Ad Widget

ಕೆಡ್ಡಸ : ಒಂದು ಪರಿಚಯ – ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

ಗಡಿಬಿಡಿಯಲ್ಲಿ ಕೆಲಸ ಮಾಡುತ್ತಾ ಬೇಗ ಬೇಗ ಹೊರಟ  ಸುಂದರಿಯನ್ನು  ಮನೆಯ ಹೊಸ ಸೊಸೆ ಆಶಾ ಕುತೂಹಲದಿಂದ  ಕೇಳಿದಳು, ಏನು ಭಾರೀ ಅರ್ಜೆಂಟ್ ಲ್ಲಿ ಹೊರಟಿದ್ದಿ? ಎತ್ಲಾಗಿ  ಹೋಗಲಿಕ್ಕಿದೆ?  ಅದು ಕುಂಞಕ್ಕ ನಾಳೆ ‘ಕೆಡ್ಡಸ’ ಅಲ್ಲವಾ ಹಾಗಾಗಿ ನನ್ನೆರಿಗೆ ಸಿದ್ಧತೆ  ಮಾಡಿಕೊಳ್ಳಬೇಕಿತ್ತು.  ಹಾ  ಕೆಡ್ಡಸಾ ಅದೆಂತ  ನಾನು ಕೇಳೆ ಇಲ್ವಲ್ಲಾ  ಏನದು ? ಎಂಬ ಆಕೆಯ‌  ಕುತೂಹಲದ   ಪ್ರಶ್ನೆ  ಎದುರಾಗುತ್ತಿದ್ದಂತೆ ಸುಂದರಿ ಅಂಗಳದ ತುದಿ ತಲುಪಿಯಾಗಿತ್ತು. ಮನೆಯತ್ತ ಓಡುತ್ತಿದ್ದ ಆಕೆಗೆ ಅದು ಕೇಳಲೇ ಇಲ್ಲ. 

ಏನಿದು ಕೆಡ್ಡಸ ಎಂದು ಯೋಚನೆಗೆ ಬಿದ್ದ ಆಶಾ ಆಚೆ ಈಚೆ  ನೋಡುತ್ತಿದ್ದರೆ ಎದುರಿಗೆ ಮಾವನೇ ಬರಬೇಕೆ?  ಪೇಟೆಯಿಂದ ಬಂದ ಆಶಾಳಿಗೆ ಹಳ್ಳಿಯ  ವಿಷಯಗಳೂ ಹೊಸದೇ. ಹಾಗಾಗಿ  ‘ಕೆಡ್ಡಸ’  ಶಬ್ದ  ಕೇಳಿದೊಡನೆ  ಕಿವಿ  ನೆಟ್ಟಗಾಯಿತು.   ಎದುರಿಗೆ ಎಲ್ಲಾ ವಿಷಯಗಳು ಗೊತ್ತಿರುವ ಮಾವನಿರುವಾಗ  ತಿಳಿಯಲೇನು ಅಡ್ಡಿ. ತಲೆ ಕೆದಕುತ್ತಾ ನಿಂತ ಸೊಸೆಯ  ಈ ಹೊಸ ಪರಿಯನ್ನು ಪ್ರಶ್ನಾರ್ತವಾಗಿ ನೋಡಿದಾಗ ತನ್ನ ಹೊಸ ಸಮಸ್ಯೆಯ ಮೂಲವನ್ನು ಮುಂದಿಟ್ಟಳು. ಮಾವ  ಈ  ಕೆಡ್ಡಸ ಅಂದರೇನು? ನನ್ಯರಿ  ಎಂದರೇನು? ಹೋ ನಿನಗಿದೆಲ್ಲಾ ಹೊಸದಲ್ವಾ? ಹೇಳುತ್ತೇನೆ ಇರು. 
ನೋಡು ಮಗು , ಪ್ರಕೃತಿಯ  ಮುಂದೆ ಎಲ್ಲರೂ ಮಕ್ಕಳೇ. ಆಕೆಯನ್ನು ನಿರಂತರವಾಗಿ ಹಲವು ರೀತಿಯಲ್ಲಿ   ಬಳಸುತ್ತೇವೆ. ಒಂದಿನಿತು ವಿಶ್ರಾಂತಿಯಾಗಲಿ, ಉಪಕಾರ ಸ್ಮರಣೆಯಾಗಲಿ ನಾವು ಮಾಡುವುದಿಲ್ಲ. ಈ ನಿಟ್ಟಿನಲ್ಲಿ ಕೆಡ್ಡಸ ಹಬ್ಬ ನಮಗೆ ಕೃಷಿಕರಿಗೆ  ಮಹತ್ವದ್ದಾಗಿದೆ. ಒಂದು ರೀತಿಯಲ್ಲಿ ಹೇಳುವುದಾದರೆ, ‘ಥ್ಯಾಂಕ್ಸ್ ಗೀವಿಂಗ್’.  ನಮ್ಮ ಕರಾವಳಿಯಲ್ಲಿ ಆಚರಿಸುವ   ಹಲವು  ಹಬ್ಬಗಳಲ್ಲಿ ಕೆಡ್ಡಸವೂ ಒಂದು . ಕೆಡ್ಡಸವನ್ನು ಭೂಮಿ ತಾಯಿಯ ‘ಮಿಯಾ’ದ ಹಬ್ಬವೆನ್ನುತ್ತಾರೆ.  ನಮಗೆ ಹಾಗೂ ಭೂಮಿ ತಾಯಿಗೆ ನೇರವಾಗಿ ಸಂಬಂಧಿಸಿದ ಹಬ್ಬ. ಇಲ್ಲಿನ ಎಲ್ಲಾ ‌ಕಾರ್ಯಗಳನ್ನು  ಆ ಮನೆಯ ಹಿರಿಯ ಹೆಣ್ಣು ಮಗಳೇ ನಿರ್ವಹಿಸುವ ಹಬ್ಬ. ನಮ್ಮ ಕರಾವಳಿಯಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಪ್ರಾಮುಖ್ಯತೆ. ಅದರಂತೆ ಭೂಮಿಯನ್ನು ತಾಯಿ ಎಂದು ಗೌರವ ಕೊಡುವ ಮನಸು ನಮ್ಮದು.  ಹಾಗಾಗಿ ವರುಷವಿಡೀ ಉತ್ತಿ ಬಿತ್ತಿ ಅಗೆದು ಕೆಲಸ ಮಾಡಿದ ರೈತ ಹಾಗೂ  ದಣಿದ ಭೂಮಿಗೆ  ವರುಷದ   ನಾಲ್ಕು ದಿನಗಳ ಕಾಲ ವಿಶ್ರಾಂತಿಯ ಕಾಲ. ಇದು ಯಾವಾಗಲೂ ಬರುವುದು ತುಳು ತಿಂಗಳ ಪೊನ್ನಿ( ಪೊಯಿಂತೆಲ್) ಯ ೨೭ ರಿಂದ ಕುಂಭ ಸಂಕ್ರಮಣದವರೆಗಿನ ದಿನಗಳಲ್ಲಿ. ಅಂದರೆ  ಫೆಬ್ರವರಿ ತಿಂಗಳಿನ  9ರಿಂದ 12ರವರೆಗೆ. ಕೆಲವರು ಇದನ್ನು 3 ದಿನಗಳ   ಆಚರಣೆ  ಹಾಗೂ ಇನ್ನೂ ಕೆಲವರು 4 ದಿಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ. ಕೃಷಿಕರೇ  ಹೆಚ್ಚಾಗಿ ಗೌಜು , ಗದ್ದಲಗಳಿಂದ ಕೆಡ್ಡಸವನ್ನು ಸಂಭ್ರಮಿಸುತ್ತಾರೆ. 

ಕೆಡ್ಡಸದ ನಂತರ ಬೆಳೆ ಕಟಾವಿಗೆ ಬರುತ್ತದೆ. ಕೆಡ್ಡಸವೆಂದರೆ ಭೂಮಿತಾಯಿ ಋತುಮತಿಯಾಗುವ ದಿನಗಳು. ಪ್ರಕೃತಿ ಮುಂದಿನ ಸೃಷ್ಟಿಗೆ ಸಜ್ಜಾಗುತ್ತಾಳೆ. ಹಾಗಾಗಿ ಈ ನಾಲ್ಕು ದಿನಗಳು ಭೂಮಿ ತಾಯಿಗೆ ವಿಶ್ರಾಂತಿ. ಹಾಗೆಯೇ ಕೃಷಿಕರ ವಿಶ್ರಾಂತಿಯ ಅಗತ್ಯವನ್ನೂ ಪೂರೈಸುತ್ತದೆ. ಮೊದಲ ದಿನ  ಕೃಷಿ ಸಂಬಂಧಿ ಪರಿಕರಗಳನ್ನು ತೊಳೆದು  ಪೂಜಿಸಿ ತೆಗೆದಿಡುತ್ತಾರೆ. ಮನೆಯ ಸುತ್ತಮುತ್ತಲನ್ನ ಸ್ವಚ್ಛಗೊಳಿಸಲಾಗುತ್ತದೆ. ನಡುಕೆಡ್ಡಸದ ದಿನ  ಕುಸುಲಕ್ಕಿಯನ್ನು ಬಳಸಿ ಮಾಡಲಾಗುವ ತಿಂಡಿ ನನ್ನೆರಿಯೇ  ಮುಖ್ಯ ನೈವೇದ್ಯ .  ಕುಸುಲಕ್ಕಿಯನ್ನು ಹುರಿದು ಹುಡಿ ಮಾಡಿ ಅದಕ್ಕೆ ಬೆಲ್ಲ, ಬಾಳೆಹಣ್ಣು, ತುಪ್ಪ ಸೇರಿಸಿ ಎಲ್ಲರ ಮನೆಯಲ್ಲೂ ಸೇವಿಸುವುದು ವಿಶೇಷ.

ಆ ದಿನ ಮನೆಯ ಹಿರಿಯ ಮಹಿಳೆ ಮುಂಜಾನೆ ಕೋಳಿ ಕೂಗುವ ಮೊದಲೇ ಎದ್ದು  ನಿತ್ಯ ಕರ್ಮಗಳನ್ನು ಪೂರೈಸಿ ತುಳಸಿ ಕಟ್ಟೆಯ ಸುತ್ತಲೂ ಸಗಣಿ ಗುಡಿಸಿ ಶುಚಿ ಮಾಡಿ, ದೀಪ ಬೆಳಗುತ್ತಾಳೆ.   ಒಂದು ಕಲಶದಲ್ಲಿ ನೀರು, ಬಾಳೆಎಲೆಯಲ್ಲಿ  ಸೀಗೆ, ಅಂಟುವಾಳಕಾಯಿ, ಕನ್ನಡಿ, ಬಾಚಣಿಗೆ, ಬೊಟ್ಟು, ಕುಂಕುಮ, ಕಾಡಿಗೆ ಮುಂತಾದ ಸೌಂದರ್ಯ ಸಾಧನಗಳನ್ನು ಇಟ್ಟು ಗಿಂಡಿಯಿಂದ  ಭೂಮಿಗೆ ಎಣ್ಣೆ ಬಿಟ್ಟು ಪೌಷ್ಟಿಕ ಆಹಾರವನ್ನು ಇಟ್ಟು ‌‌‌‌   ನಮಸ್ಕರಿಸುತ್ತಾಳೆ.  ಭೂಮಿತಾಯಿ ಎಣ್ಣೆ ಸೀಗೆ ಸ್ನಾನ ಮಾಡಿ, ಸಿಂಗರಿಸಿಕೊಂಡು ಪೌಷ್ಟಿಕಾಂಶಭರಿತ ಆಹಾರವನ್ನು ಸ್ವೀಕರಿಸುತ್ತಾಳೆ ಎಂಬ  ನಂಬಿಕೆ ನಮ್ಮ ತುಳುನಾಡಿನ ಜನತೆಯದ್ದು. 

ಕೆಡ್ಡಸದ  ಇನ್ನೊಂದು ವಿಶೇಷತೆ  ಬೇಟೆ. ಕೃಷಿ ಉತ್ಪನ್ನಗಳು ಕೈ ಸೇರುವ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಉಪಟಳವೂ ಜಾಸ್ತಿಯಾಗಿರುತ್ತದೆ. ಹಾಗಾಗಿ ಅವುಗಳ ನಿಯಂತ್ರಣಕ್ಕಾಗಿ ಬೇಟೆಯ ಅನಿವಾರ್ಯತೆ.  ಕೆಲವು ಮನೆಗಳಲ್ಲಿ ಮಾಂಸಾಹಾರ ಈ ದಿನಗಳಲ್ಲಿ ಕಡ್ಡಾಯ. ಆದರೆ ಸಸ್ಯಾಹಾರಿಗಳು  ನುಗ್ಗೆ ಬದನೆಯನ್ನೇ  ವಿಶೇಷವಾಗಿ ಅಡುಗೆಯಲ್ಲಿ ಬಳಸುತ್ತಾರೆ. ಕೆಡ್ಡಸವೆಂದರೆ ನಮಗೂ ಭೂಮಿತಾಯಿಗೂ ಇರುವ ಸಂಬಂಧವನ್ನು, ಆತ್ಮೀಯತೆಯನ್ನು ಗಟ್ಟಿಗೊಳಿಸುವ ಹಬ್ಬ.  ಕೆಡ್ಡಸದ ವಿಶೇಷತೆಯನ್ನು ಅರಿತ ಆಶಾ ಅತ್ತೆಯೊಂದಿಗೆ ನನ್ಯರಿಯ ಸಿದ್ಧತೆಗೆ ಅಡುಗೆ ಮನೆ ಸೇರಿದಳು.

✍️ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!