ಎನ್ನೆಂಸಿಯಲ್ಲಿ ಯುವ ರೆಡ್ ಕ್ರಾಸ್ ದಿನಾಚರಣೆ – “ಸ್ವಚ್ಛತೆ-ಆರೋಗ್ಯ-ರಕ್ಷಣೆ-ಬದುಕು” ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ಆಯೋಜನೆ ; ಕಾಲೇಜಿನ ಸ್ವಚ್ಛತಾ-ರಕ್ಷಣಾ ಸಿಬ್ಬಂದಿಗಳಿಗೆ ಗೌರವಾರ್ಪಣೆ

ಸುವರ್ಣ ಸಂಭ್ರಮದ ಹೊಸ್ತಿಲಲ್ಲಿರುವ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ರೆಡ್ ಕ್ರಾಸ್ ದಿನಾಚರಣೆಯನ್ನು ಮೇ 08ರಂದು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಯಿತು. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಂಡ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮವನ್ನು “ಸ್ವಚ್ಛತೆ-ಆರೋಗ್ಯ-ರಕ್ಷಣೆ-ಬದುಕು” ಎಂಬ ಶೀರ್ಷಿಕೆಯಡಿಯಲ್ಲಿ ಮಾಹಿತಿ ಹಾಗೂ ಗೌರವಾರ್ಪಣೆ ಕಾರ್ಯಕ್ರಮದೊಂದಿಗೆ ನಡೆಸಲಾಯಿತು. ಕಾಲೇಜಿನ ರಕ್ಷಣಾ ಹಾಗೂ ಸ್ವಚ್ಛತಾ ಸಿಬ್ಬಂದಿಗಳಾದ ಭಾಗ್ಯನಂದ ಎಂ.ಆರ್, ಸೀತಾರಾಮ ರಾವ್.ಕೆ, ಶ್ರೀಮತಿ ಶಾರದಾ ಪಿ.ಕೆ, ಶ್ರೀಮತಿ ದಮಯಂತಿ.ಕೆ, ಶ್ರೀಮತಿ ಗೀತಾ ಎಂ.ಆರ್ ಇವರನ್ನು ರೆಡ್ ಕ್ರಾಸ್ ವತಿಯಿಂದ ಗೌರವಿಸಲಾಯಿತು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ರುದ್ರಕುಮಾರ್ ಎಂ.ಎಂ ಮಾತನಾಡಿ, “ಯುವ ರೆಡ್ ಕ್ರಾಸ್ ವತಿಯಿಂದ ಇಂದು ರಕ್ಷಣಾ ಹಾಗೂ ಸ್ವಚ್ಛತಾ ಸಿಬ್ಬಂದಿಗಳನ್ನು ಗೌರವಿಸಿದುದು ಭವ್ಯವಾದ ಕ್ಷಣ ಹಾಗೂ ಉತ್ತಮವಾದ ಕಾರ್ಯಕ್ರಮ ಎಂದು ಶ್ಲಾಘಿಸಿ, ರೆಡ್ ಕ್ರಾಸ್‌ನ ಧ್ಯೇಯೋದ್ದೇಶಗಳನ್ನು ಅರಿತುಕೊಂಡು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ” ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಾಯಿಗೀತಾ ಜ್ಞಾನೇಶ್ ಮಾತನಾಡಿ “ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಸಮಾಜಕ್ಕೆ ಸಹಾಯಕವಾಗುವ ರೀತಿಯಲ್ಲಿ ಕರ್ತವ್ಯದಲ್ಲಿ ತೊಡಗಿಸಿಕೊಂಡಾಗ ರೆಡ್ ಕ್ರಾಸ್ ಸಂಸ್ಥೆಯ ಹುಟ್ಟು ಸಾರ್ಥಕವಾಗುತ್ತದೆ ಎನ್ನುತ್ತಾ ಗೌರವಾರ್ಪಣೆ ಸ್ವೀಕರಿಸಿದವರನ್ನು ಶುಭ ಹಾರೈಸಿ, ಕರ್ತವ್ಯ ಮಾಡಿದವರನ್ನು ಗುರುತಿಸಿದಾಗ ಅವರ ಮನಸ್ಸಿಗೆ ಸಂತೋಷವಾಗುತ್ತದೆ ಮತ್ತು ಕರ್ತವ್ಯದಲ್ಲಿ ತಮ್ಮನ್ನು ನೆಮ್ಮದಿಯಿಂದ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ” ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲ್ ಮಾತನಾಡಿ, “ಜಗತ್ತಿನಲ್ಲಿ ಇಂದು ಅದೆಷ್ಟು ಕ್ರೌರ್ಯಗಳು, ಹಿಂಸೆಗಳು ನಡೆಯುತ್ತಿದ್ದರೂ ಅದರ ವಿರುದ್ಧವಾಗಿ ನಿಲ್ಲುವ ಮನಸ್ಸುಗಳು ಇವೆ ಎಂಬುದು ಇಂತಹ ರೆಡ್ ಕ್ರಾಸ್ ಸಂಸ್ಥೆಗಳ ಮೂಲಕ ತಿಳಿಯಲು ಸಾಧ್ಯ ಎನ್ನುತ್ತಾ ಗೌರವಾರ್ಪಣೆ ಸ್ವೀಕರಿಸಿದವರನ್ನು ಅಭಿನಂದಿಸಿ, ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಸಿಬ್ಬಂದಿಗಳನ್ನು ಸನ್ಮಾನಿಸಿದುದು ಶ್ಲಾಘನೀಯ, ದೇಶದ ಕಟ್ಟಕಡೆಯ ವ್ಯಕ್ತಿಯು ಕೂಡ ಸನ್ಮಾನಿತನಾದಾಗ ಮಾತ್ರ ದೇಶಕ್ಕೊಂದು ಗೌರವ, ಒಳ್ಳೆಯ ಕೆಲಸಗಳನ್ನು ಸ್ಲಾಘಿಸಿದಾಗ ಉತ್ತಮ ವಾತಾವರಣ ನಿರ್ಮಾಣ ಸಾಧ್ಯ” ಎಂದರು. ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ, ಐಕ್ಯೂಎಸಿ ಸಂಯೋಜಕಿ ಡಾ. ಮಮತಾ.ಕೆ, ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಸದಸ್ಯರಾದ ಹವ್ಯಾ, ಭೂಮಿಕಾ ರೈ.ಸಿ, ಧೃತಿ.ಎಂ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಸಿಂಚನ.ಎನ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕಿ, ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಿಂಚನ ಎ.ಪಿ ವಂದಿಸಿದರು. ಕಲ್ಪಿತ.ಎಂ ಮತ್ತು ದೀಪ.ಕೆ ಕಾರ್ಯಕ್ರಮ ನಿರೂಪಿಸಿದರು. ಯುವ ರೆಡ್ ಕ್ರಾಸ್ ಸದಸ್ಯರು, ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಕಾಲೇಜಿನ ಬೋಧಕ – ಬೋಧಕೇತರ ವೃಂದದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading