ಏ.19 : ಕೇಶವಕೃಪಾದಲ್ಲಿ 26 ನೇ ವರ್ಷದ ಉಚಿತ ಬೇಸಿಗೆ ಶಿಬಿರ ಆರಂಭ – ಸುಳ್ಯದ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಮೇಳೈಸಲಿದೆ  ವೇದ, ಯೋಗ ಹಾಗೂ ಕಲಾ ಶಿಬಿರ


ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಸುಳ್ಯ (ರಿ.) ಆಶ್ರಯದಲ್ಲಿ 26ನೇ ವರ್ಷದ ಅಂತರ್‌ರಾಜ್ಯ ಮಟ್ಟದ ಉಚಿತ ವೇದ- ಯೋಗ-ಕಲಾ ಶಿಬಿರವು ಇದೇ ಎಪ್ರಿಲ್ 19 ಭಾನುವಾರದಂದು ಉದ್ಘಾಟನೆಗೊಳ್ಳಲಿದೆ.

. . . . . . . . .

ಏಪ್ರಿಲ್ 8 : ಪುಟ್ಟ ಪುಟ್ಟ ಪುಟಾಣಿಗಳ ತೊದಲು ನುಡಿಗಳಲ್ಲಿ ವೇದ ಘೋಷಗಳು ಝೇಂಕರಿಸುವ ಮೂಲಕ ಸರಿ ಸುಮಾರು 1ತಿಂಗಳ ಪರ್ಯಂತ ಇಲ್ಲಿನ ಪರಿಸರ ಪಾವನಗೊಳ್ಳುತ್ತದೆ. ಜೊತೆ ಜೊತೆಗೆ ಭಿನ್ನ-ಭಿನ್ನ ಕಲಾಪ್ರಕಾರಗಳು ಅರಳಿ ಮೇಳೈಸಿ ಕಣ್ಸೆಳೆಯುತ್ತವೆ. ಯೋಗದ ಹಲವು ಆಸನಗಳನ್ನು ಅಳವಡಿಸಿಕೊಂಡ ಪುಟಾಣಿ ಯೋಗಪಟುಗಳು ದೇಹ- ಮನಸ್ಸುಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳುವತ್ತ ಮನಮಾಡುತ್ತಾರೆ. ಇಂತಹದೊಂದು ಅಭೂತಪೂರ್ವ ದೃಶ್ಯಾವಳಿಗಳು ಕಂಡು ಬರುವುದು ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆವರಣದಲ್ಲಿ.

. . . . . . .

ಆರಂಭದಲ್ಲಿ ವೇದ ತರಗತಿಯ ಉದ್ದೇಶವನ್ನಷ್ಟೇ ಹೊಂದಿದ್ದ ಪ್ರತಿಷ್ಠಾನ, ಆ ಬಳಿಕ ವಿವಿಧ ಚಟುವಟಿಕೆಗಳ ಮೂಲಕ ತನ್ನ ಪರಿಧಿಯನ್ನು ವಿಸ್ತರಿಸಿತು. ಯೋಗದ ಜೊತೆಗೆ ಕಲಾ ಪ್ರಕಾರಗಳಾದ ಯಕ್ಷಗಾನ, ಕಂಸಾಳೆ, ಜಾದೂ, ಭಜನೆ, ಸಂಗೀತ, ಪೇಪರ್ ಕಟ್ಟಿಂಗ್, ಮಿಮಿಕ್ರಿ, ಈಜು ತರಬೇತಿ ಮೊದಲಾದ ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸುವ ಕಾರ್ಯ ಕೈಗೆತ್ತಿಕೊಂಡಿತು. ಸುಮಾರು ೩೦ ದಿನಗಳ ಕಾಲ ನಡೆಯುವ ಶಿಬಿರವು ನಿರ್ದಿಷ್ಟ ಸಮುದಾಯದ ಉಪನೀತ ವಟುಗಳಿಗೆ ಸೀಮಿತವಾಗಿದ್ದು, ಸಮಾಜದ ಎಲ್ಲಾ ಜಾತಿ ಸಮುದಾಯದ ಮಕ್ಕಳಿಗೂ ಸಂಸ್ಕಾರ ಕಲಿಸುವ ಉದ್ದೇಶದಿಂದ ಒಂದು ವಾರಗಳ ಕಾಲ ನಡೆಸಲ್ಪಡುವ ‘ಸಂಸ್ಕಾರವಾಹಿನಿ’ ಅನ್ನುವ ವಿನೂತನ ಶಿಬಿರವನ್ನು ಪ್ರತಿಷ್ಠಾನದ ವತಿಯಿಂದ ಆರಂಭಿಸಲಾಯಿತು. ಈ ಶಿಬಿರದಲ್ಲಿ ಮುಖ್ಯವಾಗಿ ಚರಕ ಸಂಹಿತೆಯಲ್ಲಿ ಉಲ್ಲೇಖಿಸಲ್ಪಟ್ಟ ಆರೋಗ್ಯಕರ ಆಯುರ್ವೇದ ಭೋಜನ ಪದ್ಧತಿ, ಊಟ ತಿಂಡಿ ಸೇವಿಸುವಾಗ ಅಳವಡಿಸಿಕೊಳ್ಳಬೇಕಾದ ಶಿಸ್ತಿನ ಕ್ರಮಗಳು, ದೇವರ ತೀರ್ಥ-ಪ್ರಸಾದ ಸೇವಿಸುವ ಶಾಸ್ತೊçÃಕ್ತ ಪದ್ಧತಿ, ಹಿಂದೂ ಧರ್ಮದ ನಂಬಿಕೆಗಳು ಮತ್ತು ಸಹಸ್ರನಾಮ, ವಿಷ್ಣು ಸಹಸ್ರನಾಮ ಮುಂತಾದ ಶ್ಲೋಕಗಳನ್ನು ಸ್ಫುಟವಾಗಿ ಪಠಿಸುವ ಸಾಂಪ್ರದಾಯಿಕ ವಿಧಾನ, ಸುಭಾಷಿತಗಳು, ಆದರ್ಶ ದಿನಚರಿ ರೂಪಿಸಿಕೊಳ್ಳುವ ಬಗೆ, ನೈತಿಕ ಶಿಕ್ಷಣ, ಮಾನವೀಯ ಮೌಲ್ಯಗಳು ಮುಂತಾದ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಕಲಿಸಿಕೊಡಲಾಗುತ್ತದೆ.

ಪ್ರತೀ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುವ ಈ ಪ್ರತಿಷ್ಠಾನದ ವೇದ ಶಿಬಿರಕ್ಕೆ ಪ್ರತೀ ವರ್ಷವೂ ರಾಜ್ಯ ಮತ್ತು ಹೊರರಾಜ್ಯಗಳಿಂದ ಹಲವಾರು ವಿದ್ಯಾರ್ಥಿಗಳಿಂದ ಅರ್ಜಿಗಳು ಬರುತ್ತಿದ್ದು, ಅವುಗಳ ಪೈಕಿ ಸಂದರ್ಶನ ನಡೆಸಿ ಆರಿಸಿದ ಋಗ್ವೇದ ಹಾಗೂ ಯಜುರ್ವೇದದ ೮೫ ಹೊಸ ವಿದ್ಯಾರ್ಥಿಗಳಿಗೆ ವೇದ ಶಿಬಿರಕ್ಕೆ ಪ್ರವೇಶ ಕಲ್ಪಿಸಿಕೊಡಲಾಗುತ್ತದೆ. ಪ್ರಸ್ತುತ ಶಿಬಿರಾರ್ಥಿಗಳ ಸಂಖ್ಯೆ 220ಕ್ಕೆ ತಲುಪಿದೆ. ಯಜುರ್ವೇದ ವಿಭಾಗದಲ್ಲಿ 5 ತರಗತಿಗಳಿದ್ದು, ಸಂಧ್ಯಾವಂದನೆಯಿಂದ ಮೊದಲ್ಗೊಂಡು ಸೂಕ್ತಗಳು, ರುದ್ರ ಚಮಕ ಶ್ರೀ ಶಿವರಾಧನೆಯ ಪ್ರಾಕ್ಟಿಕಲ್ ಅಲ್ಲದೆ ಅಗ್ನಿಮುಖ ಪ್ರಯೋಗ, ಸಪ್ತಶತೀ ದುರ್ಗಾಪೂಜೆ ಪಾಠಗಳೂ ನಡೆಯುತ್ತಿವೆ. ಈ ವರ್ಷ ವಿಶೇಷವಾಗಿ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಎಪ್ರಿಲ್ 26 ರಂದು ಶಿಬಿರಕ್ಕೆ ಚಿತ್ತೈಸಿ ಮೊಕ್ಕಾಂ ಮಾಡಿ ಏ.‌ 27ರಂದು ಶಿಬಿರಾರ್ಥಿಗಳೇ ನೆರವೇರಿಸುವ ಹವನದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳನ್ನು ಆಶೀರ್ವಚನದ ಮೂಲಕ ಹರಸಲಿದ್ದಾರೆ.

ಅಧ್ಯಕ್ಷರಾಗಿ ಬ್ರಹ್ಮಶ್ರೀ ವೇ| ಮೂ| ಪುರೋಹಿತ ನಾಗರಾಜ್ ಭಟ್, ಕಾರ್ಯದರ್ಶಿಯಾಗಿ ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್, ಪ್ರತಿಷ್ಠಾನದ ಅಧ್ಯಕ್ಷರ ತೀರ್ಥರೂಪರಾದ  ಶ್ರೀ ಗೋಪಾಲಕೃಷ್ಣ ಭಟ್ ವಗೆನಾಡು ಇವರ ಆಶೀರ್ವಾದ ಮತ್ತು ಗೌರವಾಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಸಲ್ಪಡುತ್ತಿರುವ  ‘ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ’ ವು ಸುಳ್ಯದ ಮಣ್ಣಿನಲ್ಲಿ ಪ್ರಾಚೀನ ವೇದ ಮಂತ್ರಘೋಷಗಳು ಮತ್ತೆ ಝೇಂಕರಿಸುವಂತೆ ಮಾಡಿ, ಅಂತರ್‌ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ಶ್ಲಾಘನೀಯ ಕಾರ್ಯಕ್ಕೆ ಜೈ ಎನ್ನಲೇಬೇಕು.
ಏ.19 ಭಾನುವಾರದಂದು 26ನೇ ವರ್ಷದ ಶ್ರೀ ಕೇಶವ ಕೃಪಾ ವೇದ- ಯೋಗ – ಕಲಾಶಿಬಿರವು ಉದ್ಘಾಟನೆಗೊಳ್ಳಲಿದ್ದು, ವೇ. ಮೂ| ನಯನಕೃಷ್ಣ ಭಟ್ ಪೆರುಂಬಾರು ಹಾಗೂ ಶ್ರೀಮತಿ ಸೌಮ್ಯಾ ನಯನಕೃಷ್ಣ ದಂಪತಿಗಳು ಉದ್ಘಾಟಿಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಇಂಜಾಡಿಯವರು ವಹಿಸಲಿದ್ದು, ದಿಕ್ಸೂಚಿ ಉಪನ್ಯಾಸವನ್ನು ಖ್ಯಾತ ವಾಗ್ಮಿಗಳೂ ಸಂಸ್ಕೃತಿ ಚಿಂತಕರು ಆಗಿರುವ ಡಾ. ಆರತಿ ವಿ.ಬಿ.ಬೆಂಗಳೂರು ಇವರು ಮಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿ ಮತ್ತು ಶ್ರೀ ಕೇಶವಕೃಪಾ ಹಿರಿಯ ವಿದ್ಯಾರ್ಥಿ ಶ್ರೀ ಕಿರಣ ಎ.ಎಸ್. ಅರ್ತ್ಯಡ್ಕ ಭಾಗವಹಿಸಿ ಶುಭಶಂಸನೆಯನ್ನು ಮಾಡಲಿದ್ದಾರೆ. ಪ್ರತಿಷ್ಠಾನದ ಗೌರವಾಧ್ಯಕ್ಷ ಶ್ರೀ ಗೋಪಾಲಕೃಷ್ಣ ಭಟ್ ವಗೆನಾಡು ಗೌರವ ಉಪಸ್ಥಿತಿಯಲ್ಲಿ ಭಾಗವಹಿಸಿ ಶುಭ ಹಾರೈಸಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್. ಶಿಬಿರ ಸಂಚಾಲಕ ವೇ| ಮೂ| ಅಭಿರಾಮ ಭಟ್, ಪ್ರಬಂಧಕಿ ಕು| ಯಶಸ್ವಿ ಪಿ. ಭಟ್, ಸರಣಿ ಶಿವಪೂಜಾ ಅಭಿಯಾನದ ಪ್ರಧಾನ ಸಂಚಾಲಕರಾದ ಶ್ರೀ ಗೋಪಾಲಕೃಷ್ಣ ಭಟ್ ಶಿವನಿವಾಸ ಹಾಗೂ ಸದಸ್ಯರಾದ ಶ್ರೀಮತಿ ಸುಜಾತ ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading