“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ ಮೇ.25 ರಿಂದ ಶನಿವಾರ ಮೇ.30 ರವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಒಂದು ಸಮಗ್ರ ನೋಟ – ರಬ್ಬರ್-ಕಾಳುಮೆಣಸು ಭರ್ಜರಿ ಜಿಗಿತ ; ಕೊಬ್ಬರಿ ಬೆಲೆಯಲ್ಲಿ ಭಾರಿ ಕುಸಿತ, ಅಡಿಕೆ ಸಂಪೂರ್ಣ ಸ್ಥಿರ..!

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತೀದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ದಿನನಿತ್ಯದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಮೇ.25 ಸೋಮವಾರದಿಂದ ಮೇ.30 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳೇನು…!? ಎಂಬುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯಲ್ಲಿ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ…

ಮೊದಲಿಗೆ ನಾವು ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ಗಮನಿಸುತ್ತಾ ಹೋಗುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಮೇ.25 ಸೋಮವಾರದಂದು ಹೊಸ ಅಡಿಕೆ ಕನಿಷ್ಠ 415 ರಿಂದ ಗರಿಷ್ಠ 450 ರೂಪಾಯಿ, ಹಳೆ ಅಡಿಕೆ ಕನಿಷ್ಠ 430 ರಿಂದ ಗರಿಷ್ಠ 535 ರೂಪಾಯಿ, ಡಬಲ್ ಚೋಲ್ ಕನಿಷ್ಠ 430 ರಿಂದ ಗರಿಷ್ಠ 535 ರೂಪಾಯಿ, ಫಟೋರಾ ಕನಿಷ್ಠ 340 ರಿಂದ ಗರಿಷ್ಠ 390 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 270 ರಿಂದ ಗರಿಷ್ಠ 290 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 255 ರಿಂದ ಗರಿಷ್ಠ 285 ರೂಪಾಯಿ ಇತ್ತು. ಮೇ.26 ಮಂಗಳವಾರದಂದು, ಮೇ.27 ಬುಧವಾರದಂದು, ಮೇ.28 ಗುರುವಾರದಂದು, ಮೇ.29 ಶುಕ್ರವಾರದಂದು ಹಾಗೂ ಮೇ.30 ಶನಿವಾರದಂದು ಕೂಡ ಹೊಸ ಅಡಿಕೆ, ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಸೇರಿದಂತೆ ಅಡಿಕೆಯ ಎಲ್ಲಾ ಉಪ ಉತ್ಪನ್ನಗಳ ಧಾರಣೆಗಳು ಕೂಡ ಯಾವುದೇ ಏರಿಳಿತವಿಲ್ಲದೇ ಮೇ.25ರ ಮಟ್ಟದಲ್ಲೇ ಮುಂದುವರಿದಿದ್ದು, ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯು ವಾರಪೂರ್ತಿ ಈ ವಾರದ ಪ್ರಾರಂಭಿಕ ಧಾರಣೆಯಲ್ಲೇ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿತ್ತು.

ಇನ್ನು ಇತರ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳನ್ನು ನೋಡುತ್ತಾ ಹೋಗುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಮೇ.25 ಸೋಮವಾರದಂದು ಕಾಳುಮೆಣಸು ಕನಿಷ್ಠ 575 ರಿಂದ ಗರಿಷ್ಠ 670 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 75 ರಿಂದ ಗರಿಷ್ಠ 105 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 130 ರಿಂದ ಗರಿಷ್ಠ 152 ರೂಪಾಯಿ ಇತ್ತು. ಮೇ.26 ಮಂಗಳವಾರದಂದು ಕಾಳುಮೆಣಸಿನ ಧಾರಣೆಯಲ್ಲಿ 5 ರೂಪಾಯಿಗಳಷ್ಟು ಏರಿಕೆ ಕಂಡುಬಂದಿದ್ದು, ಕೊಬ್ಬರಿ ಮತ್ತು ಕೊಕ್ಕೋ ಧಾರಣೆಗಳು ಮೇ.25ರ ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಮೇ.27 ಬುಧವಾರದಂದು ಕಾಳುಮೆಣಸು ಧಾರಣೆಯಲ್ಲಿ ಮತ್ತೆ 5 ರೂಪಾಯಿಗಳಷ್ಟು ಏರಿಕೆ ಕಾಣುವ ಮೂಲಕ ಸತತ ಎರಡನೇ ದಿನವೂ ಚೇತರಿಕೆ ಕಂಡುಬಂದಿದ್ದು, ಉಳಿದಂತೆ ಕೊಬ್ಬರಿ ಹಾಗೂ ಕೊಕ್ಕೋ ದರಗಳು ಮೇ.26ರ ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಮೇ.28 ಗುರುವಾರದಂದು ಕೊಬ್ಬರಿ ಧಾರಣೆಯಲ್ಲಿ ಬಾರೀ ಕುಸಿತ ಕಂಡುಬಂದಿದ್ದು, ಪ್ರತೀ ಕೆಜಿಗೆ ಗರಿಷ್ಠ 7 ರೂಪಾಯಿಗಳಷ್ಟು ಇಳಿಕೆ ದಾಖಲಾಗಿತ್ತು. ಆದರೆ ಕಾಳುಮೆಣಸು ಹಾಗೂ ಕೊಕ್ಕೋ ಧಾರಣೆಗಳು ಮೇ.27ರ ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಮೇ.29 ಶುಕ್ರವಾರದಂದು ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳು ಮೇ.28ರ ಮಟ್ಟದಲ್ಲೇ ಮುಂದುವರಿದಿದ್ದು, ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡುಬಂದಿದ್ದು, ಮೇ.28ರಂದು ಬಾರೀ ಕುಸಿತ ಕಂಡಿದ್ದ ಕೊಬ್ಬರಿ ಧಾರಣೆ ಮೇ.29ರಂದು ಮತ್ತೆ ಕುಸಿತ ಕಾಣದೇ ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ವಾರದ ಕೊನೆಯ ದಿನವಾದ ಮೇ.30 ಶನಿವಾರದಂದು ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಯಾವುದೇ ಬದಲಾವಣೆಯಿಲ್ಲದೇ ಮೇ.29ರ ದರದಲ್ಲೇ ಮುಂದುವರಿದಿದ್ದು, ಅಂತಿಮವಾಗಿ ವಾರದ ಕೊನೆಯಲ್ಲಿ ಕಾಳುಮೆಣಸು ಕನಿಷ್ಠ 585 ರಿಂದ 680 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 75 ರಿಂದ ಗರಿಷ್ಠ 105 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 125 ರಿಂದ ಗರಿಷ್ಠ 145 ರೂಪಾಯಿಗಳಿಗೆ ಬಂದು ನಿಂತಿದ್ದವು.

ಇನ್ನು ಕೊನೆಯದಾಗಿ ಈ ವಾರದ ರಬ್ಬರ್ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ಗಮನಿಸುತ್ತಾ ಹೋಗುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಮೇ.25 ಸೋಮವಾರದಂದು ಗ್ರೇಡ್ ರಬ್ಬರ್ 245 ರೂಪಾಯಿ, ಲಾಟ್ ರಬ್ಬರ್ 204 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 142 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 133 ರೂಪಾಯಿ ಇತ್ತು. ಮೇ.26 ಮಂಗಳವಾರದಂದು, ಮೇ.27 ಬುಧವಾರದಂದು ಹಾಗೂ ಮೇ.28 ಗುರುವಾರದಂದು ಕೂಡ ರಬ್ಬರ್ ಧಾರಣೆಯಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ಎಲ್ಲಾ ವಿಧದ ರಬ್ಬರ್ ಧಾರಣೆಗಳೂ ಮೇ.25ರ ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಆದರೆ ಮೇ.29 ಶುಕ್ರವಾರದಂದು ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದು, ವಾರಪೂರ್ತಿ ಸತತವಾಗಿ ಸ್ಥಿರವಾಗಿದ್ದ ರಬ್ಬರ್ ಧಾರಣೆ ಶುಕ್ರವಾರದಂದು ಗಣನೀಯವಾಗಿ ಹೆಚ್ಚಳವಾಗಿದ್ದು, ಗ್ರೇಡ್ 5.5 ರೂಪಾಯಿ, ಲಾಟ್ 3.5 ರೂಪಾಯಿ ಹಾಗೂ ಸ್ಕ್ರ್ಯಾಪ್ ಎರಡು ವಿಭಾಗಗಳಲ್ಲೂ ತಲಾ 1 ರೂಪಾಯಿ ಏರಿಕೆ ಕಂಡುಬಂದಿತ್ತು. ಇನ್ನು ವಾರದ ಕೊನೆಯ ದಿನವಾದ ಮೇ.30 ಶನಿವಾರದಂದು ಕೂಡ ರಬ್ಬರ್ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಎಲ್ಲಾ ವಿಭಾಗಗಳಲ್ಲೂ ಪ್ರತೀ ಕೆಜಿಗೆ ನಿಖರವಾಗಿ ತಲಾ 1 ರೂಪಾಯಿಗಳಷ್ಟು ಹೆಚ್ಚಳ ದಾಖಲಾಗಿತ್ತು. ಅಂತಿಮವಾಗಿ ವಾರದ ಕೊನೆಯಲ್ಲಿ ಗ್ರೇಡ್ ರಬ್ಬರ್ 251.50 ರೂಪಾಯಿ, ಲಾಟ್ ರಬ್ಬರ್ 208.50 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 144 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 135 ರೂಪಾಯಿಗಳಿಗೆ ಬಂದು ತಲುಪಿತ್ತು.

ಒಟ್ಟಿನಲ್ಲಿ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆಯು ತನ್ನ ಎಲ್ಲಾ ವಿಭಾಗಗಳಲ್ಲೂ ವಾರಪೂರ್ತಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೆ, ಕಾಳುಮೆಣಸು ಕೆಜಿಗೆ 10 ರೂಪಾಯಿಗಳಷ್ಟು ಏರಿಕೆ ಕಂಡುಬಂದಿತ್ತು. ಕೊಕ್ಕೋ ತನ್ನ ಎರಡು ವಿಭಾಗಗಳಲ್ಲೂ ವಾರಪೂರ್ತಿ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೆ, ಕೊಬ್ಬರಿ ಧಾರಣೆಯು ಕೆಜಿಗೆ ಸುಮಾರು 7 ರೂಪಾಯಿಗಳಷ್ಟು ಭಾರೀ ಕುಸಿತ ಕಂಡಿತ್ತು. ಇನ್ನು ರಬ್ಬರ್ ವಾರಪೂರ್ತಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೂ ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ನಿರಂತರವಾಗಿ ಏರಿಕೆಯ ಹಾದಿಯಲ್ಲಿ ಸಾಗಿ ಭರ್ಜರಿ ಏರಿಕೆ ಕಂಡಿತ್ತು… ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ) ಇವರಿಂದ ಪಡೆದುಕೊಂಡ ಕಳೆದ ವಾರದ(ಮೇ.25 ರಿಂದ ಮೇ.30) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತೀದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading