ದೊಡ್ಡತೋಟ-ಮರ್ಕಂಜ ರಸ್ತೆ ಕಾಮಗಾರಿ ಅಧ್ವಾನ: ಆಡಳಿತದ ಆಮೆಗತಿಗೆ ಸಾರ್ವಜನಿಕರು ಬಲಿಪಶು

ದೊಡ್ಡತೋಟ : ಭರವಸೆಗಳ ಮಹಾಪೂರ ಹರಿಸುವ ಆಡಳಿತ ಯಂತ್ರವು ಕಾರ್ಯರೂಪಕ್ಕೆ ಬಂದಾಗ ಜನರ ತಾಳ್ಮೆಯನ್ನು ಹೇಗೆ ಪರೀಕ್ಷಿಸುತ್ತದೆ ಎಂಬುದಕ್ಕೆ ದೊಡ್ಡತೋಟ-ಮರ್ಕಂಜ ಸಂಪರ್ಕಿಸುವ ಪಿಡಬ್ಲ್ಯೂಡಿ ರಸ್ತೆಯೇ ಜ್ವಲಂತ ಸಾಕ್ಷಿ. ಹಲವು ವರ್ಷಗಳ ಕಾಲ ನೆನೆಗುದಿಗೆ ಬಿದ್ದು, ಕೊನೆಗೂ 2026 ರ ಮಾರ್ಚ್‌ನಲ್ಲಿ ಚಾಲನೆ ಪಡೆದಿದ್ದ ಈ ಕಾಮಗಾರಿ ಪೂರ್ಣಗೊಳ್ಳದೇ ಸಾರ್ವಜನಿಕರು ಹಿಡಿಶಾಪ ಹಾಕುವ ಸ್ಥಿತಿಗೆ ತಲುಪಿದೆ. 3.5 ಕಿ.ಮೀ. ಉದ್ದದ ಈ ರಸ್ತೆಯ ಡಾಮರೀಕರಣ ಮುಗಿದು, ಡಾಮರು ನಿಲ್ಲದ ಕಡೆ ಕಾಂಕ್ರೀಟ್ ಹಾಕುವ ನಿರ್ಧಾರವಾಗಿತ್ತು. ಅಂದು ಮಕ್ಕಳ ಪರೀಕ್ಷೆಯ ನೆಪವೊಡ್ಡಿ ಏಪ್ರಿಲ್ 11ರ ನಂತರ ಕೆಲಸ ಆರಂಭಿಸುವುದಾಗಿ ಸಬೂಬು ನೀಡಿದ್ದ ಅಧಿಕಾರಿಗಳು ಮತ್ತು ಗುತ್ತಿಗೆದಾರರು, ಈಗ ಮೇ ಎರಡನೇ ವಾರ ಕಳೆದರೂ ಇತ್ತ ಮುಖ ಮಾಡದಿರುವುದು ವ್ಯವಸ್ಥೆಯ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಮತ್ತೆ ಶಾಲೆ-ಕಾಲೇಜುಗಳು ಆರಂಭವಾಗಲು ಇನ್ನು ಕಲವೇ ದಿನಗಳಷ್ಟೇ ಬಾಕಿ ಇವೆ. ಇದೇ ಅವಧಿಯಲ್ಲಿ ಮುಂಗಾರು ಮಳೆಯೂ ಹೊಸ್ತಿಲಲ್ಲಿ ಬಂದು ನಿಂತಿದೆ. ಒಂದು ವೇಳೆ ಈಗ ಕಾಮಗಾರಿ ಆರಂಭವಾಗದಿದ್ದರೆ ಈ ಬಾರಿಯೂ ಮಳೆಗಾಲದಲ್ಲಿ ಜನರು ಕೆಸರು ಗದ್ದೆಯಂತಾಗುವ ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಪರೀಕ್ಷೆಯ ನೆಪದಲ್ಲಿ ಕಾಮಗಾರಿ ಮುಂದೂಡಿದ ಇಲಾಖೆಗೆ, ಮಳೆಗಾಲದ ಮುನ್ಸೂಚನೆ ಸಿಗುತ್ತಿಲ್ಲವೇ ಅಥವಾ ಜನರ ಆಕ್ರೋಶಕ್ಕೆ ಬೆಲೆಯೇ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ. ಆಮೆಗತಿಯ ಈ ಕೆಲಸದಿಂದಾಗಿ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದು, ಜನರ ತಾಳ್ಮೆ ಮಿತಿ ಮೀರಿದೆ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮಳೆಗಾಲಕ್ಕೆ ಮುನ್ನ ಈ ರಸ್ತೆಗೆ ಮುಕ್ತಿ ನೀಡಬೇಕಿದೆ, ಇಲ್ಲವಾದಲ್ಲಿ ಸಾರ್ವಜನಿಕರ ಪ್ರತಿಭಟನೆಯ ಬಿಸಿ ಎದುರಿಸುವುದು ಅನಿವಾರ್ಯವಾಗಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading