ರಾಜ್ಯದ ಆರ್ಥಿಕತೆಗೆ ಅತೀಹೆಚ್ಚು ಕೊಡುಗೆ ನೀಡುತ್ತಿರುವ ದೇವಾಲಯಗಳ ಪಟ್ಟಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮೊದಲ ಸ್ಥಾನದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ 98,92,24,193.34 ರೂ. ಆದಾಯ ಗಳಿಸಿ ಈ ಬಾರಿಯೂ ಮೊದಲ ಸ್ಥಾನ ಗಳಿಸಿದೆ.
ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟ ಆದಾಯದ ಮೂಲಗಳಾಗಿವೆ.
ದೇವಾಲಯಕ್ಕೆ ವಿವಿಧ ಮೂಲಗಳಿಂದ ಬಂದ ಆದಾಯದ ಪ್ರಮಾಣ ರೀತಿಯಿದೆ.
ಗುತ್ತಿಗೆಗಳಿಂದ 1,60,40,094 ರೂ., ಕೃಷ್ಯುತ್ಪನ್ನದಿಂದ 9,33,715 ರೂ., ಕಟ್ಟಡ ಬಾಡಿಗೆಯಿಂದ 60,13,565 ರೂ., ಕಾಣಿಕೆಯಿಂದ 3,45,14,804.39 ರೂ., ಕಾಣಿಕೆ ಹುಂಡಿಯಿಂದ 18,26,50,156 ರೂ., ಹರಕೆ ಸೇವೆಗಳಿಂದ 42,52,92,881.77 ರೂ., ಅನುದಾನದಿಂದ 87 ಸಾವಿರ ರೂ., ಹೂಡಿಕೆಯಿಂದ ಬಂದ ಬಡ್ಡಿ 21,38,03,033 ರೂ., ಉಳಿತಾಯ ಖಾತೆ ಮತ್ತು ಇತರ ಖಾತೆಗಳಿಂದ ಬಂದ ಬಡ್ಡಿ 82,48,317.66 ರೂ., ಸಂಕೀರ್ಣ ಜಮೆಗಳಿಂದ 4,81,71,851.60 ರೂ., ಅನ್ನಸಂತರ್ಪಣೆ ನಿಧಿಯಿಂದ 4,69,09,782.04 ರೂ., ಅಭಿವೃದ್ಧಿ ನಿಧಿಯಿಂದ 10,40,890.88 ರೂ., ಶಾಶ್ವತ ಸೇವಾ ಮೂಲಧನ 54,78,101 ರೂ., ಚಿನ್ನದ ರಥ ನಿರ್ಮಾಣದ ದೇಣಿಗೆಯಿಂದ 40,001 ರೂ. ಸೇರಿ ಒಟ್ಟು 98.92 ಕೋಟಿ ರೂ. ಆದಾಯ ಬಂದಿದೆ.
2017-18ನೇ ಆರ್ಥಿಕ ವರ್ಷದಲ್ಲಿ ಶ್ರೀ ದೇವಳವು 92,09,13,824.98 ರೂ. ಆದಾಯ ಗಳಿಸಿತ್ತು. ಶ್ರೀ ದೇವಳವು ಕಳೆದ ವರ್ಷಕ್ಕಿಂತ ಈ ಬಾರಿ 6,83,10,368.40 ರೂ. ಅಧಿಕ ಆದಾಯ ಗಳಿಸಿದೆ.
ವಿಶೇಷವೆಂದರೆ ಪ್ರತಿವರ್ಷ ದಂತೆ ಈ ವರ್ಷದ ಆದಾಯವು ನೂರು ಕೋಟಿ ಸಮೀಪಿಸಿದೆ.