ಕಲ್ಮಡ್ಕದಲ್ಲಿ ಸರಣಿ ಕಾರ್ಯಕ್ರಮ ಅಂಗವಾಗಿ ‘ತ್ರಯಿ’ ನೃತ್ಯ ತಂಡ ವೈಭವ : ರಸಿಕರ ಮನಸೂರೆಗೊಂಡ ಭರತನಾಟ್ಯ ಪ್ರದರ್ಶನ

ಕಲ್ಮಡ್ಕ : ಸ್ಥಳೀಯ ಕಲಾಗ್ರಾಮ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸರಣಿ ಕಾರ್ಯಕ್ರಮದ 5ನೇ ಕಾರ್ಯಕ್ರಮ ‘ತ್ರಯಿ ನಾಟ್ಯ ತಂಡ’ ಬೆಂಗಳೂರು ಅಭಿನಯಿಸಿದ ಭರತನಾಟ್ಯ ಸಾಂಸ್ಕೃತಿಕ ಸಂಜೆ ಕಲಾಭಿಮಾನಿಗಳ ಮನಸೂರೆಗೊಳಿಸಿತು.

. . . . . . . . .

ಕಾರ್ಯಕ್ರಮಕ್ಕೆ ಊರಿನ ಹಿರಿಯರಾದ ಚಂದ್ರಶೇಖರ ಕೊಳಚ್ಚಿಪ್ಪು ಅವರು ದೀಪ ಬೆಳಗಿಸುವ ಮೂಲಕ ದಿವ್ಯ ಚಾಲನೆ ನೀಡಿದರು. ಕಲಾಗ್ರಾಮ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಜೊಗಿಬೆಟ್ಟು, ಗೌರವಾಧ್ಯಕ್ಷರಾದ ಸುಬ್ರಾಯ ಭಟ್ ಅಮೈ, ಸಂಚಾಲಕರಾದ ವಿದ್ವಾನ್ ಸಾಯಿ ನಾರಾಯಣ ಕಲ್ಮಡ್ಕ ಉಪಸ್ಥಿತರಿದ್ದರು.

. . . . . . .

ಬೆಳಕಿನ ಬೆಳಗಿನೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ, ನೃತ್ಯ ಸಂಯೋಜಕಿ ಹಾಗೂ ವಿದ್ವಾಂಸೆ ಡಾ. ಪೂರ್ಣಾ ಸುರೇಶ್, ಶಾಸ್ತ್ರೀಯ ಕಾವ್ಯಾಧಾರಿತ ನೃತ್ಯ ಪ್ರದರ್ಶನಕ್ಕೆ ಹೆಸರಾದ ಡಾ. ರಶ್ಮಿ ಪ್ರಸಾದ್ ಹಾಗೂ ಕಲಾವಿದೆಯರಾದ ಕು.ವೈಷ್ಣವಿ, ಕು.ನಮೃತಾ, ಕು.ನಾಗಶ್ರೀ ದಯಾನಂದ್ ಮತ್ತು ಕು.ಸುಮಾ ಅವರ ಅಭಿನಯ, ಭಾವ ಹಾಗೂ ಹಸ್ತಮುದ್ರೆಗಳ ಲಯಬದ್ಧ ಹೆಜ್ಜೆಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ನೃತ್ಯದ ಚಲನೆಗಳು ರಂಗವೇದಿಕೆಗೆ ದಿವ್ಯ ಜೀವ ತುಂಬಿದವು.

ಇನ್ನು ಕಾರ್ಯಕ್ರಮದ ಹಿನ್ನೆಲೆ ಸಂಗೀತವು ನೃತ್ಯದ ಮೆರುಗನ್ನು ದ್ವಿಗುಣಗೊಳಿಸಿತು. ಖ್ಯಾತ ಗಾಯಕಿ ಡಾ. ಹೆಚ್.ಜಿ. ಅಮೃತವರ್ಷಿಣಿ ಅವರ ಮಧುರ ಗಾಯನ ನೃತ್ಯ ಭಾವಗಳಿಗೆ ಜೀವ ನೀಡಿದರೆ, ವಿದುಷಿ ಸಿಂಧು ಸತ್ಯನಾರಾಯಣ ಅವರ ನಟ್ಟುವಂಗಂ ನೃತ್ಯಕ್ಕೆ ಸೂಕ್ತ ಚೌಕಟ್ಟು ನೀಡಿತು. ಮೃದಂಗ ವಾದಕರಾದ ಶ್ರೀಯುತ ಗೌತಮ್ ಅವರ ಲಯ ಮಾಧುರ್ಯ ಮತ್ತು ಕೊಳಲು ವಾದಕರಾದ ಶ್ರೀಯುತ ಅಶ್ವಿನ್ ಅವರ ಇಂಪಾದ ಕೊಳಲಿನ ನಾದವು ಇಡೀ ರಂಗಮಂಟಪವನ್ನು ದಿವ್ಯ ನಾದಲೋಕಕ್ಕೆ ಕರೆದೊಯ್ದಿತು.

ಕೊನೆಯಲ್ಲಿ ಪ್ರದರ್ಶನ ನೀಡಿದ ತ್ರಯಿ ತಂಡದ ಕಲಾವಿದೆಯರಿಗೂ ಹಾಗೂ ಪಕ್ಕವಾದ್ಯ ವೃಂದದವರಿಗೂ ಕಲಾಗ್ರಾಮ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ಸತ್ಯ ಸಾಯಿ ವಿದ್ಯಾ ಕೇಂದ್ರ ಚೊಕ್ಕಾಡಿ ಇದರ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಲಕ್ಷ್ಮೀ ನಾರಾಯಣ ಕೋಟೆ ಇವರು ಶಾಲು ಹೊದಿಸಿ ಗೌರವಿಸಿದರು.

ಕಲಾಭಿಮಾನಿಗಳು, ರಸಿಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಸಾಂಸ್ಕೃತಿಕ ಸಂಜೆಯನ್ನು ಆಸ್ವಾದಿಸಿದರು.

🖊️ ವಸಂತಕುಮಾರ್.ಪಿ

ಕಾರ್ಯದರ್ಶಿ 

ಕಲಾಗ್ರಾಮ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಕಲ್ಮಡ್ಕ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading