Ad Widget

ರಾಜ್ಯದ 224 ಕ್ಷೇತ್ರಗಳಿಗೆ ಆಪ್ ಸ್ಪರ್ಧೆ- ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ- ಹಲವಾರು ಮಂದಿ ಪಕ್ಷ ಸೇರ್ಪಡೆ

ಮುಂದಿನ ರಾಜ್ಯ ವಿಧಾನ ಸಭೆ‌ ಚುನಾವಣೆಯಲ್ಲಿ 224 ಸ್ಥಾನಗಳಲ್ಲಿಯೂ ಆಮ್ ಆದ್ಮಿ ಪಾರ್ಟಿ ಸ್ಪರ್ಧೆ ನಡೆಸಲಿದ್ದು ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಆಪ್ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದ್ದಾರೆ. ಸುಳ್ಯಕ್ಕೆ ಆಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ‌ ಮಾತನಾಡಿದರು. ಮುಂದಿನ ಮೂರು ತಿಂಗಳಲ್ಲಿ ರಾಜ್ಯ ಪ್ರವಾಸ ಮಾಡಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಬಳಿಕ ಮೂರು ತಿಂಗಳಲ್ಲಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಿದ ಬಳಿಕ 6 ತಿಂಗಳ ಬಳಿಕ ಪ್ರತಿ‌ ಮನೆಯಲ್ಲಿ ಸಮೀಕ್ಷೆ ನಡೆಸಲಾಗುವುದು. ಆ ಬಳಿಕ ಜನರ ಅಭಿಪ್ರಾಯದಂತೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ರಾಜ್ಯದ ಮುಂದೆ ದೆಹಲಿ ಮತ್ತು ಪಂಜಾಬ್ ಎರಡು ಮಾದರಿಗಳಿವೆ. ದೆಹಲಿಯಲ್ಲಿ‌ ಸುಧಾರಣೆಯ ಕ್ರಾಂತಿ ನಡೆದರೆ, ಪಂಜಾಬ್‌ನಲ್ಲಿ ಬದಲಾವಣೆಯ ಜನಾಂದೋಲನ ನಡೆದಿದೆ ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್
ಎಲ್ಲಾ ಪಕ್ಷಗಳೂ ಒಂದೇ. ಆಮ್ ಆದ್ಮಿ ಪಾರ್ಟಿ ಈ ಪಕ್ಷಗಳಿಗೆ ಪರ್ಯಾಯ ಅಲ್ಲ. ಇಡೀ ರಾಜಕೀಯ ವ್ಯವಸ್ಥೆಗೆ ಬದಲಾವಣೆಯನ್ನು ಕೇಳುತ್ತಿದ್ದೇವೆ. ರಾಜ್ಯದ ಜನರ ಮೇಲೆ ವಿಶ್ವಾಸ ಇದೆ. ಯಾವುದೇ ಪಕ್ಷಗಳ ಜೊತೆ ಹೊಂದಾಣಿಕೆ, ಕಾಂಪ್ರಮೈಸ್ ರಾಜಕೀಯಕ್ಕೆ ಆಪ್ ಇಲ್ಲ. ಭ್ರಷ್ಟ ವ್ಯವಸ್ಥೆಯ ಬದಲಾವಣೆಗೆ ಆಪ್ ಏಕಾಂಗಿಯಾಗಿ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು. ಸುಳ್ಯದ ವಿದ್ಯುತ್ ಸಮಸ್ಯೆ ಬಗ್ಗೆ ಮಾತನಾಡಿದ ಪೃಥ್ವಿ ರೆಡ್ಡಿ ದೆಹಲಿಯಲ್ಲಿ ಆಪ್ ಸರಕಾರ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಒಂದು ಗಂಟೆಗಿಂತ ಹೆಚ್ಚು ವಿದ್ಯುತ್ ಕಡಿತ ಮಾಡಿದರೆ ಕಂಪೆನಿ ದಂಡ‌ ಕಟ್ಟಬೇಕು. ಆದರೆ ಸುಳ್ಯದಲ್ಲಿ ಹಣ ಕೊಟ್ಟರೂ ವಿದ್ಯುತ್ ಸಿಗುತ್ತಿಲ್ಲ. ಕಡಿತವಿಲ್ಲದೆ ಒಂದು ಗಂಟೆಯೂ ನಿರಂತರ ವಿದ್ಯುತ್ ದೊರೆಯುತ್ತಿಲ್ಲ. ವಿದ್ಯುತ್‌ ನೀಡುವುದು ಕಂಪೆನಿಗಳ ಔದಾರ್ಯವಲ್ಲ ಅದು ಗ್ರಾಹಕರ ಹಕ್ಕು ಎಂದು ಅವರು ಹೇಳಿದರು.

ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಉಪಸ್ಥಿತಿಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಈ ಸಂದರ್ಭದಲ್ಲಿ ಹಲವು ಮಂದಿ ಪ್ರಮುಖರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು. ಕಾನತ್ತಿಲ ಸಂಕೀರ್ಣದಲ್ಲಿ ನಡೆದ ಸಭೆಯಲ್ಲಿ ಆಪ್ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ ಶರ್ಮ, ಬೆಂಗಳೂರು ಮಹಾನಗರ ಉಪಾಧ್ಯಕ್ಷ ಸುರೇಶ್ ರಾತೋಡ್ ಬೆಂಗಳೂರು, ಉಡುಪಿ ಜಿಲ್ಲಾ ವೀಕ್ಷಕ ಅಶೋಕ್ ಎಡಮಲೆ, ದ.ಕ‌.ಜಿಲ್ಲಾ ಸಂಚಾಲಕ ರಾಜೇಂದ್ರ ಕುಮಾರ್, ಮುಖಂಡರಾದ ದರ್ಶನ್ ಜೈನ್, ಸಂತೋಷ್ ಕಾಮತ್, ಸ್ಟೀಫನ್ ರಿಚ್ಚಾರ್ಡ್ ಲೋಬೋ, ರೋಬೋಟ್ ರೇಂಗೋ, ಸುಳ್ಯ ವಿಧಾನಸಭಾ ಕ್ಷೇತ್ರದ ಸಹ ಸಂಚಾಲಕರಾದ ರಶೀದ್ ಜಟ್ಟಿಪಳ್ಳ, ರಾಮಕೃಷ್ಣ ಬೀರಮಂಗಲ, ಮೋಹನ್‌ದಾಸ್ ಎಣ್ಣೆಮಜಲು, ಕಾರ್ಯದರ್ಶಿ ಗಣೇಶ್ ಪ್ರಸಾದ್, ರಶೀದ್ ಪೀಳ್ಯ ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯದಲ್ಲಿ ನಡೆದ ಸಭೆಯಲ್ಲಿ ಪ್ರಮುಖ 17 ಮಂದಿ ಪಕ್ಷ ಸೇರ್ಪಡೆಯಾದರು. ಅವರಲ್ಲಿ ಬಿಜೆಪಿ ಹಾಗೂ ಸಹಕಾರ ಭಾರತಿ ಮುಖಂಡ ಪ್ರಸನ್ನ ಎಣ್ಮೂರು, ಮಾಜಿ ಶಾಸಕರ ಪುತ್ರಿ ಎಂಬಿಎ ಪದವೀಧರೆ ಸುಮನಾ, ಪ್ರಮುಖರಾದ ಕರುಣಾಕರ ಮೊದಲಾದವರು ಇದ್ದರು.

ಆಮ್‌ ಆದ್ಮಿ ಪಕ್ಷ ಸೇರ್ಪಡೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪ್ರಸನ್ನ ಎಣ್ಮೂರು, ಭ್ರಷ್ಟಾಚಾರದ ಜೊತೆ ಪಕ್ಷಗಳು ಹಾಗೂ ಆಡಳಿತವು ಕೈಜೋಡಿಸಿರುವುದು ಇಂದು ಇಡೀ ರಾಜ್ಯದಲ್ಲಿದೆ. ಜನಸಾಮಾನ್ಯರ ಮೂಲಭೂತ ಆವಶ್ಯಕತೆಗಳಾದ ವಿದ್ಯಾಭ್ಯಾಸ, ರಸ್ತೆ,ಕುಡಿಯುವ ನೀರು,ಆರೋಗ್ಯ,ವಿದ್ಯುತ್,ಆಡಳಿತ ಯಂತ್ರ, ಬದಲಾದ ಜೀವನ ಶೈಲಿಗೆ ಹೊಂದಿರಬೇಕು. ಜಾತಿ ರಾಜಕಾರಣ,ದ್ವೇಷ ರಾಜಕಾರಣಗಳು ಭಾರತದ ಅಭಿವೃದ್ಧಿಗೆ, ಗ್ರಾಮೀಣ ಜನರಿಗೆ ಇಂದು ಅವಶ್ಯವಿಲ್ಲ. ಹೀಗಾಗಿ ಬದಲಾವಣೆ ಎಂಬ ಸುಧಾರಣೆ ನಮ್ಮಲ್ಲಿಂದಲೇ ಆಗಲಿ ಎನ್ನುವ ಅಭಿಲಾಷೆಯಿಂದ ಆಮ್‌ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದೇನೆ ಎಂದರು.

ಈ ಹಿಂದೆ ಅಡ್ಡಮತದಾನದ ವಿಷಯದಲ್ಲಿ ಎಲ್ಲಾ ದಾಖಲೆಗಳು ನನ್ನ ಬಳಿ ಇದ್ದರೂ ಸತ್ಯದ ಮಾತಿಗೆ ಬೆಲೆ ಇರಲಿಲ್ಲ. ಎಲ್ಲರಂತೆ ಮುಕ್ತ ಮಾಡಲಾಯಿತು. ಆಗ ಯಾರೊಬ್ಬರೂ ಸೂಕ್ತ ವ್ಯಕ್ತಿ ಎಂದು ಪರಿಗಣಿಸಿರಲಿಲ್ಲ, ಉಳಿಸಿಕೊಳ್ಳಲು ಪ್ರಯತ್ನಿಸಿದ್ದಿಲ್ಲ.ಮತ ಹಾಕಿರುವುದನ್ನು ದಾಖಲೆ ಸಹಿತ ತೋರಿಸಿದರೂ ,ನಿಷ್ಠೆಯಿಂದ ಇದ್ದರೂ ಕಳೆದ ಮೂರು ವರುಷಗಳಿಂದ ಕಡೆಗಣಿಸಲಾಗಿದೆ. ಅಡ್ಡಮತದಾನ ಕಾನತ್ತೂರಿನಲ್ಲಿ ಇತ್ಯರ್ಥ ಆದ ಮೇಲೆ 5 ತಿಂಗಳು ಸಂದರೂ ಯಾವುದೇ ಬೆಳವಣಿಗೆಯೂ ಇಲ್ಲವಾಗಿತ್ತು. ಈಗ ಬೇಕಾಗಿರುವುದು ಕಂಟ್ರಾಕ್ಟ್ ಜನಪ್ರತಿನಿಧಿಗಳ ಭ್ರಷ್ಟಾಚಾರ, ಅಧಿಕಾರಿಗಳ ಕೆಟ್ಟ ಮರ್ಜಿಗೆ ವಿದಾಯ. ಹೀಗಾಗಿ ಈಗ ಆಮ್‌ ಆದ್ಮಿ ಪಕ್ಷವು ಇದಕ್ಕೆ ಸೂಕ್ತವಾಗಿದೆ. ಸದ್ಯ ಯಾವುದೇ ಪಕ್ಷದ ಪ್ರಾಥಮಿಕ ಸದಸ್ಯನಲ್ಲವೆಂಬ ನನ್ನ ವೈಯಕ್ತಿಕ ತೀರ್ಮಾನವಿದೆ.ಈ ಕಾರಣದಿಂದ ಗ್ರಾಮ, ಜಿಲ್ಲೆ, ರಾಜ್ಯ, ದೇಶವು ಅಭಿವೃದ್ಧಿಯಾಗಬೇಕು ಎನ್ನುವ ಕಲ್ಪನೆಯಲ್ಲಿ ಆಮ್‌ ಆದ್ಮಿ ಪಕ್ಷ ಸೇರಿದ್ದೇನೆ. ಭ್ರಷ್ಟಾಚಾರ ಎಲ್ಲೇ ಆದರೂ ವಿರೋಧಿಸುತ್ತೇನೆ ಎಂದು ಪ್ರಸನ್ನ ಭಟ್‌ ಎಣ್ಮೂರು ಹೇಳಿದರು.

ಆಪ್ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪಂಜಾಬ್ ಜನತೆಗೆ ಅಭಿನಂದನೆ ಸಲ್ಲಿಸುವ ಸಾರ್ವಜನಿಕ ಸಭೆ ಸುಳ್ಯ ಬಸ್ ನಿಲ್ದಾಣದ‌ ಬಳಿಯಲ್ಲಿ ನಡೆಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!