Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ – ನವಾನ್ನ ಪ್ರಸಾದ

ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸೋಮವಾರ ಹೊಸ್ತಾರೋಗಣೆ (ನವಾನ್ನ ಪ್ರಸಾದ) ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈಧಿಕ ವಿದಿ ವಿಧಾನಗಳೊಂದಿಗೆ ನೆರವೇರಿತು. ಈ ನಿಮಿತ್ತ ಪ್ರಾತಃಕಾಲ ಪಂಚಾಮೃಮಹಾಭಿಷೇಕವನ್ನು ಶ್ರೀ ದೇವರ ಮೂಲ ವಿಗ್ರಹಕ್ಕೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ನೆರವೇರಿಸಿದರು. ವರ್ಷದಲ್ಲಿ ಹೊಸ್ತಾರೋಗಣೆಯ ಒಂದು ದಿನ ಮಾತ್ರ ಮೂಲ ವಿಗ್ರಹಕ್ಕೆ ಮಹಾಭಿಷೇಕ ನಡೆಯುವುದು ಕುಕ್ಕೆಯ ವಿಶೇಷ. ಉಳಿದ ದಿನಗಳಲ್ಲಿ ಉತ್ಸವ ಮೂರ್ತಿಗೆ ಅಭಿಷೇಕ ನೆರವೇರುತ್ತದೆ.
ಅಭಿಷೇಕದ ಬಳಿಕ ತೆನೆ ತರಲು ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ದರ್ಪಣತೀರ್ಥ ನದಿ ತೀರಕ್ಕೆ ತೆರಳಿದರು. ನಂತರ ಭತ್ತದ ತೆನೆ(ಕೊರಳ್)ಗೆ ದರ್ಪಣತೀರ್ಥ ನದಿಯ ತಟದಲ್ಲಿ ಪೂಜೆ ನೆರವೇರಿಸಿದರು.ಕ್ಷೇತ್ರ ಪುರೋಹಿತ ಪುರೋಹಿತ ಮಧುಸೂದನ ಕಲ್ಲೂರಾಯ, ಪುರೋಹಿತರಾದ ಸರ್ವೇಶ್ವರ ಭಟ್, ಕುಮಾರ ಭಟ್, ಪ್ರಸಾದ್ ಕಲ್ಲೂರಾಯ ಮಂತ್ರಘೋಷ ಮಾಡಿದರು. ಬಳಿಕ ಬತ್ತದ ತೆನೆಯನ್ನು ದೀವಟಿಗೆ, ಬ್ಯಾಂಡ್, ವಾದ್ಯದ ನಿನಾದದೊಂದಿಗೆ ಮಂತ್ರಘೋಷದೊಂದಿಗೆ ಮೆರವಣಿಗೆಯಲ್ಲಿ ದೇವಳಕ್ಕೆ ತರಲಾಯಿತು. ಶ್ರೀ ದೇವಳಕ್ಕೆ ಒಂದು ಪ್ರದಕ್ಷಿಣೆ ಬಂದು ಅರ್ಚಕರು ತೆನೆಯನ್ನು ಗರ್ಭಗುಡಿಗೆ ಕೊಂಡೊಯ್ದರು. ನಂತರ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಧಾನ ಅರ್ಚಕರು ಕದಿರು ಪೂಜೆ ನೆರವೇರಿಸಿದರು.ಬಳಿಕ ಶ್ರೀ ದೇವಳದ ಗರ್ಭಗುಡಿಗೆ ಕದಿರು ಕಟ್ಟಿದರು.
ನಂತರ ಶ್ರೀ ದೇವಳಕ್ಕೆ, ಉಪ ದೇವರುಗಳ ಗುಡಿಗೆ, ಕಛೇರಿಗೆ ಕದಿರನ್ನು ಕಟ್ಟಲು ವಿತರಿಸಲಾಯಿತು. ಬಳಿಕ ಶ್ರೀ ದೇವಳದ ಆಡಳಿತ ಮಂಡಳಿಗೆ ಕದಿರನ್ನು ನೀಡಲಾಯಿತು. ತದನಂತರ ಅಲ್ಲಿ ಸೇರಿದ್ದ ನೌಕರ ವೃಂದಕ್ಕೆ ಮತ್ತು ಸ್ಥಳೀಯ ಭಕ್ತಾಧಿಗಳಿಗೆ ಕದಿರನ್ನು ಶ್ರೀ ದೇವಳದ ಅರ್ಚಕ ವೇದಮೂರ್ತಿ ರಮೇಶ ನೂರಿತ್ತಾಯ ವಿತರಿಸಿದರು. ಸರದಿಯ ಸಾಲಿನಲ್ಲಿ ನಿಂತು ಸರಕಾರದ ಕೋವಿಡ್-೧೯ ಮಾರ್ಗಸೂಚಿಗೆ ಅನುಗುಣವಾಗಿ ಊರ ಭಕ್ತರು ಕದಿರ ಪ್ರಸಾದವನ್ನು ಸ್ವೀಕರಿಸಿದರು. ಬಳಿಕ ಹೊಸ್ತಾರೋಗಣೆಯ ಪ್ರಯುಕ್ತ ಶ್ರೀ ದೇವರಿಗೆ ಗರ್ಭಗುಡಿಯ ಎದುರಿನ ಮಂಟಪದಲ್ಲಿ ಪಂಚಾಮೃತ ಮಹಾಭಿಷೇಕ, ವಿಶೇಷ ಪೂಜೆ ಹಾಗೂ ನವಾನ್ನ ನೈವೇಧ್ಯ ಸಮರ್ಪಿತವಾಯಿತು. ಶುಭದಿನದ ನಿಮಿತ್ತ ಶ್ರೀ ದೇವಳವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಈ ದಿನ ದೇವಳದ ವತಿಯಿಂದ ವಿಶೇಷವಾದ ಅಕ್ಕಿ ಪಾಯಸದೊಂದಿಗೆ ಶುಚಿ-ರುಚಿಯಾದ ಪ್ರಸಾದ ಬೋಜನ ವಿತರಿಸಲಾಯಿತು. ಸಹಸ್ರಾರು ಭಕ್ತಾಧಿಗಳು ಶ್ರೀ ದೇವರ ನವಾನ್ನ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ಹೊಸ್ತಾರೋಗಣೆ ನಿಮಿತ್ತ ಆದಿತ್ಯವಾರ ಸಂಜೆ ದೇವಳದ ಆಡಳಿತ ಮಂಡಳಿ ಪ್ರಧಾನ ಅರ್ಚಕರ ಮುಖೇನ ದೇವರಲ್ಲಿ ಕಾರ್ಯಕ್ರಮದ ಸುಸಂಪನ್ನತೆಗೆ ಮತ್ತು ಮುಂಬರುವ ವಿಶೇಷ ದಿನಗಳಲ್ಲಿ ಮತ್ತು ಪಂಚಪರ್ವ ದಿನಗಳಲ್ಲಿ ದೇವತಾ ಕಾರ್ಯಗಳು ಸಾಂಗವಾಗಿ ನೆರವೇರಿಸುವಂತೆ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ಪಿ.ಜಿ.ಎಸ್.ಎನ್.ಪ್ರಸಾದ್, ಮನೋಹರ ರೈ, ಲೋಕೇಶ್ ಮುಂಡೋಕಜೆ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಮನೋಜ್ ಸುಬ್ರಹ್ಮಣ್ಯ, ಚಂದ್ರಶೇಖರ ಮರ್ಧಾಳ, ಚಂದ್ರಶೇಖರ ನಲ್ಲೂರಾಯ, ಕಿಶೋರ್ ಕೂಜುಗೋಡು ಸೇರಿದಂತೆ ದೇವಳದ ಸಿಬ್ಬಂಧಿಗಳು ಮತ್ತು ಊರ ಭಕ್ತರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!