Ad Widget

ತುಳುನಾಡಿನ ವಿಶೇಷ ಆಚರಣೆ- ಕೆಡ್ಡಸ


ಹೆಣ್ಣಿಗೆ ವಿಶೇಷವಾದ ಸ್ಥಾನವನ್ನು ಕೊಟ್ಟು ಪೂಜಿಸುವ ತುಳುನಾಡಿನಲ್ಲಿಂದು ಕೆಡ್ಡಸ ಆಚರಣೆಯ ‌ಸಂಭ್ರಮ. ಭೂಮಿಯನ್ನು ತಾಯಿಯ ಸ್ಥಾನಕ್ಕೆ ಹೋಲಿಕೆ ಮಾಡುವ ಸಂಸ್ಕೃತಿ ಹೊಂದಿರುವ ತುಳುನಾಡು ಹಲವು ಸಂಸ್ಕೃತಿಗಳನ್ನು ಒಳಗೊಂಡಿದೆ. ಈ ದಿನ ಭೂಮಿ ತಾಯಿ ಋತುಮತಿಯಾಗುವಳು ಎಂಬ ನಂಬಿಕೆ ತುಳುವರದು‌. ಪ್ರಕೃತಿಮಾತೆ ಹೊಸ ಹುಟ್ಟು ಪಡೆಯಲು ತಯಾರಾಗುವಳು ಎಂಬ ಸಂತಸದಿಂದ ತುಳುವರು ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಪದ್ಧತಿ ಪ್ರಕಾರವಾಗಿ ಆಚರಿಸುವರು.

ಭೂಮಿ ತಾಯಿ ಋತುಮತಿಯಾದ ದಿನದಿಂದ ಮೂರು ದಿನಗಳ ಕಾಲ ಆಚರಿಸುವ ಅಶುದ್ಧಾಚರಣೆಯೇ ಈ ಕೆಡ್ಡಸ. ಈ ಮೂರು ದಿನಗಳ ಕಾಲ ಭೂಮಿಗೆ ಹಾರೆ, ಗುದ್ದಲಿಗಳಿಂದ ಅಗೆಯಬಾರದು, ಮರಗಳನ್ನು ಅಥವಾ ಯಾವುದೇ ಹಸಿರನ್ನು ಕಡಿಯಬಾರದು ಎಂಬುದು ತುಳುನಾಡಿನ ವಿಶೇಷ ನಂಬಿಕೆ. ಕೆಡ್ಡಸದ ಹಿಂದಿನ ದಿನ ಮನೆಯಂಗಳವನ್ನು ಶುಚಿಗೊಳಿಸಿ, ಸೆಗಣಿಯಿಂದ ಶುದ್ಧಗೊಳಿಸಿ, ತುಳಸಿ ಕಟ್ಟೆಯ ಬಳಿ ತೆಂಗಿನ ಗರಿಗಳಿಂದ ಮನೆ ತರಹದ ಗುಡಿಸಲನ್ನು ತಯಾರಿಸುವರು. ಮರುದಿನ ಅಂದರೆ ಕೆಡ್ಡಸದ ಮೊದಲ ದಿನ ಅದರೊಳಗೆ ಮಣೆ ಹಾಕಿ ದೀಪ ಬೆಳಗಿಸಿ, ಒಣತೆಂಗಿನ ಕಾಯಿ ತುರಿ – ಬೆಲ್ಲದೊಂದಿಗೆ ಹುರಿದ ಕುಚ್ಚಲಕ್ಕಿಯನ್ನು ಹುಡಿ ಮಾಡಿ ಮಿಶ್ರಣ ಮಾಡಿ ಬಾಳೆ ಎಲೆಯ ತುದಿಯಲ್ಲಿಟ್ಟು ಬಡಿಸುವುದರೊಂದಿಗೆ ತುಳುನಾಡಿನಲ್ಲಿ ಕೆಡ್ಡಸ ದಿನವನ್ನು ಆಚರಿಸಲಾಗುತ್ತದೆ.

ಕೆಡ್ಡಸದ ಮೊದಲ ದಿನ ಹೆಂಗಸರು ತಲೆಗೆ ಸ್ನಾನ ಮಾಡಿ ತುಳಸಿ ಕಟ್ಟೆಯ ಬಳಿ ನೀರು, ಎಣ್ಣೆ, ಸೀಗೆ, ಅರಿಶಿನ, ಹಾಲು ಇಟ್ಟು ಕೈಮುಗಿಯುವುದು ಪದ್ಧತಿ. ಕೆಡ್ಡಸದ ಎರಡನೇ ದಿನ ನುಗ್ಗೆಕಾಯಿ ಮತ್ತು ಬದನೆಕಾಯಿ ಪದಾರ್ಥ ಮಾಡುವುದು ಇಲ್ಲಿನ ವಿಶೇಷ ಆಚರಣೆ. ಇಲ್ಲಿ ನುಗ್ಗೆಕಾಯಿ ಮತ್ತು ಬದನೆಕಾಯಿ ಫಲ ಸಂಕೇತ ಎಂಬ ನಂಬಿಕೆಯಿದೆ. ಕೆಡ್ಡಸದ ಕೊನೆಯ ಅಂದರೆ, ಮೂರನೇ ದಿನ ಭೂಮಿ ತಾಯಿ ಸ್ನಾನ ಮಾಡಿ ಅಶುದ್ಧ ಕಳೆದು ಶುದ್ಧಳಾಗುವಳು. ಇದರ ಸಂಕೇತವಾಗಿ ಮನೆ‌ಮಂದಿಯೆಲ್ಲಾ ಆ ದಿನ ನೀರು, ಹಾಲು, ಎಣ್ಣೆಯನ್ನು ಭೂಮಿಗೆ ಬಿಟ್ಟು, ಸೀಗೆ ಮತ್ತು ಅರಿಶಿನ ಹಾಕಿ ಕೈ ಮುಗಿಯುವರು. ಅಂದು ತುಳಸಿ ಕಟ್ಟೆಯ ಬಳಿ ಸೆಗಣಿ ಸಾರಿಸಿ, ಭೂಮಿ ತಾಯಿಗೆ ಹಲ್ಲುಜ್ಜಲು ಮಸಿ, ತಲೆ ಬಾಚಲು ಬಾಚಣಿಗೆ, ತಲೆಗೆ ಎಣ್ಣೆ, ಸ್ನಾನ ಮಾಡುವ ನೀರಿಗೆ ಅರಿಶಿನದ ಕೊಂಬು, ಸರೋಳಿ ಸೊಪ್ಪು ಹಾಕುವರು. ಮುಖವನ್ನು ನೋಡಲು ಕನ್ನಡಿಯನ್ನು ಇಡುವರು. ಮನೆಯವರೆಲ್ಲರೂ ಕೈಮುಗಿದು ಸಂಪತ್ತು, ಸಂತಾನದ ಫಲ ಕೊಡಿಯೆಂದು ಬೇಡುವರು.
ಅಶುದ್ಧ ಕಳೆದು ಶುದ್ಧಳಾಗಿ ಬರುವ ಭೂಮಿ ತಾಯಿಗೆ ಮನೆಯೊಳಗಡೆ ಮಣೆ ಹಾಕಿ ದೀಪ ಬೆಳಗಿಸಿ, ಬಾಳೆ ಎಲೆಯಲ್ಲಿ ಉದ್ದಿನ ದೋಸೆ, ಪಾಯಸ ಹೀಗೆ ಹಲವು ಬಗೆಯ ಖಾದ್ಯಗಳನ್ನು ಬಡಿಸಿ, ಇವುಗಳನ್ನು ಸಂತೋಷದಿಂದ ಸ್ವೀಕರಿಸಿ ಬೆಳೆ ಭಾಗ್ಯವನ್ನು ಕರುಣಿಸು ಎಂದು ಬೇಡುವರು. ಕೆಡ್ಡಸದ ದಿನ ತುಳುನಾಡಿನಲ್ಲಿ ವಿಶೇಷವಾದ ತಿನಿಸು ನನ್ಯರಿ. ಕುಚ್ಚಲಕ್ಕಿಯನ್ನು ಹುರಿದು, ಹುಡಿ ಮಾಡಿ, ಅದಕ್ಕೆ ಬೆಲ್ಲ ತೆಂಗಿನಕಾಯಿ ಹಾಕಿ ಮಾಡುವ ರುಚಿಯಾದ ತಿಂಡಿಯೇ ಕೆಡ್ಡಸದ ಪ್ರಧಾನ ಖಾದ್ಯ.
ಮೂರು ದಿನಗಳ ಕಾಲ ಆಚರಿಸುವ ಈ ಕೆಡ್ಡಸ ಹಬ್ಬದ ದಿನಗಳಲ್ಲಿ ಯಾವುದೇ ಕೃಷಿ ಕಾರ್ಯಗಳನ್ನು ಮಾಡದೆ, ಭೂ ಮಾತೆಯ ಫಲವಂತಿಕೆ ಮತ್ತು ಸಮೃದ್ಧಿಗಾಗಿ ತುಳುವರು ಭೂತಾಯಿಯನ್ನು ಪೂಜಿಸುವರು. ತುಳುನಾಡಿನ ಸಾಂಪ್ರದಾಯಿಕವಾದ ಈ ಹಬ್ಬ ಹೊಸತನದೊಂದಿಗೆ ಮರುಜೀವ ಪಡೆದು ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
ಸಮಸ್ತ ತುಳುನಾಡಿನ ಜನತೆಗೆ ಕೆಡ್ಡಸ ದಿನದ ಶುಭಾಶಯಗಳು

📝ಸರೋಜ ಪಿ ಜೆ ದೋಳ್ಪಾಡಿ. ದ್ವಿತೀಯ ಬಿ.ಎ (ಪತ್ರಿಕೋದ್ಯಮ ವಿಭಾಗ) ವಿವೇಕಾನಂದ ಪದವಿ ಕಾಲೇಜು ಪುತ್ತೂರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!