ಭಕ್ತಿ, ಪರಂಪರೆ ಮತ್ತು ತ್ಯಾಗದ ಸಂಕೇತ ; ಮಂಡೆಕೋಲು ಉಳ್ಳಾಕುಲು ನೇಮ ಮತ್ತು ಅಡ್ಡಣ ಪೆಟ್ಟು

✍️ ಸುಶ್ಮಿತಾ ಉಗ್ರಾಣಿಮನೆ

. . . . . . . . .

ಕರಾವಳಿ ಭಾಗದ ಬೇರೆಲ್ಲೂ ಕಾಣ ಸಿಗದ ಹಳೆಯ ಸಂಪ್ರದಾಯಗಳನ್ನು ಪ್ರತಿನಿಧಿಸಿ ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ನೀಡುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ನೇಮೋತ್ಸವದಲ್ಲಿ ನಡೆಯುವ ಅತ್ಯಂತ ಅಪರೂಪದ ಆಚರಣೆಯೇ "ಉಳ್ಳಾಕುಲು ದೈವದ " ಅಡ್ಡಣಪೆಟ್ಟು .

. . . . . . .

ಹೌದು, ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವಿವಿಧ ಆಯಾಮಗಳ ಆಚರಣೆಗಳ ಇತಿಹಾಸದ ಐತಿಹ್ಯವನ್ನು ಹೊಂದಿದೆ. ತುಳುನಾಡಿನ ಇತಿಹಾಸದ ಪುಟಗಳನ್ನು ಅವಲೋಕಿಸುತ್ತ ಹೋದಾಗ ದೈವಗಳ ನೆಲೆಗಟ್ಟು ಇಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ತುಳುನಾಡಿನ ದೈವದ ವಿಶಿಷ್ಟ ರೀತಿಯ ಮೌಲ್ಯವರ್ಧಿತ ಆಚರಣೆಯಾಗಿರುವ ಬೇರೆಲ್ಲೂ ಕಾಣ ಸಿಗದ ಹಳೆಯ ಸಂಪ್ರದಾಯಗಳನ್ನು ಪ್ರತಿನಿಧಿಸಿ ಸಾಂಕೇತಿಕವಾಗಿ ನೇಮೋತ್ಸವದಲ್ಲಿ ನಡೆಯುವ ಅತ್ಯಂತ ಅಪರೂಪದ ಆಚರಣೆಯೇ ” ಉಳ್ಳಾಕುಲು ದೈವದ ಅಡ್ಡಣಪೆಟ್ಟು” ಈ ವಿಶಿಷ್ಟ ಸಂಪ್ರದಾಯಗಳನ್ನು ಹೊಂದಿರುವ ನಮ್ಮ ಗ್ರಾಮ ಮಂಡೆಕೋಲು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿದೆ.

ತುಳುನಾಡಿನ ಸಾಂಸ್ಕೃತಿಕ ಅರಸ ಉಳ್ಳಾಕುಲು ದೈವ ತುಳುನಾಡಿನ ಜನರ ಜೀವನ, ಇತಿಹಾಸ ಮತ್ತು ನಂಬಿಕೆಯೊಂದಿಗೆ ಬೆಸೆದುಕೊಂಡಿರುವ ಒಂದು ಸಾಂಸ್ಕೃತಿಕ ಪ್ರತೀಕವಾಗಿದೆ.

ಉಳ್ಳಾಕುಲು ದೈವದ ಮೂಲವನ್ನು ಅರಿಯಲು ತುಳುನಾಡಿನ ದೈವ ಪರಂಪರೆಯನ್ನು ಗಮನಿಸುತ್ತಾ ಹೋದರೆ, ಊರಿನ ರಕ್ಷಣೆ, ಅನ್ಯಾಯದ ವಿರುದ್ಧದ ಹೋರಾಟ ಮತ್ತು ಪ್ರಕೃತಿ ಶಕ್ತಿಯಿಂದ ಉದ್ಭವಿಸಿದೆ ಎಂದು ಉಲ್ಲೇಖಿಸಲಾಗಿದೆ.ಜನಪದ ಶೈಲಿಯಲ್ಲಿ ಹರಿದಾಡುವ ಕಥೆಗಳಲ್ಲಿ ಉಳ್ಳಾಕುಲು ದೈವದ ಮೂಲವನ್ನು ತಿಳಿಸುತ್ತಾ ಹೋದರೆ, ಕೆಲವು ಪಾಡ್ದನಗಳು ಮತ್ತು ಮಾತುಕತೆಗಳ ಪ್ರಕಾರ ಉಳ್ಳಾಕುಲು ದೈವವು ಒಬ್ಬ ಧೀರ ಮತ್ತು ಧರ್ಮನಿಷ್ಠ ವ್ಯಕ್ತಿಯ ಆತ್ಮಸ್ವರೂಪ . ಆ ವ್ಯಕ್ತಿ ತನ್ನ ಜೀವನದಲ್ಲಿ ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡಿ, ಗ್ರಾಮದ ಜನರ ರಕ್ಷಣೆಗೆ ತ್ಯಾಗ ಮಾಡಿದವನು. ಮುಂದೆ ಅವರನ್ನು ದೈವಸ್ವರೂಪಿಯಾಗಿ ಪೂಜಿಸಲು ಪ್ರಾರಂಭಿಸಿ ಕಾಲಕ್ರಮೇಣ ಈ ಆರಾಧನೆ ಒಂದು ಸಂಪ್ರದಾಯವಾಗಿ ರೂಪುಗೊಂಡು ಉಳ್ಳಾಕುಲು ದೈವವಾಗಿ ಪ್ರಸಿದ್ಧಿಯಾಯಿತು . ಉಳ್ಳಾಕುಲು ದೈವದ ಆರಾಧನೆ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಪ್ರಚಲಿತವಾಗಿದೆ. ನಮ್ಮ ಮಂಡೆಕೋಲು ಗ್ರಾಮದಂತಹ ಪ್ರದೇಶಗಳಲ್ಲಿ ಈ ದೈವದ ನೇಮೋತ್ಸವ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಿವೆ. ಪಾಡ್ದನಗಳಲ್ಲಿ ಉಳ್ಳಾಕುಳು ದೈವದ ಶೌರ್ಯ, ಧರ್ಮ, ನಿಷ್ಠೆ ಮತ್ತು ಜನಪರತೆ ವಿವರವಾಗಿ ಬರುತ್ತವೆ.

ಮಂಡೆಕೋಲು ಗ್ರಾಮದಲ್ಲಿ ಪ್ರತಿ ವರ್ಷ ನೇಮೋತ್ಸವದ ಸಂದರ್ಭದಲ್ಲಿ ” ಶಾಂತಿ ಮತ್ತು ಸೌಹಾರ್ದತೆಯ ” ಸಂದೇಶವನ್ನು ಜನಮಾನಸಕ್ಕೆ ಸಾರುವ “ಉಳ್ಳಾಕುಲು ದೈವ ಮತ್ತು ಪರಿವಾರ ದೈವಗಳ ನೇಮದ” ಸಂದರ್ಭದಲ್ಲಿ ನಡೆಯುವ ವಿಶಿಷ್ಟವಾದ “ಉಳ್ಳಾಕುಲು ದೈವದ ಅಡ್ಡನಪೆಟ್ಟು ” ಎಂಬ ಹೊಡೆದಾಟದ ಸಂಪ್ರದಾಯ ಜಾತ್ರೆಯ ಪ್ರಮುಖ ಆಕರ್ಷಣೆಯೇ ಹೌದು.

” ಹತ್ತೂರ ಪಾಲಿಗಿದು ವಿಶೇಷ ಆಚರಣೆ ” ಈ ಪ್ರದೇಶವು ಕೇರಳದ ಗಡಿ ಭಾಗವಾದುದರಿಂದ ಈ ಭಾಗದಿಂದಲೂ ಭಕ್ತಜನಸಾಗರವೇ ಹರಿದು ಬಂದು ಈ ದೃಶ್ಯವನ್ನು ಕಣ್ತುಂಬಿಸಿಕೊಳ್ಳುತ್ತಾರೆ . ಧಾರ್ಮಿಕ ನೆಲೆಯಲ್ಲಿ ಮಂಡೆಕೋಲ ನ್ನು ನಾಲ್ಕು ಪ್ರದಾನ ಊರುಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಬೊಳುಗಲ್ಲು , ಮಾವಜಿ , ಕೇನಾಜೆ , ಮೂರೂರು. ಈ ನಾಲ್ಕು ಊರಿನ ನಾಲ್ಕು ಮನೆತನಗಳ ಗೌಡ ಪ್ರತಿನಿಧಿಗಳು ಖಾಕಿ ವಸ್ತ್ರ , ಕೆಂಪು ಪಟ್ಟಿ, ಬಿಳಿ ಮುಂಡಾಸು ಸುತ್ತಿ , ಬೆತ್ತದ ದಂಡ, ಬೆತ್ತದಿಂದ ತಯಾರಿಸಿದ ಗುರಾಣಿಯ ಮಾದರಿಯ ಅಡ್ಡಣ ಹಿಡಿದು ನಾಲ್ಕು ಮನೆತನಗಳ ಗೌಡ ಪ್ರತಿನಿಧಿಗಳು ಎದುರು ಬದುರಾಗಿ ನಿಂತು ಹೊಡೆದಾಟ ಪ್ರಾರಂಭಿಸುತ್ತಾರೆ . ಈ ಸಂದರ್ಭದಲ್ಲಿ ‘ ಇರುವೆರ್ ಉಳ್ಳಾಕುಲು “ದೈವವು ಮದ್ಯ ಪ್ರವೇಶಿಸಿ ಈ ಹೊಡೆದಾಟ ನಿಲ್ಲಿಸುವುದೇ ಅಡ್ಡಣ ಪೆಟ್ಟು ಆಚರಣೆಯ ಪ್ರಮುಖ ಘಟ್ಟ . ಇದಲ್ಲದೇ ಯಾವುದೋ ಕಾಲದಲ್ಲಿ ಈ ಘಟನೆ ನಡೆದಿದೆ ಎಂಬುದು ನಮ್ಮ ಗ್ರಾಮ ದ ಜನರ ನಂಬಿಕೆ…..

ಈ ಆಚರಣೆಯಲ್ಲಿ ಪರಿಪಾಲಿಸುವ ಕ್ರಮವೆಂದರೆ , ಬೊಳುಗಲ್ಲು , ಮಾವಜಿ, ಮೂರೂರು , ಕೇನಾಜೆ ಈ ಮೂರು ಮನೆತನಗಳ ಗೌಡ ಪ್ರತಿನಿಧಿಗಳು ಅಡ್ಡಣ ಪೆಟ್ಟು ನಡೆಯುವ 5 ದಿನಗಳ ಮೊದಲೆ ವೃತದಾರಿಗಳಾಗಿ ದೇವಾಲಯದಲ್ಲಿಯೇ ಕಾಲ ಕಳೆಯುತ್ತಾರೆ. ಈ ನಾಲ್ವರು ನೇಮದ ಹಿಂದಿನ ದಿನ ದೈವದ ಮೂಲ ಸ್ಥಾನ” ಕಳೇರಿಯಲ್ಲಿ ” ವೃತಸ್ಥರಾಗಿ ನಿಂತು ರಾತ್ರಿ ವೇಳೆ “ಗುತ್ತಿನ ಬೈಲಿನ ಪಯ್ಯೋಲಿ ಗದ್ದೆಯಲ್ಲಿ “ಅಡ್ಡಣ ಹಿಡಿಯುತ್ತಾರೆ . ನಂತರ ಅಲ್ಲಿಂದ ಶ್ರೀ ಮಹಾವಿಷ್ಣು ದೇವಸ್ಥಾನ ಮಂಡೆಕೋಲು ಅಲ್ಲಿ ಬಂದು ತಂಗುತ್ತಾರೆ. ಮರುದಿನ ಉಳ್ಳಾಕುಲು ದೈವದ ನೇಮ ಶುರುವಾದ ಹಾಗೆ ದೇವಸ್ಥಾನದ ಸನಿಹದ ಗದ್ದೆಯಲ್ಲಿ ಈ ನಾಲ್ವರು ಎದುರು ಬದುರಾಗಿ ನಿಂತು ಹೊಡೆದಾಟ ಪ್ರಾರಂಭಿಸುತ್ತಾರೆ. ಹೊಡೆತ ತಗುಲದಂತೆ ಅಡ್ಡಣ ಹಿಡಿದು ತಡೆಯುತ್ತಾರೆ. ಅಡ್ಡಣ ಹಿಡಿಯುವ ಕ್ರಮದಲ್ಲೂ ಅನೇಕ ಪದ್ಧತಿಯನ್ನು ಪರಿಪಾಲಿಸುತ್ತಾರೆ.

ಯಾವುದೋ ಕಾಲದಲ್ಲಿ ಈ ಸಂಘರ್ಷ ಮತ್ತು ಅದನ್ನ ತುಳುನಾಡಿನ” ಸಾಂಸ್ಕೃತಿಕ ವೀರನಾಗಿರುವ ಉಳ್ಳಾಕುಲು ದೈವ ” ತಡೆದಂತೆ ಕಾಣುತ್ತದೆ . ಹಾಗೂ ಇಂತಹ ದುರ್ಘಟನೆಗಳು ಇನ್ನೂ ಮುಂದೆ ನಡೆಯಬಾರದೆಂದು ಪ್ರತೀ ವರ್ಷ ಈ ಅಡ್ಡಣ ಪೆಟ್ಟು ಆಚರಣೆ ನಡೆಯುತ್ತದೆ. ಎಂಬುದು ನಮ್ಮ ಗ್ರಾಮದ ಜನರ ನಂಬಿಕೆಯೇ ಹೌದು. ಪರಸ್ಪರ ಕಾದಾಟ ಪ್ರಾರಂಭವಾದಗ ಬೆನ್ನು ಹಾಕಿ ನಿಂತ ಇರುವೆರ್ ಉಳ್ಳಾಕುಲು ದೈವ ತಿರುಗಿ ಬಂದು ಹೊಡೆದಾಟವನ್ನು ಬಿಡಿಸುತ್ತದೆ. ಬಳಿಕ ದೇವಸ್ಥಾನದ ಕೊಡಿಯಡಿಗೆ ತೆರಳುವ ಈ ದೈವವನ್ನು ಈ ನಾಲ್ವರು ಹಿಂಬಾಲಿಸುತ್ತಾರೆ. ಇಲ್ಲಿ ಪರಸ್ಪರ ಹೊಡೆದಾಟದ ವೇಳೆ ಬೆತ್ತದೇಟು ತಾಗಿದರು ನೋವಾಗದು ಎಂಬುದು ಇಲ್ಲಿಯ ಜನರ ನಂಬಿಕೆ….

ಮಂಡೆಕೋಲು ಜಾತ್ರೆಯಲ್ಲಿ ಅಡ್ಡಣ ಪೆಟ್ಟು ಸಂಪ್ರದಾಯಕ್ಕೆ ವಿಶೇಷ ಮಹತ್ವವಿದೆ . ಅಡ್ಡಣ ಪೆಟ್ಟು ನಡೆದರೆ ಮುಂದೆ ಊರಿನಲ್ಲಿ ಮುಂದೆ ಹೊಡೆದಾಟ ಆಗುವುದಿಲ್ಲ ಎಂಬ ಬಲವಾದ ನಂಬಿಕೆಯಿದೆ . ನಾಲ್ಕೂರಿನ ಜಗಳವನ್ನು ದೈವ ಬಿಡಿಸಿ , ಹೆಡೆದಾಡಿಕೊಳ್ಳಬೇಡಿ , ಪ್ರೀತಿ ಮತ್ತು “ಶಾಂತಿ ಸೌಹಾರ್ದತೆಯಿಂದ ಬಾಳಿ “ಎನ್ನುವ ವಿಶೇಷ ಆಚರಣೆಯಲ್ಲಿದೆ .

ಈ ಆಚರಣೆಯು ಮಂಡೆಕೋಲು ಗ್ರಾಮದ ಸಾಮಾಜಿಕ ಬಾಂಧವ್ಯವನ್ನು ಬಲಪಡಿಸುತ್ತದೆ . ಮಂಡೆಕೋಲು ಗ್ರಾಮದ ಉಳ್ಳಾಕುಲು ನೇಮ ಮತ್ತು ಅಡ್ಡಣ ಪೆಟ್ಟು ಕೇವಲ ಆಚರಣೆ ಮಾತ್ರ ಅಲ್ಲ;ಅದು ಈ ಗ್ರಾಮದ ಶಕ್ತಿ . ಇದು ಭಕ್ತಿ ಪರಂಪರೆ ಮತ್ತು ಸಂಸ್ಕೃತಿಯ ಸಂಗಮವಾಗಿದ್ದು ತುಳುನಾಡಿನ ಅದರಲ್ಲೂ ನಮ್ಮ ಮಂಡೆಕೋಲು ಗ್ರಾಮದಲ್ಲಿ ನಡೆಯುವ ಆಚರಣೆಯನ್ನು ವಿಶ್ವಕ್ಕೆ ತೋರಿಸುತ್ತದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading