Ad Widget

ಸಚಿವ ಅಂಗಾರರಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಲೋಕಾರ್ಪಣೆ : ಕುದ್ರೆಮುಖ ಕಬ್ಬಿಣದ ಅದಿರು ಉತ್ಪಾದಕ ಕಂಪೆನಿಯ ಕೊಡುಗೆ

ಕುದ್ರೆಮುಖ ಕಬ್ಬಿಣದ ಅದಿರು ಉತ್ಪಾದಕ ಕಂಪೆನಿಯ ಸಾಮಾಜಿಕ ಕಾರ್ಯಕ್ರಮದಡಿ ಸುಮಾರು 45 ಲಕ್ಷ ರೂ ವೆಚ್ಚದಲ್ಲಿ ಸುಳ್ಯ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಹೊಸತಾಗಿ ನಿರ್ಮಾಣಗೊಂಡ ಆಮ್ಲಜನಕ ಘಟಕದ ಉದ್ಘಾಟನೆ ಜ.30ರಂದು ನಡೆಯಿತು.

ಘಟಕವನ್ನು ಬಂದರು,ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಪ್ರಾಮುಖ್ಯತೆ ಏನು ಎಂಬುದು ತಿಳಿಯಿತು. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌16 ಆಮ್ಲಜನಕ ಉತ್ಪಾದನಾ ಘಟಕಗಳು ಸೇರಿ ದೇಶದಲ್ಲಿ ಸಾಕಷ್ಟು ಆಮ್ಲಜನಕ ಉತ್ಪಾದನಾ ಘಟಕಗಳು ಸ್ಥಾಪಿಸಲಾಗಿದೆ. ಕೋವಿಡ್ ನೀಡಿದ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಲು ರಾಜ್ಯ ಹಾಗು ಕೇಂದ್ರ ಸರಕಾರಗಳಿಗೆ ಸಾಧ್ಯವಾಗಿದೆ ಎಂದು ಅವರು ಹೇಳಿದರು. ಆಮ್ಲಜನಕ ಘಟಕ ಸ್ಥಾಪನೆ ಸೇರಿ ಎಲ್ಲಾ ವ್ಯವಸ್ಥೆಗಳನ್ನೂ ಮಾಡುವುದರ ಮೂಲಕ ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಬರಬಹುದಾದ ಸವಾಲುಗಳನ್ನು ಎದುರಿಸಲು ಸರಕಾರ ಸಿದ್ಧವಾಗಿದೆ ಎಂದರು. ಸರಕಾರದ ಜೊತೆಗೆ ಕಂಪೆನಿಗಳು ಸಮಾಜ ಸೇವೆಯಲ್ಲಿ ಕೈ ಜೋಡಿಸಿದಾಗ ಅದ್ಭುತವಾದ ಪರಿವರ್ತನೆಯನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ಕುದುರೆಮುಖ ಕಬ್ಬಿಣದ ಅದಿರು ಉತ್ಪಾದಕ ಕಂಪೆನಿ ಅತ್ಯುತ್ತಮ ಸೇವೆ ನೀಡುತಿದೆ ಎಂದು ಶ್ಲಾಘಿಸಿದರು. ಇದೀಗ ಸರಕಾರಿ ಆಸ್ಪತ್ರೆಗೆ 5 ಕೋಟಿ ರೂ ಅನುದಾನವಿದ್ದು ಸಾರ್ವಜನಿಕ ಆಸ್ಪತ್ರೆಯ ಇನ್ನಷ್ಟು ಬೇಡಿಕೆಗಳನ್ನು ಪೂರೈಸಲಾಗುವುದು ಎಂದರು.
ಮೊದಲ ಹಾಗು ಎರಡನೇ ಡೋಸ್ ವ್ಯಾಕ್ಸಿನ್ ಪಡೆದ ಕಾರಣ ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸಾಧ್ಯವಾಯಿತು ಎಂದು ಸಚಿವರು ಹೇಳಿದರು.
ಕುದುರೆಮುಖ ಕಬ್ಬಿಣದ ಅದಿರು ಉತ್ಪಾದಕ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಸ್ವಾಮಿನಾಥನ್ ಮಾತನಾಡಿ ಕೋವಿಡ್ ಕಾಲದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಒದಗಿಸುವುದು ಸೇರಿದಂತೆ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ಕಂಪೆನಿಯು ತೊಡಗಿಸಿಕೊಂಡಿದೆ. ಕಂಪೆನಿಯ ಸಾಮಾಜಿಕ ಸೇವಾ ಕಾರ್ಯಗಳು ಇನ್ನಷ್ಟು ಮುಂದುವರಿಯಲಿದೆ ಎಂದು ಹೇಳಿದರು.
ಕುದ್ರೆಮುಖ ಕಬ್ಬಿಣದ ಅದಿರು ಉತ್ಪಾದಕ ಕಂಪೆನಿಯ ಯೋಜನೆ ಮತ್ತು ಉತ್ಪಾದನಾ ವಿಭಾಗದ ನಿರ್ದೇಶಕ ಭಾಸ್ಕರ ರೆಡ್ಡಿ ಮಾತನಾಡಿದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ, ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಅತಿಥಿಗಳಾಗಿ ಭಾಗವಹಿಸಿದ್ದರು. ಸುಳ್ಯ ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್, ಕುದ್ರೆಮುಖ ಕಬ್ಬಿಣದ ಅದಿರು ಉತ್ಪಾದಕ ಕಂಪೆನಿಯ ಉತ್ಪಾದನಾ ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಮಕೃಷ್ಣ ರಾವ್, ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ಹಾಗು ಸಾರ್ವಜನಿಕ ಸಂಪರ್ಕಾಧಿಕಾರಿ ಮುರುಗೇಶ್. ಎಸ್. ಮತ್ತಿತರರು ಉಪಸ್ಥಿತರಿದ್ದರು. ಸುಕುಮಾರ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ಕಂಪೆನಿಯ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!