರೆ 2023ರಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ಸರ್ಕಾರಿ ಪ್ರೌಢಶಾಲೆಯೊಂದು ಇದೀಗ ಮೂರು ವರ್ಷಗಳ ನಂತರ ತನ್ನ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ನಿಧಾನವಾಗಿ ಏರಿಕೆಯನ್ನು ಕಾಣುತ್ತಾ ಹಂತಹಂತವಾಗಿ ಪ್ರಗತಿಯತ್ತ ಸಾಗುತ್ತಿರುವ ಸಕಾರಾತ್ಮಕ ಬದಲಾವಣೆಗೆ ಸಾಕ್ಷಿಯಾಗಿರುವ ಘಟನೆ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕದಲ್ಲಿ ನಡೆದಿದೆ. ಸುಮಾರು 44 ವರ್ಷಗಳ ಹಿಂದೆ ಅಂದರೆ 1982ನೇ ಇಸವಿಯಲ್ಲಿ ದುರ್ಗದಾಸ್ ಮಲ್ಲಾರ ಹಾಗೂ ಶಿವ ಸುಬ್ರಹ್ಮಣ್ಯ ಭಟ್ ಪಲ್ಲತ್ತಡ್ಕ ಸೇರಿದಂತೆ ಊರಿನ ವಿದ್ಯಾಭಿಮಾನಿಗಳ ನಿರಂತರ ಪ್ರಯತ್ನದಿಂದ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯೊಂದು ಸ್ಥಾಪನೆಗೊಂಡಿತ್ತು. ಆರಂಭದಲ್ಲಿ ಹರಿಹರ ಪಳ್ಳತ್ತಡ್ಕದ ಈಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನದ ಅಂಚಿನಲ್ಲಿರುವ ಕಟ್ಟಡವೊಂದರಲ್ಲಿ ಪ್ರಾರಂಭಗೊಂಡ ಈ ಪ್ರೌಢಶಾಲೆ ನಂತರ ಈಗಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಆಗಿನ ಸಮಯದಲ್ಲಿ 8, 9 ಹಾಗೂ 10ನೇ ತರಗತಿಯಲ್ಲಿ ಒಟ್ಟು 300ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಆದರೆ ನಂತರದ ವರ್ಷಗಳಲ್ಲಿ ನಿಧಾನವಾಗಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದು 2023ನೇ ವರ್ಷಾಂತ್ಯದಲ್ಲಿ ಇಲ್ಲಿ ಒಟ್ಟು ಕೇವಲ 09 ವಿದ್ಯಾರ್ಥಿಗಳು ಮಾತ್ರ ವ್ಯಾಸಾಂಗ ಮಾಡುತ್ತಿದ್ದರು, ಆ ಮೂಲಕ ಶಾಲೆ ಮುಚ್ಚುವ ಹಂತಕ್ಕೆ ಬಂದು ತಲುಪಿತ್ತು. 2022ನೇ ಇಸವಿಯಲ್ಲಿ ಪ್ರೌಢಶಾಲೆಯ ಪಕ್ಕದಲ್ಲಿದ್ದ ಊರಿನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿ ಹೋಗಿದ್ದು, ಮರುವರ್ಷವೇ ಪ್ರೌಢಶಾಲೆಯೂ ಕೂಡ ಮುಚ್ಚುವ ಹಂತಕ್ಕೆ ಬಂದು ತಲುಪಿದ್ದು ನಿಜವಾಗಿಯೂ ದುಃಖಕರ ಹಾಗೂ ದುರಾದೃಷ್ಟಕರವಾಗಿತ್ತು. ಏಕೆಂದರೆ 80ರ ದಶಕದಲ್ಲಿ ಊರಿನ ಆಗಿನ ವಿದ್ಯಾಭಿಮಾನಿಗಳ ಸತತ ಪ್ರಯತ್ನ, ಪರಿಶ್ರಮ ಹಾಗೂ ಹೋರಾಟಗಳ ಫಲವಾಗಿ ನಿರ್ಮಾಣಗೊಂಡ ಸುಸಜ್ಜಿತವಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನೂ ಹೊಂದಿದ್ದ ಪಿಯು ಕಾಲೇಜನ್ನು ಉಳಿಸಿಕೊಳ್ಳಲಾರದೇ ಕಣ್ಣೆದುರೇ ಕಳೆದುಕೊಂಡ ನಾವುಗಳು ಮರುವರ್ಷವೇ ಮತ್ತೆ ಸುಸಜ್ಜಿತವಾದ ಪ್ರೌಢಶಾಲೆಯನ್ನೂ ಕಳೆದುಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದೆವು. ಆದರೆ 2023ರಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ಬಂದಿದ್ದ ಈ ಪ್ರೌಢಶಾಲೆಯಲ್ಲಿ ನಂತರ ಮತ್ತೆ ವರ್ಷದಿಂದ ವರ್ಷಕ್ಕೆ ನಿಧಾನವಾಗಿ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಾ ಬಂದಿದ್ದು, ಇದೀಗ ಪ್ರಸ್ತುತ 8ನೇ ತರಗತಿಯಲ್ಲಿ 10 ವಿದ್ಯಾರ್ಥಿಗಳು, 9ನೇ ತರಗತಿಯಲ್ಲಿ 4 ವಿದ್ಯಾರ್ಥಿಗಳು ಹಾಗೂ 10ನೇ ತರಗತಿಯಲ್ಲಿ 9 ವಿದ್ಯಾರ್ಥಿಗಳು ಹೀಗೆ ಒಟ್ಟು 23 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದೇ ರೀತಿ ಕಳೆದ ಶೈಕ್ಷಣಿಕ ಸಾಲಿನಲ್ಲಿ 10ನೇ ತರಗತಿಯಲ್ಲಿ ಶಾಲೆಯು ಶೇ.100 ಫಲಿತಾಂಶವನ್ನು ದಾಖಲಿಸಿದ್ದು, ಇಲ್ಲಿ ಒಟ್ಟು ಆರು ಮಂದಿ ಶಿಕ್ಷಕರುಗಳಿದ್ದು, ಒಬ್ಬರು ಬಿಸಿಯೂಟ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಸುಸಜ್ಜಿತವಾದ ಕಟ್ಟಡವಿದ್ದರೂ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಹೊಂದಿದ್ದರೂ ಪರಿಣಿತ ಶಿಕ್ಷಕವರ್ಗವಿದ್ದರೂ ಕೂಡ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢಶಾಲೆಯೊಂದು ಇದೀಗ ಮತ್ತೆ ತನ್ನ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ನಿಧಾನವಾಗಿ ಏರಿಕೆಯನ್ನು ಕಾಣುತ್ತಿದ್ದು, ಈ ಏರಿಕೆ ಇದೇ ರೀತಿ ಮುಂದುವರೆದು ಈ ಪ್ರೌಢಶಾಲೆಯಲ್ಲಿ ಮತ್ತೆ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುವಂತಾಗಬೇಕು ಹಾಗೂ ಈ ನಿಟ್ಟಿನಲ್ಲಿ ನಮ್ಮ ಊರಿನ ಸರ್ಕಾರಿ ಶಾಲೆಯನ್ನು ಉಳಿಸಿ, ಬೆಳೆಸಲು ಊರಿನ ವಿದ್ಯಾಭಿಮಾನಿಗಳು, ಹೆತ್ತವರು ಹಾಗೂ ನಾವೆಲ್ಲರೂ ಒಂದಾಗಿ ಕೈಜೋಡಿಸಬೇಕಾಗಿದೆ… – ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading