“ಅಮರ ಸುದ್ದಿ ವಿಶೇಷ ವರದಿ” ; ಸುಳ್ಯ ತಾಲೂಕಿನ ಬಾಳುಗೋಡು, ಮಡಪ್ಪಾಡಿ, ಅರಂತೋಡು, ಶಾಂತಿನಗರ, ಜಾಲ್ಸೂರು ಹಾಗೂ ಅಜ್ಜಾವರ ಸೇರಿದಂತೆ ಹಲವು ಕಡೆಗಳಲ್ಲಿ ಕಂಡುಬರುತ್ತಿವೆ “ಮತದಾನ ಬಹಿಷ್ಕಾರದ ಬ್ಯಾನರ್ ಗಳು” – “ಅಭಿವೃದ್ಧಿ ಇಲ್ಲದೇ ಮತವಿಲ್ಲ” ಎಂದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಮತದಾರರು

ಉಲ್ಲಾಸ್ ಕಜ್ಜೋಡಿ
ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ನಗರ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸೇರಿದಂತೆ ಇನ್ನಿತರ ಚುನಾವಣೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ “ಮತದಾನ ಬಹಿಷ್ಕಾರದ ಕೂಗು” ಕೇಳಿಬರುತ್ತಿದ್ದು, ಜನಪ್ರತಿನಿಧಿಗಳ ವಿರುದ್ಧ ಮತದಾರರು “ಅಭಿವೃದ್ಧಿ ಇಲ್ಲದೇ ಮತವಿಲ್ಲ” ಎಂದು “ಮತದಾನ ಬಹಿಷ್ಕಾರದ ಬ್ಯಾನರ್” ಗಳನ್ನು ಅಳವಡಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹರಿಹರ ಪಳ್ಳತ್ತಡ್ಕ ಗ್ರಾಮದ ಬಾಳುಗೋಡು, ಮಡಪ್ಪಾಡಿ ಗ್ರಾಮದ ಹಾಡಿಕಲ್ಲು, ಅರಂತೋಡು ಗ್ರಾಮದ ಕಿರ್ಲಾಯ, ಸುಳ್ಯದ ಶಾಂತಿನಗರ, ಅಜ್ಜಾವರ ಗ್ರಾಮದ ಶಿರಾಜೆ ಹಾಗೂ ಜಾಲ್ಸೂರು ಗ್ರಾಮದ ಬೈತಡ್ಕ ಸೇರಿದಂತೆ ಹಲವು ಕಡೆಗಳಲ್ಲಿ ಮತದಾರರು “ಮತದಾನ ಬಹಿಷ್ಕಾರದ ಬ್ಯಾನರ್” ಗಳನ್ನು ಅಳವಡಿಸಿ “ಚುನಾವಣೆಗೆ ಮೊದಲು ಅಭಿವೃದ್ಧಿ ಅಗತ್ಯ” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮತದಾನ ಬಹಿಷ್ಕಾರದ ಕೂಗು ಕೇಳಿಬರುತ್ತಿರುವ ಈ ಪ್ರದೇಶಗಳಲ್ಲಿ ಮತದಾರರು ಮತದಾನವನ್ನು ಬಹಿಷ್ಕರಿಸುವ ನಿರ್ಧಾರವನ್ನು ಕೈಗೊಳ್ಳಲು ಇರುವ ಕಾರಣಗಳನ್ನು ಅಥವಾ ಆ ಪ್ರದೇಶಗಳಲ್ಲಿ ಇರುವಂತಹ ಸಮಸ್ಯೆಗಳನ್ನು ಗಮನಿಸುತ್ತಾ ಹೋದರೆ “ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿ, ಪುಣೇರಿ ಹಾಗೂ ಪನ್ನೆ ಪ್ರದೇಶಗಳಲ್ಲಿ ವಾಸವಿರುವ ಸುಮಾರು ಮೂರು ಜನತಾ ಕಾಲೋನಿಗಳ ನಿವಾಸಿಗಳಿಗೆ ಅವರು ತಲೆತಲಾಂತರಗಳಿಂದ ಆ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ಕೂಡ ಇಂದಿನವರೆಗೂ ಅವರುಗಳಿಗೆ ತಮ್ಮ ಮನೆ ಇರುವ ಜಾಗದ ಹಕ್ಕುಪತ್ರಗಳು ಲಭಿಸಿಲ್ಲ, ಹಾಗೂ ಈ ಕಾರಣದಿಂದಾಗಿ ಅವರಿಗೆ ಸರ್ಕಾರದ ಯಾವುದೇ ಯೋಜನೆಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಇಲ್ಲಿ ರಸ್ತೆ ಸಮಸ್ಯೆ, ನೀರಿನ ಸಮಸ್ಯೆ, ದಾಖಲಾತಿಗಳ ಸಮಸ್ಯೆ ಹಾಗೂ ಸ್ಮಶಾನದ ಸಮಸ್ಯೆಯೂ ಸೇರಿದಂತೆ ಹಲವಾರು ಮೂಲಭೂತ ಸಮಸ್ಯೆಗಳು ಇಂದಿನವರೆಗೂ ಸಮಸ್ಯೆಗಳಾಗಿಯೇ ಉಳಿದಿದ್ದು, ಈ ಬಗ್ಗೆ ಬಹಳಷ್ಟು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದ್ದು, ಈ ಕಾರಣದಿಂದಾಗಿ ಈ ಭಾಗದ ಮತದಾರರು ಮತದಾನ ಬಹಿಷ್ಕಾರದ ನಿರ್ಧಾರವನ್ನು ಕೈಗೊಂಡು ಮನೆ-ಮನೆಗಳಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಗಳನ್ನು ಅಳವಡಿಸಿದ್ದಾರೆ” ಎಂದು ತಿಳಿದುಬಂದಿದೆ.
ಇನ್ನು ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಎಂಬಲ್ಲಿಯೂ ಮತದಾನ ಬಹಿಷ್ಕಾರದ ಕೂಗು ಕೇಳಿಬರುತ್ತಿದ್ದು, “ಹಾಡಿಕಲ್ಲು ಪ್ರದೇಶದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸೇತುವೆಯ ಸಮಸ್ಯೆ ಇದ್ದು, ಈ ಬಗ್ಗೆ ಬಹಳಷ್ಟು ಬಾರಿ ಶಾಸಕರಿಗೆ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಗುದ್ದಲಿ ಪೂಜೆ ನಡೆದ ನಂತರ ಸೇತುವೆ ಕಾಮಗಾರಿ ಪ್ರಾರಂಭವಾಗದೇ ಇರುವ ಕಾರಣ ಈ ಸೇತುವೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಈ ಭಾಗದ ಮತದಾರರು ಮತದಾನವನ್ನು ಬಹಿಷ್ಕರಿಸುವ ನಿರ್ಧಾರವನ್ನು ಕೈಗೊಂಡು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ” ಎಂದು ತಿಳಿದುಬಂದಿದೆ.
ಹಾಗೆಯೇ ಅರಂತೋಡು ಗ್ರಾಮದ ಕಿರ್ಲಾಯ ಎಂಬಲ್ಲಿಯೂ ಮತದಾನ ಬಹಿಷ್ಕಾರದ ಕೂಗು ಕೇಳಿಬರುತ್ತಿದ್ದು, “ಕಿರ್ಲಾಯ-ಅಮೈ ರಸ್ತೆ ತೀರಾ ಹದಗೆಟ್ಟಿದ್ದು, ಅನಾರೋಗ್ಯ ಪೀಡಿತರು ಹಾಗೂ ಶಾಲಾ ಮಕ್ಕಳು ಕೆಸರಿನಲ್ಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದ್ದು, ಈ ಬಗ್ಗೆ ಶಾಸಕರಿಗೆ ಹಾಗೂ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದೇ ಇರುವ ಕಾರಣ ಹಾಗೂ ಅಲ್ಲಿರುವ ತೋಡಿಗೆ ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಈ ಭಾಗದ ಮತದಾರರು ಮತದಾನ ಬಹಿಷ್ಕಾರದ ನಿರ್ಧಾರವನ್ನು ಕೈಗೊಂಡು ಬ್ಯಾನರ್ ಅಳವಡಿಸಿದ್ದಾರೆ” ಎಂದು ತಿಳಿದುಬಂದಿದೆ.
ಅದೇ ರೀತಿ ಸುಳ್ಯದ ಶಾಂತಿನಗರದಲ್ಲೂ ಮತದಾನ ಬಹಿಷ್ಕಾರದ ಕೂಗು ಕೇಳಿಬರುತ್ತಿದ್ದು, “ಶಾಂತಿನಗರ-ಬೆಟ್ಟಂಪಾಡಿ ಹಾಗೂ ಸುಳ್ಯ ನಗರ ರಸ್ತೆಗಳ ದುರವಸ್ಥೆಯನ್ನು ಖಂಡಿಸಿ ಈ ಭಾಗದ ಮತದಾರರು ಈ ಬಾರಿಯ ನಗರ ಪಂಚಾಯತ್ ಚುನಾವಣೆಗೆ ಬಹಿಷ್ಕಾರವನ್ನು ಹಾಕುವ ನಿಟ್ಟಿನಲ್ಲಿ ಈ ಮತದಾನ ಬಹಿಷ್ಕಾರದ ಬ್ಯಾನರ್ ಅನ್ನು ಅಳವಡಿಸಿದ್ದಾರೆ” ಎಂದು ತಿಳಿದುಬಂದಿದೆ.
ಅಜ್ಜಾವರದಲ್ಲೂ ಮತದಾನ ಬಹಿಷ್ಕಾರದ ಕೂಗು ಕೇಳಿಬರುತ್ತಿದ್ದು, “ಅಜ್ಜಾವರ ಗ್ರಾಮದ ಶಿರಾಜೆ ಎರಡನೇ ವಾರ್ಡ್ ನ ಅಡ್ಡರಸ್ತೆಯಿಂದ ಬೇಲ್ಯ ನಾಲ್ಕನೇ ವಾರ್ಡ್ ನ ಬೀನಡ್ಕದವರೆಗೆ ಸುಮಾರು ಮೂರು ಕಿಲೋಮೀಟರ್ ರಸ್ತೆ ಡಾಮರೀಕರಣಕ್ಕೆ 40 ವರ್ಷಗಳಿಂದ ಅನೇಕ ಬಾರಿ ಬೇಡಿಕೆ ಇಡಲಾಗಿದ್ದು, ಜೊತೆಗೆ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದೇ ಇರುವ ಕಾರಣ ಈ ಭಾಗದ ಮತದಾರರು ಮತದಾನ ಬಹಿಷ್ಕಾರದ ನಿರ್ಧಾರವನ್ನು ಕೈಗೊಂಡು ಬ್ಯಾನರ್ ಅಳವಡಿಸಿದ್ದಾರೆ” ಎಂದು ತಿಳಿದುಬಂದಿದೆ.
ಹಾಗೆಯೇ ಜಾಲ್ಸೂರಿನಲ್ಲೂ ಮತದಾನ ಬಹಿಷ್ಕಾರದ ಕೂಗು ಕೇಳಿಬರುತ್ತಿದ್ದು, “ಜಾಲ್ಸೂರು ಗ್ರಾಮದ ಎರಡು ಮತ್ತು ಮೂರನೇ ವಾರ್ಡ್ ನ ಬೈತಡ್ಕ-ರುದ್ರಚಾಮುಂಡೇಶ್ವರಿ ದೈವಸ್ಥಾನದ ರಸ್ತೆ, ಬೈತಡ್ಕ-ಹೊಸಗದ್ದೆ ರಸ್ತೆ ಹಾಗೂ ಬೈತಡ್ಕ-ಕಾಳಿಗುಂಡಿ ರಸ್ತೆಗಳು ಕಳೆದ 25 ವರ್ಷಗಳಿಂದ ಅಭಿವೃದ್ಧಿ ಆಗದೇ ಇರುವ ಕಾರಣ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ, ಮಕ್ಕಳಿಗೆ ಹಾಗೂ ದೈವಸ್ಥಾನದ ಭಕ್ತಾದಿಗಳಿಗೆ ತುಂಬಾ ತೊಂದರೆ ಉಂಟಾಗುತ್ತಿರುವ ಕಾರಣ ಈ ಭಾಗದ ಮತದಾರರು ಮತದಾನ ಬಹಿಷ್ಕಾರದ ನಿರ್ಧಾರವನ್ನು ಕೈಗೊಂಡಿದ್ದಾರೆ” ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಚುನಾವಣೆಗಳು ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ ಮತದಾರರು ಮತದಾನ ಬಹಿಷ್ಕಾರದ ಬ್ಯಾನರ್ ಗಳನ್ನು ಅಳವಡಿಸಿ ತಮ್ಮ ತಮ್ಮ ಪ್ರದೇಶಗಳಲ್ಲಿರುವ ಸಾರ್ವಜನಿಕ ಸಮಸ್ಯೆಗಳನ್ನು ಹಾಗೂ ಕುಂದು-ಕೊರತೆಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇನ್ನಾದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಚುನಾವಣೆ ಬರುವ ಮೊದಲು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತಾರೋ ಕಾದು ನೋಡಬೇಕಿದೆ… – ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading