“ಮಾರುಕಟ್ಟೆ ರೌಂಡ್ ಅಪ್” – ಸೋಮವಾರದಿಂದ ಶನಿವಾರದವರೆಗಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಒಂದು ಸಮಗ್ರ ನೋಟ ; ಈ ವಾರ(ಏ.13 ರಿಂದ ಏ.18) ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳೇನು…!? ; ಬರಹ : ಉಲ್ಲಾಸ್ ಕಜ್ಜೋಡಿ

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತೀ ದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು ಸುಳ್ಯ ಶಾಖೆ” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆ ಧಾರಣೆಯ ವಿವರವನ್ನು ಪಡೆದುಕೊಂಡು ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಿದ್ದು, ಈ ವಾರ ಏ.13 ಸೋಮವಾರದಿಂದ ಏ.18 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಯಲ್ಲಿ ಕಂಡುಬಂದ ಏರಿಳಿತಗಳೇನು ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯ ಮೂಲಕ ತಿಳಿದುಕೊಳ್ಳೋಣ ಬನ್ನಿ…
ಸುಳ್ಯ ತಾಲೂಕಿನ ಕೃಷಿಕರ ಜೀವನಾಡಿಗಳಾದ ಅಡಿಕೆ, ಕಾಳುಮೆಣಸು ಹಾಗೂ ರಬ್ಬರ್ ಧಾರಣೆಗಳು ಈ ವಾರ ಕೃಷಿಕರಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಮೂಡಿಸಿದ್ದು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳು ವಾರದ ಮಧ್ಯದಲ್ಲೊಮ್ಮೆ ಏರಿಕೆಯೊಂದಿಗೆ ವಾರಾಂತ್ಯದವರೆಗೂ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿವೆ.
ಮೊದಲಿಗೆ ನಾವು ಈ ವಾರ ಅಡಿಕೆ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ಗಮನಿಸುತ್ತಾ ಹೋಗುವುದಾದರೆ ಈ ವಾರದ ಪ್ರಾರಂಭದಲ್ಲಿ ಏ.13 ಸೋಮವಾರದಂದು ಹೊಸ ಅಡಿಕೆಯ ಧಾರಣೆ ಕನಿಷ್ಠ 260 ರಿಂದ ಗರಿಷ್ಠ 490 ರೂಪಾಯಿ, ಹಳೆ ಅಡಿಕೆ ಕನಿಷ್ಠ 395 ರಿಂದ ಗರಿಷ್ಠ 555 ರೂಪಾಯಿ, ಡಬಲ್ ಚೋಲ್ ಕನಿಷ್ಠ 390 ರಿಂದ ಗರಿಷ್ಠ 555 ರೂಪಾಯಿ, ಫಟೋರ ಕನಿಷ್ಠ 280 ರಿಂದ ಗರಿಷ್ಠ 410 ರೂಪಾಯಿ, ಉಳ್ಳಿಗಡ್ಡೆ, ಕನಿಷ್ಠ 165 ರಿಂದ ಗರಿಷ್ಠ 290 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 230 ರಿಂದ ಗರಿಷ್ಠ 265 ರೂಪಾಯಿ ಇತ್ತು. ಆದರೆ ಏ.15 ಬುಧವಾರದಂದು ಹೊಸ ಅಡಿಕೆ ಹಾಗೂ ಫಟೋರ ಧಾರಣೆಯಲ್ಲಿ ಕುಸಿತ ಕಂಡುಬಂದಿದ್ದು, ಸೋಮವಾರದಂದು ಗರಿಷ್ಠ 490 ರೂಪಾಯಿಗಳಿದ್ದ ಹೊಸ ಅಡಿಕೆ ಧಾರಣೆಯು ಬುಧವಾರದ ಹೊತ್ತಿಗೆ 485 ರೂಪಾಯಿಗಳಿಗೆ ತಲುಪುವ ಮೂಲಕ 5 ರೂಪಾಯಿಗಳಷ್ಟು ಇಳಿಕೆ ಕಂಡಿದ್ದು, ಫಟೋರದ ಗರಿಷ್ಠ ಬೆಲೆಯಲ್ಲೂ ಅಲ್ಪ ಇಳಿಕೆಯಾಗಿ 410 ರೂಪಾಯಿಯಿಂದ 405 ರೂಪಾಯಿಗಳಿಗೆ ತಲುಪಿತ್ತು. ಉಳಿದಂತೆ ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲದೇ ಸೋಮವಾರದ ದರದಲ್ಲೇ ಸ್ಥಿರವಾಗಿ ನಿಂತಿತ್ತು. ಏ.16 ಗುರುವಾರದಂದು ಹೊಸ ಅಡಿಕೆ, ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಸೇರಿದಂತೆ ಎಲ್ಲಾ ವಿಭಾಗಗಳ ಅಡಿಕೆಗಳ ಧಾರಣೆಯಲ್ಲೂ ಯಾವುದೇ ರೀತಿಯ ಬದಲಾವಣೆಗಳನ್ನು ಕಾಣದೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಏ.15ರ ದರದಲ್ಲೇ ಮುಂದುವರಿದಿತ್ತು. ಆದರೆ ಏ.17 ಶುಕ್ರವಾರದ ಹೊತ್ತಿಗೆ ಹೊಸ ಅಡಿಕೆಯ ಗರಿಷ್ಠ ಬೆಲೆಯು 480 ರೂಪಾಯಿಗಳಿಗೆ ಇಳಿಕೆಯಾಗಿದ್ದು, ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯ ಬೆಲೆಗಳೂ ಸಹ ತಲಾ 5 ರೂಪಾಯಿಗಳಷ್ಟು ಕುಸಿತ ಕಂಡು 550 ರೂಪಾಯಿಗಳಿಗೆ ತಲುಪಿದ್ದವು. ಮುಖ್ಯ ಅಡಿಕೆ ವಿಭಾಗದಲ್ಲಿ ಈ ರೀತಿಯ ಏರಿಳಿತಗಳು ದಾಖಲಾಗಿದ್ದರೂ ಸಹ ಫಟೋರ ಹಾಗೂ ಇತರ ವಿಭಾಗಗಳ ಅಡಿಕೆಗಳ ಧಾರಣೆಯಲ್ಲಿ ಏ.16ರ ಧಾರಣೆಗಳೇ ಮುಂದುವರಿದು ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಇನ್ನು ವಾರದ ಕೊನೆಯ ದಿನ ಅಂದರೆ ವಾರಾಂತ್ಯದ ಏ.18 ಶನಿವಾರದಂದು ಹೊಸ ಅಡಿಕೆ, ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಸೇರಿದಂತೆ ಎಲ್ಲಾ ವಿಭಾಗಗಳ ಅಡಿಕೆಗಳ ಧಾರಣೆಯಲ್ಲೂ ಯಾವುದೇ ಏರಿಳಿತವಿಲ್ಲದೇ ಏ.17ರ ಧಾರಣೆಗಳೇ ಸ್ಥಿರವಾಗಿ ಮುಂದುವರೆದಿದ್ದು, ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ.
ಮುಂದೆ ನಾವು ಇತರ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಈ ವಾರ ಕಂಡುಬಂದ ಏರಿಳಿತಗಳನ್ನು ನೋಡುವುದಾದರೆ ವಾರದ ಆರಂಭದಲ್ಲಿ ಅಂದರೆ ಏ.13 ಸೋಮವಾರದಂದು ಕಾಳುಮೆಣಸು ಕನಿಷ್ಠ 590 ರಿಂದ ಗರಿಷ್ಠ 690 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ, ಒಣ ಕೊಕ್ಕೋ ಕನಿಷ್ಠ 270 ರಿಂದ ಗರಿಷ್ಠ 300 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 150 ರಿಂದ ಗರಿಷ್ಠ 180 ರೂಪಾಯಿಗಳಿದ್ದು, ಏ.15 ಬುಧವಾರದ ಹೊತ್ತಿಗೆ ಕೊಬ್ಬರಿ ಹಾಗೂ ಒಣ ಕೊಕ್ಕೋ ಧಾರಣೆಯಲ್ಲಿ ಏರಿಕೆ ಕಂಡುಬಂದಿದ್ದು, ಸೋಮವಾರ 180 ರೂಪಾಯಿಗಳಿದ್ದ ಕೊಬ್ಬರಿ ಧಾರಣೆಯು ಬುಧವಾರ 190 ರೂಪಾಯಿಗಳಿಗೆ ಏರಿಕೆಯಾದರೆ ಒಣ ಕೊಕ್ಕೋ 310 ರೂಪಾಯಿಗಳ ಉನ್ನತ ಮಟ್ಟವನ್ನು ತಲುಪಿತ್ತು. ಆದರೆ ಏ.13 ಸೋಮವಾರದಂದು 690 ರೂಪಾಯಿಗಳಿದ್ದ ಕಾಳುಮೆಣಸು ಧಾರಣೆಯು ಏ.15 ಬುಧವಾರದ ಹೊತ್ತಿಗೆ 5 ರೂಪಾಯಿ ಕುಸಿತ ಕಂಡು 685 ರೂಪಾಯಿಗಳಿಗೆ ಇಳಿದಿತ್ತು. ಆದರೆ ಹಸಿ ಕೊಕ್ಕೋ ಧಾರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲದೇ ಸ್ಥಿರತೆ ಮುಂದುವರಿದಿತ್ತು. ಏ.16 ಗುರುವಾರದಂದು ಕಾಳುಮೆಣಸು, ಹಸಿ ಕೊಕ್ಕೋ, ಒಣ ಕೊಕ್ಕೋ ಹಾಗೂ ಕೊಬ್ಬರಿ ಧಾರಣೆಗಳಲ್ಲಿ ಯಾವುದೇ ಏರಿಳಿತವಿಲ್ಲದೇ ಏ.15ರಂದು ದಾಖಲಾಗಿದ್ದ ದರಗಳೇ ಸ್ಥಿರವಾಗಿ ಮುಂದುವರೆದಿದ್ದವು. ಆದರೆ ಏ.17 ಶುಕ್ರವಾರಕ್ಕೆ ಬಂದಾಗ ಕಾಳುಮೆಣಸಿನ ಧಾರಣೆಯಲ್ಲಿ ಪ್ರತೀ ಕೆಜಿಗೆ 5 ರೂಪಾಯಿ ಇಳಿಕೆ ಕಂಡುಬಂದಿದ್ದು, 680 ರೂಪಾಯಿಗಳಿಗೆ ಇಳಿಕೆಯಾಗಿತ್ತು. ಆದರೆ ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದಿರಲಿಲ್ಲ. ಅದೇ ರೀತಿ ಕೊನೆಯದಾಗಿ ವಾರಾಂತ್ಯದ ಶನಿವಾರ ಹೊತ್ತಿಗೆ ಕಾಳುಮೆಣಸಿನ ಧಾರಣೆಯಲ್ಲಿ ಮತ್ತೆ 5 ರೂಪಾಯಿಗಳಷ್ಟು ಇಳಿಕೆ ದಾಖಲಾಗಿದ್ದು, 675 ರೂಪಾಯಿಗಳಿಗೆ ಕುಸಿತವಾಗಿದೆ. ಉಳಿದಂತೆ ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಸ್ಥಿರತೆಯನ್ನು ಕಾಯ್ದುಕೊಂಡಿವೆ.
ಇನ್ನು ಕೊನೆಯದಾಗಿ ರಬ್ಬರ್ ಧಾರಣೆಯಲ್ಲಿ ಈ ವಾರ ಉಂಟಾದ ಏರಿಳಿತಗಳನ್ನು ವೀಕ್ಷಿಸುವುದಾದರೆ ವಾರದ ಪ್ರಾರಂಭದಲ್ಲಿ ಅಂದರೆ ಏ.13 ಸೋಮವಾರದಂದು ರಬ್ಬರ್ ಗ್ರೇಡ್ 226 ರೂಪಾಯಿ, ಲಾಟ್ ರಬ್ಬರ್ 198 ರೂಪಾಯಿ, ಸ್ಕ್ರ್ಯಾಪ್ ರಬ್ಬರ್ ಪ್ರಥಮ ದರ್ಜೆ 137.50 ರೂಪಾಯಿ ಹಾಗೂ ಸ್ಕ್ರ್ಯಾಪ್ ರಬ್ಬರ್ ದ್ವಿತೀಯ ದರ್ಜೆ 128.50 ರೂಪಾಯಿಗಳಿದ್ದು, ಏ.16 ಗುರುವಾರದಂದು ಅದೇ ಧಾರಣೆ ಸ್ಥಿರವಾಗಿ ಮುಂದುವರಿದಿತ್ತು. ಆದರೆ ಏ.17 ಶುಕ್ರವಾರದಂದು ಗ್ರೇಡ್ ರಬ್ಬರ್ ಗೆ 1.50 ರೂಪಾಯಿ, ಲಾಟ್ ರಬ್ಬರ್ ಗೆ 1 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ ರಬ್ಬರ್ ಗೆ 1 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ ರಬ್ಬರ್ ಗೆ 1 ರೂಪಾಯಿ ಏರಿಕೆ ಕಂಡುಬಂದಿದ್ದು, ಕ್ರಮವಾಗಿ ಗ್ರೇಡ್ 227.50 ರೂಪಾಯಿ, ಲಾಟ್ 199 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 138.50 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 129.50 ರೂಪಾಯಿಗಳಿಗೆ ತಲುಪಿತ್ತು. ವಾರದ ಕೊನೆಯ ದಿನವಾದ ಏ.18 ಶನಿವಾರದಂದು ರಬ್ಬರ್ ನ ಎಲ್ಲಾ ವಿಭಾಗಗಳಲ್ಲೂ ಏ.17ರ ಧಾರಣೆಯೇ ಸ್ಥಿರವಾಗಿ ಮುಂದುವರಿದಿದೆ.
ಒಟ್ಟಾರೆಯಾಗಿ ಈ ವಾರದ ಆರಂಭದಿಂದ ಅಂತ್ಯದವರೆಗೆ ಅಂದರೆ ಏ.13 ರಿಂದ ಏ.18 ರವರೆಗೆ ಎಲ್ಲಾ ಕೃಷಿ ಉತ್ಪನ್ನಗಳ ಪ್ರಮುಖ ವಿಭಾಗಗಳಲ್ಲಿ ಉಂಟಾದ ಏರಿಳಿತಗಳನ್ನು ಹೋಲಿಕೆ ಮಾಡುವುದಾದರೆ ವಾರದ ಆರಂಭದಲ್ಲಿ ಹೊಸ ಅಡಿಕೆಯ ಗರಿಷ್ಠ ಧಾರಣೆ 490 ರೂಪಾಯಿ ಇದ್ದರೆ ವಾರದ ಅಂತ್ಯದಲ್ಲಿ 480 ರೂಪಾಯಿಗಳಿಗೆ ಇಳಿಕೆಯಾಗಿದೆ. ವಾರದ ಆರಂಭದಲ್ಲಿ ಗರಿಷ್ಠ 555 ರೂಪಾಯಿ ಇದ್ದ ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯ ಧಾರಣೆ ವಾರಾಂತ್ಯದಲ್ಲಿ 550 ರೂಪಾಯಿಗಳಿಗೆ ತಲುಪಿದೆ. ವಾರದ ಆರಂಭದಲ್ಲಿ 690 ರೂಪಾಯಿ ಇದ್ದ ಕಾಳುಮೆಣಸಿನ ಗರಿಷ್ಠ ಧಾರಣೆ ವಾರದ ಅಂತ್ಯದಲ್ಲಿ 675 ರೂಪಾಯಿಗಳಿಗೆ ಕುಸಿತ ಕಂಡಿದೆ. ವಾರದ ಆರಂಭದಲ್ಲಿ 100 ರೂಪಾಯಿ ಇದ್ದ ಹಸಿ ಕೊಕ್ಕೋದ ಗರಿಷ್ಠ ಧಾರಣೆ ವಾರದ ಅಂತ್ಯದಲ್ಲಿ ಸ್ಥಿರವಾಗಿದೆ. ಆದರೆ ಒಣ ಕೊಕ್ಕೋ ಗರಿಷ್ಠ ಧಾರಣೆ ವಾರದ ಆರಂಭದಲ್ಲಿ 300 ರೂಪಾಯಿ ಇದ್ದು, ವಾರದ ಅಂತ್ಯದಲ್ಲಿ 310 ರೂಪಾಯಿಗಳಿಗೆ ಏರಿಕೆಯಾಗಿದೆ. ಕೊನೆಯದಾಗಿ ವಾರದ ಆರಂಭದಲ್ಲಿ 226 ರೂಪಾಯಿ ಇದ್ದ ಗ್ರೇಡ್ ರಬ್ಬರ್ ನ ಧಾರಣೆ ವಾರದ ಅಂತ್ಯದಲ್ಲಿ 227.50 ರೂಪಾಯಿಗಳಿಗೆ ಏರಿಕೆಯಾದರೆ ವಾರದ ಆರಂಭದಲ್ಲಿ 198 ರೂಪಾಯಿ ಇದ್ದ ಲಾಟ್ ರಬ್ಬರ್ ನ ಧಾರಣೆ ವಾರದ ಅಂತ್ಯದಲ್ಲಿ 199 ರೂಪಾಯಿಗಳಿಗೆ ಏರಿಕೆಯಾಗಿದೆ. ಒಟ್ಟಿನಲ್ಲಿ ಏರಿಕೆ-ಇಳಿಕೆಯ ಈ ಓಟದಲ್ಲಿ ಕೆಲವು ಬೆಳೆಗಳು ವಾರಾಂತ್ಯದಲ್ಲಿ ಇಳಿಕೆಯ ಹಾದಿಯನ್ನು ಹಿಡಿದರೆ ಇನ್ನು ಕೆಲವು ಬೆಳೆಗಳು ಏರಿಕೆಯತ್ತ ಮುಖ ಮಾಡಿದ್ದು, ಮುಂದಿನ ವಾರ ಏನಾಗುತ್ತದೋ ಕಾದುನೋಡಬೇಕಿದೆ… ಬರಹ : ಉಲ್ಲಾಸ್ ಕಜ್ಜೋಡಿ
ಮಾರುಕಟ್ಟೆ ಧಾರಣೆ ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading