Ad Widget

ಕರೆಂಟ್ ಇಲ್ಲ ಎಂದು ಇಂಧನ ಸಚಿವರಿಗೆ ಬೈದ ಪ್ರಕರಣದ ತೀರ್ಪು ಪ್ರಕಟ : ಡಿಕೆಶಿ ಗೆ ಫೋನ್ ಮಾಡಿದ್ದ ಬೆಳ್ಳಾರೆಯ ಗಿರಿಧರ ರೈಗೆ ಜೈಲು ಶಿಕ್ಷೆ

ವಿದ್ಯುತ್ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್ ಅವರಿಗೆ ಫೋನಾಯಿಸಿ ಬೈದು ನಿಂದಿಸಿದ್ದಾರೆಂಬ ಕಾರಣಕ್ಕಾಗಿ ಕೇಸಿಗೊಳಗಾಗಿದ್ದ ಬೆಳ್ಳಾರೆಯ ಸಾಯಿ ಗಿರಿಧರ್ ರೈಯವರಿಗೆ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ.

ಸುಳ್ಯದ ಅನಿಯಮಿತ ವಿದ್ಯುತ್ ಕಡಿತದ ಪರಿಸ್ಥಿತಿಯಿಂದ ರೋಷಗೊಂಡಿದ್ದ ಬೆಳ್ಳಾರೆಯ ವಿದ್ಯುತ್ ಬಳಕೆದಾರ ಸಾಯಿ ಗಿರಿಧರ ರೈಯವರು 2016 ಫೆಬ್ರವರಿ 28 ರಂದು ಆಗಿನ ವಿದ್ಯುತ್ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಫೋನಾಯಿಸಿ ತರಾಟೆಗೆತ್ತಿಕೊಂಡಿದ್ದರು. ಈ ಸಂದರ್ಭ ಅವರು ಸುಳ್ಯದ ವಿದ್ಯುತ್ ಸಮಸ್ಯೆ ಬಗ್ಗೆ ಹೇಳುವುದರ ಜತೆಗೆ ಸಚಿವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆಂದು ಡಿಕೆಶಿ ಪರವಾಗಿ ಮೆಸ್ಕಾಂ ಹಿರಿಯ ಅಧಿಕಾರಿಗಳು ಗಿರಿಧರ ರೈಯವರ ಮೇಲೆ ದೂರು ನೀಡಿದ್ದರು. ಕೇಸು ದಾಖಲಿಸಿಕೊಂಡ ಪೊಲೀಸರು ರಾತ್ರೋ ರಾತ್ರಿ ಗಿರಿಧರ್ ರೈಯವರ ಮನೆಗೆ ತೆರಳಿದ್ದರು. ಮನೆ ಬಾಗಿಲು ತೆರೆಯದಿದ್ದಾಗ ಹಂಚು ಸರಿಸಿ ಒಳ ಪ್ರವೇಶಿಸಿ ಗಿರಿಧರ್ ರೈಯವರನ್ನು ಬಂಧಿಸಲಾಗಿತ್ತು. ಈ ಪ್ರಕರಣ ರಾಜ್ಯಾದಾದ್ಯಂತ ಕುತೂಹಲ ಕೆರಳಿಸಿತ್ತು ಮತ್ತು ಚರ್ಚೆಗೆ ಕಾರಣವಾಗಿತ್ತು.

ಘಟನೆಯ ಕುರಿತಂತೆ ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಮಾನ ಹಾನಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ನಾಲ್ಕು ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿತ್ತು. ಸುಳ್ಯ ಪೊಲೀಸ್ ಠಾಣೆಯ ಆಗಿನ ಎಸ್.ಐ‌. ಚಂದ್ರಶೇಖರ್ ಹೆಚ್.ವಿ. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸುಳ್ಯ ನ್ಯಾಯಾಲಯದಲ್ಲಿ ಈ ಕುರಿತಂತೆ ವಿಚಾರಣೆ ನಡೆಯುತ್ತಿತ್ತು. ಸಾಕ್ಷಿಗಳ ವಿಚಾರಣೆ ನಡೆದಿತ್ತು. ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನೂ ಸಾಕ್ಷಿಯನ್ನಾಗಿಸಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ವಾರೆಂಟ್ ಹೊರಡಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್ 5ರಂದು ಈಗ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ ಕೆ ಶಿವಕುಮಾರ್ ಸುಳ್ಯಕ್ಕೆ ಬಂದು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನುಡಿದಿದ್ದರು. ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು ಇಂದು ಸುಳ್ಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೋಮಶೇಖರ್ ಎ. ರವರು ತೀರ್ಪು ಪ್ರಕಟಿಸಿದರು.

ನಾಲ್ಕು ಅಪರಾಧಗಳಲ್ಲಿಯೂ 2 ವರ್ಷ ಜೈಲು ಶಿಕ್ಷೆ ಮತ್ತು ಒಂದು ಪ್ರಕರಣದಲ್ಲಿ 5 ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದ್ದು, 4 ಅಪರಾಧಗಳ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಪ್ರಾಸಿಕ್ಯೂಷನ್ ಪರವಾಗಿ ಎಪಿಪಿ ಜನಾರ್ಧನ ಬಿ. ವಾದಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!