Ad Widget

ಕನ್ನಡ ಕನ್ನಡ ಅಹಾ…..! ಸವಿಗನ್ನಡ

ಕರ್ನಾಟಕ ಬರಿಯ ನಾಡಲ್ಲ. ನಮ್ಮ  ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ಅದು ನಮ್ಮಂತರಂಗದ ಮಾತು. ಇಂದು ನವೆಂಬರ್ ೧ ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡದ ದಿನ .ಕರ್ನಾಟಕ ರಚನೆಯ ದಿನ. 1947 ಆಗಸ್ಟ್ 15ರಂದು ಭಾರತ ಬ್ರಿಟಿಷರ ಕಪಿಮುಷ್ಟಿಯಿಂದ  ಮುಕ್ತಿ ಹೊಂದಿತು.1950ರಲ್ಲಿ ಭಾರತವು ಗಣರಾಜ್ಯವಾಯಿತು. ಇದಾದ ನಂತರ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಾಜ್ಯಗಳ ರೂಪುಗೊಂಡವು.1956 ನವೆಂಬರ್ 1 ರಂದು ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ ಮೈಸೂರು ರಾಜ್ಯವೆಂಬ ಹೆಸರಿನಲ್ಲಿ ಉದಯವಾಯಿತು. ಆಲೂರು ವೆಂಕಟರಾವ್ ಅವರು 1905 ರಲ್ಲಿಯೇ ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ. ‍.ನಂತರ ಏಕೀಕರಣ ಚಳುವಳಿಯ ಹೋರಾಟಗಾರರ ,ಕನ್ನಡ ಸಾಹಿತಿಗಳ ,ಕನ್ನಡ ಪರ ಸಂಘಟನೆಗಳ ಆಶಯದಂತೆ 1973 ನವೆಂಬರ್ 1ರಂದು ಕರ್ನಾಟಕ ರಾಜ್ಯವಾಗಿ ಮರುನಾಮಕರಣ ಗೊಂಡಿತು. ಇದರ ಸವಿ ನೆನೆಪಿಗಾಗಿ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಗುತ್ತದೆ.ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಾಗ ದೇವರಾಜ್ ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕದ ಏಕೀಕರಣಕ್ಕೆ ಮನ್ನಣೆ ನೀಡಿದ ಇತರ ವ್ಯಕ್ತಿಗಳಲ್ಲಿ ಸಾಹಿತಿಗಳಾದ ಕೆ. ಶಿವರಾಮ ಕಾರಂತ್, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್. ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ ಸೇರಿದ್ದಾರೆ.
         ಕನ್ನಡ , ಕರ್ನಾಟಕ , ಕರುನಾಡು ಬರೀ ನೆಲವಲ್ಲ, ಕೇವಲ ಭಾಷೆಯಲ್ಲ.. ಅದೊಂದು ಭಾವನೆ, ಅದೊಂದು ಬಾಂಧವ್ಯ. ಕನ್ನಡ ರಾಜ್ಯೋತ್ಸವದ ವೇಳೆ ಕನ್ನಡದ ಹಿರಿಮೆ-ಗರಿಮೆಗಳನ್ನು ನೆನಪಿಸಿಕೊಳ್ಳುವ ‘ನವೆಂಬರ್‌ ಕನ್ನಡಿಗರು’ ನಾವಾಗಬೇಕಿಲ್ಲ. ಕನ್ನಡ ನಮ್ಮ ನಿತ್ಯೋತ್ಸವವಾಗಬೇಕು ಅನ್ನೋದು ಕವಿಮನದ ಆಶಯ. ಕರ್ನಾಟಕ ಏಕೀಕರಣಕ್ಕೆ ಹೋರಾಡಿದ, ಕನ್ನಡದ ಉಳಿವಿಗಾಗಿ, ಶ್ರೇಯೋಭಿವೃದ್ಧಿಗಾಗಿ, ಬೆಳವಣಿಗೆಗಾಗಿ ಶ್ರಮಿಸಿದ ಹಲವು ಹಿರಿಜೀವಗಳ ಹೆಬ್ಬಯಕೆಯದು. ಆದ್ದರಿಂದ ಇಂತಹ ಸಂದರ್ಭದಲ್ಲಿ ಕನ್ನಡ ನಾಡು ನುಡಿಯತ್ತ ಒಳನೋಟ ಬೀರುವುದು ಕನ್ನಡಿಗರಾದ ನಮ್ಮ ಆದ್ಯ ಕರ್ತವ್ಯ.
         ನಮ್ಮ ನಾಡು ವೈಭವದ ಬೀಡು. ರಾಮಾಯಣ ದ ವೀರ ಹನುಮಂತ ಹುಟ್ಟಿದ ನಾಡಿದು. ಅಂದಿನ ಕಿಷ್ಕಿಂದಾ ನಗರವೇ ಇಂದಿನ ಹಂಪೆಯಾಗಿದೆ. ಕನ್ನಡ ನಾಡು ಸಮೃದ್ದವೂ ಸಂಪಧ್ಬರಿತವೂ ಆಗಿದ್ದು ವೈಭವದ ನೆನ್ನೆಗಳು ಕನ್ನಡಿಗರಾಗಿತ್ತು.‌ಕನ್ನಡ ಸುಂದರ ಮತ್ತು ಸಮೃದ್ಧ ಕನ್ನಡಿಗರದಾಗಿತ್ತು. ಕನ್ನಡ ಸುಂದರ ಮತ್ತು ಸಮೃದ್ಧ ಭಾಷೆಯಾಗಿದೆ. ಪ್ರಕೃತಿ ಮಾತೆ ತನ್ನ ವಿಶೇಷ ಕರುಣೆಯಿಂದ ಕನ್ನಡ ನಾಡನ್ನು ಹರಸಿದಂತೆ ,ಕನ್ನಡ ನಾಡಿನ ಪ್ರಾಕೃತಿಕ ಸೌಂದರ್ಯವನ್ನು ನೋಡಿದಾಗ ಭಾಸವಾಗುತ್ತದೆ. ಕನ್ನಡ  ನಾಡು ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬಾಗೆ ಹಲಸು ಅಶೋಕ ಮಾವು ಬೇವು ತೆಂಗು ಕಂಗು ಮೊದಲಾದ ಉನ್ನತ ವೃಕ್ಷಗಳ ಸಿರಿತವರು. ಕಾವೇರಿ, ಕೃಷ್ಣೆ ಗೋದಾವರಿಯರು ಮೈದೊಳೆವ ನಾಡು. ಆನೆ ಸಿಂಹ ಹುಲಿ ಚಿರತೆ ತೋಳ ಕಿರುಬ ಕರಡಿ ಜಿಂಕೆ ಹಂದಿ; ನವಿಲು ಗಿಳಿ ಕೋಗಿಲೆ ಮೈನಾ ಗೀಜಗ ಪಾರಿವಾಳ ಲಾವಿಗ ಕೊಕ್ಕರೆ ಮುರುಳಿ ಮರಕುಟಿಗ ವಿಂಚುಳ್ಳಿ ಗರುಡ ಡೇಗೆ ಕೊಕ್ಕರೆ ಬಾತುಕೋಳಿ ಗಿಡುಗ ರಣಹದ್ದು; ಮೊಸಳೆ ಹೆಬ್ಬಾವು ಗೋಸುಂಬೆ ನಾಗರಹಾವು ಕೇರೆಹಾವು ಹಸುರುಹಾವು ಮಂಡಲದಹಾವು ಆಮೆ ಹಲ್ಲಿ ಹೆಂಟೆಗೊದ್ದ; ಹಸು ಎಮ್ಮೆ ಆಡು ಕುರಿ – ಮುಂತಾದ ಪ್ರಾಣಿ ಪಕ್ಷಿ ಸರೀಸೃಪಗಳ ಸಮೃದ್ಧಧಾಮ. ಶೈವ, ವೈಷ್ಣವ, ಜೈನ, ಬೌದ್ಧ, ಲಿಂಗಾಯತ, ಇಸ್ಲಾಂ, ಕ್ರೈಸ್ತ ಮುಂತಾದ ಧರ್ಮಗಳಿಗೆ ಆಶ್ರಯ ನೀಡಿ ’ಸರ್ವಧರ್ಮಧೇನು ನಿವಹಕ್ಕಾಡುಂಬೊಲಂ’ ಎಂಬ ಕವಿವಾಣಿಗೆ ಅನ್ವರ್ಥಕವಾದುದು ಈ ಕನ್ನಡನಾಡು.ದ್ವೈತ ಅದ್ವೈತ ವಿಶಿಷ್ಟಾದ್ವೈತ ಜನಪದ ಧರ್ಮಗಳ ಸಂಗಮಭೂಮಿ. . ಈ ಕರ್ನಾಟಕ ಪ್ರಪಂಚದ ಭೂಪಟದಲ್ಲಿ ತನ್ನ ವೈವಿಧ್ಯಮಯ ವೈಶಿಷ್ಟ್ಯಮಯ ಐತಿಹಾಸಿಕ ಪರಂಪರೆಯಿಂದ ಸಮೃದ್ಧವೂ ಅದ್ವಿತೀಯವೂ ಆದ ಸಾಂಸ್ಕೃತಿಕ ಪರಂಪರೆಯಿಂದ, ಅವಿಸ್ಮರಣೀಯ ದಾಖಲೆಯನ್ನು ಗುರುತಿಸಿಕೊಂಡಿರುವ ಹಿರಿಮೆಯ ಹಿರಿನಾಡು ಇದು, ಈ ಕರ್ನಾಟಕ. ಅದಕ್ಕಾಗಿಯೇ ಕವಿಗಳು ಕನ್ನಡ ನಾಡನ್ನು ಗಂಧದ ನಾಡು, ಹೊನ್ನಿನ ಬೀಡು ,ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು ಎಂದಿದ್ದಾರೆ.
     ಇನ್ನು ಕನ್ನಡ ನಾಡಿನ ಅರಸ ಪರಂಪರೆಯ ಕುರಿತು ಹೇಳುವುದಾದರೆ ಅರುವತ್ತು ಸಾವಿರ ಗಜಪಡೆಗಳನ್ನು  ಹೊಂದಿದ ರಾಜವಂಶ ಕದಂಬರದು.ಶಿಲ್ಪ ಕಲೆಯ ತವರೂರನ್ನು ಹುಟ್ಟು ಹಾಕಿದವರು ಹೊಯ್ಸಳರು ತಲಕಾಡಿನ ಗಂಗರು. ಮುತ್ತು ರತ್ನಗಳನ್ನು ಬೀದಿಗಳಲ್ಲಿ ಸೇರಿನಲ್ಲಿ ಅಳೆದು ಕೊಟ್ಟು ಚರಿತ್ರೆಯ ಪುಟದಲ್ಲಿ ಸುವರ್ಣ ಯುಗ ವನ್ನು ಬರೆದು ಹೋದವರು ವಿಜಯನಗರದ ಅರಸರು.
       ಆಧ್ಯಾತ್ಮಿಕ ದ ಬೆಳಕನು ಇಡಿಯ ಭಾರತಕ್ಕೆ ಪಸರಿಸಿದ  ಬಸವಣ್ಣ, ಮಧ್ವಾಚಾರ್ಯ , ರಮಾನುಜ ಚಾರ್ಯರಂತಹ  ಮಹಾತ್ಯಾಗಿಗಳ ಮಹಾತಪಸ್ವಿಗಳ ಸಿದ್ಧಕ್ಷೇತ್ರ – ಈ ಕನ್ನಡ ನಾಡು
           ಬೇಲೂರು ,ಐಹೊಳೆ ,ಪಟ್ಟದ ಕಲ್ಲು ,ಅಜಂತಾ ,ಎಲ್ಲೋರಾ ದೇವಾಲಯಗಳ ವಿನ್ಯಾಸಗಳು ನಮ್ಮ ಜ್ಞಾನ ,ವಿಜ್ಞಾನ ,ಸಂಸ್ಕೃತಿ, ತಂತ್ರಜ್ಞಾನಗಳ ಉತ್ತುಂಗಕ್ಕೆ ಸಾಕ್ಷಿ. ಕನ್ನಡ ನಾಡು ಸೀಮಿತತೆಯ ನಡುವೆಯೂ ಸಂಸ್ಕೃತಿ ಕಲೆಗಳ ಸುಗಂಧವನ್ನು ಬೀರುವ ಕರ್ಪೂರದ ಕವಳದ ತಟ್ಟೆ.
        ಕನ್ನಡ ಭಾಷೆ ವಿಶ್ವ ಸಾಹಿತ್ಯದಲ್ಲಿ ಗೌರವ ಪಡೆದಿದೆ. ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು’ ಎಂದು ಕವಿ ಬೆಟಗೇರಿ ಕೃಷ್ಣಶರ್ಮರು ಮನದುಂಬಿ ಹಾಡಿದ್ದಾರೆ.
       ಪಂಪ-ರನ್ನರು, ಬಸವಾದಿ ಶರಣರು, ದಾಸಶ್ರೇಷ್ಠರು, ಹರಿಹರ, ರಾಘವಾಂಕ, ಕುಮಾರವ್ಯಾಸಾದಿ ಪ್ರಾಚೀನ ಕವಿಗಳು, ರಸ ಋಷಿಗಳು ಹಾಗು ಕುವೆಂಪು, ಬೇಂದ್ರೆ, ಕಣವಿ, ಶಿವರುದ್ರಪ್ಪನವರಂತಹ ಆಧುನಿಕ ಕವಿ ಸಾಹಿತಿಗಳು ಕನ್ನಡವನ್ನು ಸಮೃದ್ಧಗೊಳಿಸಿದ್ದಾರೆ.
         ನಾಯಿಕೊಡೆಗಳಂತೆ ಅಲ್ಲಲ್ಲಿ ಏಳುತ್ತಿರುವ ಪ್ರೀಕೆ.ಜಿ,ಎಲ್.ಕೆ.ಜಿ, ಯು.ಕೆ.ಜಿ ಗಳು ಆಂಗ್ಲ ಭಾಷಾ ವ್ಯಾಮೋಹ ದಿಂದ ಕನ್ನಡ  ಶಾಲೆಗಳು ಮುಚ್ಚಿತ್ತಿರುವ ಇಂದಿನ ಪರಿಸ್ಥಿತಿಗಳನ್ನು ನೆನೆದಾಗ ಕವಿ ವಾಣಿಯೊಂದು ನೆನಪಾಗುತ್ತದೆ ” ಸಾಯುತ್ತಿದೆ ನಿಮ್ಮ ನುಡಿ ,ಓ ಕನ್ನಡದ ಕುವರರಿರ ,ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ ,ಕಣ್ದೆರೆಯಿರೇಳಿ ,ಓ ಕನ್ನಡದ ಮಕ್ಕಳಿರ ಘರ್ಜಿಸುವುದಕ್ಕೆ ಕಲಿತು ಸಿಂಹವಾಗಿ ,ಹೌದು! ಇಂದಾದರೂ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲವಾದರೆ ಮುಂದೊಂದು ದಿನ ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡುವವರನ್ನು ಹುಡುಕುವ ಪರಿಸ್ಥಿತಿ ಬಂದರೂ ಬರಬಹುದು. ಹಾಗಂತ ಅನ್ಯ ಭಾಷೆಗಳನ್ನು ಬಳಸಬಾರದೆಂದಲ್ಲ.ಜ್ಞಾನಾರ್ಜನೆಗೆ  ವ್ಯವಹಾರಕ್ಕೆ, ಎಲ್ಲಾ ಭಾಷೆಗಳನ್ನು ಕಲಿಯಬೇಕು .ಎಲ್ಲಾ ಭಾಷೆಗಳ ಮೇಲೂ ಪ್ರೀತಿ ಗೌರವಗಳಿರಬೇಕು. ಆದರೆ ನಮ್ಮ ತಾಯ್ನುಡಿಯ ಮೇಲೆ ಹೆಚ್ಚಿನ ಗೌರವ‌,ಪ್ರೀತಿಯಿರಬೇಕು. ಕನ್ನಡವನ್ನು ಉಳಿಸಲು ಹೋರಾಡಬೇಕಿಲ್ಲ. ದಿನನಿತ್ಯದ ಬದುಕಿನಲ್ಲಿ ಬಳಸಿದರೆ ಸಾಕು. ಕನ್ನಡವೆಂದೂ ಅಳಿಯದು.
     ಕನ್ನಡಕ್ಕಾಗಿ ಕೈ ಎತ್ತಿದರೆ ಅದು ಕಲ್ಪ ವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತಿದರೆ ಅದು ಪಾಂಚಜನ್ಯವಾಗುತ್ತದೆ. ಕನ್ನಡಕ್ಕಾಗಿ ಕಿರುಬೆರಳೆತ್ತಿದ್ದರೆ ಸಾಕು ಅದು ಗೋವರ್ಧನ ಗಿರಿಯಾಗುತ್ತದೆ. ಇಂತಹ ವೈಭವೋಪೇತ ಪರಂಪರೆ ನಮ್ಮದು.ಈ ಅಖಂಡ ನುಡಿಕರ್ನಾಟಕದಲ್ಲಿ ’ನೃಪತುಂಗನೆ ಚಕ್ರವರ್ತಿ| ಪಂಪನಿಲ್ಲಿ ಮುಖ್ಯಮಂತ್ರಿ| ರನ್ನ ಜನ್ನ ನಾಗವರ್ಮ| ರಾಘವಾಂಕ ಹರಿಹರ| ಬಸವೇಶ್ವರ ನಾರಣಪ್ಪ| ಸರ್ವಜ್ಞ ಷಡಕ್ಷರ;|| ಸರಸ್ವತಿಯೆ ರಚಿಸಿದೊಂದು| ನಿತ್ಯ ಸಚಿವ ಮಂಡಲ| ತನಗೆ ರುಚಿರ ಕುಂಡಲ||’ ಎಂದು ಕುವೆಂಪು ಬಣ್ಣಿಸಿದ್ದಾರೆ. ಆದರೆ ಅದೇ ಕವಿಗಳು ಕನ್ನಡಕೆ ಹೋರಾಡು ಕನ್ನಡ ಕಂದ’ ಎಂದು ಕರೆ ಕೊಟ್ಟಿದ್ದರೂ ಇಂದು ’ಕನ್ನಡವ ಕಾಪಾಡು ಕನ್ನಡಿಗರಿಂದ’ ಎಂದು ಹೇಳುವಂತಹ ಸಂದರ್ಭ ಒದಗಿರುವುದು ದುರ್ದೈವವೆನ್ನದೆ ವಿಧಿಯಲ್ಲ.
      ಕನ್ನಡ ನಾಡು ಚೆನ್ನ, ಕನ್ನಡ ನುಡಿ ಚೆನ್ನ. ಚೆಲ್ವಾದುದು ಕನ್ನಡಮೆನಿಪ್ಪಾ ನಮ್ಮ ನಾಡು, ಚೆಲ್ವಾದುದು ಕನ್ನಡಮೆನಿಪ್ಪಾ ನಮ್ಮ ನುಡಿ. ಚೆಲುವ ಕನ್ನಡವನ್ನು ಆ ತಾಯಿಯ ಮಕ್ಕಳಾದ ನಾವೇ ಉಳಿಸಬೇಕು, ಬೆಳೆಸಬೇಕು.ನಮ್ಮ ತಾಯಿ ನಮ್ಮ ನಿರ್ಲಕ್ಷ್ಯದಿಂದ ಕೊರಗಿ ಸಾಯುವಂತಾಗಬಾರದು.
ಕನ್ನಡ ತಾಯಿ ಕರ್ನಾಟಕದಲ್ಲಿ ಕಳೆದು ಹೋಗದಂತೆ, ಕರ್ನಾಟಕ ಕರಗಿ ಹೋಗದಂತೆ ನೆಲ-ಜಲ, ಭಾಷೆ-ಸಂಸ್ಕೃತಿಗಳ ಉಳುವಿಗಾಗಿ ನಾವು ಶ್ರಮಿಸಬೇಕು.ಕನ್ನಡ ತಾಯಿ ಬದುಕಿದರೆ ಕರ್ನಾಟಕದಲ್ಲಿಯೇ ಬದುಕಬೇಕು, ಬೆಳೆದರೆ ಕರ್ನಾಟಕದಲ್ಲಿಯೇ ಬೆಳೆಯಬೇಕು. ಅಂತಹ ಕನ್ನಡ ಪ್ರಜ್ಞೆ ಹಾಗು ಕರ್ನಾಟಕ ಪ್ರಜ್ಞೆಯನ್ನು ನಾವೆಲ್ಲ ಮೈಗೂಡಿಸಿಕೊಂಡು, ಬೆಳೆಯೋಣ, ಕನ್ನಡ ನಾಡು-ನುಡಿಯನ್ನು ಬೆಳೆಸೋಣ.

ಅಪೂರ್ವ ಚೇತನ್ ಪೆರುಂದೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading