ಕರಾಟೆ ಕಲಿಕೆಯಿಂದ ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಳ, ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಅವಕಾಶ ಬಳಸಿಕೊಳ್ಳಿ- ಶ್ರೀಮತಿ ಕಮಲಾ ನಡ್ಕ ಕರೆ
ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹೆಣ್ಣು ಮಕ್ಕಳ ಸ್ವಯಂ ರಕ್ಷಣಾ ಕೌಶಲ ವೃದ್ಧಿಗಾಗಿ ಜಾರಿಗೊಂಡ ಕರಾಟೆ ತರಗತಿ ಇಂದು ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ಆರಂಭಗೊಂಡಿತು. ತರಗತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕಮಲಾ ನಡ್ಕ ಇಲಾಖೆಯ ಆಶಯದಂತೆ ನೀವೆಲ್ಲರೂ ಕರಾಟೆ ಕಲಿತು ಸಮಾಜದಲ್ಲಿ ತಲೆ ಎತ್ತಿ ಬಾಳಬೇಕು ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀ ಲಿಂಗಪ್ಪ ಬಿ ಇವರು ದೇಶದ ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರ ಧೈರ್ಯ, ದೇಶಾಭಿಮಾನ ನಮ್ಮೆಲ್ಲಾ ಹೆಣ್ಣು ಮಕ್ಕಳು ಬೆಳೆಸಿಕೊಳ್ಳಬೇಕು. ಕರಾಟೆ ಕಲಿಕೆ ನಮ್ಮಲ್ಲಿ ಹೊಸ ಚೈತನ್ಯ ತುಂಬಲಿ ಎಂದರು.
ವೇದಿಕೆಯಲ್ಲಿ Black belt ಕರಾಟೆ ಪಟು, ಸಂಪನ್ಮೂಲ ವ್ಯಕ್ತಿಯಾದ ಕುಮಾರಿ ಸಹನಾ, ಬಾಳಿಲ ವಿದ್ಯಾಬೊಧಿನೀ ಪ್ರೌಢ ಶಾಲಾ ಶಿಕ್ಷಕಿ ಶ್ರೀಮತಿ ಸಹನಾ, ಶಾಲಾ ಸಮಾಜ ಶಿಕ್ಷಕಿ ಶ್ರೀಮತಿ ದಿವ್ಯಾ ಎಂ.ಕೆ , ಶ್ರೀಮತಿ ಗುಣಶ್ರೀ ಉಪಸ್ಥಿತರಿದ್ದರು. ಗಣಿತ ಶಿಕ್ಷಕಿ ಶ್ರೀಮತಿ ಸುಮಿತ್ರಾ ಕೆ ಸ್ವಾಗತಿಸಿ, ಅತಿಥಿ ಶಿಕ್ಷಕಿ ಕುಮಾರಿ ದೀಪಿಕಾ ವಂದಿಸಿದರು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವನ್ನು ಹಿರಿಯ ಶಿಕ್ಷಕಿ ಶ್ರೀಮತಿ ಕವಿತಾ ಡಿ.ಎಂ.ನಿರೂಪಿಸಿದರು.