ಕಸ್ತೂರಿರಂಗನ್ ವರದಿ 7ನೇ ಕರಡು ಅಧಿಸೂಚನೆಗೆ ಆಕ್ಷೇಪಣೆ : ವಿಶೇಷ ಗ್ರಾಮಸಭೆಗೆ ಆಗ್ರಹ – ನಾಲ್ಕೂರು ಗ್ರಾಮಸ್ಥರಿಂದ ಗುತ್ತಿಗಾರು ಗ್ರಾಮ ಪಂಚಾಯಿತಿಗೆ ಮನವಿ

ಕಸ್ತೂರಿರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟಗಳ 7ನೇ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ಹಿನ್ನೆಲೆಯಲ್ಲಿ ವಿಶೇಷ ಗ್ರಾಮಸಭೆ ಕರೆಯುವಂತೆ ಆ.27 ಗುರುವಾರದಂದು ನಾಲ್ಕೂರು ಗ್ರಾಮದ ನಾಗರಿಕರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.

. . . . . . . . .

ಗ್ರಾಮದ ನಾಗರಿಕರು ಒಗ್ಗೂಡಿ ಸಹಿ ಸಂಗ್ರಹಿಸಿ ಗ್ರಾಮ ಪಂಚಾಯಿತಿಗೆ ಮನವಿ ಪತ್ರವನ್ನು ಸಲ್ಲಿಸಿದ್ದು, ಕರಡು ಅಧಿಸೂಚನೆಯ ಕುರಿತು ಗ್ರಾಮಸ್ಥರ ಅಭಿಪ್ರಾಯ, ಸಲಹೆ ಹಾಗೂ ಆಕ್ಷೇಪಣೆಗಳನ್ನು ಗ್ರಾಮಸಭೆಯ ಮೂಲಕ ಅಧಿಕೃತವಾಗಿ ದಾಖಲಿಸುವಂತೆ ಮನವಿ ಮಾಡಿದ್ದಾರೆ.

. . . . . . .

“ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ(ESA) ಎಂದು ಘೋಷಿಸುವ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಸ್ಥಳೀಯ ಕೃಷಿಕರು, ತೋಟಗಾರರು ಹಾಗೂ ಗ್ರಾಮಸ್ಥರ ಜೀವನೋಪಾಯ, ವಸತಿ ಮತ್ತು ಮೂಲಭೂತ ಸೌಕರ್ಯಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಗ್ರಾಮ ಮಟ್ಟದಲ್ಲಿ ಸಮಗ್ರ ಚರ್ಚೆ ಅಗತ್ಯವಿದೆ” ಎಂದು ನಾಗರಿಕರು ತಿಳಿಸಿದ್ದಾರೆ.

“ಪರಿಸರ ಸಂರಕ್ಷಣೆಯ ಉದ್ದೇಶಕ್ಕೆ ವಿರೋಧವಿಲ್ಲ. ಆದರೆ ಪರಿಸರ ಸಂರಕ್ಷಣೆಯ ಜೊತೆಗೆ ಸ್ಥಳೀಯ ಜನರ ಹಕ್ಕುಗಳು, ಕೃಷಿ, ತೋಟಗಾರಿಕೆ, ಜೀವನೋಪಾಯ ಹಾಗೂ ಗ್ರಾಮೀಣ ಅಭಿವೃದ್ಧಿಯ ಅಗತ್ಯಗಳನ್ನು ಪರಿಗಣಿಸಬೇಕು” ಎಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ. “ಆದ್ದರಿಂದ ಗ್ರಾಮ ಪಂಚಾಯಿತಿ ಕೂಡಲೇ ವಿಶೇಷ ಗ್ರಾಮಸಭೆ ಕರೆದು, ಕಸ್ತೂರಿರಂಗನ್ ವರದಿ 7ನೇ ಕರಡು ಅಧಿಸೂಚನೆಯ ಅಂಶಗಳನ್ನು ಗ್ರಾಮಸ್ಥರ ಮುಂದಿಡಬೇಕು. ಗ್ರಾಮಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ದಾಖಲಿಸಿ, ಗ್ರಾಮಸಭೆಯ ನಿರ್ಣಯದೊಂದಿಗೆ ಸಂಬಂಧಪಟ್ಟ ಸರ್ಕಾರದ ಇಲಾಖೆಗೆ ಸಲ್ಲಿಸಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. “ಸ್ಥಳೀಯರ ಅಭಿಪ್ರಾಯವನ್ನು ಪರಿಗಣಿಸದೆ ಅಂತಿಮ ನಿರ್ಧಾರ ಕೈಗೊಳ್ಳಬಾರದು. ನಾಲ್ಕೂರು ಗ್ರಾಮದ ನೈಜ ಪರಿಸ್ಥಿತಿ, ಕೃಷಿ ಪ್ರದೇಶ, ಜನವಸತಿ ಹಾಗೂ ಸ್ಥಳೀಯರ ಜೀವನೋಪಾಯವನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ನಾಗರಿಕರು ಆಗ್ರಹಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading