***ವರದಿ: ಹಸೈನಾರ್ ಜಯನಗರ****
ಕೋರೊನಾ ಎಂಬ ಮಹಾಮಾರಿ ಯು ದೇಶಕ್ಕೆ ದೇಶವನ್ನೆ ಸಂಪೂರ್ಣವಾಗಿ ತನ್ನ ಹಿಡಿತದಲ್ಲಿ ಇಟ್ಟು ಜನಸಾಮಾನ್ಯನ ಜೀವನವನ್ನು ಕಷ್ಟದ ಕೂಪಕ್ಕೆ ಕೊಂಡೊಯ್ದಿದೆ. ಆದರೆ ಇದೀಗ ಕೇಂದ್ರ ಸರಕಾರದ ಆದೇಶ ಮತ್ತು ದಿಟ್ಟತನದಿಂದ ಈ ಲಾಕ್ಡೌನ್ ಪದ್ಧತಿಯನ್ನು ಸಡಿಲಗೊಳ್ಳಿಸಿದ್ದೂ ಆಯಿತು.ಇದರಿಂದ ದೇಶದ, ರಾಜ್ಯಗಳ ಮತ್ತು ಜಿಲ್ಲೆಗಳ ನಗರ ಪ್ರದೇಶಗಳು ಹಾಗೂ ಗ್ರಾಮಾಂತರ ಪ್ರದೇಶಗಳ ಜನತೆ ಅಲ್ಪಮಟ್ಟಿಗೆ ನಿಟ್ಟುಸಿರು ಬಿಟ್ಟು ಮತ್ತೊಮ್ಮೆ ಜೀವನೋಪಾಯದ ಮಾರ್ಗವನ್ನು ಕಂಡುಕೊಳ್ಳಲು ತಮ್ಮತಮ್ಮ ಉದ್ಯೋಗ, ವ್ಯವಹಾರಗಳಿಗೆ ಮರಳಲು ಪ್ರಾರಂಭಿಸಿದರು.ಆದರೆ ಇಂದಿಗೂ ಈ ಸಂಕಷ್ಟದಿಂದ ಹೊರಬರಲು ಚಡಪಡಿಸುತ್ತಿರುವ ಅದೆಷ್ಟೊ ಮಂದಿ ಇಂದಿಗೂ ಸಂಕಷ್ಟದಲ್ಲಿಯೇ ಇದ್ದಾರೆ. ಆದರಲ್ಲಿ ಮುಖ್ಯವಾಗಿ ಆಯಾಯಾ ರಾಜ್ಯಗಳ ಗಡಿಭಾಗದ ಪ್ರದೇಶದಲ್ಲಿ ನೆಲೆಸಿದರು. ಅದರಲ್ಲಿಯೂ ಕರ್ನಾಟಕ-ಕೇರಳ ಗಡಿಭಾಗದ ಜನರ ಜೀವನವನ್ನು ಕೇಳದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯವಾಗಿ ಸುಳ್ಯ ತಾಲೂಕಿನ ಭಾಗವಾದ ಕನ್ನಡಿತೋಡು, ಬಂದಡ್ಕ ಭಾಗಗಳಿಂದ ದಿನನಿತ್ಯದ ವ್ಯವಹಾರವನ್ನು ಸುಳ್ಯವನ್ನೆ ನಂಬಿ ಬದುಕಿ ಬಾಳಿದವರ ಜೀವನ ಇಂದು ಕಷ್ಟದ ಪರಿಸ್ಥಿತಿಯಲ್ಲಿದೆ. ಇದಕ್ಕೆ ಮೂಲ ಕಾರಣ ಈ ಭಾಗಗಳಲ್ಲಿ ಕೇರಳ ಸರಕಾರವು ಇತ್ತೀಚಿನ ದಿನಗಳಲ್ಲಿ ಕೋರೋನಾ ಮಹಾಮಾರಿಯಿಂದ ತಮ್ಮ ರಾಜ್ಯದ ಜನತೆಯನ್ನು ರಕ್ಷಿಸಬೇಕೆಂದು ಗಡಿಭಾಗಗಳ ರಸ್ತೆಗಳಲ್ಲಿ ಮಣ್ಣು ರಾಶಿಗಳನ್ನು ತುಂಬಿ ಪೊಲೀಸ್ ಭದ್ರತೆಗಳನ್ನು ಒದಗಿಸಿ ರಸ್ತೆ ಸಂಚಾರಕ್ಕೆ ಕಡಿವಾಣ ಹೇರಿರುವುದು. ಇದರಿಂದ ಇಲ್ಲಿ ಮೂಕ ಪ್ರೇಕ್ಷಕರಾಗಿ ನಿಂತಿರುವುದು ನಮ್ಮ ಗಡಿಭಾಗದ ಕನ್ನಡಿಗರು ಎಂಬುವುದರಲ್ಲಿ ಯಾವುದೆ ಸಂಶಯವಿಲ್ಲ. ಇವರು ಮಾಡಿರುವ ತಪ್ಪಾದರೂ ಏನೂ? ಇಡೀ ದೇಶವೇ ಲಾಕ್ ಡೌನ್ ಗೊಂಡಾಗ ಇವರು ಹೊರತಾಗಿ ಏನೂ ಇರಲಿಲ್ಲ.ಆದರೆ ಲಾಕ್ಡೌನ್ ಸಡಿಲಿಕೆಗೊಂಡ ನಂತರ ಇವರಿಗೆ ಮುಕ್ತಿ ಎಂಬುದೇ ಸಿಗಲಿಲ್ಲ. ಇದಕ್ಕೆ ಪರಿಹಾರ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಖುದ್ದು ಈ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಪರಿಶೀಲನೆಯನ್ನು ನಡೆಸಿ ಆ ಭಾಗದ ಜನರು ಅನುಭವಿಸುತ್ತಿರುವ ಕಷ್ಟಗಳನ್ನು ವೀಕ್ಷಿಸಿ ಅದನ್ನು ಅದೇ ರೀತಿಯಾಗಿ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಎರಡೂ ಭಾಗದ ಜಿಲ್ಲಾಧಿಕಾರಿಗಳನ್ನು ಈ ಭಾಗಕ್ಕೆ ಬರಮಾಡಿ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.
ಈ ಭಾಗದ ಜನರಿಗೆ ಸುಳ್ಯದಲ್ಲಿ ಆಸ್ಪತ್ರೆ, ಶಿಕ್ಷಣಸಂಸ್ಥೆ, ಬ್ಯಾಂಕ್ ವ್ಯವಹಾರಗಳು, ವ್ಯಾಪಾರ ವಹಿವಾಟುಗಳು, ಕೃಷಿ ಸಂಬಂಧಿತ ವಸ್ತುಗಳ ಮಾರಾಟಕ್ಕೆ ಖರೀದಿಗೆ ಸುಳ್ಯವನ್ನು ಅವಲಂಬಿಸಿರುತ್ತಾರೆ. ಕೇವಲ ೨೦ ಕಿ.ಮಿ ದೂರದಲ್ಲಿ ಸಿಗುವ ಸುಳ್ಯವನ್ನು ಬಿಟ್ಟು ೪೨ ಕೀ.ಮಿ ದಾಟಿ ಕಾಸರಗೋಡಿಗೆ ಹೋಗಿ ಈ ಎಲ್ಲಾ ವ್ಯವಹಾರವನ್ನು ಮುಗಿಸಲು ಸಾಧ್ಯವೇ? ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇವರ ಬಗ್ಗೆ ಸ್ಪಂದಿಸದೇ ಇದ್ದಲ್ಲಿ ಈ ಬಡಜನರ ಜೀವನ ಇನ್ನೂ ಹೆಚ್ಚು ಭೀಕರ ಸ್ಥಿತಿಯತ್ತ ತಲುಪದೇ ಇರುವುದರಲ್ಲಿ ಯಾವುದೇ ಸಂಶಯವಿಲ್ಲ. ಪತ್ರಿಕೆಗಳು ವರದಿಗಳ ಮೇಲೆ ವರದಿ ಮಾಡುತ್ತಿದ್ದರೂ ಸಂಬಂಧಪಟ್ಟವರು ಈ ವಿಷಯದಲ್ಲಿ ಸಂಬಂಧಿಸದೆ ಇರುವುದು ವಿಪರ್ಯಾಸವೆ ಸರಿ. ಸ್ಥಳೀಯ ನಿವಾಸಿ ನಿಶಾಂತ್ ಆಳ್ವ ಬಂದಡ್ಕದವರು ಅಮರ ಸುಳ್ಯ ಸುದ್ದಿ ಪತ್ರಿಕೆಗೆ ದೂರವಾಣಿ ಮೂಲಕ ಮಾತನಾಡಿ ಈ ಭಾಗದ ಜನರು ಜೀವನ ನಿರ್ವಹಿಸಲು ಆರೋಗ್ಯದಿಂದ ಹಿಡಿದು ಶಿಕ್ಷಣ, ಆರ್ಥಿಕ ಸಂಪನ್ಮೂಲ ಕ್ರೂಢೀಕರಣ, ಕೌಟುಂಬಿಕ ಸಂಬಂಧ ಇವೆಲ್ಲವೂ ಸುಳ್ಯ, ಪುತ್ತೂರನ್ನು ಅವಲಂಬಿಸಿದ್ದೇವೆ. ಆದರೆ ಇದೀಗ ರಸ್ತೆಗಳಿಗೆ ಸಂಚಾರ ನಿರ್ಬಂಧ ಹೇರಿರುವುದರಿಂದ ನಮ್ಮ ಕಷ್ಟವನ್ನು ಕೇಳುವವರಿಲ್ಲದಂತಾಗಿದೆ. ಸುರಿದಿರುವ ಮಣ್ಣನ್ನು ತೆರವುಗೊಳಿಸಿ ಪ್ರಯೋಜನ ಇಲ್ಲ. ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ. ಬೇರೆ ಭಾಗದವರು ಈ ರಸ್ತೆಗಳಲ್ಲಿ ಸಂಚರಿಸುವುದರಿಂದ ಸಮಸ್ಯೆ ಬರುವುದಾದರೆ ನಮ್ಮ ಗ್ರಾಮ ಪಂಚಾಯತ್ ವತಿಯಿಂದ ನಮ್ಮ ಗ್ರಾಮದವರಿಗೆ ಮಾತ್ರ ಪಾಸ್ ಗಳನ್ನು ನೀಡಿ ನಮಗೆ ಪರಿಹಾರ ಕಲ್ಪಿಸಬಹುದಲ್ಲವೇ.. ಎಂದು ಅಭಿಪ್ರಾಯ ಪಟ್ಟಿದ್ದಾರೆ.