ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಡಿ.15 ರ ಬುಧವಾರದಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಮುಕ್ತಾಯಗೊಂಡಿತು.
ಡಿ.15 ರಂದು ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈಧಿಕ ವಿಧಾನಗಳನ್ನು ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಇಳಿಸಲಾಯಿತು. ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರಾ ಮಹೋತ್ಸವವು ಸಮಾಪ್ತಿಯಾಯಿತು. ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ದೇವರ ಕೊಪ್ಪರಿಗೆ ಅನ್ನದ ಭೋಜನ ಪ್ರಸಾದ ಸ್ವೀಕರಿಸಿದರು.
ಉತ್ಸವ ನಿಮಿತ್ತ ಶ್ರೀ ದೇವಳದ ಹೊರಾಂಗಣಕ್ಕೆ ಬೆಳಗ್ಗಿನಿಂದ ನೀರನ್ನು ಬಿಟ್ಟು ಹೊರಾಂಗಣದ ಸುತ್ತಲೂ ನೀರು ತುಂಬಿಸಲಾಯಿತು. ರಾತ್ರಿ ಮಹಾಪೂಜೆಯ ನಂತರ ದೀಪಾರಾಧನೆಯುಕ್ತ ಪಾಲಕಿ ಉತ್ಸವವು ನೀರಿನಲ್ಲಿ ನೆರವೇರಿತು.
ನಂತರ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು. ಈ ಉತ್ಸವದೊಂದಿಗೆ ಚಂಪಾಷಷ್ಠಿ ಉತ್ಸವಗಳು ಸಮಾಪ್ತಿಯಾಯಿತು. ಈ ವಿಶಿಷ್ಟ ಉತ್ಸವವನ್ನು ಸಹಸ್ರಾರು ಭಕ್ತಾದಿಗಳು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕಾರ್ಯನಿರ್ವಾಹಣಾಧಿಕಾರಿ ಡಾ| ನಿಂಗಯ್ಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ವನಜಾ.ವಿ ಭಟ್, ಪ್ರಸನ್ನ ಕುಮಾರ್ ದರ್ಬೆ, ಪಿ.ಜಿ.ಎಸ್.ಎನ್ ಪ್ರಸಾದ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ಲೋಕೇಶ್ ಮುಂಡೊಕಜೆ, ಎಇಓ ಪುಷ್ಪಲತಾ, ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯರುಗಳಾದ ಕಿಶೋರ್ ಕುಮಾರ್ ಕೂಜುಗೋಡು, ಮನೋಜ್ ಸುಬ್ರಹ್ಮಣ್ಯ, ಚಂದ್ರಶೇಖರ ಮರ್ದಾಳ, ಚಂದ್ರಶೇಖರ ನಲ್ಲೂರಾಯ ಸೇರಿದಂತೆ ದೇವಳದ ಸಿಬ್ಬಂದಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಸರ್ಪಸಂಸ್ಕಾರ ಸೇವೆ ಆರಂಭ :- ಶ್ರೀ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಅವದಿಯಲ್ಲಿ ಶ್ರೀ ದೇವಳದ ವಿಶೇಷ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರ ಸೇವೆಯು ನಡೆಯುವುದಿಲ್ಲ. ಡಿ.15 ರ ಬುಧವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರಾ ಮಹೋತ್ಸವವು ಮುಕ್ತಾಯವಾಗಿರುವುದರಿಂದ ಮತ್ತೆ ಸರ್ಪಸಂಸ್ಕಾರ ಸೇವೆ ಪುನರಾರಂಭಗೊಳ್ಳಲಿದ್ದು, ಗುರುವಾರ(ಡಿ.16)ದಿಂದ ಸರ್ಪಸಂಸ್ಕಾರ ಸೇವೆ ಪುನರಾರಂಭಗೊಳ್ಳಲಿದೆ.
ವರದಿ :- ಉಲ್ಲಾಸ್ ಕಜ್ಜೋಡಿ