ಕೋವಿಡ್ ೧೯ರ ಹಿನ್ನಲೆಯಲ್ಲಿ ಸುಳ್ಯ ಪರಿಸರದ ಜನತೆಗೆ ಆಂಟಿಜನ್ ರ್‍ಯಾಪಿಡ್ ಪರೀಕ್ಷೆ ಆ.೫ ಮತ್ತು ೬ ರಂದು ನಡೆಸಲು ಈ ಮೊದಲು ತೀರ್ಮಾನಿಸಿದ್ದು ಅದರಂತೆ ಸುಳ್ಯ ರೋಟರಿ ಶಾಲೆಯಲ್ಲಿ ಸುಳ್ಯ ತಹಶೀಲ್ದಾರ್ ಅನಂತ ಶಂಕರ ಇಂದು ಚಾಲನೆ ನೀಡಿದರು. ಈ ಕಾರ್ಯಕ್ರಮವು ವರ್ತಕರ ಸಂಘ ಸುಳ್ಯ, ರೋಟರಿ ಮತ್ತು ಲಯನ್ಸ್ ಕ್ಲಬ್ ಸುಳ್ಯ, ತಾಲೂಕು ಆಡಳಿತ, ನಗರ ಪಂಚಾಯತ್, ಆರೋಗ್ಯ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ಭಾಗವಹಿಸಿದ ಗಣ್ಯರನ್ನು ಸುಳ್ಯ ರೋಟಾಕ್ಟ್ ಸಿಟಿ ಕ್ಲಬ್‌ನ ಅಧ್ಯಕ್ಷ ಗುರು ವಿಕ್ರಮ್ ಸ್ವಾಗತಿಸಿದರು.
ಕಾರ್ಯಕ್ರಮದ ಕುರಿತು ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಈ ಒಂದು ಪರೀಕ್ಷೆ ನಗರದ ಪ್ರತಿಯೊಬ್ಬರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಯಾರು ಕೂಡಾ ಇದರ ಬಗ್ಗೆ ಭಯಪಡುವ ಅವಶ್ಯಕತೆಯಿಲ್ಲ. ನಮ್ಮ ಮತ್ತು ಸಮಾಜದ ಆರೋಗ್ಯದ ದೃಷ್ಠಿಯಿಂದ ಈ ಪರೀಕ್ಷೆ ತುಂಬಾ ಪ್ರಯೋಜನಕಾರಿ ಎಂದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಗೌಡ ಪೆಲ್ತಡ್ಕ, ನಗರ ಪಂಚಾಯತ್ ಇಂಜಿನಿಯರ್ ಶಿವಕುಮಾರ್, ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ, ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ವಾರ್ಡ್ ಸದಸ್ಯ ಎಂ. ವೆಂಕಪ್ಪ ಗೌಡ ಕೋವಿಡ್ ೧೯ರ ಆಂಟಿಜನ್ ರ್‍ಯಾಪಿಡ್ ಪರೀಕ್ಷೆ ಮಾಡಿಸಿಕೊಂಡರು. ಜೊತೆಗೆ ಹಲವಾರು ಮಂದಿ ಈ ಪರೀಕ್ಷೆಯ ಪ್ರಯೋಜನವನ್ನು ಪಡೆದುಕೊಂಡರು. ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ ವಂದಿಸಿದರು. ಇಂದು ಮಧ್ಯಾಹ್ನ ೨.೩೦ರ ವರೆಗೆ ಈ ಪರೀಕ್ಷೆ ನಡೆಯಲಿದ್ದು, ನಾಳೆ ಜ್ಯೋತಿ ಸರ್ಕಲ್ ಬಳಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.