ಚೆಂಬುವಿನಲ್ಲಿ ನ. 29ರಂದು ಅರೆಭಾಷೆ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷರಾಗಿ ಲೀಲಾ ದಾಮೋದರ ಕುಂದಲ್ಪಾಡಿ ಭಾಗಿ; ದಿನವಿಡೀ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮ

ಅರೆಭಾಷೆ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನ. 29ರಂದು ಚೆಂಬು ಗ್ರಾಮದ ಕೂಡಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದರು.ನ. 21ರಂದು ಸುಳ್ಯದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆಯ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ಹೆಚ್ಚಿಸುವುದರೊಂದಿಗೆ ಅರೆಭಾಷೆಯನ್ನು ಉಳಿಸಿ, ಬೆಳೆಸಿ, ವ್ಯಾಪಕವಾಗಿ ಪ್ರಚಾರ ಮಾಡುವ ಪ್ರಯತ್ನವಾಗಿ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.ನವೆಂಬರ್ 29ರಂದು ಬೆಳಿಗ್ಗೆ 8.30ಕ್ಕೆ ಸಂಪಾಜೆ ಗೇಟ್ ಬಳಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೊರಡಲಿದ್ದು, ಪ್ರಗತಿಪರ ಕೃಷಿಕರಾದ ಇಂದಿರಾ ದೇವಿಪ್ರಸಾದ್ ಸಂಪಾಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಾಹಿತಿ ಹಾಗೂ ಲೇಖಕಿ ಲೀಲಾ ದಾಮೋದರ ಕುಂದಲ್ಪಾಡಿ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದಾರೆ ಎಂದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಕಾಡೆಮಿ ಪ್ರಕಟಿತ ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದು, ಜಲಾನಯನ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಸೂರಜ್ ಹೊಸೂರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಹಿಂದಿನ ಸಮ್ಮೇಳನಾಧ್ಯಕ್ಷ ಹಾಗೂ ಕವಿ ಭವಾನಿಶಂಕರ ಹೊದ್ದೆಟ್ಟಿ, ಅಕಾಡೆಮಿಯ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅನಂತ್ ಎನ್.ಸಿ. ಊರುಬೈಲು, ಸೋಮಶೇಖರ ಕೊಯಿಂಗಾಜೆ, ಸುಳ್ಯ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ ಡಿ.ವಿ., ಕೂಡಡ್ಕ ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಸೋಮಣ್ಣ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವು ಎನ್. ಭಾಗವಹಿಸಲಿದ್ದಾರೆ.ಮಧ್ಯಾಹ್ನ 12 ಗಂಟೆಯಿಂದ ವಿಚಾರ ಸಂಕಿರಣ ನಡೆಯಲಿದ್ದು, ‘ಕೃಷಿ ಬೊದ್ಕು ಮತ್ತೆ ಅದರ ಪ್ರಸ್ತುತ ಸವಾಲುಗ’ ವಿಷಯದ ಕುರಿತು ಕಲ್ಮಡ್ಕದ ಕೃಷಿಕ ಸುರೇಶ್ ಚಂದ್ರ ಟಿ.ಆರ್. ಹಾಗೂ ‘ಭಾಷೆನ ಮುಂದೆನ ತಲೆಮಾರ್‌ಗೆ ದಾಟ್ಸುವ ಮಾರ್ಗ’ ವಿಷಯದ ಕುರಿತು ಮೇಜರ್ ಡಾ. ಕುಶ್ವಂತ್ ಕೋಳಿಬೈಲ್ ಉಪನ್ಯಾಸ ನೀಡಲಿದ್ದಾರೆ.ಮಧ್ಯಾಹ್ನ 1 ಗಂಟೆಯಿಂದ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಅಪರಾಹ್ನ 2 ಗಂಟೆಯಿಂದ ಕವಿಗೋಷ್ಠಿ ಆಯೋಜಿಸಲಾಗಿದೆ. ಕರುಣಾಕರ ನಿಡಿಂಜಿ ಅಧ್ಯಕ್ಷತೆ ವಹಿಸಲಿರುವ ಕವಿಗೋಷ್ಠಿಯಲ್ಲಿ ಶಿವದೇವಿ ಅವನೀಶ್ಚಂದ್ರ, ರೇಷ್ಠಾ ಕುಕ್ಕನೂರು, ಸಹನಾ ಕಾಂತಬೈಲು, ಜಯಲಕ್ಷ್ಮೀ ಕಡ್ಲೇರ, ಉದಯಕುಮಾರಿ ಚೆಂಬು, ಜೀವನ್ ಪುರ, ದೀಪಶ್ರೀ ಅಡ್ತಲೆ, ಮನೋಜ್ ಕುಡೆಕಲ್ಲು ಹಾಗೂ ಮುಕ್ಕಾಟಿ ಹರಿಣಿ ಗಿರೀಶ್ ಕವನ ವಾಚಿಸಲಿದ್ದಾರೆ.ಅಪರಾಹ್ನ 3 ಗಂಟೆಯಿಂದ ಸಮಾರೋಪ ಸಮಾರಂಭ, ಸನ್ಮಾನ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದು, ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಸಮಾರೋಪದ ಮಾತುಗಳನ್ನಾಡಲಿದ್ದಾರೆ. ವಿಶ್ರಾಂತ ಪ್ರಾಂಶುಪಾಲ ಹಾಗೂ ಲೇಖಕ ಕುಯಿಂತೋಡು ದಾಮೋದರ ಸನ್ಮಾನ ನೆರವೇರಿಸಲಿದ್ದಾರೆ ಎಂದರು.ಆರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಚೆಂಬು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ವಿಸ್ಮಯಿ, ಲೇಖಕರು ಮತ್ತು ಕಲಾವಿದರ ಬಳಗ ಕೊಡಗು ಜಿಲ್ಲೆಯ ಮಾಜಿ ಅಧ್ಯಕ್ಷ ಲೋಕನಾಥ ಅಮೆಚೂರ್, ಕಲ್ಲುಗುಂಡಿ ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ ಹಾಗೂ ಕೂಡಡ್ಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನವೀನ್ ರಾಮಕಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕೃಷಿ, ವೈದಿಕ, ಶಿಕ್ಷಣ, ಸಾಂಸ್ಕೃತಿಕ ಹಾಗೂ ಸಹಕಾರ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು.ಸಂಜೆ 5 ಗಂಟೆಯಿಂದ ಅರೆಭಾಷೆ ಸಾಂಸ್ಕೃತಿಕ ಸಂಜೆ ನಡೆಯಲಿದ್ದು, ಸ್ಥಳೀಯ ಸಂಘ-ಸಂಸ್ಥೆಗಳಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು, ಶಶಿಕಾಂತ್ ಮಿತ್ತೂರು ಸುಳ್ಯ ಅವರ ತಂಡದಿಂದ ‘ಅರೆಭಾಷೆ ಸಿರಿ ಸಂಸ್ಕೃತಿ’ ನೃತ್ಯರೂಪಕ ಹಾಗೂ ರವಿಚಂದ್ರ ಪೆರುಮುಂಡ ಚೆಂಬು ಮತ್ತು ಬಳಗದವರಿಂದ ‘ಕಾನದ ಮಾಯೆ’ ಅರೆಭಾಷೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.ಸಮ್ಮೇಳನದ ಅಂಗವಾಗಿ ಅರೆಭಾಷೆ ಕವನ ಸ್ಪರ್ಧೆ, ಗಾದೆ ಬರೆಯುವ ಸ್ಪರ್ಧೆ, ಮೂಲ ಪದಗಳ ಬರವಣಿಗೆ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಾಹನ ಮೆರವಣಿಗೆ, ಪುರಾತನ ವಸ್ತುಗಳ ಪ್ರದರ್ಶನ, ತಿಂಡಿ-ತಿನಿಸು, ಹೂವಿನ ಗಿಡಗಳು, ಚಿತ್ರಕಲೆ, ಪುಸ್ತಕ, ನೆಟ್ಟಿ ಬಿತ್ತನೆ, ಬಟ್ಟೆಬರೆ, ಆಟಿಕೆ ಹಾಗೂ ಆಭರಣಗಳ ಮಳಿಗೆಗಳು ಸಮ್ಮೇಳನದ ವಿಶೇಷ ಆಕರ್ಷಣೆಯಾಗಿ ಹೊರಹೊಮ್ಮಲಿದೆ. ಅರೆಭಾಷೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಸದಾನಂದ ಮಾವಜಿ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯ ಸಂಚಾಲಕ ಚಂದ್ರಶೇಖರ ಪೇರಾಲ್ ಮತ್ತು ಲೋಕೇಶ್ ಊರುಬೈಲ್, ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ ಹಾಗೂ ಡಾ. ಜ್ಞಾನೇಶ್ ಎನ್.ಎ. ಉಪಸ್ಥಿತರಿದ್ದರು.

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading