ಅ.02ರಂದು ಗಾಂಧಿ ಚಿಂತನ ವೇದಿಕೆಯಿಂದ ಗಾಂಧಿ ನಡಿಗೆ, ಗಾಂಧಿ ಚಿಂತನ | ಡಾ. ಯು.ಪಿ. ಶಿವಾನಂದರಿಗೆ ರಾಜ್ಯಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿ

ಗಾಂಧಿ ಚಿಂತನ ವೇದಿಕೆ ಸುಳ್ಯ ಇದರ ವತಿಯಿಂದ ಅಕ್ಟೋಬರ್ 02ರಂದು ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ನಡಿಗೆ ಹಾಗೂ ಗಾಂಧಿ ಚಿಂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ವೇದಿಕೆಯ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿಯನ್ನು ಈ ಬಾರಿ ಸುದ್ದಿ ಸಮೂಹ ಸಂಸ್ಥೆಯ ಮಾಲಕ, ವೈದ್ಯ, ಪತ್ರಕರ್ತ, ಗಾಂಧಿವಾದಿ ಹಾಗೂ ಹೋರಾಟಗಾರ ಡಾ. ಯು.ಪಿ. ಶಿವಾನಂದ ಅವರಿಗೆ ನೀಡಿ ಗೌರವಿಸಲು ನಿರ್ಧರಿಸಲಾಗಿದೆ ಎಂದು ಗಾಂಧಿ ಚಿಂತನ ವೇದಿಕೆಯ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ತಿಳಿಸಿದರು.

. . . . . . . . .

ಅವರು ಸೆ.19ರಂದು ಸುಳ್ಯದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಂತನ ವೇದಿಕೆ ಕಳೆದ 26 ವರ್ಷಗಳಿಂದ ಗಾಂಧೀಜಿಯವರ ತತ್ವ, ಚಿಂತನೆ ಹಾಗೂ ಆದರ್ಶಗಳ ಆಧಾರದಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಗಾಂಧಿ ನಡಿಗೆಯನ್ನೂ ಪ್ರತಿವರ್ಷ ಸಂಘಟಿಸಲಾಗುತ್ತಿದೆ. ವೇದಿಕೆಯ 25ನೇ ವರ್ಷದ ಸಂದರ್ಭದಲ್ಲಿ ಕಳೆದ ವರ್ಷದಿಂದ ರಾಜ್ಯಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿ ನೀಡಲು ಆರಂಭಿಸಲಾಗಿದ್ದು, ಮೊದಲ ಪ್ರಶಸ್ತಿಯನ್ನು ಸಹಕಾರಿ ಧುರೀಣ ಕೆ. ಸೀತಾರಾಮ ರೈ ಸವಣೂರು ಅವರಿಗೆ ನೀಡಿ ಗೌರವಿಸಲಾಗಿತ್ತು. ಈ ಬಾರಿ ಡಾ. ಯು.ಪಿ. ಶಿವಾನಂದ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

. . . . . . .

ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಯು.ಪಿ. ಶಿವಾನಂದ ಅವರು ಕಳೆದ ನಾಲ್ಕೂವರೆ ದಶಕಗಳಿಂದ ಗಾಂಧಿ ಚಿಂತನೆಯ ಆಧಾರದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ, ಮಾಹಿತಿ ಕ್ರಾಂತಿ ಹಾಗೂ ಗ್ರಾಮೀಣ ಪತ್ರಿಕೋದ್ಯಮದ ಮೂಲಕ ಜನರಲ್ಲಿ ಗ್ರಾಮ ಸ್ವರಾಜ್ಯ, ರಾಜಕೀಯ ಪ್ರಜ್ಞೆ, ಶಿಕ್ಷಣ, ಸಾಹಿತ್ಯ ಹಾಗೂ ಆಧುನಿಕತೆಯ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಸಾವಿರಾರು ಜನಜಾಗೃತಿ ಬರಹಗಳು ಮತ್ತು ಭಾಷಣಗಳ ಮೂಲಕ ಕರಾವಳಿ ಭಾಗದ ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಬಲವಂತದ ಬಂದ್‌ಗಳ ವಿರುದ್ಧ ಜನಜಾಗೃತಿ ಮೂಡಿಸಿರುವ ಅವರು, ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧವೂ ಆಂದೋಲನ ನಡೆಸಿದ್ದಾರೆ. ಯುವಜನರಿಗೆ ಸ್ವಾವಲಂಬಿ ಬದುಕಿನ ಪ್ರೇರಣೆ ನೀಡುವುದರ ಜೊತೆಗೆ ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿ ಭಾಗಗಳಲ್ಲಿ ಹಲವು ಪತ್ರಕರ್ತರನ್ನು ಬೆಳೆಸುವ ಕಾರ್ಯ ಮಾಡಿದ್ದಾರೆ. ಗಾಂಧೀಜಿಯವರ ಆಶಯಗಳಿಗೆ ಪೂರಕವಾದ ಜನಜಾಗೃತಿ ಲೇಖನಗಳನ್ನು ನಿರಂತರವಾಗಿ ಬರೆಯುತ್ತಿದ್ದಾರೆ ಎಂದು ಹರೀಶ್ ಬಂಟ್ವಾಳ್ ಹೇಳಿದರು.

ಡಾ. ಯು.ಪಿ. ಶಿವಾನಂದ ಅವರ ಈ ಎಲ್ಲ ಕಾರ್ಯಗಳನ್ನು ಪರಿಗಣಿಸಿ ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಸಮಿತಿ ಸರ್ವಾನುಮತದಿಂದ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ₹10 ಸಾವಿರ ನಗದು, ಖಾದಿ ಶಾಲು, ಖಾದಿ ಹಾರ, ಗಾಂಧಿ ಟೋಪಿ, ಪ್ರಶಸ್ತಿ ಫಲಕ ಹಾಗೂ ಫಲಪುಷ್ಪ ಕಾಣಿಕೆಯನ್ನು ಒಳಗೊಂಡ ಪ್ರಶಸ್ತಿಯನ್ನು ಅ.02ರಂದು ಅಪರಾಹ್ನ ಸುಳ್ಯದ ರಂಗಮಯೂರಿಯಲ್ಲಿ ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.

ಇದಕ್ಕೂ ಮುನ್ನ ಗಾಂಧಿನಗರದಲ್ಲಿ ಗಾಂಧಿ ಚಿಂತನ ವೇದಿಕೆಯ ಸಹಭಾಗಿತ್ವದಲ್ಲಿ ಸ್ಥಾಪಿಸಲಾದ ಮಹಾತ್ಮ ಗಾಂಧಿ ಪ್ರತಿಮೆಯ ಬಳಿಯಿಂದ ರಂಗಮಯೂರಿಯವರೆಗೆ ಗಾಂಧಿ ನಡಿಗೆ ನಡೆಯಲಿದೆ.ವೇದಿಕೆಯ ನಿಯಮದಂತೆ ನಡೆಯುವ ಸರಳ ಸಮಾರಂಭದಲ್ಲಿ ಕಳೆದ ಸಾಲಿನ ಗಾಂಧಿ ಸ್ಮೃತಿ ಪ್ರಶಸ್ತಿ ಪುರಸ್ಕೃತ ಕೆ. ಸೀತಾರಾಮ ರೈ ಅವರು ಡಾ. ಯು.ಪಿ. ಶಿವಾನಂದ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವೇದಿಕೆಯ ಸ್ಥಾಪಕ ಸಂಚಾಲಕ ಡಾ. ಸುಂದರ ಕೇನಾಜೆ ಅವರು ಗಾಂಧಿ ಚಿಂತನ ನಡೆಸಿಕೊಡಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಸೂಡ ಅಧ್ಯಕ್ಷ ಕೆ.ಎಂ. ಮುಸ್ತಾಫ ಸೇರಿದಂತೆ ತಾಲೂಕಿನ ಹಲವು ಪ್ರಮುಖರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಮಡಪ್ಪಾಡಿ, ಚಂದ್ರಶೇಖರ ಪೇರಾಲು, ಶಂಕರ ಪೆರಾಜೆ, ಚಂದ್ರಾವತಿ ಬಡ್ಡಡ್ಕ ಹಾಗೂ ದುರ್ಗಕುಮಾರ್ ನಾಯರ್‌ಕೆರೆ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading