“ಮಾರುಕಟ್ಟೆ ರೌಂಡ್ ಅಪ್” – ಸೋಮವಾರದಿಂದ ಶನಿವಾರದ ವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಒಂದು ಸಮಗ್ರ ನೋಟ ; ಈ ವಾರದ(ಮೇ.11 ರಿಂದ ಮೇ.16) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯಲ್ಲಿ ಕಂಡುಬಂದ ಏರಿಳಿತಗಳೇನು ಎಂಬುವುದನ್ನು ವಿವರವಾಗಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ – ಬರಹ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತೀ ದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಪ್ರತಿನಿತ್ಯದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಮೇ.11 ಸೋಮವಾರದಿಂದ ಮೇ.16 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳೇನು…!? ಎಂಬುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯಲ್ಲಿ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ…

ಪ್ರಾರಂಭದಲ್ಲಿ ನಾವು ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ಗಮನಿಸುತ್ತಾ ಹೋಗುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಮೇ.11 ಸೋಮವಾರದಂದು ಹೊಸ ಅಡಿಕೆ ಕನಿಷ್ಠ 445 ರಿಂದ ಗರಿಷ್ಠ 475 ರೂಪಾಯಿ, ಹಳೆ ಅಡಿಕೆ ಕನಿಷ್ಠ 450 ರಿಂದ ಗರಿಷ್ಠ 550 ರೂಪಾಯಿ, ಡಬಲ್ ಚೋಲ್ ಕನಿಷ್ಠ 450 ರಿಂದ ಗರಿಷ್ಠ 550 ರೂಪಾಯಿ, ಫಟೋರಾ ಕನಿಷ್ಠ 355 ರಿಂದ ಗರಿಷ್ಠ 405 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 245 ರಿಂದ ಗರಿಷ್ಠ 295 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 255 ರಿಂದ ಗರಿಷ್ಠ 285 ರೂಪಾಯಿ ಧಾರಣೆ ಇತ್ತು. ಮರುದಿವಸ ಮೇ.12 ಮಂಗಳವಾರದಂದು ಕರಿಗೋಟು ಧಾರಣೆಯಲ್ಲಿ 10 ರೂಪಾಯಿಗಳಷ್ಟು ಏರಿಕೆ ಕಂಡುಬಂದಿದ್ದು, ಉಳ್ಳಿಗಡ್ಡೆ ದರದಲ್ಲೂ 5 ರೂಪಾಯಿಯಷ್ಟು ಏರಿಕೆ ದಾಖಲಾಗಿತ್ತು. ಆದರೆ ಉಳಿದೆಲ್ಲಾ ಮುಖ್ಯ ಅಡಿಕೆ ವಿಧಗಳು ಮೇ.11ರ ಧಾರಣೆಯಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಇನ್ನು ಮೇ.13 ಬುಧವಾರಕ್ಕೆ ತಲುಪಿದಾಗ ಹೊಸ ಅಡಿಕೆ ಧಾರಣೆಯಲ್ಲಿ 5 ರೂಪಾಯಿಗಳಷ್ಟು ಕುಸಿತ ಕಂಡುಬಂದಿದ್ದು, ಉಳಿದೆಲ್ಲಾ ಅಡಿಕೆ ವಿಧಗಳು ಮೇ.12 ದರದಲ್ಲೇ ಸ್ಥಿರವಾಗಿ ಮುಂದುವರಿದಿದ್ದವು. ಮೇ.14 ಗುರುವಾರದಂದು ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ಎಲ್ಲಾ ವಿಧದ ಅಡಿಕೆ ಧಾರಣೆಗಳೂ ಕೂಡ ಮೇ.13ರ ದರದಲ್ಲೇ ಸ್ಥಿರವಾಗಿ ಮುಂದುವರಿದಿದ್ದವು. ಆದರೆ ಮೇ.15 ಶುಕ್ರವಾರದ ಹೊತ್ತಿಗೆ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಹಳೆ ಅಡಿಕೆ ಮತ್ತು ಡಬಲ್ ಚೋಲ್ ಧಾರಣೆಗಳಲ್ಲಿ ಪ್ರತೀ ಕೆಜಿಗೆ 10 ರೂಪಾಯಿಗಳಷ್ಟು ಕುಸಿತ ಕಂಡುಬಂದಿದ್ದು, ಹೊಸ ಅಡಿಕೆ ಸೇರಿದಂತೆ ಅಡಿಕೆಯ ಉಳಿದ ಉಪ ಉತ್ಪನ್ನಗಳ ಧಾರಣೆಗಳು ಮೇ.14ರ ದರದಲ್ಲೇ ಸ್ಥಿರವಾಗಿ ನಿಂತಿದ್ದವು. ಇನ್ನು ವಾರದ ಕೊನೆಯ ದಿನವಾದ ಮೇ.16 ಶನಿವಾರದಂದು ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ಎಲ್ಲಾ ವಿಧದ ಅಡಿಕೆ ಧಾರಣೆಗಳೂ ಕೂಡ ಮೇ.15ರ ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಅಂತಿಮವಾಗಿ ವಾರದ ಕೊನೆಯಲ್ಲಿ ಹೊಸ ಅಡಿಕೆ ಕನಿಷ್ಠ 440 ರಿಂದ ಗರಿಷ್ಠ 470 ರೂಪಾಯಿ, ಹಳೆ ಅಡಿಕೆ ಕನಿಷ್ಠ 445 ರಿಂದ ಗರಿಷ್ಠ 540 ರೂಪಾಯಿ, ಡಬಲ್ ಚೋಲ್ ಕನಿಷ್ಠ 440 ರಿಂದ ಗರಿಷ್ಠ 540 ರೂಪಾಯಿ, ಫಟೋರಾ ಕನಿಷ್ಠ 355 ರಿಂದ ಗರಿಷ್ಠ 405 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 250 ರಿಂದ ಗರಿಷ್ಠ 300 ರೂಪಾಯಿ, ಕರಿಗೋಟು ಕನಿಷ್ಠ 265 ರಿಂದ ಗರಿಷ್ಠ 295 ರೂಪಾಯಿಗಳಲ್ಲಿ ನಿಂತಿದ್ದವು.

ಮುಂದೆ ನಾವು ಇತರ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಈ ವಾರದ ಕಂಡುಬಂದ ಏರಿಳಿತಗಳನ್ನು ನೋಡುತ್ತಾ ಹೋಗುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಮೇ.11 ಸೋಮವಾರದಂದು ಕಾಳುಮೆಣಸು ಕನಿಷ್ಠ 585 ರಿಂದ ಗರಿಷ್ಠ 685 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 75 ರಿಂದ ಗರಿಷ್ಠ 105 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 130 ರಿಂದ ಗರಿಷ್ಠ 158 ರೂಪಾಯಿ ಧಾರಣೆ ಇತ್ತು. ಮೇ.12 ಮಂಗಳವಾರದಂದು ಕಾಳುಮೆಣಸಿನ ಧಾರಣೆಯಲ್ಲಿ ಏರುಗತಿ ಕಂಡುಬಂದಿದ್ದು, 5 ರೂಪಾಯಿ ಏರಿಕೆ ಕಂಡುಬಂದಿತ್ತು. ಆದರೆ ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳು ಮೇ.11ರ ದರದಲ್ಲೇ ಸ್ಥಿರವಾಗಿ ನಿಂತಿದ್ದವು. ಮೇ.13 ಬುಧವಾರದಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳು ಯಾವುದೇ ಬದಲಾವಣೆ ಕಾಣದೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಮೇ.12ರ ದರಗಳೇ ಮುಂದುವರಿದಿದ್ದವು. ಆದರೆ ಮೇ.14 ಗುರುವಾರದಂದು ಕೊಬ್ಬರಿ ಧಾರಣೆಯಲ್ಲಿ 3 ರೂಪಾಯಿಯಷ್ಟು ಇಳಿಕೆ ಕಂಡುಬಂದಿದ್ದು, ಕಾಳುಮೆಣಸು ಹಾಗೂ ಕೊಕ್ಕೋ ಧಾರಣೆಗಳು ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಮೇ.15 ಶುಕ್ರವಾರದಂದು ಕೂಡ ಕೊಬ್ಬರಿ ಧಾರಣೆಯಲ್ಲಿ ಮತ್ತೆ 3 ರೂಪಾಯಿ ಇಳಿಕೆ ಕಂಡುಬಂದಿದ್ದು, ಕಾಳುಮೆಣಸು ಹಾಗೂ ಕೊಕ್ಕೋ ಧಾರಣೆಗಳು ಮೇ.14ರ ದರದಲ್ಲೇ ಸ್ಥಿರವಾಗಿ ಮುಂದುವರಿದಿದ್ದವು. ಇನ್ನು ವಾರದ ಕೊನೆಯ ದಿನವಾದ ಮೇ.16 ಶನಿವಾರದಂದು ಕಾಳುಮೆಣಸು ಧಾರಣೆಯಲ್ಲಿ 5 ರೂಪಾಯಿಯಷ್ಟು ಇಳಿಕೆ ಕಂಡುಬಂದಿದ್ದು, ಉಳಿದಂತೆ ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳು ಮೇ.15ರ ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಅಂತಿಮವಾಗಿ ವಾರದ ಕೊನೆಯಲ್ಲಿ ಕಾಳುಮೆಣಸು ಕನಿಷ್ಠ 585 ರಿಂದ ಗರಿಷ್ಠ 685 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 75 ರಿಂದ ಗರಿಷ್ಠ 105 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 130 ರಿಂದ ಗರಿಷ್ಠ 152 ರೂಪಾಯಿಗಳಿಗೆ ಬಂದು ನಿಂತಿದ್ದವು.

ಇನ್ನು ಕೊನೆಯದಾಗಿ ನಾವು ಈ ವಾರ ರಬ್ಬರ್ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ಗಮನಿಸುತ್ತಾ ಹೋಗುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಮೇ.11 ಸೋಮವಾರದಂದು ಗ್ರೇಡ್ ರಬ್ಬರ್ 255 ರೂಪಾಯಿ, ಲಾಟ್ ರಬ್ಬರ್ 215 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 151 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 142 ರೂಪಾಯಿ ಇತ್ತು. ಮೇ.12 ಮಂಗಳವಾರದಂದು ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಅಲೆ ಕಂಡುಬಂದಿದ್ದು, ಗ್ರೇಡ್ ರಬ್ಬರ್ ಪ್ರತೀ ಕೆಜಿಗೆ 1 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ವಿಭಾಗದಲ್ಲಿ ತಲಾ 50 ಪೈಸೆ ಏರಿಕೆ ಕಂಡರೆ ಲಾಟ್ ರಬ್ಬರ್ ಮೇ.11ರ ದರದಲ್ಲೇ ಸ್ಥಿರವಾಗಿತ್ತು. ಮೇ.13 ಬುಧವಾರದಂದು ಕೂಡ ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಏರಿಕೆಯ ಪಯಣ ಮುಂದುವರಿದಿದ್ದು, ಲಾಟ್ ರಬ್ಬರ್ ಪ್ರತೀ ಕೆಜಿಗೆ 1 ರೂಪಾಯಿಯಷ್ಟು ಏರಿಕೆ ಕಂಡುಬಂದರೆ ಗ್ರೇಡ್ ಹಾಗೂ ಸ್ಕ್ರ್ಯಾಪ್ ರಬ್ಬರ್ ನ ಎರಡೂ ವಿಭಾಗಗಳಲ್ಲೂ ತಲಾ 50 ಪೈಸೆಗಳಷ್ಟು ಏರಿಕೆ ದಾಖಲಾಗಿತ್ತು. ಇನ್ನು ಮೇ.14 ಗುರುವಾರದಂದು ಕೂಡ ಗ್ರೇಡ್ ರಬ್ಬರ್ ಧಾರಣೆಯಲ್ಲಿ 1.50 ರೂಪಾಯಿಯಷ್ಟು ಏರಿಕೆ ಕಂಡುಬಂದರೆ ಲಾಟ್ ಹಾಗೂ ಸ್ಕ್ರ್ಯಾಪ್ ರಬ್ಬರ್ ನ ಎರಡೂ ವಿಭಾಗಗಳು ಮೇ.13ರ ದರದಲ್ಲೇ ಯಾವುದೇ ಬದಲಾವಣೆ ಇಲ್ಲದೇ ಸ್ಥಿರವಾಗಿ ನಿಂತಿದ್ದವು. ಮೇ.15 ಶುಕ್ರವಾರದಂದು ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ಎಲ್ಲಾ ವಿಧದ ರಬ್ಬರ್ ಧಾರಣೆಗಳು ಕೂಡ ಮೇ.14ರ ದರದಲ್ಲೇ ಮುಂದುವರಿದಿದ್ದವು. ಇನ್ನು ವಾರದ ಕೊನೆಯ ದಿನವಾದ ಮೇ.16 ಶನಿವಾರದಂದು ವಾರಪೂರ್ತಿ ಏರಿಕೆಯ ಹಾದಿಯಲ್ಲೇ ಸಾಗಿದ್ದ ರಬ್ಬರ್ ಧಾರಣೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದ್ದು, ಗ್ರೇಡ್ ರಬ್ಬರ್ ದರದಲ್ಲಿ 1.05 ರೂಪಾಯಿ ಹಾಗೂ ಸ್ಕ್ರ್ಯಾಪ್ ಪ್ರಥಮ ದರ್ಜೆ ರಬ್ಬರ್ ದರದಲ್ಲಿ 50 ಪೈಸೆ ಇಳಿಕೆ ಕಂಡುಬಂದಿದ್ದು, ಲಾಟ್ ರಬ್ಬರ್ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ ಮೇ.15ರ ದರದಲ್ಲೇ ಸ್ಥಿರವಾಗಿದ್ದವು. ಅಂತಿಮವಾಗಿ ವಾರದ ಕೊನೆಯಲ್ಲಿ ಗ್ರೇಡ್ 256.5 ರೂಪಾಯಿ, ಲಾಟ್ 216 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 151.5 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 143 ರೂಪಾಯಿಗಳಲ್ಲಿ ನಿಂತಿದ್ದವು.

ಒಟ್ಟಿನಲ್ಲಿ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ವಾರದ ಪ್ರಾರಂಭದಲ್ಲಿ ಉಳ್ಳಿಗಡ್ಡೆ ಹಾಗೂ ಕರಿಗೋಟು ಧಾರಣೆಗಳಲ್ಲಿ ಏರಿಕೆ ಕಂಡುಬಂದರೆ ಹೊಸ ಅಡಿಕೆ ಧಾರಣೆಯಲ್ಲಿ ಇಳಿಕೆ ದಾಖಲಾಗಿತ್ತು. ವಾರದ ಮಧ್ಯದಲ್ಲಿ ಎಲ್ಲಾ ವಿಧದ ಅಡಿಕೆ ಧಾರಣೆಗಳಲ್ಲೂ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ವಾರದ ಕೊನೆಯಲ್ಲಿ ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಧಾರಣೆಗಳಲ್ಲಿ ಕುಸಿತ ದಾಖಲಾಗಿದ್ದು, ವಾರದ ಪ್ರಾರಂಭದಲ್ಲಿ ಅಡಿಕೆಯ ಉಪ ಉತ್ಪನ್ನಗಳಲ್ಲಿ ಕಂಡುಬಂದ ಏರಿಕೆ ಅಡಿಕೆಯ ಮುಖ್ಯ ಉತ್ಪನ್ನಗಳಲ್ಲಿ ಕಾಣಲೇ ಇಲ್ಲ, ಬದಲಾಗಿ ಮುಖ್ಯ ಉತ್ಪನ್ನಗಳು ವಾರದ ಕೊನೆಯಲ್ಲಿ ಇಳಿಕೆಯ ಹಾದಿಯನ್ನು ಹಿಡಿದಿದ್ದವು. ಇನ್ನು ಇತರ ಪ್ರಮುಖ ಉತ್ಪನ್ನಗಳಲ್ಲೂ ಕೂಡ ಕಾಳುಮೆಣಸು ವಾರದ ಪ್ರಾರಂಭದಲ್ಲೊಮ್ಮೆ ಏರಿಕೆಯ ಹಾದಿ ಹಿಡಿದು ನಂತರ ವಾರಪೂರ್ತಿ ಸ್ಥಿರವಾಗಿದ್ದು, ವಾರದ ಕೊನೆಯಲ್ಲಿ ಇಳಿಕೆಯ ಹಾದಿಯನ್ನು ಹಿಡಿದು ವಾರದ ಪ್ರಾರಂಭಿಕ ದರದಲ್ಲೇ ಬಂದು ನಿಂತಿತ್ತು. ವಾರದ ಮಧ್ಯದಲ್ಲಿ ಕೊಬ್ಬರಿ ಧಾರಣೆಯು ಇಳಿಕೆಯತ್ತ ಮುಖ ಮಾಡಿದರೆ ಕೊಕ್ಕೋ ಧಾರಣೆ ವಾರಪೂರ್ತಿ ಸ್ಥಿರತೆಯನ್ನು ಕಾಪಾಡಿಕೊಂಡಿತ್ತು. ಇನ್ನು ರಬ್ಬರ್ ಧಾರಣೆ ಮಾತ್ರ ವಾರದ ಪ್ರಾರಂಭದಿಂದ ವಾರದ ಕೊನೆಯವರೆಗೂ ನಿರಂತರವಾಗಿ ಏರಿಕೆಯ ಹಾದಿಯಲ್ಲೇ ಸಾಗಿದ್ದು, ವಾರದ ಕೊನೆಯಲ್ಲೊಮ್ಮೆ ಸ್ಥಿರತೆಯತ್ತ ಮುಖಮಾಡಿ ಅಲ್ಪ ಇಳಿಕೆಯ ಹಾದಿ ಹಿಡಿದಿತ್ತು… ಬರಹ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ) ಇವರಿಂದ ಪಡೆದುಕೊಂಡ ಕಳೆದ ವಾರದ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತೀದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗೆ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading