ಸ್ಥಳೀಯಾಡಳಿತಕ್ಕೆ ಅನುದಾನ ನೀಡದೆ ಬಡವರ ವಿರೋಧಿ ನೀತಿ: ವಿಕಾಸ್ ಪುತ್ತೂರು ಕಿಡಿ | ಕಾಂಗ್ರೆಸ್ ಸರಕಾರದ ವಿರುದ್ಧ ಸುಳ್ಯದಲ್ಲಿ ಬಿಜೆಪಿ ಪ್ರತಿಭಟನೆ

ಸುಳ್ಯ: ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸದೆ, ಅನುದಾನವನ್ನೂ ಬಿಡುಗಡೆ ಮಾಡದೆ ರಾಜ್ಯ ಕಾಂಗ್ರೆಸ್ ಸರ್ಕಾರವು ಸಂವಿಧಾನಬದ್ಧ ಹಕ್ಕುಗಳನ್ನು ಕಸಿದುಕೊಂಡು ಬಡವರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಹೋರಾಟದ ಜಿಲ್ಲಾ ಸಹ ಸಂಚಾಲಕ ವಿಕಾಸ್ ಪುತ್ತೂರು ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ಸುಳ್ಯ ಮಂಡಲ ಸಮಿತಿ ಹಾಗೂ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿಯಿಂದ ನಗರ ಪಂಚಾಯತ್ ಕಚೇರಿಯವರೆಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಪಾದಯಾತ್ರೆ ಮತ್ತು ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.

. . . . . . . . .

ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸದ ಕಾರಣ ಜನಪ್ರತಿನಿಧಿಗಳಿಲ್ಲದೆ ಸಾರ್ವಜನಿಕರ ಸಮಸ್ಯೆ ಕೇಳುವವರಿಲ್ಲದಂತಾಗಿದೆ. ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಕಳೆದ ಮೂರೂವರೆ ವರ್ಷಗಳಲ್ಲಿ ಶೇ. 30ರಷ್ಟು ಪಿಂಚಣಿದಾರರು ಹಾಗೂ ಬಿಪಿಎಲ್ ಪಡಿತರ ಚೀಟಿದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ವಿಕಲಚೇತನರ ಮಾಸಾಶನಕ್ಕೂ ಕತ್ತರಿ ಹಾಕಲಾಗಿದ್ದು, ‘ಗೃಹಲಕ್ಷ್ಮಿ’ ಯೋಜನೆಯ ₹2,000 ಹಣವೂ ಸರಿಯಾಗಿ ತಲುಪದೆ ಫಲಾನುಭವಿಗಳು ಬೀದಿಗಿಳಿಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 75 ವರ್ಷಗಳಲ್ಲಿ ₹16ರಷ್ಟಿದ್ದ ಕೆಂಪುಕಲ್ಲಿನ ಬೆಲೆ ಈ ಸರ್ಕಾರದ ಅವಧಿಯಲ್ಲಿ ₹50ಕ್ಕೆ ಏರಿಕೆಯಾಗಿದೆ. ಮರಳು ಮತ್ತು ಕೆಂಪುಕಲ್ಲು ಸಾಗಾಣಿಕೆ ಮೇಲಿನ ಕಠಿಣ ನಿಯಮಗಳಿಂದ ಬಡವರ ಮನೆ ನಿರ್ಮಾಣ ಕನಸಾಗಿಯೇ ಉಳಿದಿದ್ದು, ವಸತಿ ಯೋಜನೆಗಳೂ ಸ್ಥಗಿತಗೊಂಡಿವೆ. ₹32,000 ಕೋಟಿ ಘೋಷಣೆ ಮಾಡುವ ಸರ್ಕಾರದ ಬಳಿ ₹32 ಕೊಡಲೂ ಹಣವಿಲ್ಲ ಎಂದು ಸ್ವತಃ ಹಣಕಾಸು ಸಚಿವಾಲಯವೇ ಸುತ್ತೋಲೆ ಹೊರಡಿಸಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ₹30,000 ಕೋಟಿಗೂ ಅಧಿಕ ಅನುದಾನ ನೀಡಲಾಗಿತ್ತು. ಆದರೆ ಈಗಿನ ಸರ್ಕಾರ ಕೇವಲ ಪ್ರಚಾರಕ್ಕಾಗಿ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ ಜಿಲ್ಲೆಗೆ ನಯಾಪೈಸೆ ಪ್ರಯೋಜನ ನೀಡಿಲ್ಲ ಎಂದು ಟೀಕಿಸಿದರು.

. . . . . . .

ಮುಖ್ಯಾಧಿಕಾರಿಗಳ ಮೂಲಕ ಮನವಿ:
ಸ್ಥಳೀಯಾಡಳಿತ ಸಂಸ್ಥೆಗಳಿಗೆ ತಕ್ಷಣ ಚುನಾವಣೆ ನಡೆಸಿ ಅನುದಾನ ಬಿಡುಗಡೆ ಮಾಡಬೇಕು, ಮರಳು-ಕೆಂಪುಕಲ್ಲು ಸಾಗಾಣಿಕೆ ನಿಯಮ ಸಡಿಲಿಸಬೇಕು, ಬಿಪಿಎಲ್ ಕಾರ್ಡ್ ವಿತರಣೆ ಪುನರಾರಂಭಿಸಬೇಕು ಹಾಗೂ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಬಳಿಕ ನಗರ ಪಂಚಾಯತ್ ಮುಖ್ಯಾಧಿಕಾರಿಗಳ ಮೂಲಕ ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ್, ವಿನಯಕುಮಾರ್ ಕಂದಡ್ಕ, ನಾರಾಯಣ ಎಸ್.ಎಂ., ಯುವಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಸ್.ಎಂ. ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading