ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿ – ನಾಲ್ಗುತ್ತು ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಲೋಕೇಶ್ ತಂಟೆಪ್ಪಾಡಿ ಪ್ರಧಾನಮಂತ್ರಿಗಳಿಗೆ 2016ರಲ್ಲಿ ಪತ್ರ ಬರೆದು ಮನವಿ ಮಾಡಿದ್ದರು. ಮಾನ್ಯ ಪ್ರಧಾನಮಂತ್ರಿಯವರಿಗೆ ಸಲ್ಲಿಸಿದ ಮನವಿಗೆ ಕ್ರಮಕೈಗೊಳ್ಳುವಂತೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ನಿರ್ದೇಶಿಸಲಾಗಿತ್ತು. ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಂಗಳೂರುರವರು ಸ್ಥಳ ಪರಿಶೀಲಿಸಿ ತಂಟೆಪ್ಪಾಡಿ ನಾಲ್ಗುತ್ತು ಮಣ್ಣಿನ ರಸ್ತೆಯನ್ನು 600 ಮೀಟರ್ ಉದ್ದಕ್ಕೆ ಕಾಂಕ್ರೀಟ್ ಮಾಡಿ ಅಭಿವೃದ್ಧಿಪಡಿಸಲು ರೂ 40. ಲಕ್ಷ ಅನುದಾನದ ಅಗತ್ಯವಿರುತ್ತದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಇವರಿಗೆ ವರದಿ ಸಲ್ಲಿಸಿರುತ್ತಾರೆ. ಆದರೆ ಈ ಮೊತ್ತವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಯಾವುದೇ ಲೆಕ್ಕ ಶೀರ್ಷಿಕೆಯಡಿ ಲಭ್ಯವಿಲ್ಲದ ಕಾರಣ ಜಿಲ್ಲಾ ಪಂಚಾಯತ್ ನವರು ಸರಕಾರದ ಮುಖ್ಯ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರುರವರಿಗೆ ದಿನಾಂಕ 15/09/2016ರಂದು ಮನವಿ ಮಾಡಿರುತ್ತಾರೆ.
ಆದರೆ ಕಾಮಗಾರಿಗೆ ಯಾವುದೇ ಅನುದಾನ ಈವರೆಗೆ ಬಿಡುಗಡೆಗೊಳ್ಳದೆ ಇರುವುದರಿಂದ ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರನ್ನು ಲೋಕೇಶ್ ತಂಟೆಪ್ಪಾಡಿ ಯವರು ಇತ್ತೀಚೆಗೆ ಭೇಟಿ ಮಾಡಿ ಮನವಿ ನೀಡಿ ಈ ಭಾಗದ ರೈತರ ಬಹುಮುಖ್ಯ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಳ್ಳಾರೆ ಜೇಸಿಸ್ ನ ಅಧ್ಯಕ್ಷ ಪದ್ಮನಾಭ ಕಲಾಸುಮಾ, ಕೃಷ್ಣಪ್ಪ ಬಂಬಿಲ, ಕುಂಬ್ರ ದಯಾಕರ ಆಳ್ವರವರು ಉಪಸ್ಥಿತರಿದ್ದರು.