ದೇವರಗದ್ದೆ ಕೊರಗಜ್ಜ ದೈವಸ್ಥಾನಕ್ಕೆ ನಿರ್ಮಾಣಗೊಳ್ಳಲಿರುವ ನೂತನ ಸಭಾಂಗಣ ನಿರ್ಮಾಣ – 16 ಲಕ್ಷ ರೂಪಾಯಿ ವೆಚ್ಚದಲ್ಲಿ ಚಾವಣಿ ಕಾಮಗಾರಿ ಆರಂಭ ; ಮುಂದಿನ ದಿನಗಳಲ್ಲಿ ಶಾಶ್ವತ ಕಾಂಪೌಂಡ್, ನೆಲಹಾಸು

ತುಳುನಾಡಿನಲ್ಲಿ ದೈವರಾಧನೆಗೆ ವಿಶೇಷ ಸ್ಥಾನಮಾನವೀದ್ದು ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯಲ್ಲಿರುವ ಆದಿ ಮೊಗೇರ್ಕಳ, ಕೊರಗಜ್ಜ, ಚಾಮುಂಡಿ ದೈವಸ್ಥಾನ ಹಾಗೂ ನಾಗನ ಕಟ್ಟೆ ಆವರಣದಲ್ಲಿ ಸಭಾಂಗಣ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ.

. . . . . . . . .

ಸುಮಾರು ಎಂಟು ವರ್ಷಗಳ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ದೈವಸ್ಥಾನಗಳನ್ನು ಅಂದಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದ ನಿತ್ಯಾನಂದ ಮುಂಡೋಡಿ ಹಾಗೂ ಮಾಸ್ಟರ್ ಪ್ಲಾನ್ ಸದಸ್ಯರಾಗಿದ್ದ ಶಿವರಾಮ ರೈ ಅವರ ಮುತುವರ್ಜಿಯಲ್ಲಿ ಪುನರ್ ನಿರ್ಮಿಸಲಾಗಿತ್ತು. ಬಳಿಕ ಕಳೆದ ಎರಡು ವರ್ಷಗಳಲ್ಲಿ ಗ್ರಾಮ ಪಂಚಾಯಿತಿ ಅನುದಾನ ಹಾಗೂ ದೈವಸ್ಥಾನದ ಆದಾಯದಿಂದ ಸುಮಾರು 15 ಸೆಂಟ್ಸ್ ನಿವೇಶನಕ್ಕೆ ಜಾಗ, ಕಟ್ಟಡ, ತಾತ್ಕಾಲಿಕ ಆವರಣ ಗೋಡೆ ಹಾಗೂ ಇಂಟರ್‌ಲಾಕ್ ಅಳವಡಿಸುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

. . . . . . .

ಇದೀಗ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸುಮಾರು 16 ಲಕ್ಷ ರೂಪಾಯಿ ವೆಚ್ಚದಲ್ಲಿ ಸಭಾಂಗಣಕ್ಕೆ ಶೀಟ್ ಅಳವಡಿಸಿ ಚಾವಣಿ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸ್ಥಳೀಯರ ಸಹಕಾರದೊಂದಿಗೆ ದೇವಸ್ಥಾನದ ಆಡಳಿತಾಧಿಕಾರಿಗಳು ಹಾಗೂ ಕಾರ್ಯನಿರ್ವಾಹಣಾಧಿಕಾರಿಯವರ ಸಹಕಾರದಿಂದ ಕಾಮಗಾರಿ ಆರಂಭಗೊಂಡಿದ್ದು, ಸುಮಾರು ಒಂದು ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಮುಂದಿನ ಹಂತದಲ್ಲಿ ದೈವಸ್ಥಾನಕ್ಕೆ ಶಾಶ್ವತ ಕಾಂಪೌಂಡ್ ನಿರ್ಮಿಸುವುದು ಹಾಗೂ ಸಭಾಂಗಣದ ನೆಲಕ್ಕೆ ಗ್ರಾನೈಟ್ ಅಥವಾ ಟೈಲ್ಸ್ ಅಳವಡಿಸುವ ಉದ್ದೇಶವಿದೆ. ಈ ಕಾಮಗಾರಿಗಳ ಕಡತ ಪ್ರಕ್ರಿಯೆ ಪೂರ್ಣಗೊಳಿಸಿ ಟೆಂಡರ್ ಕರೆದ ಬಳಿಕ ಒಂದು ಅಥವಾ ಎರಡು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.

ಸಭಾಂಗಣವು ಮುಂದಿನ ದಿನಗಳಲ್ಲಿ ದೈವಕೋಲ ಸೇರಿದಂತೆ ಸ್ಥಳೀಯ ಬಡ ಕುಟುಂಬಗಳ ಸಣ್ಣಪುಟ್ಟ ಮದುವೆ ಹಾಗೂ ಇತರ ಕಾರ್ಯಕ್ರಮಗಳಿಗೆ ಉಪಯೋಗವಾಗುವ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯ ಅಜಿತ್ ಪಾಲೇರಿ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ರತ್ನಾಕರ ಸುಬ್ರಹ್ಮಣ್ಯ, ಸ್ಥಳೀಯರಾದ ಲತೇಶ್ ದೇವರಗದ್ದೆ ಹಾಗೂ ಭವಿಷ್ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading