ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆಯುವ ಆಧುನಿಕ ಸುಳ್ಯದ ನಿರ್ಮಾತೃ ಡಾ| ಕುರುಂಜಿ ವೆಂಕಟ್ರಮಣ ಗೌಡರ ೯೨ನೇ ಜಯಂತ್ಯೋತ್ಸವ ಕೆ.ವಿ.ಜಿ. ಸುಳ್ಯ ಹಬ್ಬ ಆಚರಣೆ ಜ.23 ರಂದು ನಡೆಯಲಿದೆ ಎಂದು ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದರು.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ವರ್ಷ ಕೆ.ವಿ.ಜಿ. ಸುಳ್ಯ ಹಬ್ಬ ಡಿ.25 ಮತ್ತು 26 ರಂದು ನಡೆಯುತ್ತದೆ. ಆದರೆ ಈ ಬಾರಿ ಕೊರೊನಾ ಕಾರಣ ಮತ್ತು ಗ್ರಾ.ಪಂ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸದಸ್ಯರ ಅಭಿಪ್ರಾಯದಂತೆ ಸಭೆ ನಡೆಸಿ ಕಾರ್ಯಕ್ರಮ ಮುಂದೂಡಲಾಗಿತ್ತು. ಈ ಬಾರಿ ಜ.23 ರಂದು ಕೆ.ವಿ.ಜಿ. ಕಾನೂನು ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಕೆ.ವಿ.ಜಿ. ಸಾಧನಾಶ್ರೀ ಪ್ರಶಸ್ತಿಯನ್ನು ಹಿರಿಯ ಚಲನಚಿತ್ರ ನಿರ್ಮಾಪಕ ಎನ್.ಎಸ್.ದೇವಿಪ್ರಸಾದ್ ಸಂಪಾಜೆ ಹಾಗೂ ಹಿರಿಯ ನ್ಯಾಯವಾದಿ, ನೋಟರಿ ಐ.ಕುಂಞಪಳ್ಳಿಯವರಿಗೆ ನೀಡಿ ಗೌರವಿಸಲಾಗುವುದು. ಸಭಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಸಹಾಯಕ ಕಮಿಷನರ್ ಡಾ| ಯತೀಶ್ ಉಳ್ಳಾಲ್ ಮುಖ್ಯ ಅತಿಥಿಗಳಾಗಿರುವರು. ಕೆ.ವಿ.ಜಿ. ಸಂಸ್ಮರಣಾ ಮಾತು ಮತ್ತು ಹಿರಿಯ ಸಾಹಿತಿ ಡಾ| ಬಿ.ಪ್ರಭಾಕರ ಶಿಶಿಲರ “ಡಾ| ಕೆ.ವಿ.ಜಿ. ಸ್ಮತಿ ಗುಚ್ಛ ಇರುಳ ಕಳೆದ ಬೆಳಕು” ಕೃತಿಯನ್ನು ಹಿರಿಯ ವಿದ್ವಾಂಸ ಡಾ| ಎಂ.ಪ್ರಭಾಕರ ಜೋಶಿ ಮಾಡಲಿದ್ದಾರೆ.
ಈ ಬಾರಿ ವಿಶೇಷವಾಗಿ ಸಮಿತಿಯಿಂದ ಸಮಾಜ ಸೇವಾ ಕಾರ್ಯಕ್ರಮದಡಿಯಲ್ಲಿ ಬಡ ಕುಟುಂಬವೊಂದರ ಮನೆ ಕೆಲಸಕ್ಕಾಗಿ ರೂ.೧ ಲಕ್ಷ ಸಹಾಯಧನ ನೀಡಿದ್ದು, ಜ.೨೩ರ ಕಾರ್ಯಕ್ರಮದಂದು ಸಂಜೆ ಮನೆ ಹಸ್ತಾಂತರ ಕಾರ್ಯಕ್ರಮವು ನಡೆಯುತ್ತದೆ. ಪುತ್ತೂರು ಸಹಾಯಕ ಕಮಿಷನರ್ ಡಾ| ಯತೀಶ್ ಉಳ್ಳಾಲ್ ಮನೆ ಹಸ್ತಾಂತರ ಮಾಡಲಿದ್ದು , ಸುಳ್ಯ ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಾಕ್ಷಿ ಜೆ ರೈ, ಕೋಶಾಧಿಕಾರಿ ದಿನೇಶ್ ಮಡ್ತಿಲ, ಮಾಜಿ ಅಧ್ಯಕ್ಷರು ಗಳಾದ ಎನ್.ಎ.ರಾಮಚಂದ್ರ, ಶೈಲೇಶ್ ಅಂಬೆಕಲ್ಲು ಇದ್ದರು.