ಏ.24ರಿಂದ ಮೇ.03ರ ತನಕ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪುನರ್ ನಿರ್ಮಾಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ; ಹತ್ತು ದಿನಗಳ ಕಾಲ ನಡೆಯಲಿರುವ ವೈದಿಕ – ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳು

ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪುನರ್ ನಿರ್ಮಾಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದದೊಂದಿಗೆ, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಎ.24ರಿಂದ ಮೇ.3ರ ತನಕ ಹತ್ತು ದಿನಗಳ ಕಾಲ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಹಸಿರುವಾಣಿ ಸಮರ್ಪಣೆ – ಉಗ್ರಾಣ ಮುಹೂರ್ತ : ಏ.24ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಊರ – ಪರವೂರ ಭಕ್ತಾದಿಗಳಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ ಶ್ರೀದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಪಂಜದ ನಾಗತೀರ್ಥ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ‌. ಸಂಜೆ ಕ್ಷೇತ್ರದ ತಂತ್ರಿಗಳ ಆಗಮನ, ರಾತ್ರಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯದಿ ಋತ್ವಿರ್ವರಣ, ಪ್ರಾಸಾದ ಶುದ್ಧಿ, ಅಂಕುರಾರೋಪಣ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. 
ಏ.25ರಂದು ಬೆಳಿಗ್ಗೆ ಉಷಾಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ, ಚತು:ಶುದ್ಧಿ ಧಾರೆ, ಅವಗಾಹ, ಪಂಚಕ ಬಿಂಬಶುದ್ಧಿ, ಖನನಾದಿ ಸ್ಥಳಶುದ್ಧಿ, ಪ್ರಾಯಶ್ಚಿತ ಹೋಮಗಳು ನಡೆಯಲಿದೆ. ಬೆಳಿಗ್ಗೆ ಬಾಳಿಲದ ಗೀತ ಜ್ಞಾನ ಯಜ್ಞ ಪಾರಾಯಣ ತಂಡದಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ, ಪಂಜದ ವನಿತಾ ಸಮಾಜದ ಪದಾಧಿಕಾರಿಗಳಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಪಂಜದ ಶಿವಳ್ಳಿ ಸಂಪದ ಮಹಿಳಾ ವಿಭಾಗದವರಿಂದ ಭಜನಾ ಸಂಕೀರ್ತನೆ, ಕಳಂಜದ ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಪಂಬೆತ್ತಾಡಿ ಶ್ರೀ ದುರ್ಗಾ ಮಹಿಳಾ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ, ಸಾಯಂಕಾಲ ಶ್ರೀದೇವರಿಗೆ ದೀಪಾರಾಧನೆ, ಅಂಕುರಪೂಜೆ, ಸುದರ್ಶನಹೋಮ, ಕುಂಡ ಶುದ್ಧಿ, ದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ : ರಾತ್ರಿ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಕರಿಕಳ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ‌. ಕ್ಷೇತ್ರದ ವಾಸ್ತುಶಿಲ್ಪಿಗಳಾದ ಎಸ್.ಎಂ. ಪ್ರಸಾದ್ ಮುನಿಯಂಗಳ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಚೊಕ್ಕಾಡಿ ಶ್ರೀರಾಮ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಹೇಶ್ ಭಟ್ ಚೂಂತಾರು, ಮಾಡಬಾಗಿಲು ಕಂಬಳ ಆನಂದ ಗೌಡ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಆನಂದ ಗೌಡ ಕಂಬಳ, ಪುತ್ತೂರಿನ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರುಗುತ್ತು, ಪಂಜ ಪ್ರಾ‌.ಕೃ.ಪ.ಸ.ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಪುತ್ಯ, ಪಂಜದ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ಅನ್ಸಾರ್ ಐವತ್ತೊಕ್ಲು ಬೀಡು, ನಿಂತಿಕಲ್ಲು ವಾಣಿ ಕಾಂಪ್ಲೆಕ್ಸ್ ಮಾಲಕರಾದ ಶ್ರೀಮತಿ ವೀಣಾ ಕರುಣಾಕರ ಕೇರ್ಪಡ, ಬಳ್ಪ ಉಪ ವಲಯಾರಣ್ಯಾಧಿಕಾರಿ ಮಹಮ್ಮದ್ ಮೆಹಬೂಬ್ , ನಿವೃತ್ತ ಪ್ರಾಂಶುಪಾಲ ಚಿದಾನಂದ ಬಾಳಿಲ, ನಿವೃತ್ತ ಅಧ್ಯಾಪಕ ಸೀತಾರಾಮ ಗೌಡ ಕುದ್ವ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. 
ಸನ್ಮಾನ : ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೇಗುಲದ ವಾಸ್ತುಶಿಲ್ಪಿ ಎಸ್.ಎಂ. ಪ್ರಸಾದ್ ಮುನಿಯಂಗಳ, ಶ್ರೀ ಚಾಮುಂಡಿ ದೈವದ ಛಾವಡಿಯ ಸ್ಥಳದಾನಿ ಸಿ.ಎಂ.ಅಬ್ದುಲ್ ರಹಿಮಾನ್ ಐವತ್ತೊಕ್ಲು, ಗುಳಿಗ ದೈವದ ಕಟ್ಟೆಯ ಸೇವಾರ್ಥಿ ಮತ್ತು ಸ್ಥಳದಾನಿ ಜಗನ್ನಾಥ ರೈ ಕುಳಾಯಿತ್ತೋಡಿ, ದೇಗುಲದ ಶಿಲಾ ಶಿಲ್ಪಿ ಈಶ್ವರಚಂದ್ರ ಮುಂಡೂರು, ದೇಗುಲದ ಕಾಷ್ಠ ಶಿಲ್ಪಿ ವಸಂತ ಆಚಾರ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಗುವುದು.
ಸಾಂಸ್ಕೃತಿಕ ಸಂಭ್ರಮ : ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಏ.25ರಂದು ಸಂಜೆ ಕರಿಕಳ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಸಂಭ್ರಮ, ರಾತ್ರಿ ಪುತ್ತೂರಿನ ವಿಶ್ವ ಕಲಾನಿಕೇತನ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ತಂಡದ ಪಂಜ ಶಾಖೆಯವರಿಂದ “ನೃತ್ಯವೈಭವ” ನಡೆಯಲಿದೆ.
ಎ.26ರಂದು ಬೆಳಿಗ್ಗೆ ಉಷಾಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಸ್ವಶಾಂತಿ, ಶ್ವಾನಶಾಂತಿ, ಅದ್ಭುತಶಾಂತಿ ಚೋರಶಾಂತಿ ಹೋಮಾದಿಗಳು ನಡೆಯಲಿದೆ. ಬಳಿಕ ಬಾಳಿಲದ ಗೀತಾ ಜ್ಞಾನ ಯಜ್ಞ ಪಾರಾಯಣ ತಂಡದಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ, ಏನೆಕಲ್ಲಿನ ಶ್ರೀ ಅಮೃತೇಶ್ವರಿ ಸ್ವ-ಸಹಾಯ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮಧ್ಯಾಹ್ನ ಹೋಮಗಳ ಕಲಶಾಭಿಷೇಕ, ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಹೇಮಳ ಕೆಮ್ಮಲೆ ಶ್ರೀ ನಾಗಬ್ರಹ್ಮ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಸಾಯಂಕಾಲ ದೇವರಿಗೆ ದೀಪಾರಾಧನೆ, ಅಂಕುರಪೂಜೆ, ಕುಂಭೇಶ ಕರ್ಕರಿಪೂಜೆ, ಅನುಜ್ಞಾಕಲಶ ಪೂಜೆ, ಪರಿಕಲಶಪೂಜೆ, ಅಧಿವಾಸಹೋಮ, ಕಲಶಾಧಿವಾಸ, ದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ : ರಾತ್ರಿ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಪುತ್ತೂರಿನ ಭಾರತ್ ಟ್ರೇಡರ್ಸ್ ನ ಕುಶಾಲಪ್ಪ ಮೇಲ್ಪಾಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರಿನ ಬಹುವಚನಂ ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಶ್ರೀಶಕುಮಾರ್ ಎಂ.ಕೆ. ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಮಾಜಿ ಮುತ್ಸದ್ಧಿ ಭುಜಬಲಿ ಧರ್ಮಸ್ಥಳ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಜನರಲ್ ಸೆಕ್ರೆಟರಿ ಅಕ್ಷಯ್ ಕೆ.ಸಿ., ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಘಟಕದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಹಿರಿಯ ಸಹಕಾರಿ ಧುರೀಣ ಮಾದವ ಗೌಡ ಜಾಕೆ, ಉದ್ಯಮಿ ಲಕ್ಷ್ಮೀನಾರಾಯಣ ಐವರ್ನಾಡು, ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ರವಿ ಕಕ್ಕೆಪದವು, ಅರಣ್ಯ ಸಂಚಾರಿ ದಳದ ವಲಯಾರಣ್ಯಾಧಿಕಾರಿ ಸಂತೋಷ್ ಕುಮಾರ್ ರೈ, ಪುತ್ತೂರಿನ ಅಕ್ಷಯ ವಿದ್ಯಾಸಂಸ್ಥೆಯ ಸಂಚಾಲಕ ಜಯಂತ ನಡುಬೈಲು, ಮುರುಳ್ಯ – ಎಣ್ಮೂರು ಪ್ರಾ.ಕೃ.ಪ‌.ಸ.ಸಂಘದ ಅಧ್ಯಕ್ಷ ವಸಂತ ನಡುಬೈಲು, ವಕೀಲರಾದ ವಾಚಣ್ಣ ಗೌಡ ಕೇರ್ಪಡ ಪೂಜಾರಿಮನೆ, ಪ್ರಗತಿಪರ ಕೃಷಿಕ ಕುಶಾಲಪ್ಪ ಗೌಡ ಬೈತಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. 
ಸನ್ಮಾನ : ಈ ಸಂದರ್ಭದಲ್ಲಿ ದೇಗುಲಕ್ಕೆ ವಸ್ತುರೂಪದ ದಾನಿಗಳನ್ನು ಸನ್ಮಾನಿಸಿ, ಗೌರವಿಸಲಾಗುವುದು.
ಸಾಂಸ್ಕೃತಿಕ ಸಂಭ್ರಮ : ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಏ.26ರಂದು ಬೆಳಿಗ್ಗೆ ಉಪ್ಪಿನಂಗಡಿಯ ಸ್ವರ ಮೆಲೋಡೀಸ್ ತಂಡದವರಿಂದ ಭಕ್ತಿ – ಭಾವ ಗಾನ ಸಂಭ್ರಮ ನಡೆಯಲಿದೆ. ಸಂಜೆ ಕಲ್ಮಡ್ಕ ಸಂಸ್ಕಾರ ಅಂಗನವಾಡಿ ಕೇಂದ್ರ ಹಾಗೂ ಪಡ್ಪಿನಂಗಡಿ ತಾಳ ನಿನಾದಂ ಭಜನಾ ತಂಡದಿಂದ ಸಾಂಸ್ಕೃತಿಕ ವೈವಿಧ್ಯ, ಕು. ಸಾನ್ವಿ ದೊಡ್ಡಮನೆ ಅವರಿಂದ ಯೋಗ ಪ್ರದರ್ಶನ ನಡೆಯಲಿದೆ. ರಾತ್ರಿ ಶ್ರುತಿ ಸಾಗರ್ ಬ್ರಹ್ಮಾವರ ಉಡುಪಿ ತಂಡದವರಿಂದ ಗಾನ ವೈಭವ ನಡೆಯಲಿದೆ‌.
ರಾಘವೇಶ್ವರಿ ಭಾರತಿ ಸ್ವಾಮೀಜಿ ಆಗಮನ – ಆಶೀರ್ವಚನ : ಏ.27ರಂದು ಬೆಳಿಗ್ಗೆ ಉಷಾಪೂಜೆ, ಅಂಕುರಪೂಜೆ, ಮಹಾಗಣಪತಿ ಹೋಮ, ತ್ರಿಕಾಲ ಪೂಜೆ, ಸೃಷ್ಟಿತತ್ತ್ವ ಹೋಮ, ತತ್ತ್ವ ಕಲಶ ಪೂಜೆ, ತತ್ವ್ವ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ ನಡೆಯಲಿದೆ. ಬಳಿಕ ಕೇನ್ಯ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಬಾಳಿಲ ಗೀತಾ ಜ್ಞಾನ ಯಜ್ಞ ತಂಡದಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ, ಮಧ್ಯಾಹ್ನ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಂದ ಆಶೀರ್ವಚನ, ಶ್ರೀ ದೇವರಿಗೆ ತ್ರಿಕಾಲಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಸಂಜೆ ಐವರ್ನಾಡಿನ ಶ್ರೀ ಗುರುದೇವ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಕಾಣಿಯೂರು ಶ್ರೀ ಸದಾನಂದ ಆಚಾರ್ಯ ತರಬೇತಿ ನೀಡಿದ ಭಜನಾ ತಂಡದಿಂದ ಕುಣಿತ ಭಜನೆ ನಡೆಯಲಿದೆ. ಸಂಜೆ ಶ್ರೀ ದೇವರಿಗೆ ದೀಪಾರಾಧನೆ, ಅಂಕುರಪೂಜೆ, ಅಂಕುರಾರೋಪಣ, ಬಿಂಬ ಶುದ್ಧಿ, ಕಲಶಪೂಜೆ, ಅನುಜ್ಞಾಬಲಿ, ಕ್ಷೇತ್ರಪಾಲನಲ್ಲಿ ಅನುಜ್ಞಾ ಪ್ರಾರ್ಥನೆ, ಬಿಂಬ ಶುದ್ಧಿ, ಕಲಶಪೂಜೆ, ತ್ರಿಕಾಲಪೂಜೆ, ಮಹಾಪೂಜೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ : ರಾತ್ರಿ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ನ ಗುರುದೇವಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ‌. ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಟ್ರಸ್ಟ್ ಅಧ್ಯಕ್ಷ ಚಂದ್ರಪ್ರಕಾಶ್ ಕಂಬಳ ಅಧ್ಯಕ್ಷತೆ ವಹಿಸಲಿದ್ದಾರೆ‌. ಉಡುಪಿ ಶ್ರೀ ನಾಗಧರ್ಮೇಂದ್ರ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ಪ್ರಾಚಾರ್ಯರಾದ ವಿದ್ವಾನ್ ಮೌನೇಶ್ ಶರ್ಮ ಬಾಳಿಲ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಪಂಜ ಶ್ರೀ ಪರಿವಾರ ಸದಾಶಿವ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಶ್ರೀಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷ ರಾಜಶೇಖರ ಕೋಟ್ಯಾನ್, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್ ಕೆಡೆಂಜಿ, ಮಂಗಳೂರು ಕೇಂದ್ರ ಸಹಕಾರ ಸಗಟು ಮಾರಾಟ ಸಂಘದ ಅಧ್ಯಕ್ಷ ಪ್ರಸನ್ನ ಭಟ್ ಎಣ್ಮೂರು, ಪಂಜ ವಲಯಾರಣ್ಯಾಧಿಕಾರಿ ಶ್ರೀಮತಿ ಸಂಧ್ಯಾ, ಪ್ರಗತಿಪರ ಕೃಷಿಕರಾದ ಶ್ರೀಮತಿ ಯಶೋದಾ ಸದಾಶಿವ ರಾವ್ ಕರಿಕಳ, ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಹರಿ ನೂಚಿಲ, ಎಣ್ಮೂರು ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್. ರಘುನಾಥ ರೈ ಕಟ್ಟಬೀಡು – ಅಲೆಂಗಾರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಸನ್ಮಾನ : ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ವಸ್ತುರೂಪದ ದಾನ ನೀಡಿದ ದಾನಿಗಳನ್ನು ಸನ್ಮಾನಿಸಿ, ಗೌರವಿಸಲಾಗುವುದು.
ಸಾಂಸ್ಕೃತಿಕ ಸಂಭ್ರಮ : ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಏ.27ರಂದು ಸಂಜೆ ವಿದುಷಿ ಮಾಲಾ ವೆಂಕಟೇಶ್ ಬೆಂಗಳೂರು ಅವರ ಶಿಷ್ಯೆ ಕು. ಸರಯೂ ವಿಟ್ಟಲ್ ಮುಚ್ಚಿಲ ಅವರಿಂದ ‘ಭರತನಾಟ್ಯ ವೈಭವ’ ನಡೆಯಲಿದೆ‌‌. ಬಳಿಕ ರಾಷ್ಟ್ರೀಯ ಯೋಗಪಟು ಸೋನಾ ಅಡ್ಕಾರು ಅವರಿಂದ ‘ಯೋಗಪ್ರದರ್ಶನ’ ಮತ್ತು ‘ನೃತ್ಯವೈಭವ’ ನಡೆಯಲಿದೆ. ರಾತ್ರಿ ಪಂಜದ ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ‘ಕುಶಲವ’ ಯಕ್ಷಗಾನ ಪ್ರದರ್ಶನ ನಡೆಯಲಿದೆ‌. 
ಏ.28ರಂದು ಬೆಳಿಗ್ಗೆ ಉಷಾಪೂಜೆ, ಅಂಕುರಪೂಜೆ, ಮಹಾಗಣಪತಿ ಹೋಮ, ಮಂಟಪ ಸಂಸ್ಕಾರ, ಅಗ್ನಿಜನನ, ಕುಂಭೇಶ ಕರ್ಕರಿ ಪೂಜೆ, ಶಯ್ಯಾಪೂಜೆ, ವಿದ್ಯೇಶ್ವರ ಕಲಶಪೂಜೆ, ಸಂಹಾರತತ್ತ್ವ ಹೋಮ, ತತ್ತ್ವ ಕಲಶಪೂಜೆ, ವಿದ್ವತ್ ಪ್ರಾರ್ಥನೆ, ಸಂಹಾರತತ್ತ್ವ ಕಲಶಾಭಿಷೇಕ, ಧ್ಯಾನ ಸಂಕೋಚ ಕ್ರಿಯೆ, ಜೀವಕಲಶಪೂಜೆ, ಜೀವಕಲಶವನ್ನು ಶಯ್ಯಾ ಮಂಟಪದಲ್ಲಿಡುವುದು. ಬೆಳಿಗ್ಗೆ ಪಂಜದ ಶ್ರೀ ಶಾರದಾಂಬ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ ಕಲ್ಮಡ್ಕದ ಸಂಸ್ಕಾರ ಅಂಗನವಾಡಿ ಕೇಂದ್ರದ ವತಿಯಿಂದ ಭಜನಾ ಸಂಕೀರ್ತನೆ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ ಶ್ರೀ ದೇವರಿಗೆ ದೀಪಾರಾಧನೆ, ಅಂಕುರಪೂಜೆ, ಪ್ರಾಸಾದ ಶುದ್ಧಿ, ಬಿಂಬಶುದ್ಧಿ, ಕಲಶಾಭಿಷೇಕ, ಧ್ವಾ‌ನಧಿವಾಸ ಕ್ರಿಯೆ, ಅಧಿವಾಸಹೋಮ, ಪೀಠಾಧಿವಾಸ, ಪ್ರಾಸಾದಾಧಿವಾಸ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ‌.
ಕೋಡಿ ಮಠದ ಸ್ವಾಮೀಜಿ ಆಗಮನ – ಆಶೀರ್ವಚನ : ಎ.29ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಅಂಕುರಪೂಜೆ, ಮಿಥುನಲಗ್ನದ ಶುಭಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರ ಪುನ: ಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಶ್ರೀ ಮಹಾಗಣಪತಿ ದೇವರ ಪುನ: ಪ್ರತಿಷ್ಠೆ, ಪ್ರತಿಷ್ಠಾ ಪೂಜೆ, ಶಿಖರ ಪ್ರತಿಷ್ಠೆ ನಡೆಯಲಿದೆ. ಬಳಿಕ ಬಾಳಿಲದ ಗೀತಾ ಜ್ಞಾನ ಯಜ್ಞ ತಂಡದವರಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ ನಡೆಯಲಿದೆ. ಪಲ್ಲೋಡಿಯ ಶ್ರೀ ಚಾಮುಂಡೇಶ್ವರಿ ಭಜನಾ ತಂಡದಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮಧ್ಯಾಹ್ನ ಅರಸೀಕೆರೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ‌. ಸಂಜೆ ಬೀದಿಗುಡ್ಡೆಯ ಸಿದ್ಧಿವಿನಾಯಕ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಅಂಕುರಪೂಜೆ, ಕ್ಷೇತ್ರದ ನಿತ್ಯ ನೈಮಿತ್ತಿಕ ವಿಧಿಗಳನ್ನು ನಿಶ್ಚಯಿಸಿ, ಎಲ್ಲರೂ ಸೇರಿ ಪ್ರಾರ್ಥಿಸುವುದು, ಭದ್ರದೀಪ ಪ್ರತಿಷ್ಠೆ, ಕವಾಟಬಂಧನ, ಮಹಾಬಲಿ, ಪೀಠಾಧಿವಾಸ , ಸೋಪಾನಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಸಾಂಸ್ಕೃತಿಕ ಸಂಭ್ರಮ : ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಏ.29ರಂದು ರಾತ್ರಿ ಮಂಗಳೂರಿನ ಬಜಪೆ ನಾಟ್ಯಾಂಜಲಿ ಮುಚ್ಚೂರು ವತಿಯಿಂದ ವಿಧುಷಿ ಶ್ರಾವ್ಯ ಕಿಶೋರ್ ದಕ್ಷ ನಿರ್ದೇಶನದಲ್ಲಿ ‘ನೃತ್ಯಾಭಿಷೇಕಂ’ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಶ್ರೀ ಮಹಾವಿಷ್ಣು ದೇವರ ದಶಾವತಾರ ನೃತ್ಯರೂಪಕ ಶಾಸ್ತ್ರೀಯ ಹಾಗೂ ಜಾನಪದ ನೃತ್ಯ ಸಂಗಮ ನಡೆಯಲಿದೆ‌. 
ಧರ್ಮಪಾಲನಾಥ ಸ್ವಾಮೀಜಿ ಆಗಮನ – ಆಶೀರ್ವಚನ : ಏ.30ರಂದು ಬೆಳಿಗ್ಗೆ ಸೋಪಾನಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಇಂದ್ರಾದಿ ದಿಕ್ಪಾಲ ಪ್ರತಿಷ್ಠೆ, ಪರಿವಾರ ಪ್ರತಿಷ್ಠೆ, ಮಹಾಬಲಿ ಪೀಠ ಪ್ರತಿಷ್ಠೆ ನಡೆಯಲಿದೆ‌. ಬಳಿಕ ಬಾಳುಗೋಡಿನ ಶ್ರೀದೇವಿ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನಂನ ಮಂಗಳೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ‌. ಶ್ರೀ ದೇವರಿಗೆ ಸೋಪಾನಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಏನೆಕಲ್ಲು ಶ್ರೀ ಆದಿಶಕ್ತಿ ಭಜನಾ ಮಂಡಳಿ, ರಮೇಶ್ ಮೆಟ್ಟಿನಡ್ಕ ಮತ್ತು ಗಿರೀಶ್ ಪೈಲಾಜೆ ಅವರಿಂದ ಭಜನಾ ಸಂಕೀರ್ತನೆ ನಡೆಯಲಿದ್ದು, ಪಂಜದ ಪಲ್ಲೋಡಿ ಶ್ರೀ ಚಾಮುಂಡೇಶ್ವರಿ ಕುಣಿತ ಭಜನಾ ತಂಡದಿಂದ ‘ಕುಣಿತ ಭಜನೆ’ ನಡೆಯಲಿದೆ. ರಾತ್ರಿ ಅಂಕುರಪೂಜೆ, ಸೋಪಾನಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ : ಏ.30ರಂದು ರಾತ್ರಿ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಬ್ರಹ್ಮರಥೋತ್ಸವದ ಅಂಗವಾಗಿ ಹೊರತರಲಿರುವ ಸ್ಮರಣ ಸಂಚಿಕೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬಿಡುಗಡೆಗೊಳಿಸಲಿದ್ದಾರೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ., ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕರಾದ ಸೀತಾರಾಮ ರೈ ಸವಣೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇನ್ಯ ರವೀಂದ್ರನಾಥ ಶೆಟ್ಟಿ, ಸಹಕಾರಿರತ್ನ ಪಿ.ಸಿ. ಜಯರಾಮ, ಉದ್ಯಮಿ ಸತೀಶ್ ಮುಂಚೂರು, ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪೈ, ಮಂಗಳೂರು ವಿ.ವಿ.ಯ ನಾರಾಯಣ ಗುರು ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ ವಿಜಯಕುಮಾರ್ ಸೊರಕೆ, ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್.ಜಿ. ಲೋಕನಾಥ ರೈ ಎಣ್ಮೂರುಪಟ್ಟೆ, ಧಾರ್ಮಿಕ ಮುಖಂಡ ಮಹಾಬಲ ಪೂಜಾರಿ, ಕಾಂಜಿ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ವಿ. ಶ್ರೀವತ್ಸ, ಎಣ್ಮೂರು ಶ್ರೀ ಸೀತಾರಾಮಂಜನೇಯ ಭಾರತಿ ಮಂದಿರದ ಅಧ್ಯಕ್ಷ ನಾಗೇಶ್ ಆಳ್ವ ಎಣ್ಮೂರು , ಕೆನರಾ ಬ್ಯಾಂಕ್ ನಿವೃತ್ತ ಪ್ರಬಂಧಕ ಈಶ್ವರ ನಾಯ್ಕ್ ಬಾಳೆಗುಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ‌‌.   
ಸಾಂಸ್ಕೃತಿಕ ಸಂಭ್ರಮ : ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಏ.30ರಂದು ಸಂಜೆ ಸ್ಥಳೀಯ ಗಾಯಕರಿಂದ ಭಕ್ತಿಗಾನ ಲಹರಿ ನಡೆಯಲಿದೆ. ರಾತ್ರಿ ವಿಶೇಷ ಆಕರ್ಷಣೆಯಾಗಿ ಸಾಯಿಶಕ್ತಿ ಕಲಾಬಳಗದವರಿಂದ ತುಳು ಜನಪದ ಸಿನಿ ನಾಟಕ “ಜೋಡು ದೀಟಿಗೆ” ಪ್ರದರ್ಶನಗೊಳ್ಳಲಿದೆ.
ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ : ಮೇ.01ರಂದು ಬೆಳಿಗ್ಗೆ ಸೋಪಾನಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರಿ ಪೂಜೆ, ಅಗ್ನಿಜನನ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಪ್ರಾಯಶ್ಚಿತ್ತ ಹೋನ, ಶಾಂತಿ ಹೋಮ, ತತ್ವಹೋಮ, ತತ್ತ್ವಕಲಶಪೂಜೆ ನಡೆಯಲಿದೆ. ಬಳಿಕ ಹವ್ಯಕ ಬಳಗದವರಿಂದ ಶ್ರೀವಿಷ್ಣು ಸಹಸ್ರನಾಮ ಪಾರಾಯಣ, ಹರಿಹರಪಲ್ಲತ್ತಡ್ಕದ ಶ್ರೀ ಚಾಮುಂಡೇಶ್ವರಿ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮಧ್ಯಾಹ್ನ ಸೋಪಾನಪೂಜೆ, ಪ್ರಸಾದ ವಿತರಣೆ , ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಶ್ರೀವಿಷ್ಣು ಭಜನಾ ಮಂಡಳಿಯವರಿಂದ ಹಾಗೂ ಎಣ್ಮೂರು ಶ್ರೀರಾಮ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಪಂಜದ ಶ್ರೀ ಶಾರದಾಂಬ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಲಿದೆ. ರಾತ್ರಿ ಶ್ರೀದೇವರಿಗೆ ಅಧಿವಾಸ ಹೋಮ, ಕಲಶಾಧಿವಾಸ, ಸೋಪಾನಪೂಜೆ, ಪ್ರಸಾದ ವಿತರಣೆ ನಡೆಯಲಿದೆ‌.
ಧಾರ್ಮಿಕ ಸಭಾ ಕಾರ್ಯಕ್ರಮ : ಮೇ.1ರಂದು ರಾತ್ರಿ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೆ.ಎ.ಎಸ್. ಭೂಸ್ವಾಧೀನ ಅಧಿಕಾರಿ ಅಜಿತ್ ರೈ ಮಾಲೆಂಗ್ರಿ ಎಡಮಂಗಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ತಂತ್ರಿಗಳಾದ ಕಾರ್ತಿಕ್ ಕೆಮ್ಮಿಂಜೆ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ‌. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಎಸ್. ಅಂಗಾರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ದ.ಕ. ಜಿಲ್ಲಾ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಪಂಜದ ಉಪ ವಲಯಾರಣ್ಯಾಧಿಕಾರಿ ಪ್ರಕಾಶ್ ಅಗಸ್ತ್ಯಮುನಿ, ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಅಧ್ಯಕ್ಷ ಪಿ.ಆರ್. ರಾಮಚಂದ್ರ ಭಟ್ ದೇವಸ್ಯ, ಹಿರಿಯ ಕೃಷಿಕ ದಯಾನಂದ ಕೋಟೆ, ಉದ್ಯಮಿ ದಿವಾಕರ ಬರ್ಲಾಯಬೆಟ್ಟು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ಸಂಭ್ರಮ : ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಮೇ.01ರಂದು ಸಂಜೆ ಪಂಜ, ಪಾಂಡಿಗದ್ದೆ, ಅಡ್ಡತೋಡು ಮತ್ತು ನಾಗತೀರ್ಥ ಅಂಗನವಾಡಿ ಪುಟಾಣಿಗಳಿಂದ ‘ಸಾಂಸ್ಕೃತಿಕ ಸಂಭ್ರಮ’ ನಡೆಯಲಿದೆ. ಬಳಿಕ ಜೀವನ್ ಬೆಳ್ಳಾರೆ ನಿರ್ದೇಶನದಲ್ಲಿ ನಿಂತಿಕಲ್ಲು ಮತ್ತು ಕಡಬ ಶಾಖೆಯ ಡ್ಯಾನ್ಸ್ & ಬೀಟ್ಸ್ ವಿದ್ಯಾರ್ಥಿಗಳಿಂದ “ನೃತ್ಯ ಸಂಭ್ರಮ” ನಡೆಯಲಿದೆ.
ಶ್ರೀ ಮಹಾವಿಷ್ಣು ದೇವರಿಗೆ ಬ್ರಹ್ಮಕಲಶಾಭಿಷೇಕ – ದೇವರ ದರ್ಶನಬಲಿ : ಏ.02ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಕವಾಟೋದ್ಘಾಟನೆ, ಮಂಗಳ ದರ್ಶನ, ತೈಲಾಭಿಷೇಕ, ಪಂಚಾಮೃತಾಭಿಷೇಕ, ಪ್ರಾಯಶ್ಚಿತ್ತ ಶಾಂತಿ, ತತ್ತ್ವ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಬಳಿಕ ಕಲ್ಮಡ್ಕದ ಶ್ರೀರಾಮ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಶ್ರೀದೇವರಿಗೆ ಮಹಾಪೂಜೆ, ಅವಸ್ರವ ಪ್ರೋಕ್ಷಣೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಪಂಬೆತ್ತಾಡಿಯ ಪಂಚಶ್ರೀ ಭಜನಾ ಮಂಡಳಿ ಹಾಗೂ ನಿಡ್ವಾಳ ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ‘ಭಜನಾ ಸಂಕೀರ್ತನೆ ನಡೆಯಲಿದೆ. ರಾತ್ರಿ ಶ್ರೀಕ್ಷೇತ್ರದ ಚಾಮುಂಡಿ ಅಮ್ಮನವರ ಮತ್ತು ಶ್ರೀ ಗುಳಿಗದೈವದ ಭಂಡಾರ ತೆಗೆಯಲಾಗುವುದು‌. ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಶ್ರೀದೇವರ ಬಲಿ ಹೊರಟು ಶ್ರೀಭೂತ ಬಲಿ ಮಹೋತ್ಸವ, ವಸಂತಕಟ್ಟೆಪೂಜೆ, ‘ದರ್ಶನ ಬಲಿ’ ಬಟ್ಟಲುಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ಶ್ರೀ ಚಾಮುಂಡಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ : ಮೇ.03ರಂದು ಬೆಳಿಗ್ಗೆ ಕ್ಷೇತ್ರದ ದೈವಗಳಿಗೆ ನೇಮೋತ್ಸವ, ಶ್ರೀ ಚಾಮುಂಡಿ ದೈವ ಮತ್ತು ಶ್ರೀ ಗುಳಿಗ ದೈವದ ನೇಮ ನಡೆಯಲಿದೆ. ಇದರೊಂದಿಗೆ ಹತ್ತು ದಿನಗಳ ಕಾಲ ನಡೆಯಲಿರುವ ದೇವರ ಬ್ರಹ್ಮಕಲಶೋತ್ಸವವು ಕೊನೆಗೊಳ್ಳಲಿದ್ದು, ಶ್ರೀ ದೇವರಿಗೆ ದೃಢ ಕಲಶಾಭಿಷೇಕವು ಜೂ.16ರಂದು ನೆರವೇರಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading