ಪುತ್ತೂರಿನ ವಿದ್ಯಾಮಾತಾದಲ್ಲಿ “ಬೇಸಿಗೆ ಕೌಶಲ ಸಂಭ್ರಮ 26” ಕ್ಕೆ ಚಾಲನೆ – “ವಿದ್ಯಾಮಾತಾದ ಕೌಶಲ್ಯಯುಕ್ತ ತರಬೇತಿಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿದೆ” : ಶ್ರೀಮತಿ ರಾಜೇಶ್ವರಿ ಆಚಾರ್ ; ತುಂಬಿ ತುಳುಕಿದ ಕೌಶಲ ಸಂಭ್ರಮದ ತರಗತಿಗಳು

“ಹೆಸರಾಂತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯು ವಿದ್ಯಾರ್ಥಿಗಳಿಗೆ ಬಾಲ್ಯದಲ್ಲೇ ಬೇಸಿಗೆಯ ರಜಾ ಅವಧಿಯಲ್ಲಿ ವಿಶೇಷ ಕೌಶಲ ಸಂಭ್ರಮದ ಅಡಿಯಲ್ಲಿ ಹಲವು ಕೌಶಲ್ಯಭರಿತ ತರಬೇತಿಯನ್ನು ವಿವಿಧ ಆಯಾಮದಲ್ಲಿ ನೀಡಿ ಭವಿಷ್ಯದ ಅಧಿಕಾರಿಗಳನ್ನು ಸೃಷ್ಟಿಸುವ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯ” ಎಂದು ರೋಟರಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಪುತ್ತೂರು ಇದರ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಆಚಾರ್ ನುಡಿದರು. ಇವರು ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಇಲ್ಲಿ ಆಯೋಜನೆಗೊಂಡಿರುವ “ಬೇಸಿಗೆ ಕೌಶಲ ಸಂಭ್ರಮ-26” ಕ್ಕೆ ಚಾಲನೆ ನೀಡಿ ವಿದ್ಯಾಮಾತಾದ ಸಾಧನೆಯನ್ನು ಮೆಲುಕು ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದರು.
“ವಿದ್ಯಾಮಾತಾದ್ದು ಟ್ಯೂಷನ್ ಅಲ್ಲ ಸೊಲ್ಯೂಷನ್” : ಭಾಗ್ಯೇಶ್ ರೈ – ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಮಾತನಾಡಿ “ಪ್ರಸ್ತುತ ಕಾಲ ಘಟ್ಟದಲ್ಲಿ ಪೋಷಕರು ತಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಾಗ ಟ್ಯೂಷನ್ ನ ಮೊರೆ ಹೋಗುತ್ತಾರೆಯೇ ಹೊರತು ಅದಕ್ಕೆ ಸೊಲ್ಯೂಷನ್(ಪರಿಹಾರ)ವನ್ನು ಕಂದುಕೊಳ್ಳುವುದರಲ್ಲಿ ಹಿಂದುಳಿಯುತ್ತಾರೆ. ಇದಕ್ಕೆ ಪೂರಕವಾಗಿ ನಾವು(ವಿದ್ಯಾಮಾತಾ ಅಕಾಡೆಮಿ) ಮಕ್ಕಳಲ್ಲಿರುವ ನ್ಯೂನತೆಗಳನ್ನು ಅರಿತುಕೊಂಡು ಅದಕ್ಕೆ ಸೂಕ್ತ ಮಾರ್ಗದರ್ಶನ, ತರಬೇತಿಯನ್ನು ನೀಡಿ ಮಕ್ಕಳಲ್ಲಿ ಧನಾತ್ಮಕ ಚಿಂತನೆಯನ್ನು ಮೂಡಿಸಿ ಪ್ರಾಕ್ಟಿಕಲ್(ಪ್ರಾಯೋಗಿಕ)ವಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಾವು ಬೆನ್ನೆಲುಬಾಗಿ ನಾವು ನಿಂತು ಈ ವಿಶಿಷ್ಟ ಬೇಸಿಗೆ ಕೌಶಲ ಸಂಭ್ರಮವನ್ನು ಆಯೋಜಿಸಿದ್ದೇವೆ” ಎಂದು ತಮ್ಮ ದೂರ ದೃಷ್ಟಿ ಯೋಜನೆಯನ್ನು ಸಭೆಯ ಮುಂದಿಟ್ಟರು.
“ತುಂಬಿ ತುಳುಕಿದ ವಿಶಿಷ್ಟ ಬೇಸಿಗೆ ಕೌಶಲ ಸಂಭ್ರಮ 26ರ ತರಗತಿ” : ವಿಶಿಷ್ಟ ಬೇಸಿಗೆ ಕೌಶಲ ಸಂಭ್ರಮ 26ರ ದಾಖಲಾತಿಯು ಸೀಮಿತ ಸೀಟುಗಳದ್ದಾಗಿತ್ತು. ಆದರೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸಿದ್ದರಿಂದ ಅವರು ಅವಕಾಶವಂಚಿತರಾಗಿ ಮುಂದಿನ ವರ್ಷದ ವಿಶಿಷ್ಟ ಬೇಸಿಗೆ ಕೌಶಲ ಸಂಭ್ರಮಕ್ಕೆ ಮುಂಗಡವಾಗಿ ಸೀಟನ್ನು ಕಾಯ್ದಿರಿಸಿಕೊಂಡಿದ್ದಾರೆ.
“ಒಂದೇ ಸೂರಿನಡಿಯಲ್ಲಿ ನಡೆಯುತ್ತಿದೆ ವಿಶೇಷ ತರಬೇತಿ” : ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ತರಬೇತಿ ನೀಡುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಮುಂಬರುವ ನವೋದಯ, ಸೈನಿಕ, ಮೊರಾರ್ಜಿ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳು, ಅಬಾಕಸ್ ಸ್ಪರ್ಧೆ, ಆರ್ಯಭಟ ನ್ಯಾಷನಲ್ ಮಾಥ್ಸ್ ಸ್ಪರ್ಧೆ, ವೇದಿಕ್ ಮಾಥ್ಸ್, ಮಾನಸಿಕ ಸಾಮರ್ಥ್ಯ ಸೇರಿದಂತೆ ವಿವಿಧ ವಿಷಯಗಳಿಗೆ ಅಲ್ಲದೇ ಶೈಕ್ಷಣಿಕ ವ್ಯಾಸಂಗಕ್ಕೆ ಸಂಬಂದಿಸಿದ ತರಬೇತಿಯನ್ನು ತಳಮಟ್ಟದಲ್ಲಿ ನೀಡಿ ಮುಂದಿನ ಜೂನ್ ತಿಂಗಳಿನಲ್ಲಿ ಎರಡನೇ ಹಂತದಲ್ಲಿ ಪೂರ್ಣ ಪ್ರಮಾಣದ ತರಬೇತಿಯನ್ನು ನೀಡಿ ಮಕ್ಕಳನ್ನು ಸಜ್ಜುಗೊಳಿಸಲಾಗುತ್ತದೆ. “ವಿಶಿಷ್ಟ ಬೇಸಿಗೆ ಕೌಶಲ ಸಂಭ್ರಮ-26”ರ ಉದ್ಘಾಟನೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶ್ರೀಮತಿ ರಾಜೇಶ್ವರಿ ಆಚಾರ್ ರವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. 
ಈ ಸಂದರ್ಭದಲ್ಲಿ ತರಬೇತುದಾರರು, ಶಿಬಿರಾರ್ಥಿಗಳು, ಪೋಷಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading