ವಳಲಂಬೆಯಿಂದ ಬೆಳ್ಳಿತೆರೆಗೆ – ಬಹುಮುಖ ಪ್ರತಿಭೆ ಹೇಮಗೌಡ ಅವರ ಸ್ಫೂರ್ತಿದಾಯಕ ಪಯಣ | ನಟನೆ, ನೃತ್ಯ, ಉದ್ಯಮ ಹಾಗೂ ಸಮಾಜಸೇವೆಯಲ್ಲಿ ಗುರುತಿಸಿಕೊಂಡ ಸುಳ್ಯದ ವಳಲಂಬೆಯ ಪ್ರತಿಭೆ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರಕೃತಿಯ ಮಡಿಲಲ್ಲಿರುವ ಪುಟ್ಟ ಗ್ರಾಮ ವಳಲಂಬೆ. ಈ ಗ್ರಾಮದಿಂದ ಕಲಾಲೋಕದತ್ತ ಹೆಜ್ಜೆಯಿಟ್ಟು ಕನ್ನಡ ಚಿತ್ರರಂಗ, ತುಳು ಚಿತ್ರರಂಗ, ಕಿರುತೆರೆ, ಉದ್ಯಮ ಹಾಗೂ ಸಮಾಜಸೇವೆಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಪ್ರತಿಭೆ ಹೇಮಗೌಡ.

. . . . . . . . .

ಕಳೆದ ಹತ್ತು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಹೇಮಗೌಡ ಅವರಿಗೆ ನಟನೆ ಕೇವಲ ವೃತ್ತಿಯಲ್ಲ, ಅದೊಂದು ಆಸಕ್ತಿ ಮತ್ತು ಸಾಧನೆಯ ಪಯಣ. ಇವರ ಪ್ರತಿಭೆಯನ್ನು ಮೊದಲು ಗುರುತಿಸಿ ಅವಕಾಶ ನೀಡಿದವರು ಖ್ಯಾತ ನಿರ್ದೇಶಕ ಶಿವ ಧ್ವಜ ಶೆಟ್ಟಿ. ಐತಿಹಾಸಿಕ ಧಾರಾವಾಹಿ ‘ಕೆಳದಿ ಚೆನ್ನಮ್ಮ’ ಮೂಲಕ ಕಿರುತೆರೆಗೆ ಪರಿಚಿತರಾದ ಹೇಮಗೌಡ, ಬಳಿಕ ಹಿರಿಯ ನಟ ಹಾಗೂ ಗುರುಗಳಾದ ಎಂ.ಕೆ. ಮಠ ಅವರ ಮಾರ್ಗದರ್ಶನದಲ್ಲಿ ನಟನೆಯ ವೃತ್ತಿಪರ ತರಬೇತಿ ಪಡೆದು ಕಲಾಯಾನವನ್ನು ಮುಂದುವರಿಸಿದರು.

. . . . . . .

25ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ

ಕನ್ನಡ ಚಿತ್ರರಂಗದಲ್ಲಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಹೇಮಗೌಡ ಅವರ ಸಿನಿ ಪಯಣದಲ್ಲಿ ‘ಡ್ರೆಸ್ ಕೋಡ್’ ಪ್ರಮುಖ ಚಿತ್ರವಾಗಿದೆ. ಖ್ಯಾತ ನಿರ್ದೇಶಕ ಶಿವಕುಮಾರ್ ಕಡೂರ್ ನಿರ್ದೇಶನದ ಈ ಕನ್ನಡ ಡ್ರಾಮಾ ಮತ್ತು ಥ್ರಿಲ್ಲರ್ ಚಿತ್ರವು 2016ರ ಜೂನ್ 10ರಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಪರಿಚಯಿಸಿದರು.

ಇದರೊಂದಿಗೆ ‘ಪತಂಗ’ ಕನ್ನಡ ಚಿತ್ರದಲ್ಲಿಯೂ ಸಹಜ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. 2018ರಲ್ಲಿ ಬಿಡುಗಡೆಯಾದ, ಖ್ಯಾತ ಆಕ್ಷನ್ ನಿರ್ದೇಶಕ ಪಿ.ಎನ್. ಸತ್ಯ ನಿರ್ದೇಶನದ ‘ಮರಿ ಟೈಗರ್’ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.

ನಟನೆ ಮಾತ್ರವಲ್ಲ, ನೃತ್ಯ ಮತ್ತು ಮಾಡೆಲಿಂಗ್‌ನಲ್ಲೂ ಸಾಧನೆ

ನಾಯಕಿ ಪಾತ್ರಗಳಿಗೆ ಮಾತ್ರ ಸೀಮಿತವಾಗದೆ ವಿವಿಧ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹೇಮಗೌಡ, ಹಲವು ಚಿತ್ರಗಳಲ್ಲಿ ಐಟಂ ಡ್ಯಾನ್ಸ್ ಮೂಲಕವೂ ಪ್ರೇಕ್ಷಕರನ್ನು ರಂಜಿಸಿದ್ದಾರೆ. ತಮ್ಮ ನೃತ್ಯ ಕೌಶಲ್ಯದಿಂದ ಗಮನ ಸೆಳೆದಿರುವ ಇವರು ಹಲವು ಮಾಡೆಲಿಂಗ್ ಫೋಟೋಶೂಟ್‌ಗಳಲ್ಲಿಯೂ ಮಿಂಚಿದ್ದಾರೆ.

ತುಳು ಚಿತ್ರರಂಗದಲ್ಲಿಯೂ ಗುರುತು

ಕನ್ನಡ ಚಿತ್ರರಂಗದ ಜೊತೆಗೆ ತುಳು ಚಿತ್ರರಂಗದಲ್ಲಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುವ ಹೇಮಗೌಡ, ತುಳುವಿನ ಜನಪ್ರಿಯ ಚಿತ್ರ ‘ಮದಿಮೆ’ಯ ‘ದೇವದಾಸ್ಯರು’ ಹಾಡಿನಲ್ಲಿ ನೃತ್ಯ ಮಾಡುವ ಮೂಲಕ ತುಳು ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಮೈಸೂರಿನಲ್ಲಿ ಉದ್ಯಮಿಯಾಗಿ ಹೊಸ ಹೆಜ್ಜೆ

ಕಲಾ ಕ್ಷೇತ್ರದ ಜೊತೆಗೆ ಉದ್ಯಮದಲ್ಲಿಯೂ ತೊಡಗಿಸಿಕೊಂಡಿರುವ ಹೇಮಗೌಡ, ಐದು ತಿಂಗಳ ಹಿಂದೆ ಮೈಸೂರಿನ ಪ್ರತಿಷ್ಠಿತ ಐಪಿಎಸ್ ನಗರದಲ್ಲಿ ‘ಶ್ರೀ ರಾಘವೇಂದ್ರ ಸ್ಟೋರ್’ ಹೆಸರಿನ ದಿನಸಿ ಅಂಗಡಿಯನ್ನು ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಕಲಾವಿದೆಯಾಗಿ ಗುರುತಿಸಿಕೊಂಡಿರುವ ಅವರು ಉದ್ಯಮಿಯಾಗಿಯೂ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಸಮಾಜಸೇವೆಯಲ್ಲೂ ಮುಂಚೂಣಿ

ತಮ್ಮ ಹುಟ್ಟೂರಿನ ಮೇಲಿನ ಪ್ರೀತಿ ಮತ್ತು ಸಾಮಾಜಿಕ ಕಳಕಳಿಯನ್ನು ಕಾರ್ಯರೂಪಕ್ಕೆ ತಂದಿರುವ ಹೇಮಗೌಡ, ವಳಲಂಬೆ ಗ್ರಾಮ ಹಾಗೂ ಸುತ್ತಮುತ್ತಲಿನ ಸರ್ಕಾರಿ ಅಂಗನವಾಡಿ ಮತ್ತು ಶಾಲೆಗಳ ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಶಾಲಾ ಬ್ಯಾಗ್ ಹಾಗೂ ಕೊಡೆಗಳನ್ನು ವಿತರಿಸಿದ್ದಾರೆ.

ಎಲ್ಲ ಮಕ್ಕಳು ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಪಡೆಯಬೇಕು ಮತ್ತು ಹೆಮ್ಮೆಯಿಂದ ಕನ್ನಡ ಮಾತನಾಡಬೇಕು ಎಂಬುದು ಅವರ ಆಶಯವಾಗಿದೆ. ಕಲಾವಿದೆಯಾಗಿ ಮಾತ್ರವಲ್ಲದೆ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.

ನಟನೆ, ನೃತ್ಯ, ಮಾಡೆಲಿಂಗ್, ಉದ್ಯಮ ಮತ್ತು ಸಮಾಜಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಹೇಮಗೌಡ ಅವರ ಸಾಧನೆಯ ಪಯಣ ವಳಲಂಬೆ ಗ್ರಾಮದ ಹೆಮ್ಮೆಯ ಸಂಗತಿಯಾಗಿದೆ. ಗ್ರಾಮೀಣ ಪರಿಸರದಿಂದ ಹೊರಹೊಮ್ಮಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಹೊರಟಿರುವ ಇವರ ಬದುಕು ಇಂದಿನ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ.

ಬರಹ: ನಾಗೇಶ್ ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading