ಮರಿಗಳಿಗಾಗಿ ಆಹಾರವ ಅರಸುತ್ತಾ ಸಾಗಿ ಮಸಣದ ಹಾದಿ ಹಿಡಿದ ಬೆಕ್ಕು…

ಕೆಲವು ವರ್ಷಗಳ ಹಿಂದೆ ಒಂದು ದಿವಸ ಜೋರಾಗಿ ಮಳೆ ಸುರಿಯುತ್ತಿದ್ದ ಮಧ್ಯರಾತ್ರಿಯ ಸಂದರ್ಭದಲ್ಲಿ ನಮ್ಮ ಮನೆಯ ಹಿಂಭಾಗದಲ್ಲಿ ಬೆಕ್ಕೊಂದು ಅಳುತ್ತಿರುವ ಸದ್ದು ಕೇಳಿಸುತ್ತಿತ್ತು. ನಾವು ಮನೆಮಂದಿಯೆಲ್ಲರೂ ಎಚ್ಚರಗೊಂಡು ಶಬ್ಧ ಬಂದತ್ತ ಸಾಗಿ ಮನೆಯ ಹಿಂಬಾಗಿಲನ್ನು ತೆರೆದು ನೋಡಿದಾಗ ಪುಟ್ಟ ಬೆಕ್ಕಿನ ಮರಿಯೊಂದು ಜೋರಾಗಿ ಸುರಿಯುತ್ತಿದ್ದ ಆ ಮಳೆಗೆ ಒದ್ದೆಯಾಗಿ ನಡುಗುತ್ತಾ ಮೂಕವಿಸ್ಮಿತವಾಗಿ ನಮ್ಮ ಮುಖವನ್ನೇ ನೋಡುತ್ತಾ ಕುಳಿತಿತ್ತು. ಮರಿ ಬೆಕ್ಕಿನ ಆ ಮುಗ್ಧ ಮುಖವನ್ನು ನೋಡಿದ ನಮ್ಮ ಮನಸ್ಸು ಅದನ್ನು ಸಾಕುವ ಮನಸ್ಸು ಮಾಡಿತ್ತು. ಅರ್ಧ ರಾತ್ರಿಯ ಆ ಮಳೆಯಲ್ಲಿ ಆಕಸ್ಮಿಕ ಅತಿಥಿಯಂತೆ ನಮ್ಮ ಮನೆ ಬಾಗಿಲಿಗೆ ಬಂದ ಆ ಬೆಕ್ಕಿನ ಮರಿ ಮುಂದೆ ನಮ್ಮ ಮನೆಯ ಸದಸ್ಯರಲ್ಲೊಂದರಂತೆ ಆಗಿ ಹೋಗಿತ್ತು. ಮುಂದೆ ವರ್ಷಗಳು ಉರುಳಿತ್ತು, ಮನೆಯಲ್ಲಿ ಯಾವುದೇ ತೊಂದರೆ ನೀಡದೇ ಮನೆಮಂದಿಯ ಪ್ರೀತಿಗೆ ಪಾತ್ರವಾಗಿ ಬೆಳೆದ ಆ ಬೆಕ್ಕಿನ ಮರಿ ದೊಡ್ಡದಾಗಿತ್ತು. ಹೀಗೆ ವರ್ಷಗಳು ಉರುಳಿದಂತೆ ಮೂರು ಬಾರಿ ಆರು ಮರಿಗಳಿಗೆ ಜನ್ಮ ನೀಡಿದ ಆ ಬೆಕ್ಕು ಇತ್ತೀಚೆಗೆ ಎರಡ್ಮೂರು ತಿಂಗಳ ಹಿಂದೆ ಮತ್ತೆ ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿತ್ತು. ಆದರೆ ನಾಲ್ಕನೇ ಬಾರಿ ಎರಡು ಮರಿಗಳಿಗೆ ತಾಯಿಯಾದ ಆ ಬೆಕ್ಕಿನ ಹಣೆಬರಹ ಹೇಗಿತ್ತೆಂದರೆ ಈ ಬಾರಿ ತನ್ನ ಮರಿಗಳ ಬೆಳವಣಿಗೆಯನ್ನು ನೋಡುವ ಅವಕಾಶವೇ ಆ ತಾಯಿ ಬೆಕ್ಕಿಗೆ ಸಿಗಲಿಲ್ಲ. ಈಗ ಒಂದು ವಾರದ ಹಿಂದಷ್ಟೇ ಒಂದು ದಿವಸ ಮುಂಜಾನೆ ನಾವು ಎದ್ದು ಮಾಮೂಲಾಗಿ ಮರಿಗಳ ಬಳಿ ಹೋಗಿ ನೋಡಿದಾಗ ಮರಿಗಳು ನಿದ್ರಿಸುತ್ತಿದ್ದವು, ಆದರೆ ಮರಿಗಳೊಂದಿಗೆ ತಾಯಿ ಬೆಕ್ಕು ಮಾತ್ರ ಇರಲಿಲ್ಲ. ಹೀಗೆ ಎಲ್ಲಾದರೂ ಹೊರಗಡೆ ಹೋಗಿರಬಹುದೆಂದು ತಿಳಿದ ನಾವು ಬೆಳಿಗ್ಗೆ ಗಂಟೆ ಹತ್ತಾದರೂ ತಾಯಿ ಬೆಕ್ಕು ಮನೆಗೆ ಹಿಂದಿರುಗಿ ಬಾರದೇ ಇದ್ದಾಗ ಅಕ್ಕ-ಪಕ್ಕದ ಮನೆಯವರೊಂದಿಗೆ ಕೇಳುತ್ತಾ ಹುಡುಕಲು ಶುರು ಮಾಡಿದೆವು. ಆದರೆ ಮಧ್ಯಾಹ್ನದವರೆಗೂ ಎಲ್ಲೆಲ್ಲಿ ಹುಡುಕಿದರೂ ಕೂಡ ತಾಯಿ ಬೆಕ್ಕು ಮಾತ್ರ ಸಿಗಲೇ ಇಲ್ಲ. ಕೊನೆಗೆ ಮದ್ಯಾಹ್ನದ ಹೊತ್ತಿಗೆ ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ಪರಿಚಯಸ್ಥರ ಮನೆಯಿಂದ ಫೋನ್ ಕರೆಯೊಂದು ಬಂದಿದ್ದು, “ನಮ್ಮ ತೋಟದ ಅಂಚಿನಲ್ಲಿರುವ ಕೆರೆಯಲ್ಲಿ ಬೆಕ್ಕೊಂದು ಬಿದ್ದಿದೆ, ನೋಡಲು ನಿಮ್ಮ ಬೆಕ್ಕಿನಂತೆಯೇ ಇದೆ” ಎಂದು ಅವರು ಹೇಳಿದರು. ತಕ್ಷಣ ಅಲ್ಲಿಗೆ ಹೋಗಿ ನೋಡಿದಾಗ ದುರಾದೃಷ್ಟವಶಾತ್ ಆ ಬೆಕ್ಕು ನಮ್ಮದೇ ಆಗಿತ್ತು. ಹಿಂದಿನ ದಿವಸ ರಾತ್ರಿ ಜೋರಾಗಿ ಮಳೆ ಸುರಿದಿದ್ದು, ನಾವು ನಿದ್ರಿಸುವವರೆಗೂ ತನ್ನ ಮರಿಗಳೊಂದಿಗೆ ಆಟವಾಡುತಿದ್ದ ತಾಯಿ ಬೆಕ್ಕು ಆಗಷ್ಟೇ ಕಣ್ಣು ಕಾಣಿಸಲು ಶುರುವಾಗಿದ್ದ ತನ್ನ ಮರಿಗಳಿಗೆ ಕ್ರಿಮಿ-ಕೀಟಗಳನ್ನು ಹುಡುಕಿ ತರುವ ಉದ್ದೇಶದಿಂದಲೋ ಏನೋ ಮಧ್ಯರಾತ್ರಿಯ ಸಮಯದಲ್ಲಿ ಮನೆಯಿಂದ ಹೊರಗೆ ಹೊರಟಿತ್ತೆಂದು ಕಾಣಿಸುತ್ತದೆ. ಹಾಗೆ ಹೊರಟು ಹೋದ ಆ ತಾಯಿ ಬೆಕ್ಕು ಮತ್ತೆ ನಮ್ಮ ಕಣ್ಣಿಗೆ ಕಾಣಿಸಿದ್ದು ಹೆಣವಾಗಿಯೇ… ಅದರ ಹಣೆಬರಹ ಅದೆಷ್ಟು ಕೆಟ್ಟದಾಗಿತ್ತೆಂದರೆ ಆಗಷ್ಟೇ ಮಳೆ ಬಂದು ಬಿಟ್ಟಿದ್ದ ಮಧ್ಯರಾತ್ರಿಯ ಆ ಚಳಿಯಲ್ಲಿ ಮನೆಬಿಟ್ಟು ತನ್ನ ಮರಿಗಳಿಗೋಸ್ಕರ ಬೇಟೆಯನ್ನು ಅರಸಿ ಹೊರ ಸಾಗಿದ್ದ ಆ ತಾಯಿ ಬೆಕ್ಕಿಗೆ ತಾನು ಮತ್ತೆ ಹಿಂತಿರುಗಿ ಮನೆ ಸೇರುವುದಿಲ್ಲ, ತನ್ನ ಮರಿಗಳ ಮುಖವನ್ನು ಮತ್ತೆಂದೂ ನೋಡುವುದಿಲ್ಲ ಎಂಬುವುದು ತಿಳಿದೇ ಇರಲಿಲ್ಲ, ಹುಟ್ಟುತ್ತಲೇ ಅನಾಥವಾಗುತ್ತೇವೆ ಎಂಬುವುದು ಈ ಮರಿಗಳಿಗೂ ತಿಳಿದಿರಲಿಲ್ಲ. ಆಗಷ್ಟೇ ಮಳೆ ಬಂದು ಬಿಟ್ಟಿದ್ದ ಮಧ್ಯರಾತ್ರಿಯ ಆ ಚಳಿಯಲ್ಲಿ ಬೇಟೆಯನ್ನರಸಿ ಸಾಗುತ್ತಾ ತನ್ನ ಮರಿಗಳಿಗೆ ಕ್ರಿಮಿ-ಕೀಟಗಳನ್ನು ನೀಡುವ ತವಕದಿಂದ ಎದುರಿಗಿರುವ ಕೆರೆಯನ್ನು ಗಮನಿಸಿದೇ ಮುಂದೆ ಸಾಗಿ ಕೆರೆಗೆ ಬಿದ್ದಾಗ ಆ ತಾಯಿ ಬೆಕ್ಕಿನ ಹೃದಯ ತನ್ನ ಮರಿಗಳನ್ನು ನೆನೆದು ಅದೆಷ್ಟು ವ್ಯಥೆ ಪಟ್ಟಿರಬಹುದು, ಆ ಕೆರೆಯಿಂದ ಹೊರಬರಲು-ತನ್ನ ಮರಿಗಳ ಬಳಿ ತೆರಳಲು ಕೊನೆ ಉಸಿರಿನವರೆಗೂ ಅದೆಷ್ಟು ಬಾರಿ ಪ್ರಯತ್ನಿಸಿರಬಹುದು, ಕಣ್ಣೆದುರೇ ಕಾಣುತ್ತಿದ್ದ ಸಾವನ್ನು ನೋಡಿ ತನ್ನ ಪ್ರತಿ ಉಸಿರಿನಲ್ಲೂ ಆ ಮೂಕ ಜೀವ ಅದೆಷ್ಟು ನೋವನ್ನು ಕಂಡಿರಬಹುದು, ಅದೆಷ್ಟು ದುಃಖವನ್ನು ಅನುಭವಿಸಿರಬಹುದು ಎಂಬುವುದನ್ನು ಯೋಚಿಸಿದಾಗ ನಮ್ಮ ಕಣ್ಣಂಚು ಒದ್ದೆಯಾಗುತ್ತದೆ. ವಿಧಿ ಹೇಗಿತ್ತೆಂದರೆ ವರ್ಷಗಳ ಹಿಂದೆ ಜೋರಾಗಿ ಮಳೆ ಸುರಿಯುತ್ತಿದ್ದ ಆ ಮಧ್ಯರಾತ್ರಿಯಲ್ಲಿ ಆಕಸ್ಮಿಕ ಅತಿಥಿಯಂತೆ ಮರಿಯಾಗಿ ನಮ್ಮ ಮನೆಗೆ ಆಗಮಿಸಿದ ಬೆಕ್ಕು ಇದೀಗ ನಮ್ಮ ಮನೆಯಲ್ಲಿ ತನ್ನ ಎರಡು ಪುಟ್ಟ ಮರಿಗಳನ್ನು ಬಿಟ್ಟು ಮತ್ತದೇ ಮಧ್ಯರಾತ್ರಿಯ ಜೋರಾದ ಮಳೆಯಲ್ಲಿ ಮರೆಯಾಗಿ ಹೋಗಿತ್ತು… ಬರಹ : ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading