Ad Widget

ರಾಜಕೀಯ ಪಕ್ಷಗಳಿಂದ ಅಭಿವೃದ್ಧಿ ಹೇಳಿಕೆ ಹೊರತು ಅಭಿವೃದ್ಧಿಗೊಂಡಿಲ್ಲ, ರಾಜಕೀಯ ಪಕ್ಷಗಳು ನೀಡಿದ ಭರವಸೆ ಈಡೇರಿಸಿಲ್ಲ – ಗೋಪಾಲ್ ಪೆರಾಜೆ; ಹಳದಿರೋಗಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು – ಕೇಶವ ಮೊರಂಗಲ್ಲು

ರಾಜಕೀಯ ಪಕ್ಷಗಳ ಅಶ್ವಾಸನೆಗಳಿಂದ ಜನತೆ ನೊಂದು ಪಕ್ಷಗಳ ರಾಜಕೀಯ ನಿಲುವುಗಳನ್ನು ಬೆಂಬಲಿಸುವುದಿಲ್ಲ. ಆಯಾ ಕಾಲ ಸಂದರ್ಭದಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ಮಾಡಿ ಜನಾಭಿಪ್ರಾಯವನ್ನು ಮುಂದಿಡುವುದು ನಮ್ಮ ಕರ್ತವ್ಯ ಎಂದು
ಅಮರ ಸುಳ್ಯದ ನಾಗರಿಕ ವೇದಿಕೆ ಸಂಚಾಲಕ ಗೋಪಾಲ್ ಪೆರಾಜೆ ಹೇಳಿದರು.

ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಚುನಾವಣೆ ಸಮೀಪಿಸಿರುವ ಈ ಸಮಯದಲ್ಲಿ ತಾಲೂಕಿನ ಜನತೆ ನಾಡಿನ ಅಭಿವೃದ್ಧಿಯ ಬಗ್ಗೆ ಮತ್ತು ಮುಂದಿನ ಪೀಳಿಗೆಗಳ ಭವಿಷ್ಯವನ್ನು ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಕೂಡಾ ಗಮನದಲ್ಲಿಟ್ಟು ಮತದಾನ ಮಾಡಬೇಕು ಎಂದು ಕೇಳಿಕೊಂಡರು. ಮತದಾನಕ್ಕೆ ಮೊದಲು ಸಮಾಜದ ಮುಂದೆ ಕೆಲವು ನೈತಿಕ ಪ್ರಶ್ನೆಗಳನ್ನು ಮುಂದಿಟ್ಟು ಮತದಾರರ ಜಾಗೃತಿಗೋಸ್ಕರ ನಮ್ಮ ವೇದಿಕೆಯು ಈ ಕೆಳಗಿನ ಪ್ರಶ್ನೆಗಳನ್ನು ಕೇಳುತ್ತಿದ್ದೆವೆ ಎಂದು ಹೇಳಿದರು. ಇವತ್ತು ಸುಳ್ಯದ ಅಭಿವೃದ್ಧಿಯ ಬಗ್ಗೆ ವಿಶ್ಲೇಷಣೆ ಮಾಡಿದಾಗ ಕುರುಂಜಿಯವರ ಸೇವೆ ಸುಳ್ಯಕ್ಕೆ ಇಲ್ಲದೇ ಹೋಗಿದ್ದರೆ ಸುಳ್ಯ ಹೇಗಿರುತ್ತಿತ್ತು ಎಂಬ ಪ್ರಶ್ನೆಯನ್ನು ಹಾಕಿದರು. ಸುಳ್ಯದವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕೇಂದ್ರದ ಮಂತ್ರಿಗಳಾದರು. ರಾಜ್ಯದ ಮುಖ್ಯಮಂತ್ರಿ , ಸಚಿವರು ಆಗಿದ್ದದೂ ಸುಳ್ಯದ ಸೌಭಾಗ್ಯವೇ ಆಗಿತ್ತು. ಆದರೆ ಇದರಿಂದ ಸುಳ್ಯಕ್ಕೆ ಹೆಚ್ಚೇನು ಲಾಭವಾಗಿಲ್ಲ. ನಮ್ಮ ಜನಪ್ರತಿನಿಧಿಗಳು ಸುಳ್ಯದ ಅಭಿವೃದ್ಧಿಗೆ ಸಾಕಷ್ಟು ದುಡಿದಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ಇದನ್ನು ಮುಂದಿಡಲು ನಾವು ಬಯಸುತ್ತೇವೆ ಎಂದು ಹೇಳಿದರು. ಈ ಬಾರಿ ರಾಜ್ಯದಲ್ಲಿ ಮಳೆಕೊರತೆಯಿಂದ ಸುಮಾರು 223 ತಾಲೂಕುಗಳನ್ನು ಅಂದಾಜು 33.770 ಕೋಟಿಯಷ್ಟು ನಷ್ಟವಾಗಿದೆಯೆಂದು ಸಮೀಕ್ಷೆಯ ಆಧಾರದಲ್ಲಿ ಅಂದಾಜು ಮಾಡಲಾಗಿತ್ತು. ಇದರಲ್ಲಿ ಕನಿಷ್ಟ 17,901 ಕೋಟಿ ಪರಿಹಾರವನ್ನಾದರೂ ನೀಡಬೇಕೆನ್ನುವುದು ಕರ್ನಾಟಕದ ಬೇಡಿಕೆಯಾಗಿತ್ತು. ಇದಕ್ಕಾಗಿ ಪತ್ರಗಳ ಮೇಲೆ ಪತ್ರಗಳು ರಾಜ್ಯದಿಂದ ಕೇಂದ್ರಕ್ಕೆ ಸಲ್ಲಿಸಿದ್ದರೂ ನೇರವಾಗಿ ಪ್ರಧಾನಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆಯನ್ನು ಕೇಂದ್ರ ನೀಡಿಲ್ಲ. ಈ ಪಕ್ಷದ ನಾಯಕರುಗಳಾದರೂ ಈ ಸಂದರ್ಭದಲ್ಲಿ ಒತ್ತಡ ಹಾಕಿ ರಾಜ್ಯಕ್ಕೆ ಅನುದಾನ ತರಲು ಪ್ರಯತ್ನಿಸಬೇಕು. ಇತ್ತೀಚಿನ ವರದಿಯ ಪ್ರಕಾರ ನಮ್ಮ ದೇಶದ ಉದ್ಯೋಗದ ಸೂಚ್ಯಂಕದ ಆಧಾರದಲ್ಲಿ ಕಳೆದ 45 ವರ್ಷಗಳಲ್ಲೇ ಇಲ್ಲದ ನಿರುದ್ಯೋಗ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ಕೆಲವರು ತಾವು ಯಾವ ಕನಸಿಟ್ಟು ವಿದ್ಯೆ ಪಡೆದರೋ ಅದಕ್ಕೆ ಪೂರಕವಾದ ಉದ್ಯೋಗ ದಕ್ಕದೆ ನಿರಾಶೆ ಅನುಭವಿಸುವಂತಾಗಿದೆ. ಈ ವಿಚಾರದಲ್ಲಿ ನಮ್ಮ ಪ್ರಧಾನಿಯವರು 2014ರಲ್ಲಿ ವರ್ಷಕ್ಕೆ ಎರಡುಕೋಟಿ ಉದ್ಯೋಗವನ್ನು ಕೊಡುತ್ತೇವೆ ಅಂದಿದ್ದರು. ಅವರ ಆ ಮಾತಿಗನುಗುಣವಾಗಿ ಕಳೆದ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಸಲ್ಪಡಬೇಕಿತ್ತು. ಕೇಂದ್ರ ಮತ್ತು ಅರೆಕೇಂದ್ರ ಸರಕಾರಿ ಸೆಕ್ಟರ್‌ಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದು ಇವುಗಳನ್ನು ಭರ್ತಿ ಮಾಡಲು ಎಲ್ಲಾ ಪಕ್ಷದ ಅಭ್ಯರ್ಥಿಗಳು ಪ್ರತಿನಿಧಿಗಳು ಪ್ರಯತ್ನಿಸಬೇಕಿದೆ.
ನಮ್ಮ ಹಿರಿಯರು ಅನೇಕ ಕನಸುಗಳನ್ನು ಹೊತ್ತುಕಟ್ಟಿ ಬೆಳೆಸಿದ ವಿವಿಧ ಪ್ರತಿಷ್ಠಿತ ಸರಕಾರಿ ಸಂಸ್ಥೆಗಳನ್ನು (ಉದ್ಯಮಗಳು) ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದು, ಇದರಿಂದ ಉದ್ಯೋಗ ಸೃಷ್ಟಿಯಾಗಲು ಸಾಧ್ಯವೇ? ಇನ್ನೊಂದೆಡೆ ನಮ್ಮ ತಾಲೂಕು,ಜಿಲ್ಲೆಯ ವಿದ್ಯಾವಂತ ಯುವಕ- ಯುವತಿಯರು ಜಿಲ್ಲೆಯಿಂದ ಹೊರಗೆ ಉದ್ಯೋಗ ಹುಡುಕುವಂತಾಗಿದೆ. ಒಂದು ಕಾಲದಲ್ಲಿ ಉದ್ಯಮಗಳ ಬೀಡಾಗಿದ್ದ ನಮ್ಮ ಜಿಲ್ಲೆಯಲ್ಲಿ ಇಂದು ಖಾಸಗಿ ಉದ್ಯಮಗಳು ಬೆರಳೆಣಿಕೆಯಲ್ಲಿವೆ. ಅವುಗಳೂ ಸ್ಥಳೀಯರಿಗೆ ಉದ್ಯೋಗ ನೀಡದಿರುವುದು ಆತಂಕದ ವಿಷಯ ಎಂದರು.

ನಮ್ಮ ತಾಲೂಕಿನ ಪ್ರಮುಖ ಜೀವನೋಪಾಯವಾದ ಅಡಿಕೆ ಬೆಳೆಯು ಹಳದಿ ರೋಗ ಮತ್ತು ಎಲೆಚುಕ್ಕಿ ರೋಗದಿಂದ ಬಾಧಿತವಾಗಿದ್ದು, ಅದರ ನಿವಾರಣೆಗೆ ವೈಜ್ಞಾನಿಕ ಸಂಶೋಧನೆಗಳನ್ನು ಮಾಡುವಲ್ಲಿ ಆಳುವ ಪಕ್ಷ ಯಾವುದೇ ಗಂಭೀರ ಪ್ರಯತ್ನ ಮಾಡಿಲ್ಲ. ಇನ್ನಾದರೂ ಈ ಬಗ್ಗೆ ಖಚಿತ ನಿರ್ಧಾರವನ್ನು ಸರಕಾರ ನೀಡಬೇಕಿದೆ ಎಂದರು. ಈ ಪ್ರಶ್ನೆಗಳನ್ನು ಮುಂದಿಡುತ್ತಾ ಸುಳ್ಯದ ರೈತರಿಗೆ ಹಳದಿರೋಗ ಹಾಗೂ ಎಲೆ ಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರ ಒದಿಗಸಬೇಕು ಎಂದು ಕೇಶವ ಮೊರಂಗಲ್ಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಭಾರತಿ ಚೆಂಬು , ಪ್ರಮೀಳಾ ಪೆಲ್ತಡ್ಕ , ಕರುಣಾಕರ ಪೆಲ್ಲತ್ತಡ್ಕ , ಶಿವರಾಮ ನಾರ್ಕೊಡು ಕರ್ಲಪ್ಪಾಡಿ , ಲೋಲಜಾಕ್ಷ ಬೂತಕಲ್ಲು , ಮಾಧವಗೌಡ ಸುಳ್ಯ ಕೋಡಿ , ಭರತ್ ಕುಕ್ಕುಜಡ್ಕ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!