ತೋಟಗಾರಿಕೆ ಇಲಾಖೆ ಪ್ರಕಟಣೆ : ಕೃಷಿ ಯಂತ್ರೋಪಕರಣ ಹಾಗೂ ರೋಗನಾಶಕ ಖರೀದಿಗೆ ಸಹಾಯಧನ – ಅರ್ಜಿ ಸಲ್ಲಿಸಲು ಆ.07 ಕೊನೆಯ ದಿನಾಂಕ

ತೋಟಗಾರಿಕೆ ಇಲಾಖೆಯಲ್ಲಿ ಕೃಷಿಕರಿಗೆ ಸಿಗುವಂತಹ ವಿವಿಧ ಸವಲತ್ತುಗಳ ಕುರಿತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, 2026-27ನೇ ಸಾಲಿನಲ್ಲಿ ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳಾದ ಪ್ರೋಪಿಕೋನಜಾಲ್, ಟ್ಯುಬಿಕೊನಾಜಾಲ್, ಪ್ರೋಪಿನೆಬ್, ಕಾರ್ಬನ್ ಡೈಜಿಮ್ + ಮ್ಯಾಂಕೇಜೆಬ್, ಕಾಪರ್ ಸಲ್ಫೇಟ್(ಮೈಲುತುತ್ತು) ಖರೀದಿಗೆ ಶೇಕಡಾ 30 ರಂತೆ ಪ್ರತೀ ಎಕರೆಗೆ 600 ರೂಪಾಯಿ ಸಹಾಯಧನ ಲಭ್ಯವಿದೆ. ಪ್ರತೀ ರೈತರಿಗೆ 5 ಎಕರೆಗೆ ಗರಿಷ್ಠ 3,000 ರೂಪಾಯಿ ಸಹಾಯಧನ ನೀಡಲಾಗುವುದು. ರೈತರು ಅರ್ಜಿಯೊಂದಿಗೆ ಅಧಿಕೃತ ಕೀಟನಾಶಕ ಮಾರಾಟ ಪರವಾನಿಗೆ ಇರುವ ಮಾರಾಟಗಾರರಿಂದ ಮೇಲಿನ ಸಸ್ಯ ಸಂರಕ್ಷಣಾ ಔಷಧಿ ಖರೀದಿಸಿ GST ಬಿಲ್, ಪಹಣಿ ಪತ್ರ(RTC), ಜಂಟಿ ಖಾತೆ ಹೊಂದಿದ್ದಲ್ಲಿ ಉಳಿಕೆದಾರರಿಂದ ಒಪ್ಪಿಗೆ/GPA ಪತ್ರ, ಆಧಾರ್ ಮತ್ತು ಬ್ಯಾಂಕ್ ಖಾತೆ, FID ನಂಬರ್ ವಿವರಗಳನ್ನು ದಿನಾಂಕ 07-08-2026 ರೊಳಗೆ ತೋಟಗಾರಿಕೆ ಇಲಾಖೆಗೆ ಸಲ್ಲಿಸಲು ಕೋರಲಾಗಿದೆ.
ಅದೇ ರೀತಿ 2026-27ನೇ ಸಾಲಿನ SMAM ಯೋಜನೆಯಡಿ ಮದ್ದು ಸಿಂಪಡಿಸುವ ಯಂತ್ರ, ಮರ ಕತ್ತರಿಸುವ ಯಂತ್ರ, ಕಳೆ ಕತ್ತರಿಸುವ ಯಂತ್ರ, ಏಣಿ, ಕೈಗಾಡಿ, ಕಾಳುಮೆಣಸು ಗೆರೆ ಬಿಡಿಸುವ ಯಂತ್ರ, ಅಡಿಕೆ ಸುಲಿಯುವ ಯಂತ್ರ ಸೇರಿದಂತೆ ಇತ್ಯಾದಿ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು L1 rate ನ ಶೇಕಡಾ 40 ರಂತೆ ಸಾಮಾನ್ಯ ರೈತರಿಗೆ ಹಾಗೂ ಮಹಿಳೆ/ಸಣ್ಣ/ಅತಿಸಣ್ಣ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ರೈತರಿಗೆ ಶೇಕಡಾ 50ರಂತೆ ಸಹಾಯಧನ ಲಭ್ಯವಿದ್ದು, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಸುಳ್ಯ ಕಛೇರಿಗೆ ದಿನಾಂಕ 07-08-2026 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಪರಿಶೀಲಿಸಿ ಕಾರ್ಯಾದೇಶ ನೀಡಿದ ನಂತರ ರೈತರು ಅನುಮೋದಿತ/ಎಂಪ್ಯಾನಲ್ ಸಂಸ್ಥೆಗಳಿಂದ ಖರೀದಿ ಮಾಡಲು ಪೂರ್ಣ ಮೊತ್ತವನ್ನು NEFT/RTGS ಮುಖಾಂತರ ಸಂಸ್ಥೆಗೆ ಪಾವತಿಸಿದ ರಶೀದಿ ಹಾಗೂ ಸಂಬಂಧಪಟ್ಟ ಕಂಪೆನಿ/ಸಂಸ್ಥೆಯಿಂದ ಹಣ ಪಾವತಿಸಿದ ಬಗ್ಗೆ ದೃಢೀಕರಣದೊಂದಿಗೆ ಕಾರ್ಯಾದೇಶ ನಂತರದ ದಿನಾಂಕದ ಖರೀದಿ ಬಿಲ್ ಪಡೆದು ಈ ಕೆಳಗಿನ ದಾಖಲಾತಿಗಳೊಂದಿಗೆ ನೀಡಬೇಕು.
ಅರ್ಜಿಯೊಂದಿಗೆ ಲಗತ್ತಿಸಬೇಕಾದ ವಿವರಗಳು ಈ ಕೆಳಗಿನಂತಿವೆ
1) FID ನಂಬರ್
2) ಚಾಲ್ತಿಯಲ್ಲಿರುವ ಅರ್ಜಿದಾರರ ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್
3) ಸಣ್ಣ/ಅತಿಸಣ್ಣ ರೈತ ಪ್ರಮಾಣಪತ್ರ ತಹಶೀಲ್ದಾರರಿಂದ
4) ಆಧಾರ್ ಕಾರ್ಡ್ ಜೆರಾಕ್ಸ್
5) ಜಾತಿ ಪ್ರಮಾಣ ಪತ್ರ(ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ)
6) ಆರ್.ಟಿ.ಸಿ(ಜಂಟಿ ಖಾತೆ ಹೊಂದಿದ್ದಲ್ಲಿ ಉಳಿಕೆದಾರರಿಂದ ಒಪ್ಪಿಗೆ/GPA ಪತ್ರ) ಸಲ್ಲಿಸತಕ್ಕದ್ದು ಎಂದು ತೋಟಗಾರಿಕೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading