ಮಾತು., ಒಂದು ಬಾರಿ ಯೋಚಿಸಿ ನೋಡಿದರೆ ಎರಡಕ್ಷರ ಇರೋ ಈ ಪದಕ್ಕೆ ಅದೆಷ್ಟು ಶಕ್ತಿ ಇದೆ ಅಂದನಿಸುತ್ತದೆ. ಮಾತನಾಡೊದು ಅಂದರೆ ನನಗಂತೂ ತುಂಬಾನೇ ಇಷ್ಟ. ವಟ ವಟ ಅಂತಾ ಮಾತನಾಡುತ್ತ, ಮಾತುಗಳ ಸುರಿಮಳೆ ಸುರಿಯೋದೇ ಒಂದು ಮಜಾ. ಮಾತನಾಡಿದರೆ ಮುತ್ತುದುರಬಹುದು ಎನ್ನುವ ಗಾದೆಗೆ ಸೇರಿದ ಕೆಲವರನ್ನು ನನಗೆ ಕಂಡಾಗ ಅಬ್ಬಬ್ಬಾ.. ! ಅದ್ಹೇಗೆ ದಿನವೀಡಿ ಹೀಗೆ ತುಟಿಕ್ ಪಿಟಿಕ್ ಅನ್ನದೆ ಇರುತ್ತಾರಲ್ಲ ಅಯ್ಯೋ ನನಗಂತೂ ಸಾಧ್ಯವೇ ಇಲ್ಲ.
ಚಿಕ್ಕಂದಿನಿಂದಲೂ , ಅದೆಷ್ಟು ಮಾತಾಡ್ತೀಯ ಮಾರಾಯ್ತಿ ಮಾತಾಡಿ ಮಾತಾಡಿ ಸಾಕಗೋದೆ ಇಲ್ವಾ!? ಅನ್ನೋ ಬೈಗುಳ ನನಗೆ ಒಂಥರಾ ಕಾಮನ್ ಆಗಿತ್ತು. ಹೈಸ್ಕೂಲಿನಲಂತ್ತು ಕೇಳೋದೇ ಬೇಡ ತಿಂಗಳು ತಿಂಗಳು ಕ್ಲಾಸ್ ಲೀಡರ್ ಬದಲಾಗುತ್ತ ಇದ್ದರೂ ನನ್ನನ್ನಂಥು ಕ್ಲಾಸ್ ಲೀಡರ್ ಮಾಡಲು ಟೀಚರ್ ಮೀನಾಮೇಷ ಎಣಿಸಬೇಕಾಗಿ ಬಂದಿತ್ತು. ಅದೆಷ್ಟು ವಟ ವಟ ಮಾತಾಡ್ತಿ ನೀತಾ ಇನ್ನು ತರಗತಿಯನ್ನು ಸೈಲೆಂಟಿನಿಂದ ನೋಡಿಕೊಳ್ತೀಯ ಅಂಥ… ಒಂದು ಬಾರಿ ಬೇಸರ ಆದರು ಅದುವೇ ಸತ್ಯ ಅಲ್ವಾ ಅಂಥ ತುಟಿಯಂಚಿನಲಿ ಕಿರುನಗೆ ಬೀರಿ ದ್ದು ಇದೆ.ಪಿಯುಸಿಯಲ್ಲಿ ಅದೆಷ್ಟು ಬಾರಿ ಮಾತಾನಾಡಿ ಸಿಕ್ಕಿಬಿದ್ದಿದ್ದೇನೆಂದು ಲೆಕ್ಕವೇ ಇಲ್ಲ. ಪ್ರಿನ್ಸಿಪಾಲ್ ಯಾವಾಗಲು ಅಮ್ಮ ನಿನ್ನ ಬಾಯಿಗೊಂದು ಬೀಗ ಹಾಕಬೇಕಮ್ಮ ಅಂಥ ಹೇಳೋದು ತಪ್ಪುತಿರಲಿಲ್ಲ. ಬೇಡ ಡಿಗ್ರಿಗೆ ಹೋದ ಮೇಲೆ ಮಾತನಾಡೋದೇ ಬೇಡ ಸೈಲೆಂಟ್ ಆಗಿ ಇರ್ಬೇಕು ಅಂದುಕೊಂಡೆ. ಉಫ್ ಅದೇನೋ ಗೊತ್ತಿಲ್ಲ ಡಿಗ್ರಿಯ ಮೊದಲ ದಿನವೇ ಆಪ್ತಳಾಗಿ ಪರಿಚಯವಾದವಳು ಕೃತಿಕಾ ಚಿನಕುರುಳಿಯಂತೆ ಮಾತನಾಡಿಸಿ ಅವಳ ಮಾತಿಗೆ ಮರುಮಾತಾಡದೇ ಇರಲು ಸಾಧ್ಯವಾಗಲಿಲ್ಲ. ದಿನವಿಡೀ ಮಾತನಾಡುತ್ತಲ್ಲೇ ಇದ್ದರೂ ಕೂಡ ನಮ್ಮಿಬ್ಬರ ಬಾಯಿಗಂತೂ ಸುಸ್ತಾಗುತಿರಲಿಲ್ಲ. ಪ್ರತಿ ಒಂದೊಂದು ಅವಧಿ ಮುಗಿದ ಬಳಿಕ ವರಾಂಡದ ಬಳಿ ನಿಲ್ಲೋ ನಾವಿಬ್ಬರು ಹೋಗೋ ಬರೊರನೆಲ್ಲಾ ಕಾಳೆಲೆಯುತ್ತಾ ಸಮಯ ಹೋಗೋದೇ ತಿಳಿಯುತ್ತಿರಲಿಲ್ಲ. ಕೆಲವೊಂದು ಬಾರಿ ಕ್ಲಾಸಿನಲ್ಲಿ ಮಾತಾನಾಡಲು ಸಾಧ್ಯವಾಗದೆ ಚೀಟಿಗಳ ಮೂಲಕ ನಡೆಯುತ್ತಿದ್ದ ನಮ್ಮಿಬ್ಬರ ಸಂಭಾಷಣೆಯ ವ್ಯಥೆ ಹೇಳತೀರದು. ಯಾರೇ ಮಾತನಾಡಿದರೂ ಮೊದಲ ಕಣ್ಣೋಟ ಹೋಗೋದೇ ನಮ್ಮಿಬ್ಬರ ಮೇಲೆ. ಹೀಗೆ ಮಾತನಾಡೋ ನಮಗೆ ಒಂದು ದಿನ ಮಾಡದ ತಪ್ಪಿಗಾಗಿ ಶಿಕ್ಷೆಯಾಗಿತ್ತು. ಆದಿನ ತುಂಬಾ ಶಿಸ್ತಿನಿಂದ ಇಬ್ಬರು ಕೂಡ ತರಗತಿ ಕೇಳುತ್ತಿದ್ದೆವು. ನಮ್ಮಿಬ್ಬರ ಅಚ್ಚುಮೆಚ್ಚಿನ ಸರ್, ವಿಷಯವು ತುಂಬಾ ಇಷ್ಟವಾಗಿತ್ತು ಹಾಗಾಗಿ ನಮ್ಮಿಬ್ಬರ ಕರ್ಣಗಳು ಸರ್ ಮಾಡುತ್ತಿದ್ದ ಪಾಠವನ್ನು ಕೇಳುವಲ್ಲಿ ತಲ್ಲೀನ ಗೊಂಡಿದ್ದವು. ಸರ್ ಒಮ್ಮೆಲೇ ಸ್ಟಾಂಡ್ ಅಪ್ ಅನ್ನುತ್ತಲ್ಲೆ ಶಾಕ್ ಆಗಿತ್ತು.ಆಚೆ ಈಚೆ ನೋಡುತ್ತಲೇ,ಯು ಬೋತ್ ಆರ್ ಸ್ಟಾಂಡ್ ಅಪ್ ಅನ್ನುತ್ತಾ ನಮ್ಮನ್ನು ದಿಟ್ಟಿಸಿ ನೋಡಿದರು. ಮಾತನಾಡಿದವರು ನಾವೇಂದುಕೊಂಡು ತರಗತಿಯ ಎದುರು ಮುಕ್ಕಾಲು ಗಂಟೆ ನಿಂತುಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ವರಾಂಡದಲ್ಲಿ ನಾವು ಕಾಲೆಳೆಯುತ್ತಿದ್ದವರೆಲ್ಲ ನಮ್ಮಿಬ್ಬರ ಕಾಲೆಳೆಯೊದಕ್ಕೆ ನಮ್ಮ ಬರುವಿಕೆಗಾಗಿ ತುದಿಗಾಲಿನಲ್ಲಿ ನಿಂತದ್ದು ಮಾತ್ರ ಸುಳ್ಳಲ್ಲ .ಇಂದು ಕೋರೋನ ದಿಂದ ಆ ಎಲ್ಲಾ ತರ್ಲೆ ಕಿತಾಪತಿಗಳು ನಮ್ಮಲ್ಲೆ ಸದ್ದಿಲ್ಲದೇ ಅಡಗಿಕೊಂಡಿದೆ. ಆ ದಿನಗಳು ಅದೆಷ್ಟು ಸುಂದರವಾಗಿತ್ತು ಉಫ್ ಆ ದಿನಗಳು ಮತ್ತೆ ಬರಲಾರದೆ….!
ನೀತಾ ರವೀಂದ್ರ
ದ್ವಿತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜ್ ಪುತ್ತೂರು.