ಸುಬ್ರಹ್ಮಣ್ಯದಲ್ಲಿ 24*7 ವೈದ್ಯಕೀಯ ಸೇವೆಗಾಗಿ ಪತ್ರ ಚಳುವಳಿಗೆ ಸಿದ್ಧತೆ

ಸುಬ್ರಹ್ಮಣ್ಯ ಆಗಸ್ಟ್ 20 : ಸುಬ್ರಹ್ಮಣ್ಯದಲ್ಲಿ 24 ಗಂಟೆಯೂ ನುರಿತ ವೈದ್ಯರು ಹಾಗೂ ಅಗತ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಇದೀಗ ಮತ್ತಷ್ಟು ಬಲಗೊಂಡಿದೆ. ಸುಬ್ರಹ್ಮಣ್ಯದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ 24*7 ಚಿಕಿತ್ಸಾ ಸೌಲಭ್ಯಕ್ಕಾಗಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಗ್ಗೂಡಿ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನ ಕುಮಾರಧಾರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸುಮಾರು 50 ಮಂದಿ ಭಾಗವಹಿಸಿದ್ದರು. ಸಭೆಯಲ್ಲಿ ಯಾವುದೇ ಗಲಾಟೆ ಅಥವಾ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಪ್ರಜಾಸತ್ತಾತ್ಮಕ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯಲು ಸೆಪ್ಟೆಂಬರ್ 2ರಂದು 1000 ಪತ್ರಗಳ ಚಳುವಳಿ ನಡೆಸಲು ನಿರ್ಧರಿಸಲಾಯಿತು. 

. . . . . . . . .

ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತುರ್ತು ಸಂದರ್ಭದಲ್ಲಿ ನುರಿತ ವೈದ್ಯರ ಸೇವೆ ಲಭ್ಯವಾಗದಿರುವುದರಿಂದ ಎದುರಾಗುತ್ತಿರುವ ಸಮಸ್ಯೆಗಳನ್ನು ಪತ್ರದ ಮೂಲಕ ನೇರವಾಗಿ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲು ಈ ಪತ್ರ ಚಳುವಳಿ ನಡೆಸಲಾಗುತ್ತಿದೆ. ಇದು ಕೇವಲ ಕೆಲವೇ ವ್ಯಕ್ತಿಗಳ ವೈಯಕ್ತಿಕ ಬೇಡಿಕೆಯಲ್ಲ. ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರತಿಯೊಬ್ಬ ಸಾರ್ವಜನಿಕರ ಆರೋಗ್ಯದ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ ಎಂದು ಹೋರಾಟ ಸಮಿತಿ ತಿಳಿಸಿದೆ. ಸುಬ್ರಹ್ಮಣ್ಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವುದರಿಂದ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ 24 ಗಂಟೆಯೂ ನುರಿತ ವೈದ್ಯರು ಮತ್ತು ಅಗತ್ಯ ಚಿಕಿತ್ಸಾ ಸೌಲಭ್ಯ ಇರಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ.

. . . . . . .

ಈ ಹೋರಾಟಕ್ಕೆ ಸುಬ್ರಹ್ಮಣ್ಯದ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿದ್ದು, ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಏನೆಕಲ್ಲು, ಐನೆಕಿದು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಪುಟ್ಟ ಸಮಿತಿಗಳನ್ನು ರಚಿಸಲಾಗಿದೆ. ಸೆಪ್ಟೆಂಬರ್ 02ರಂದು ನಡೆಯಲಿರುವ ಪತ್ರ ಚಳುವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ, ತಮ್ಮ ಪತ್ರದ ಮೂಲಕ ಸುಬ್ರಹ್ಮಣ್ಯದ ಆರೋಗ್ಯ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವಂತೆ ಹೋರಾಟ ಸಮಿತಿ ಮನವಿ ಮಾಡಿದೆ.

ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ. ಸುಬ್ರಹ್ಮಣ್ಯದಲ್ಲಿ 24/7 ನುರಿತ ವೈದ್ಯರ ನೇಮಕವಾಗಬೇಕು. ಆರೋಗ್ಯದ ಸಮಸ್ಯೆ ಯಾರಿಗಾದರೂ, ಯಾವ ಸಮಯದಲ್ಲಾದರೂ ಎದುರಾಗಬಹುದು. ಆದ್ದರಿಂದ ವೈಯಕ್ತಿಕ ಹಿತಾಸಕ್ತಿಗಿಂತ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಈ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಸಮಿತಿ ಮನವಿ ಮಾಡಿದೆ. ಸೆಪ್ಟೆಂಬರ್ 2ರಂದು ನಡೆಯಲಿರುವ 1,000 ಪತ್ರಗಳ ಚಳುವಳಿಗೆ ಸುಬ್ರಹ್ಮಣ್ಯದ ಜನತೆ ಹೇಗೆ ಸ್ಪಂದಿಸುತ್ತಾರೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಈ ಸಂದರ್ಭದಲ್ಲಿ 24*7 ಆಸ್ಪತ್ರೆ ಹೋರಾಟ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ ಅತ್ಯಾಡಿ, ಪತ್ರ ಚಳುವಳಿ ಅಧ್ಯಕ್ಷ ಡಾ. ರವಿ ಕಕ್ಕೆಪದವು, ಶಿವರಾಮ್ ರೈ, ಗೋಪಾಲ್ ಎಣ್ಣೆಮಜಲು, ವೆಂಕಟೇಶ್ ಎಚ್.ಎಲ್., ವಿಮಲಾ ರಂಗಯ್ಯ, ಅಚ್ಚುತ ಗೌಡ, ಪವನ್ ಎಂ.ಡಿ., ಮಾಧವ ದೇವರಗದ್ದೆ, ಈಶ್ವರ ಆರಂಬಾಡಿ, ಗಿರಿಧರ ಸ್ಕಂದ, ರವೀಂದ್ರ, ಮೋಹನದಾಸ ರೈ, ಉಮೇಶ್ ಹೊಸಳ್ಳಿ, ಗುಣವರ್ಧನ ಕೆದಿಲ, ಗಿರೀಶ್ ಆಚಾರ್ಯ, ಸುಜಾತ ಕಲ್ಲಾಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading