ತಾಲೂಕಿನ ಮಂಡೆಕೋಲು ಗ್ರಾಮದ ಕಣೆಮರಡ್ಕದಲ್ಲಿ ಸುಮಾರು ಐದು ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ನವೀಕರಣ ಕೆಲಸ ನಡೆಯುತ್ತಿದ್ದು ಜೀರ್ಣೋದ್ದಾರ ಕಾರ್ಯಗಳನ್ನು ಪೂರ್ತಿಗೊಳಿಸಿ ಮಂದಿರದ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮವು ಮುಂಬರುವ 2022ನೇ ಜನವರಿ 3 ರಿಂದ ಜನವರಿ 5 ರ ತನಕ ನಡೆಯಲಿದೆ.
ಈ ಮಂದಿರವನ್ನು ಹಿರಿಯ ಅಯ್ಯಪ್ಪ ಮಾಲಾಧಾರಿ ಶ್ರೀ ಯಂ.ಕೆ ನಾರಾಯಣ ಗುರುಸ್ವಾಮಿಗಳು ನಿರ್ಮಿಸಿದ್ದರು. ಇದೀಗ ಅಜೀರ್ಣಾವಸ್ಥೆಯಲ್ಲಿದ್ದ ಮಂದಿರದ ಜೀರ್ಣೋದ್ದಾರ ಕಾರ್ಯಗಳ ಬಗ್ಗೆ ಕೇರಳದ ಕಾಂಜಂಗಾಡ್ ದೈವಜ್ಞ ಶ್ರೀ ಸದಾನಂದ ಜ್ಯೋತಿಷಿಗಳ ಮೂಲಕ ಅಷ್ಟಮಂಗಳ ಪ್ರಶ್ನೆ ಮೂಲಕ ಚಿಂತಿಸಿ ಮೂಲಸ್ಥಳದಲ್ಲೇ ಮಂದಿರದ ನವೀಕರಣ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ತೀರ್ಮಾನಿಸಲಾಗಿತ್ತು.
ಮಂದಿರದ ಜೀರ್ಣೋದ್ದಾರ ಹಾಗೂ ಆಡಳಿತಕ್ಕೆ ಸಂಬಂಧಿಸಿದಂತೆ 2019 ರಲ್ಲಿ ಶ್ರೀ ಶಬರಿಗಿರಿ ಸೇವಾ ಪ್ರತಿಷ್ಠಾನದ ಹೆಸರಿನ ಟ್ರಸ್ಟ್ ರಚನೆಗೊಂಡಿದ್ದು ಅದರಂತೆ ಇದೀಗ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದು ಮುಂದಿನ ವರ್ಷಾರಂಭದ ಮೊದಲ ವಾರದಲ್ಲಿಯೇ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ವಿವಿಧ ಧಾರ್ಮಿಕ ವೈಧಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.