ಕೊರೊನಾ ವಿಪತ್ತು ನಿರ್ವಹಣೆಯಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳ ವಿರುದ್ಧ ವಿಫಲರಾಗಿದ್ದಾರೆ ಎನ್ನುವ ಆರೋಪ ಹೆಣೆಯುವ ಮೂಲಕ ಈ ಷಡ್ಯಂತ್ರ ನಡೆಯುತ್ತಿದೆ.
ಸ್ವತ ಅಧಿಕಾರಿಗಳಿಂದಲೇ ಈ ರೀತಿಯ ವ್ಯವಸ್ಥಿತ ಸಂಚು ನಡೆಯುತ್ತಿದೆ ಎನ್ನುವ ಆರೋಪ ಇದೀಗ ಕೇಳಿ ಬರಲಾರಂಭಿಸಿದೆ.
ಸಿಂಧು ಬಿ ರೂಪೇಶ್ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೊರೊನಾ ಮಹಾಮಾರಿಯಂತ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ಅನಿವಾರ್ಯ ಪರಿಸ್ಥಿಯನ್ನು ಅವರು ಎದುರಿಸಬೇಕಾಯಿತು.
ಆಡಳಿತಾತ್ಮಕವಾಗಿ ತಾನು ತೆಗೆದುಕೊಂಡಿದ್ದ ಕೆಲವು ಕಠಿಣ ನಿಯಮಗಳನ್ನು ಅರಗಿಸಿಕೊಳ್ಳಲಾಗದ ಕೆಲವು ಅಧಿಕಾರಿಗಳು ಇದೀಗ ಜಿಲ್ಲಾಧಿಕಾರಿಯವರ ಮೇಲೆ ತಿರುಗಿಬಿದ್ದಿದ್ದಾರೆ ಎನ್ನುವ ಆರೋಪವಿದೆ.
ಕೊರೊನಾ ತಡೆ ಹಾಗೂ ನಿರ್ವಹಣೆಯ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶಗಳನ್ನು ಉದ್ಧೇಶಪೂರ್ವಕವಾಗಿ ಜಾರಿಗೆ ತರದಿರುವುದು, ಆದೇಶಗಳ ಜಾರಿಯಲ್ಲಿ ಲೋಪದೋಷಗಳಿಂದಾಗಿ ಜಿಲ್ಲಾಧಿಕಾರಿಗಳ ಮೇಲೆ ಜನಪ್ರತಿನಿಧಿಗಳು ತಿರುಗಿ ಬೀಳುವಂತೆಯೂ ಮಾಡಲು ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ಕಾರಣಕ್ಕಾಗಿಯೇ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ವಿರುದ್ಧ ಕೆಲವು ಜನಪ್ರತಿನಿಧಿಗಳು ಅಸಮಾಧಾನವನ್ನೂ ಹೊರ ಹಾಕುತ್ತಿದ್ದು, ವರ್ಗಾವಣೆಗೂ ಪ್ರಯತ್ನ ಆರಂಭಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಅಲ್ಲದೆ ಜಿಲ್ಲೆಯ ಹೆಚ್ಚು ಕೊರೊನಾ ಪ್ರಕರಣಗಳ ಹಿಂದೆ ಥಳಕು ಹಾಕಿಕೊಂಡಿರುವ ಮಂಗಳೂರಿನ ಪಡೀಲ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಮೂಲ ಹುಡುಕುವ ವಿಚಾರದಲ್ಲೂ ಜಿಲ್ಲಾಧಿಕಾರಿಗಳ ಸಹೋದ್ಯೋಗಿಗಳೇ ಅವರ ದಾರಿ ತಪ್ಪಿಸುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಒಟ್ಟಲ್ಲಿ ಅವರಿಗೆ ಕೆಟ್ಟ ಹೆಸರು ತಂದು ವರ್ಗಾವಣೆ ಗೆ ಹುನ್ನಾರ ನಡೆದಿದೆ ಹಾಗೂ ಇದಕ್ಕಾಗಿ ಹೊರಗಿನ ಲಾಭಿ ಕೂಡ ಕೆಲಸ ಮಾಡುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.